ನಾಳೆ ಎಸ್‌ಎಸ್‌ಎಲ್‌ಸಿ ಪೂರಕ ಪರೀಕ್ಷೆ ಫಲಿತಾಂಶ ಪ್ರಕಟ
ಎಸ್‌ಎಸ್‌ಎಲ್‌ಸಿ ಪೂರಕ ಪರೀಕ್ಷೆ (SSLC Supplementary Exam) ಫಲಿತಾಂಶವನ್ನು ಜೂ.30ರ ಬೆಳಗ್ಗೆ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಲಿಯ ವೆಬ್‌ಸೈಟ್‌ನಲ್ಲಿ ಪ್ರಕಟ ಮಾಡಲಾಗುತ್ತಿದೆ.
ಬೆಂಗಳೂರು (ಜೂ.29): ರಾಜ್ಯಾದ್ಯಂತ ಜೂನ್ 12ರಿಂದ ಜೂ.19ರವರೆಗೆ ನಡೆದಿದ್ದ ಎಸ್‌ಎಸ್‌ಎಲ್‌ಸಿ ಪೂರಕ ಪರೀಕ್ಷೆ (SSLC Supplementary Exam) ಫಲಿತಾಂಶವನ್ನು ಜೂ.30ರ ಬೆಳಗ್ಗೆ 11 ಗಂಟೆಗೆ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಲಿಯ ವೆಬ್‌ಸೈಟ್‌ನಲ್ಲಿ ಪ್ರಕಟ ಮಾಡಲಾಗುತ್ತಿದೆ.
ರಾಜ್ಯದಲ್ಲಿ ಎಸ್‌ಎಸ್‌ಎಲ್‌ಸಿ ಪೂರಕ ಪರೀಕ್ಷೆಯನ್ನು ಬರೆದ ವಿದ್ಯಾರ್ಥಿಗಳು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಲಿಯ ಅಧಿಕೃತ ವೆಬ್‌ಸೈಟ್ ಜಾಲತಾಣ https://karresults.nic.in/ ದಲ್ಲಿ ತಮ್ಮ ಫಲಿತಾಂಶವನ್ನು ನೋಡಬಹುದು. ವಿದ್ಯಾರ್ಥಿಗಳು ತಮ್ಮ ಹಾಲ್ ಟಿಕೆಟ್ ಸಂಖ್ಯೆ ಹಾಗೂ ಜನ್ಮ ದಿನಾಂಕವನ್ನು ನಮೂದಿಸಿ ಫಲಿತಾಂಶವನ್ನು ವೀಕ್ಷಣೆ ಮಾಡಬಹುದು.
ಸ್ನೇಹದ ಕಡಲಲ್ಲಿ ನೆನಪಿನ ದೋಣಿಯಲ್ಲಿ.... 1954ರ 10ನೇ ಕ್ಲಾಸ್ ಮಕ್ಕಳ ಪುನರ್ಮಿಲನ
ರಾಜ್ಯದಲ್ಲಿ 1.34 ಲಕ್ಷ ವಿದ್ಯಾರ್ಥಿಗಳು ಅನುತ್ತೀರ್ಣ ಆಗಿದ್ದರು: ಇನ್ನು 2022-23ನೇ ಶೈಕ್ಷಣಿಕ ಸಾಲಿನಲ್ಲಿ ಎಸ್‌ಎಸ್‌ಎಲ್‌ಸಿ ಅಭ್ಯಾಸ ಮಾಡಿದ ವಿದ್ಯಾರ್ಥಿಗಳಿಗೆ ಮಾರ್ಚ್ ಮತ್ತು ಏಪ್ರಿಲ್‌ನಲ್ಲಿ ಪರೀಕ್ಷೆ ಏರ್ಪಡಿಸಲಾಗಿತ್ತು. ಈವೇಳೆ ಬರೋಬ್ಬರಿ 8,35,102 ಜನ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಈ ಪೈಕಿ 7,00,619 ವಿದ್ಯಾರ್ಥಿಗಳು ಉತ್ತಿರ್ಣರಾಗಿದ್ದು, 1,34,483 ಅನುತ್ತೀರ್ಣರಾಗಿದ್ದರು. ಅನುತ್ತೀರ್ಣಗೊಂಡ ವಿದ್ಯಾರ್ಥಿಗಳು ಧೃತಿಗೆಡದೇ ಮೇ 15ರೊಳಗೆ ಸಪ್ಲಿಮೆಂಟರಿ ಪರೀಕ್ಷೆಗೆ ನೋಂದಣಿ ಮಾಡಿಸಿಕೊಂಡು ಜೂನ್‌ನಲ್ಲಿ ಮತ್ತೊಮ್ಮೆ ಪರೀಕ್ಷೆ ಬರೆದಿದ್ದರು. ಈಗ ಫಲಿತಾಂಶ ಹೊರಬೀಳಿದ್ದು, ಮುಂದಿನ ವ್ಯಾಸಂಗಕ್ಕೆ ಅನುಕೂಲವಾಗಲಿದೆ.
ಹಾಜರಾತಿ ಕಡಿಮೆ ಇದ್ದವರಿಗೂ ಪರೀಕ್ಷೆಗೆ ಅವಕಾಶ: ರಾಜ್ಯದ 2022-23ನೇ ಶೈಕ್ಷಣಿಕ ಸಾಲಿನಲ್ಲಿ ಶಾಲೆಯ ಹಾಜರಾತಿ ಕೊರತೆಯಿದ್ದ ಕಾರಣ ಬರೋಬ್ಬರಿ 26 ಸಾವಿ ವಿದ್ಯಾರ್ಥಿಗಳಿಗೆ ಎಸ್‌ಎಸ್‌ಎಲ್‌ಸಿ ಮುಖ್ಯ ಪರೀಕ್ಷೆಯಿಂದ (ಮಾರ್ಚ್, 2023) ಹೊರಗಿಡಲಾಗಿತ್ತು. ಅಂತಹ 26 ಸಾವಿರಕ್ಕೂ ಹೆಚ್ಚು ಶಾಲಾ (ಫ್ರೆಷರ್ಸ್) ವಿದ್ಯಾರ್ಥಿಗಳಿಗೆ ಖಾಸಗಿ ಅಭ್ಯರ್ಥಿಗಳಾಗಿ ನೋಂದಾಯಿಸಿಕೊಂಡು ಪೂರಕ ಪರೀಕ್ಷೆ ಬರೆಯಲು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ಅವಕಾಶ ನೀಡಿತ್ತು. ಒಟ್ಟಾರೆ 1.5 ಲಕ್ಷ ವಿದ್ಯಾರ್ಥಿಗಳು ಪೂರಕ ಪರೀಕ್ಷೆಯನ್ನು ಬರೆದಿದ್ದರು.
ಶೇ.75 ಹಾಜರಾತಿ ಇದ್ದರಷ್ಟೇ ಪರೀಕ್ಷೆ: ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ಶೇ.75ರಷ್ಟು ತರಗತಿ ಹಾಜರಾತಿ ಕಡ್ಡಾಯ. ಆದರೆ, ಈ ಬಾರಿ 26,900 ವಿದ್ಯಾರ್ಥಿಗಳು ನಿಗದಿತ ಹಾಜರಾತಿ ಇಲ್ಲದೆ ಕಳೆದ ಮಾರ್ಚ್‌ನಲ್ಲಿ ನಡೆದಿದ್ದ ಮುಖ್ಯ ಪರೀಕ್ಷೆಗೆ ಹಾಜರಾಗಲಾಗದೆ ವಂಚಿತರಾಗಿದ್ದರು. ಆ ಎಲ್ಲ ವಿದ್ಯಾರ್ಥಿಗಳು ಖಾಸಗಿ ವಿದ್ಯಾರ್ಥಿಗಳಾಗಿ ನೋಂದಾಯಿಸಿಕೊಂಡು ಈಗಲೇ ಪರೀಕ್ಷೆ ಬರೆಯಲು ಅವಕಾಶ ನೀಡಲಾಗಿತ್ತು. ಹಾಗಾಗಿ ಅಂತಹ ಎಲ್ಲ ಮಕ್ಕಳಿಗೆ ಮೇ 26ರ ವರೆಗೆ ಖಾಸಗಿ ಅಭ್ಯರ್ಥಿಗಳಾಗಿ ಪೂರಕ ಪರೀಕ್ಷೆಗೆ ನೋಂದಾಯಿಸಿಕೊಂಡು ಪರೀಕ್ಷೆ ಬರೆದಿದ್ದಾರೆ.