ಧಾರವಾಡ: ಪದವಿ ಪ್ರಮಾಣ ಪತ್ರಕ್ಕಾಗಿ ಕವಿವಿ ವಿದ್ಯಾರ್ಥಿಗಳ ಪರದಾಟ..!

* 70, 71ನೇ ಘಟಿಕೋತ್ಸವ ನಡೆಸದೇ ಕವಿವಿ ನಿರ್ಲಕ್ಷ್ಯ
* ಘಟಿಕೋತ್ಸವ ನೆಪದಲ್ಲಿ ಪ್ರಮಾಣ ಪತ್ರ ವಿತರಣೆ ವಿಳಂಬ
* ಬೇರೆ ವಿವಿಗಳು ಘಟಿಕೋತ್ಸವ ನಡೆಸಿದರೂ ಕವಿವಿಗೆ ಏನಾಗಿದೆ?
 

Students Not Get Graduation Certificate Since Two Year From Karnatak University Dharwad grg

ಬಸವರಾಜ ಹಿರೇಮಠ

ಧಾರವಾಡ(ಸೆ.23): ಪದವಿ ಮುಗಿಸಿ ಎರಡು ವರ್ಷಗಳಾದರೂ ಕರ್ನಾಟಕ ವಿಶ್ವವಿದ್ಯಾಲಯವು(Karnatak University) ಕೋವಿಡ್‌ ನೆಪವೊಡ್ಡಿ ಘಟಿಕೋತ್ಸವ ನಡೆಸದೇ ಸಾವಿರಾರು ವಿದ್ಯಾರ್ಥಿಗಳ ಕೆಂಗಣ್ಣಿಗೆ ಗುರಿಯಾಗಿದೆ. ತಾವು ಕಲಿತ ಪದವಿಗಳ ಪ್ರಮಾಣ ಪತ್ರ ಕೇಳಿದ ವಿದ್ಯಾರ್ಥಿಗಳಿಗೆ ಕಳೆದ ಒಂದು ವರ್ಷದಿಂದ ಕವಿವಿ ಘಟಿಕೋತ್ಸವದ ನೆಪ ಹೇಳುತ್ತಿದೆಯೇ ಹೊರತು ಪ್ರಮಾಣ ಪತ್ರ ಒದಗಿಸುವ ಪ್ರಯತ್ನ ಮಾತ್ರ ಮಾಡುತ್ತಿಲ್ಲ.

2019-20 ಹಾಗೂ 2020-21ನೇ ಶೈಕ್ಷಣಿಕ ವರ್ಷದ ಸ್ನಾತಕ, ಸ್ನಾತಕೋತ್ತರ ಪದವಿ ಸೇರಿದಂತೆ ಡಿಪ್ಲೋಮಾ, ಪಿಎಚ್‌.ಡಿ ಪದವಿಗಳ ಪ್ರಮಾಣ ಪತ್ರ ನೀಡದೇ ವಿದ್ಯಾರ್ಥಿಗಳು(Students) ಅತಂತ್ರವಾಗಿದ್ದಾರೆ. ಘಟಿಕೋತ್ಸವ ನಡೆಸದೇ ಪ್ರಮಾಣಪತ್ರ ನೀಡುವಂತಿಲ್ಲ. ರಾಜ್ಯದ ಬೇರೆ ಬೇರೆ ವಿಶ್ವವಿದ್ಯಾಲಯಗಳು ಆನ್‌ಲೈನ್‌ ಮೂಲಕ ಘಟಿಕೋತ್ಸವ ನಡೆಸಿ ತನ್ನ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ನೀಡಿದರೂ ಕವಿವಿ ಮಾತ್ರ ಈ ವಿಷಯದಲ್ಲಿ ನಿರ್ಲಕ್ಷ್ಯ ಧೋರಣೆ ತೋರುತ್ತಿದೆ. 70 ಹಾಗೂ 71ನೇ ಘಟಿಕೋತ್ಸವ ಬಾಕಿ ಉಳಿದಿದ್ದು ಹೆಚ್ಚಿನ ವಿದ್ಯಾಭ್ಯಾಸ, ಉದ್ಯೋಗ ಸೇರಿದಂತೆ ಹಲವು ಕಾರ್ಯಗಳಿಗೆ ಪ್ರಮಾಣ ಪತ್ರಗಳಿಲ್ಲದೇ ಅಭ್ಯರ್ಥಿಗಳು ಪರದಾಡುವಂತಾಗಿದೆ.

ಧಾರವಾಡ: ಕರ್ನಾಟಕ ವಿವಿ ಪ್ರೊಫೆಸರ್‌ ಮೊಬೈಲ್‌ ಹ್ಯಾಕ್‌, ಹಣಕ್ಕಾಗಿ ಬ್ಲ್ಯಾಕ್‌ಮೇಲ್‌

ಕೋವಿಡ್‌(Covid19) ಕಾರಣದಿಂದ ಆನ್‌ಲೈನ್‌ ಅಥವಾ ಆಫ್‌ಲೈನ್‌ ಆಯ್ಕೆಯೊಂದಿಗೆ ಕರ್ನಾಟಕ ವಿವಿ 2021ರ ಜನವರಿಯಲ್ಲಿ ಅಧಿಸೂಚನೆ ಹೊರಡಿಸಿತ್ತು. 2019 ಹಾಗೂ 2020ರ ಎಲ್ಲ ವಿಷಯಗಳ ಪದವಿ, ಡಿಪ್ಲೋಮಾಗಳಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡುವುದಾಗಿ ತಿಳಿಸಿತ್ತು. ಕೋವಿಡ್‌ ಕಾರಣದಿಂದಲೇ ಸಾವಿರಾರು ಜನರು ಭಾಗವಹಿಸುವ ಕಾರಣ ಸಾಂಕೇತಿಕವಾಗಿ ಘಟಿಕೋತ್ಸವ ನಡೆಸಿ ಆಫ್‌ಲೈನ್‌ ಮೂಲಕ ಕೆಲವರಿಗೆ ಮಾತ್ರ ಪ್ರಮಾಣ ಪತ್ರ ನೀಡಿ ಉಳಿದವರಿಗೆ ಅಂಚೆ ಮೂಲಕ ಪ್ರಮಾಣ ಪತ್ರ ನೀಡುವುದಾಗಿ ಕುಲಪತಿ ಸೇರಿದಂತೆ ವಿವಿ ಆಡಳಿತಾಧಿಕಾರಿಗಳು ಹೇಳಿಕೆ ನೀಡಿಯೇ ಆರೇಳು ತಿಂಗಳುಗಳು ಕಳೆದವು. ಘಟಿಕೋತ್ಸವ ನಡೆಯಲಿಲ್ಲ. ಪ್ರಮಾಣ ಪತ್ರಗಳೂ ಸಿಗಲಿಲ್ಲ. ವಿಶ್ವವಿದ್ಯಾಲಯದ ನಡೆ ವಿರೋಧಿಸಿ ಹಲವು ಬಾರಿ ವಿದ್ಯಾರ್ಥಿಗಳು, ಶೈಕ್ಷಣಿಕ ಸಂಘಟನೆಗಳು ಪ್ರತಿಭಟನೆ ಸಹ ನಡೆಸಿದವು. ಪಾಲಿಕೆ ಮಾಜಿ ಸದಸ್ಯ ದೀಪಕ ಚಿಂಚೋರೆ ಸಹ ಈ ಬಗ್ಗೆ ಧ್ವನಿ ಎತ್ತಿ, 10 ದಿನಗಳ ಒಳಗೆ ಪ್ರಮಾಣ ಪತ್ರ ವಿತರಿಸಲು ಆಗ್ರಹಿಸಿದ್ದರು. ಜೊತೆಗೆ ಈ ಕುರಿತು ಕುಲಪತಿಗೆ ಈ ಭಾಗದ ಸಚಿವರು, ಶಾಸಕರು ಸೂಚನೆ ನೀಡದೇ ಇರುವುದು ದುರಂತದ ಸಂಗತಿ ಎಂದು ಎಚ್ಚರಿಸಿದ್ದರು. ಇಷ್ಟಾಗಿಯೂ ಕವಿವಿ ಮಾತ್ರ ಈವರೆಗೂ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ವಿತರಣೆ ಮಾಡುವ ಬಗ್ಗೆ ಗಂಭೀರ ಹೆಜ್ಜೆಗಳನ್ನು ಇಡದೇ ಇರುವುದು ವಿಶ್ವವಿದ್ಯಾಲಯದ ಶೈಕ್ಷಣಿಕ ಗುಣಮಟ್ಟದ ಬಗ್ಗೆ ಪ್ರಶ್ನೆ ಮೂಡುತ್ತಿದೆ.

ಎರಡೂ ವರ್ಷಗಳು ಸೇರಿದಂತೆ ಒಟ್ಟು 25 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಪ್ರಮಾಣಪತ್ರಕ್ಕಾಗಿ ಚಾತಕ ಪಕ್ಷಿಯಂತೆ ಕಾಯುತ್ತಿದ್ದು ಶೀಘ್ರ ವಿಶ್ವವಿದ್ಯಾಲಯವು 70 ಮತ್ತು 71ನೇ ಘಟಿಕೋತ್ಸವ ನಡೆಸಿ ಪ್ರಮಾಣ ಪತ್ರ ವಿತರಣೆ ಕಾರ್ಯ ಮಾಡಬೇಕಿದೆ.

ಶೈಕ್ಷಣಿಕ ಒಪ್ಪಂದಕ್ಕೆ ಹ್ಯಾರಿಸ್‌ಬರ್ಗ್‌ ಜತೆ ಕರ್ನಾಟಕ ವಿವಿ ಒಪ್ಪಂದ

ಆನಲೈನ್‌ ಘಟಿಕೋತ್ಸವ

ಕರ್ನಾಟಕ ವಿಶ್ವವಿದ್ಯಾಲಯದ 70 ಮತ್ತು 71ನೇ ಘಟಿಕೋತ್ಸವವನ್ನು(Convocation) ಇದೇ ತಿಂಗಳ ಅಂತ್ಯದೊಳಗೆ ಮಾಡಲು ವಿಶೇಷ ಸಿಂಡಿಕೇಟ್‌ ಸಭೆ ತೀರ್ಮಾನಿಸಿದೆ. ಆದಷ್ಟು ಶೀಘ್ರ ಆನಲೈನ್‌ ಘಟಿಕೋತ್ಸವ ನಡೆಸಿ ಉತ್ತೀರ್ಣರಾದವರಿಗೆ ಪ್ರಮಾಣ ಪತ್ರ ಒದಗಿಸಲಾಗುವುದು ಎಂದು ಕವಿವಿ ಮೌಲ್ಯಮಾಪನ ಕುಲಸಚಿವರು ಪ್ರೊ. ನಾಗರಾಜ ತಿಳಿಸಿದ್ದಾರೆ.  

ಈ ತಿಂಗಳ ಅಂತ್ಯದಲ್ಲಿ ಘಟಿಕೋತ್ಸವ

ಎರಡು ವರ್ಷಗಳ ಪದವಿ ಪ್ರಮಾಣ ಪತ್ರ ನೀಡದೇ ಇರುವುದು ನಮಗೂ ಬೇಸರ ಮೂಡಿಸಿದೆ. ಈ ಬಗ್ಗೆ ಕುಲಪತಿಗಳೊಂದಿಗೆ ಹಲವು ಬಾರಿ ಚರ್ಚೆ ಸಹ ಮಾಡಿದ್ದೇನೆ. ತಾಂತ್ರಿಕ ಕಾರಣದಿಂದ ವಿಳಂಬವಾಗಿದೆ ಎಂದು ಹೇಳಿದ್ದಾರೆ. ಇದೀಗ ಬುಧವಾರ ವಿಶೇಷ ಸಿಂಡಿಕೇಟ್‌ ಸಭೆ ನಡೆಸಿದ್ದು ರಾಜ್ಯಪಾಲರು ಘಟಿಕೋತ್ಸವಕ್ಕೆ ಒಪ್ಪಿಗೆ ಸೂಚಿಸಿದ್ದಾರೆ. ಸಭೆಯಲ್ಲಿ ಆಫ್‌ಲೈನ್‌ ಘಟಿಕೋತ್ಸವ ಮಾಡಿ ಪ್ರಮಾಣ ಪತ್ರ ನೀಡಲು ಆಗ್ರಹಿಸಲಾಯಿತು. ಆದರೆ, ಇದೇ ತಿಂಗಳ ಅಂತ್ಯದಲ್ಲಿ ಅಥವಾ ಅಕ್ಟೋಬರ್‌ ಮೊದಲ ವಾರದಲ್ಲಿ ಆನ್‌ಲೈನ್‌ ಘಟಿಕೋತ್ಸವದ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಕವಿವಿ ಸಿಂಡಿಕೇಟ್‌ ಸದಸ್ಯ ರವಿ ಮಾಳಗೇರಿ ಹೇಳಿದ್ದಾರೆ. 
 

Latest Videos
Follow Us:
Download App:
  • android
  • ios