Asianet Suvarna News Asianet Suvarna News

ಇಂದಿನಿಂದ ಶಾಲಾ ಮಕ್ಕಳಿಗೆ ಶೈಕ್ಷಣಿಕ ಚಟುವಟಿಕೆ ಆರಂಭ

* ಖಾಸಗಿ ಶಾಲೆಗಳಲ್ಲಿ ಆನ್‌ಲೈನ್‌ ತರಗತಿ
* ಸರ್ಕಾರಿ ಶಾಲಾ ಮಕ್ಕಳಿಗೆ ದೂರದರ್ಶನ ಪಾಠ
* ಶೈಕ್ಷಣಿಕ ವೇಳಾಪಟ್ಟಿ ಪ್ರಕಾರ ಜೂ.15ರಿಂದಲೇ ಮಕ್ಕಳ ದಾಖಲಾತಿಗೆ ಅವಕಾಶ 
 

Start of Educational Activities for School Children from today in Karnataka grg
Author
Bengaluru, First Published Jul 1, 2021, 7:34 AM IST

ಬೆಂಗಳೂರು(ಜು.01): 2021-22ನೇ ಸಾಲಿನ ಶೈಕ್ಷಣಿಕ ಚಟುವಟಿಕೆಗಳು ಜು.1ರಿಂದ ಆರಂಭವಾಗಲಿದ್ದು, ರಾಜ್ಯದ ಸರ್ಕಾರಿ ಹಾಗೂ ಖಾಸಗಿ ಶಾಲಾ ಮಕ್ಕಳಿಗೆ ಆನ್‌ಲೈನ್‌ ತರಗತಿಗಳು, ದೂರದರ್ಶನ ಚಂದನ ವಾಹಿತಿಯ ಸಂವೇದಾ ಇ-ಪಾಠ ಬೋಧನಾ ಕಾರ್ಯಕ್ರಮಗಳು ಶುರುವಾಗಲಿವೆ.

ಈಗಾಗಲೇ ಶಿಕ್ಷಣ ಇಲಾಖೆ ಪ್ರಕಟಿಸಿರುವ ಶೈಕ್ಷಣಿಕ ವೇಳಾಪಟ್ಟಿ ಪ್ರಕಾರ ಜೂ.15ರಿಂದಲೇ ಮಕ್ಕಳ ದಾಖಲಾತಿಗೆ ಅವಕಾಶ ನೀಡಲಾಗಿತ್ತು. ಜು.1ರಿಂದ ಶೈಕ್ಷಣಿಕ ಚಟುವಟಿಕೆ ಆರಂಭಕ್ಕೆ ಸಿದ್ಧತೆ ಮಾಡಿಕೊಳ್ಳಲು ಸೂಚಿಸಲಾಗಿತ್ತು. ಕೋವಿಡ್‌-19 ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ ಶಾಲೆಗಳಲ್ಲಿ 2021-22ನೇ ಸಾಲಿನ ಭೌತಿಕ ತರಗತಿಗಳು ಆರಂಭ ವಿಳಂಬವಾಗುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರ ಶಾಲಾ ಮಕ್ಕಳಿಗೆ ಆನ್‌ಲೈನ್‌ ತರಗತಿ, ದೂರದರ್ಶನ, ರೇಡಿಯೋ, ಯೂಟ್ಯೂಬ್‌ ಸೇರಿದಂತೆ ತಾಂತ್ರಿಕ ಸೌಲಭ್ಯಗಳ ಮೂಲಕ ಶೈಕ್ಷಣಿಕ ಚಟುವಟಿಕೆ ನಡೆಸಲು ಸೂಚಿಸಿದೆ.

ಸಚಿವ ಸುರೇಶ್‌ ಕುಮಾರ್‌ ಶಾಲೆ ತೆರೆಯುವ ಮನಸ್ಸು ‌ಮಾಡ್ತಿಲ್ಲ: ರುಪ್ಸಾ

ಅದರಂತೆ ಖಾಸಗಿ ಶಾಲೆಗಳು ತಮ್ಮ ಮಕ್ಕಳಿಗೆ ಆನ್‌ಲೈನ್‌ ತರಗತಿಗಳನ್ನು ನಡೆಸಲು ಸಿದ್ಧತೆ ಮಾಡಿಕೊಂಡಿವೆ. ಈಗಾಗಲೇ ವಿವಿಧ ಶಾಲೆಗಳು ಆನ್‌ಲೈನ್‌ ತರಗತಿ ಆರಂಭಿಸಿವೆ. ಇನ್ನು ಕೆಲ ಶಾಲೆಗಳು ಜು.1ರಿಂದ ಆರಂಭಿಸಲಿವೆ.
ಇನ್ನು, ಶಿಕ್ಷಣ ಇಲಾಖೆ ಕೂಡ ಸರ್ಕಾರಿ, ಅನುದಾನಿತ ಶಾಲಾ ಮಕ್ಕಳು ಹಾಗೂ ಗ್ರಾಮೀಣ ಭಾಗದ ಮಕ್ಕಳ ಅನುಕೂಲಕ್ಕಾಗಿ ಬುಧವಾರದಿಂದ ದೂರದರ್ಶನ ಚಂದನ ವಾಹಿನಿಯಲ್ಲಿ ಸಂವಾದ ಇ - ಪಾಠ ಬೋಧನಾ ಕಾರ್ಯಕ್ರಮ ಪ್ರಸಾರ ಮಾಡುವುದಾಗಿ ತಿಳಿಸಿದೆ. 1ರಿಂದ 7ನೇ ತರಗತಿಗಳಿಗೆ ಬೆಳಗ್ಗೆ 9ರಿಂದ ಸಂಜೆ 4 ಗಂಟೆವರೆಗೆ ಮತ್ತು 8ರಿಂದ 10ನೇ ತರಗತಿವರೆಗೆ ಬೆಳಗ್ಗೆ 8ರಿಂದ ಸಂಜೆ 4.30ರವರೆಗೆ ನಡೆಯಲಿವೆ ಎಂದು ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆ ವೇಳಾಪಟ್ಟಿ ಪ್ರಕಟಿಸಿದೆ.

ಸೂಚನೆ:

ರಾಜ್ಯದ ಎಲ್ಲ ಶಿಕ್ಷಕರು ಸದರಿ ವೇಳಾಪಟ್ಟಿಯನ್ನು ತಮ್ಮ ಶಾಲೆಯ ವಿದ್ಯಾರ್ಥಿಗಳು ಮತ್ತು ಅವರ ಪೋಷಕರಿಗೆ ತಲುಪಿಸಿ ನಿಗದಿತ ಸಮಯದಲ್ಲಿ ನಿಗದಿತ ತರಗತಿಯ ವಿದ್ಯಾರ್ಥಿಗಳು ಸಂವೇದಾ ತರಗತಿಗಳನ್ನು ವೀಕ್ಷಿಸಲು ಜಾಗೃತಿ ಮೂಡಿಸಬೇಕು. ಯಾವುದೇ ವಿದ್ಯಾರ್ಥಿ ಮನೆಯಲ್ಲಿ ದೂರದರ್ಶನ ಲಭ್ಯತೆ ಇರದಿದ್ದಲ್ಲಿ ಎಸ್‌ಡಿಎಂಸಿ ಸದಸ್ಯರ ನೆರವು, ಸ್ಥಳೀಯ ಸಂಪನ್ಮೂಲಗಳ ಬಳಕೆ, ಅಕ್ಕ ಪಕ್ಕದ ಮನೆಯವರ ನೆರವು ಸೇರಿದಂತೆ ಯಾವುದಾದರೂ ರೀತಿಯಲ್ಲಿ ದೂರದರ್ಶನ ವೀಕ್ಷಣೆಗೆ ಅನುಕೂಲ ಮಾಡಿಕೊಡಬೇಕು ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್‌.ಸುರೇಶ್‌ ಕುಮಾರ್‌ ಸೂಚಿಸಿದ್ದಾರೆ.
 

Follow Us:
Download App:
  • android
  • ios