ಎಸ್ಸೆಸ್ಸೆಲ್ಸಿ ರಿಸಲ್ಟ್‌ನಿಂದ ಆಡಳಿತ ಲೋಪ ಬಯಲು: ಮಾಜಿ ಸಚಿವ ಸುರೇಶ್ ಕುಮಾರ್
ಈ ಬಾರಿಯ ಎಸ್ಸೆಸ್ಸೆಲ್ಸಿ ಪರೀಕ್ಷಾ ಫಲಿತಾಂಶ ಕಾಂಗ್ರೆಸ್ ಸರ್ಕಾರದ ಆಡಳಿತ ವ್ಯವಸ್ಥೆಯ ಲೋಪದೋಷಗಳನ್ನಷ್ಟೇ ಅಲ್ಲದೆ, ನೀತಿ ನಿರೂಪಕರ ಬೇಜವಾಬ್ದಾರಿತನವನ್ನೂ ಬಯಲು ಮಾಡಿದೆ ಎಂದು ಮಾಜಿ ಶಿಕ್ಷಣ ಸಚಿವ, ಹಾಲಿ ಶಾಸಕ ಎಸ್.ಸುರೇಶ್ ಕುಮಾರ್ ಟೀಕಿಸಿದ್ದಾರೆ.
ಬೆಂಗಳೂರು (ಮೇ.13): ಈ ಬಾರಿಯ ಎಸ್ಸೆಸ್ಸೆಲ್ಸಿ ಪರೀಕ್ಷಾ ಫಲಿತಾಂಶ ಕಾಂಗ್ರೆಸ್ ಸರ್ಕಾರದ ಆಡಳಿತ ವ್ಯವಸ್ಥೆಯ ಲೋಪದೋಷಗಳನ್ನಷ್ಟೇ ಅಲ್ಲದೆ, ನೀತಿ ನಿರೂಪಕರ ಬೇಜವಾಬ್ದಾರಿತನವನ್ನೂ ಬಯಲು ಮಾಡಿದೆ ಎಂದು ಮಾಜಿ ಶಿಕ್ಷಣ ಸಚಿವ, ಹಾಲಿ ಶಾಸಕ ಎಸ್.ಸುರೇಶ್ ಕುಮಾರ್ ಟೀಕಿಸಿದ್ದಾರೆ. ಈ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿರುವ ಅವರು, ಮಕ್ಕಳ ಕಲಿಕಾ ಸಿದ್ಧತೆ, ಶಿಕ್ಷಣದ ಗುಣಮಟ್ಟ ಯಾವುದನ್ನೂ ಚರ್ಚಿಸದೆ, ವಿದ್ಯಾರ್ಥಿಗಳ ಮಾನಸಿಕ ಪರಿಸ್ಥಿತಿಗಳನ್ನು ಗಮನಿಸದೇ, ಪರೀಕ್ಷೆಗಳನ್ನು ಶಿಸ್ತುಬದ್ಧವಾಗಿ ನಿರ್ವಹಿಸುತ್ತೇವೆಂದು ಘೋಷಿಸುವುದು. ಮಕ್ಕಳನ್ನು ಸಿಸಿಟಿವಿ ಕಣ್ಗಾವಲ್ಲಿ ಇರಿಸಿ ಭಯೋತ್ಪಾದನೆ ಮಾಡುವುದು, ನಂತರ ಕೃಪಾಂಕಗಳನ್ನು ನೀಡಿ ಫಲಿತಾಂಶ ಹೆಚ್ಚಿಸುವುದು ಇಂದಿನ ವ್ಯವಸ್ಥೆಯ ಕ್ರೂರ ಅಣಕವಾಗಿದೆ ಎಂದಿದ್ದಾರೆ.
2024ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷಾ ಮೌಲ್ಯಮಾಪನ ಪೂರ್ಣಗೊಳಿಸಿದಾಗ ಕಳೆದ ಸಾಲಿಗಿಂತ (ಶೇ.83) ಈ ಬಾರಿ ಶೇ.53ಕ್ಕೆ ಅಂದರೆ ಶೇ.30 ರಷ್ಟು ಫಲಿತಾಂಶ ಕುಸಿತ ಕಂಡಿದೆ. ನಂತರ ಫಲಿತಾಂಶ ಉತ್ತಮಗೊಳಿಸಲು ಕೃಪಾಂಕ ನೀಡುವ ಪ್ರಮಾಣವನ್ನು ಶೇ.20ಕ್ಕೆ ಹೆಚ್ಚಿಸಿ, ಕೃಪಾಂಕ ಪಡೆಯಲು ಅರ್ಹತಾ ಅಂಕಗಳ ಪ್ರಮಾಣವನ್ನೂ ಶೇ.25ಕ್ಕೆ ಇಳಿಸಿದ್ದರಿಂದ 1.79 ಲಕ್ಷ ವಿದ್ಯಾರ್ಥಿಗಳು ಕೃಪಾಂಕದಿಂದಲೇ ಪಾಸಾಗಿದ್ದಾರೆ ಎಂದರೆ ಪರಿಸ್ಥಿತಿಯ ಗಂಭೀರತೆ ಅರ್ಥ ಮಾಡಿಕೊಳ್ಳಬಹುದು ಎಂದಿದ್ದಾರೆ.
ಇನ್ನೂ ಜಾರಿಯಾಗದ ಏಕರೂಪದ ಟ್ಯಾಕ್ಸಿ ದರ: ಆದೇಶ ಜಾರಿಗೆ ಮುಂದಾಗದ ಸಾರಿಗೆ ಇಲಾಖೆ
‘ಇದೆಲ್ಲವನ್ನೂ ಗಮನಿಸಿದರೆ ಇಷ್ಟು ದಿನ ಸರ್ಕಾರಗಳು ಕೇವಲ ಜನರನ್ನು ಸುಳ್ಳನ್ನೇ ನಂಬಿಸುವ ಕೆಲಸ ಮಾಡುತ್ತಿದ್ದವೇ ಎನ್ನುವ ಅನುಮಾನ ಬಾರದಿರದು. ಯಾವುದೇ ವ್ಯವಸ್ಥೆಗಳು ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸವನ್ನು ಮೂಡಿಸುವ, ಸಮಗ್ರ ಕಲಿಕೆಗೆ ಪ್ರೇರೇಪಿಸುವಂತದ್ದಾಗಿರಬೇಕೇ ಹೊರತು ಮಕ್ಕಳ ಸ್ಥೈರ್ಯ ಕಸಿಯುವಂತಹದ್ದಾಗಿರಬಾರದು. ವಿಶ್ವಾದ್ಯಂತ ಪರೀಕ್ಷಾ ಕೇಂದ್ರಿತ ವ್ಯವಸ್ಥೆಗಳು ದೂರಾಗುತ್ತಿವೆ. ಮಕ್ಕಳ ಕಲಿಕೆಯ ಮಾನದಂಡ ಕೇವಲ ಪರೀಕ್ಷೆಯಲ್ಲ ಎನ್ನುವುದೂ ವೈಜ್ಞಾನಿಕವಾಗಿ ಅರ್ಥವಾಗುತ್ತಿದೆ. ತಮ್ಮ ಸರ್ಕಾರ ಈ ಕುರಿತಂತೆ ಇನ್ನಷ್ಟು ವಸ್ತುನಿಷ್ಠವಾಗಿ ಆಲೋಚಿಸಬೇಕಿದೆ. ಈ ಕುರಿತಂತೆ ಸಂಬಂಧಪಟ್ಟವರಿಗೆ ತಮ್ಮಿಂದ ಸೂಕ್ತ ಹಾಗೂ ಕಠಿಣ ನಿರ್ದೇಶನ ತಲುಪಿದಲ್ಲಿ ಒಂದಷ್ಟು ಬದಲಾವಣೆ ಸಾಧ್ಯ’ ಎಂದು ಪತ್ರದಲ್ಲಿ ತಿಳಿಸಿದ್ದಾರೆ.