*  ಕೋವಿಡ್‌ ಇಳಿಮುಖ ಹಿನ್ನೆಲೆ ಆಫ್‌ಲೈನ್‌ ಘಟಿಕೋತ್ಸವಕ್ಕೆ ಕುಲಪತಿಗೆ ಮನವಿ*  ಘಟಿಕೋತ್ಸವ ಅನ್ನುವುದು ವಿವಿಗಳಿಗೆ ಒಂದು ಹಬ್ಬವಿದ್ದಂತೆ*  ಸರ್ವಾಧಿಕಾರಿಯಂತೆ ವರ್ತಿಸುತ್ತಿರುವ ಕುಲಪತಿಗಳು 

ಧಾರವಾಡ(ಅ.04): ಕೋವಿಡ್‌ ಇಳಿಮುಖವಾದ ಹಿನ್ನೆಲೆ ರಾಜ್ಯದಲ್ಲಿ ಬೇರೆ ಬೇರೆ ವಿಶ್ವವಿದ್ಯಾಲಯಗಳು ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಸಾಂಪ್ರದಾಯಿಕವಾಗಿ ಆಫ್‌ಲೈನ್‌ ಘಟಿಕೋತ್ಸವ ಮಾಡುತ್ತಿದ್ದರೂ ಕರ್ನಾಟಕ ವಿವಿ(Karnatak University) ಮಾತ್ರ ಆನ್‌ಲೈನ್‌ ಘಟಿಕೋತ್ಸವ ಮಾಡುವ ಮೂಲಕ ವಿದ್ಯಾರ್ಥಿಗಳ(Students) ಕೆಂಗಣ್ಣಿಗೆ ಗುರಿಯಾಗಿದೆ.

ಈಗಾಗಲೇ ಒಂದೂವರೆ ವರ್ಷಗಳಿಂದ ಕೋವಿಡ್‌(Covid19) ಹಿನ್ನೆಲೆ ಘಟಿಕೋತ್ಸವ ಮುಂದೂಡುತ್ತಾ ಬಂದ ವಿಶ್ವವಿದ್ಯಾಲಯ ತೀವ್ರ ಒತ್ತಡದ ಹಿನ್ನೆಲೆ ಕೊನೆಗೂ ಅ. 8ರಂದು 70 ಹಾಗೂ 71ನೇ ಘಟಿಕೋತ್ಸವ ಆಯೋಜಿಸಿದೆ. ಆದರೆ, ವಿದ್ಯಾರ್ಥಿಗಳ ವಿರೋಧದ ಮಧ್ಯೆಯೂ ಆನ್‌ಲೈನ್‌ ಮಾಡಲು ತೀರ್ಮಾನಿಸಿದೆ. ಈ ನಿರ್ಧಾರ ಖಂಡಿಸಿ ಪ್ರತಿಭಟಿಸಿ ಆಫ್‌ಲೈನ್‌ ಮಾಡಲು ಕುಲಪತಿಗಳಿಗೆ ಮನವಿ ಸಹ ಸಲ್ಲಿಕೆ ಮಾಡಲಾಗಿದೆ. ಆದರೆ, ಕುಲಪತಿಗಳು ಮಾತ್ರ ವಿದ್ಯಾರ್ಥಿಗಳ ಒತ್ತಾಯಕ್ಕೆ ಸ್ಪಂದನೆ ನೀಡುತ್ತಿಲ್ಲ.

ಧಾರವಾಡ: ಪದವಿ ಪ್ರಮಾಣ ಪತ್ರಕ್ಕಾಗಿ ಕವಿವಿ ವಿದ್ಯಾರ್ಥಿಗಳ ಪರದಾಟ..!

ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿರುವ ಕವಿವಿ ಸಂಶೋಧನಾ ವಿದ್ಯಾರ್ಥಿ ಜಗದೀಶ ಮಾನೆ, ಧಾರವಾಡ(Dharwad) ಸೇರಿದಂತೆ ರಾಜ್ಯದಲ್ಲಿ ಕೋವಿಡ್‌ ಸಂಪೂರ್ಣ ಇಳಿಮುಖವಾಗಿದೆ. ರಾಜ್ಯ ಸರ್ಕಾರ ಎಲ್ಲ ಶಾಲಾ- ಕಾಲೇಜುಗಳ ಆರಂಭ ಸಹ ಮಾಡಿದೆ. ಸಭೆ- ಸಮಾರಂಭಗಳು, ಮದುವೆಗಳೂ ಅದ್ಧೂರಿಯಾಗಿ ನಡೆಯುತ್ತಿವೆ. ಇಂತಹ ಸಂದರ್ಭದಲ್ಲಿ ಅ. 18ರಂದು ಕೃಷಿ ವಿವಿ, ಅ. 15ರಂದು ಕುವೆಂಪು ವಿವಿಗಳು ಆಫ್‌ಲೈನ್‌ ಘಟಿಕೋತ್ಸವ(Convocation) ನಡೆಸುತ್ತಿವೆ. ಮೈಸೂರು, ಬೆಂಗಳೂರು ವಿವಿಗಳಲ್ಲಿ ಈಗಾಗಲೇ ಆಫ್‌ಲೈನ್‌ ಮಾಡಲಾಗಿದೆ. ಹೀಗಿರುವ ಸಂದರ್ಭದಲ್ಲಿ ಕವಿವಿಯಲ್ಲಿ ಮಾತ್ರ ನಾಲ್ಕು ತಿಂಗಳ ಹಿಂದಿನ ನಿರ್ಣಯದಂತೆ ಕೋವಿಡ್‌ ನೆಪ ಹೇಳುತ್ತಾ ಆನ್‌ಲೈನ್‌ ಘಟಿಕೋತ್ಸವ ಮಾಡುತ್ತಿದೆ. ಈ ಹಿಂದೆ ಕವಿವಿ ಆಫ್‌ಲೈನ್‌ ಘಟಿಕೋತ್ಸವದ ಹೆಸರಿನಲ್ಲಿ ವಿದ್ಯಾರ್ಥಿಗಳ ಹತ್ತಿರ ಸಾವಿರಾರು ರುಪಾಯಿ ಶುಲ್ಕ ಪಾವತಿಸಿಕೊಂಡಿದೆ. ಇದೀಗ ಆನ್‌ಲೈನ್‌ ಘಟಿಕೋತ್ಸವ ಮಾಡಿ ಚಿನ್ನದ ಪದಕ, ಪಿಎಚ್‌ಡಿ ಹಾಗೂ ಪ್ರಮಾಣಪತ್ರವನ್ನು ಮನೆಗೆ ಕಳುಹಿಸುತ್ತಿರುವುದು ಸರಿಯಲ್ಲ ಎಂದರು.

ಘಟಿಕೋತ್ಸವ ಅನ್ನುವುದು ವಿವಿಗಳಿಗೆ ಒಂದು ಹಬ್ಬವಿದ್ದಂತೆ. ಸಾಧನೆ ಮಾಡಿರುವ ವಿಧ್ಯಾರ್ಥಿಗಳನ್ನು ಪ್ರೋತ್ಸಾಹ ಹಾಗೂ ಸ್ಫೂರ್ತಿ ನೀಡಲು ಸುಸಂದರ್ಭ. ಅನೇಕ ವರ್ಷಗಳ ಕಾಲ ಅಧ್ಯಯನ ಮಾಡಿ ಚಿನ್ನದ ಪದಕ, ಡಾಕ್ಟರೇಟ್‌ ಪದವಿಯನ್ನು ಪಡೆದ ವಿದ್ಯಾರ್ಥಿಗಳಿಗೆ ಸಮಾರಂಭಗಳಲ್ಲಿ ಅತಿಥಿಗಳಿಂದ ಪಡೆದುಕೊಳ್ಳಬೇಕೆಂಬ ಕನಸು ನುಚ್ಚುನೂರು ಮಾಡುವ ಯತ್ನ ಕವಿವಿಯದ್ದು. ಕುಲಪತಿಗಳು ಸರ್ವಾಧಿಕಾರಿಯಂತೆ ವರ್ತಿಸುತ್ತಿದ್ದಾರೆ. ವಿದ್ಯಾರ್ಥಿ ವಿರೋಧಿ ನೀತಿಯನ್ನು ಖಂಡಿಸಿ ಕೂಡಲೇ ಆಫ್‌ಲೈನ್‌ ಘಟಿಕೋತ್ಸವ ಮಾಡಬೇಕು. ಇಲ್ಲದೇ ಇದ್ದಲ್ಲಿ ಉಗ್ರ ಹೋರಾಟ ಮಾಡಲಾಗುವುದು ಎಂದರು.