ಜ್ವರ, ಹೊಟ್ಟೆನೋವು, ಆರ್ಥಿಕ ಸಂಕಷ್ಟಗಳ ನಡುವೆಯೂ ಮೈಸೂರಿನ ಧನುಷ್ ಎಸ್. ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಗಳಿಸಿದ್ದಾರೆ. ಸ್ನೇಹಿತರ ಸವಾಲನ್ನು ಸ್ವೀಕರಿಸಿ ಆತ್ಮವಿಶ್ವಾಸದಿಂದ ಓದಿ ಯಶಸ್ಸು ಗಳಿಸಿದ್ದಾರೆ. ಬೆಂಗಳೂರಿನ ನಮಿತಾ ಕೂಡ 625/625 ಅಂಕಗಳೊಂದಿಗೆ ಪ್ರಥಮ ಸ್ಥಾನ ಪಡೆದಿದ್ದು, ಸಿಎ ಆಗುವ ಗುರಿ ಹೊಂದಿದ್ದಾರೆ. ಅನುತ್ತೀರ್ಣರಾದವರಿಗೆ ಮೇ 26 ರಿಂದ ಪುನಃ ಪರೀಕ್ಷೆ ನಡೆಯಲಿದೆ.
ಮೈಸೂರು/ಬೆಂಗಳೂರು (ಮೇ 2): ಜ್ವರ, ಹೊಟ್ಟೆ ನೋವು, ಹಣಕಾಸಿನ ತೊಂದರೆ ಎಲ್ಲದರ ಮಧ್ಯೆಯೂ ದೃಢ ನಿರ್ಣಯದಿಂದ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆದು ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ಮೈಸೂರಿನ ಧನುಷ್ ಎಸ್ ಅವರ ಸಾಧನೆ ಎಲ್ಲರಿಗೂ ಪ್ರೇರಣೆಯಾಗಿದೆ.
ಧನುಷ್ ಎಸ್, ಮೈಸೂರಿನ ವಿದ್ಯಾರ್ಥಿ, ವಿಜ್ಞಾನ ಪರೀಕ್ಷೆ ಬರೆಯುವ ದಿನ ಹೊಟ್ಟೆ ನೋವಿನಿಂದ ಬಳಲುತ್ತಿದ್ದರು. ಆದರೆ ಇಂಥ ಸಮಯದಲ್ಲೂ ಅವರು ಪೇಯ್ನ್‌ಕಿಲ್ಲರ್ ಇಂಜಕ್ಷನ್ ತೆಗೆದುಕೊಂಡು ಪರೀಕ್ಷೆ ಬರೆದು ತಮ್ಮ ಗುರಿಯನ್ನು ಕೈಗೂಡಿಸಿಕೊಂಡರು. ಈ ಬಗ್ಗೆ ಮಾತನಾಡಿದ ಅವರ ತಂದೆ ಶಿವಕುಮಾರ್, 'ಪರೀಕ್ಷೆ ದಿನ ಮಗನಿಗೆ ಜ್ವರವಿತ್ತು, ಹೊಟ್ಟೆ ನೋವಿತ್ತು. ಆದರೆ ಆತ ಆತ್ಮವಿಶ್ವಾಸದಿಂದ ನಿಲ್ಲದೆ ಪರೀಕ್ಷೆ ಬರೆದ. ಶಾಲಾ ಫೀಸ್ ಕಟ್ಟುವುದಕ್ಕೂ ಸಂಕಷ್ಟವಿತ್ತು. ಆದರೆ ನಾವು ಯಾವಾಗಲೂ ನಮ್ಮ ಮಗ ಸಾಧನೆ ಮಾಡುತ್ತಾನೆ ಅಂತ ನಂಬಿದ್ದೆವು' ಎಂದರು.
ಧನುಷ್ ಮಾತುಗಳ ಪ್ರಕಾರ ಅವರು ಸ್ನೇಹಿತರಿಂದ ಚ್ಯಾಲೆಂಜ್ ಮಾಡಿಕೊಂಡು ಆತ್ಮವಿಶ್ವಾಸದಿಂದ ಪರೀಕ್ಷೆ ಬರೆಯಲು ಮುಂದಾದರು. “ಎಸ್‌ಎಸ್‌ಎಲ್‌ಸಿ ಶುರುವಾತಿನಿಂದಲೇ ಪ್ಲಾನ್ ಮಾಡಿ ಓದಿದೆ. ಮನೆಯವರೂ, ಕೋಚಿಂಗ್ ಸೆಂಟರ್‌ಬಳಗವೂ ಉತ್ತೇಜಿಸಿದರು. ಈಗ ಬಹಳ ಖುಷಿಯಾಗಿದೆ,” ಎಂದು ಧನುಷ್ ಹೇಳಿದ್ದಾರೆ. ಮುಂದಿನ ಗುರಿ – ನೀಟ್ ಪರೀಕ್ಷೆ ಬರೆದು ಎಂ.ಬಿ.ಬಿ.ಎಸ್ ಓದುವುದು ಎಂದು ಹೇಳಿಕೊಂಡಿದ್ದಾರೆ.
ತಾಯಿ ಸವಿತಾ ಮಾತನಾಡಿ, 'ಪರೀಕ್ಷೆಗೆ ಮುಂಚಿನ ದಿನ ಜ್ವರದಿಂದ ಬಳಲುತ್ತಿದ್ದರೂ, ಧನುಷ್ ಧೈರ್ಯ ತೋರಿಸಿ ಪರೀಕ್ಷೆ ಬರೆದು ಪ್ರಥಮ ಸ್ಥಾನ ಪಡೆದಿದ್ದಾನೆ. ನಮಗೆ ಇದೀಗ ಫಲಿತಾಂಶವನ್ನು ನೋಡಿ ತುಂಬಾ ಖುಷಿಯಾಗಿದೆ' ಎಂದು ಹೇಳಿದರು. ಈ ಸಾಧನೆಯು ವಿದ್ಯಾರ್ಥಿಗಳಿಗಳಿಗೆ ಅಲ್ಲದೆ ಪಾಲಕರಿಗೂ ಸ್ಪೂರ್ತಿ ನೀಡುವಂತದ್ದು ಎಂದು ಹೇಳಿದರು.
ನಾನು ಸಿಎ ಆಗ್ತೀನಿ ಎಂದ ಬೆಂಗಳೂರಿನ ನಮಿತಾ: ರಾಜ್ಯಕ್ಕೆ ಒಟ್ಟು 22 ವಿದ್ಯಾರ್ಥಿಗಳು 625ಕ್ಕೆ 625 ಅಂಕಗಳನ್ನು ಪಡೆದು ಪ್ರಥಮ ಸ್ಥಾನ ಗಳಿಸಿದ್ದಾರೆ. ಅದರಲ್ಲಿ ಬೆಂಗಳೂರಿನ ವಿದ್ಯಾರ್ಥಿನಿ ನಮಿತಾ ಕೂಡ ರ್ಯಾಂಕ್ ಬಂದಿದ್ದಾಳೆ. ತನ್ನ ಮುಂದಿನ ಗುರಿ ಬಗ್ಗೆ ಮಾತನಾಡಿದ ವಿದ್ಯಾರ್ಥಿನಿ ನಮಿತಾ, ನಾನು ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದು ತುಂಬಾ ಖುಷಿ ಆಗ್ತಿದೆ. ನಾನು 625ಕ್ಕೆ 625 ತೆಗೆದುಕೊಳ್ಳುವ ಕನಸು ಕಂಡಿದ್ದೆ. ಇವತ್ತು ಅದು ನನಸಾಗಿದೆ. ನಮ್ಮ ಅಮ್ಮನೇ ಟಿವಿಯಲ್ಲಿ ನನ್ನ ಹೆಸರು ರ್ಯಾಂಕ್ ಪಡೆದವರ ಪಟ್ಟಿಯಲ್ಲಿ ಇರುವುದನ್ನು ನೋಡಿದ್ದಾರೆ. ನಮ್ಮ ಅಮ್ಮನೇ ನನಗೆ ವಿಷಯ ತಿಳಿಸಿದ್ದಾರೆ. ನನಗೆ ತುಂಬಾ ಖುಷಿ ಆಯ್ತು. ನಾನು ಪ್ರತಿ ದಿನ ಕ್ಲಾಸ್ ನಲ್ಲಿ ಹೇಳಿದ ಪಾಠವನ್ನ ಮತ್ತೆ ಮತ್ತೆ ಓದ್ತಾ ಇದ್ದೆ ಎಂದರು.
ನಾನು ಯಾವತ್ತೂ ಯಾವುದೇ ವಿಷಯವನ್ನು ಬೈ-ಹಾರ್ಟ್ ಮಾಡುತ್ತಿರಲಿಲ್ಲ, ಕಾನ್ಸೆಪ್ಟ್ ಕಡೆ ಗಮನ ಹರಿಸ್ತಿದ್ದೆ. ವಿಷಯವನ್ನ ಅರಿತು, ಎಕ್ಸಾಮ್ ಫೇಸ್ ಮಾಡ್ತಿದ್ದೆ. ತುಂಬಾ ಕಾನ್ಫಿಡೆಂಟ್ ಆಗಿ ಎಕ್ಸಾಮ್ ಬರೆದಿದ್ದೆ. ಮುಂದೆ ನಾನು ಕಾಮರ್ಸ್ ಮಾಡ್ಬೇಕು ಅನ್ಕೊಂಡಿದೀನಿ. ಕಾಮರ್ಸ್ ಮಾಡಿ CA ಆಗ್ತೀನಿ. ಅಪ್ಪ ಅಮ್ಮಂಗೆ, ಶಾಲೆಯ ಆಡಳಿತ ಮಂಡಳಿಗೆ ಧನ್ಯವಾದ ತಿಳಿಸ್ತೀನಿ. ಎಲ್ಲರೂ ತುಂಬಾ ಸಪೋರ್ಟ್ ಮಾಡಿದ್ದಾರೆ ಎಂದು ರಾಜ್ಯಕ್ಕೆ ಪ್ರಥಮ ಸ್ಥಾನ ಬಂದ ವಿದ್ಯಾರ್ಥಿನಿ ನಮಿತಾ ಹೇಳಿಕೊಂಡಿದ್ದಾರೆ.
ಮೇ 26ರಿಂದ ಪರೀಕ್ಷೆ 2 ಆರಂಭ:
ರಾಜ್ಯದಲ್ಲಿ ಈಗಾಗಲೇ ಬರೆದ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳು ಅನುತ್ತೀರ್ಣವಾದಲ್ಲಿ 3 ಬಾರಿ ಪರೀಕ್ಷೆ ಬರೆಯಲು ಸರ್ಕಾರ ಅವಕಾಶವನ್ನು ನೀಡುತ್ತದೆ. ಇದೀಗ ಮಾರ್ಚ್‌ನಲ್ಲಿ ನಡೆದ ಪರೀಕ್ಷಾ ಫಲಿತಾಂಶ ಹೊರಬಿದ್ದಿದೆ. ಅವರಿಗ ಪರೀಕ್ಷೆ 2 ನಡೆಸಲು ಸರ್ಕಾರ ದಿನಾಂಕ ಘೋಷಣೆ ಮಾಡಿದೆ. ಇದೇ ಮೇ 26 ರಿಂದ ಜೂನ್ 2ರ ವರೆಗೆ ಪರೀಕ್ಷೆ - 2 ಆರಂಭವಾಗುತ್ತದೆ. ಇನ್ನು ಈ ಮರು ಪರೀಕ್ಷೆಗೆ ಯಾವುದೇ ಶುಲ್ಕ ಇರುವುದಿಲ್ಲ. SSLC ಪರೀಕ್ಷೆ 3 ದಿನಾಂಕ ಜೂನ್ 23 ರಿಂದ ಜೂನ್ 30ರ ವರೆಗೆ ನಡೆಸಲಾಗುತ್ತದೆ ಎಂದು ಶಿಕ್ಷಣ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.


