ಬೆಂಗಳೂರು(ಡಿ.22): ಮುಂದಿನ ವರ್ಷ ಎಸ್‌ಎಸ್‌ಎಲ್‌ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆ ನಡೆಸುವ ಸಂಬಂಧ ಮುಂದಿನ ಒಂದು ವಾರದೊಳಗೆ ಪರೀಕ್ಷಾ ವೇಳಾಪಟ್ಟಿ ಪ್ರಕಟಿಸಲಾಗುತ್ತದೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್‌. ಸುರೇಶ್‌ಕುಮಾರ್‌ ತಿಳಿಸಿದ್ದಾರೆ.

ಪರೀಕ್ಷಾ ದೃಷ್ಟಿಯಿಂದ ಅವಶ್ಯವೆನಿಸುವ ಪಠ್ಯಗಳನ್ನಷ್ಟೇ ಉಳಿಸಿಕೊಂಡು ಉಳಿದ ಪಠ್ಯವನ್ನು ಕಡಿತ ಮಾಡಲಾಗುತ್ತದೆ. ವಿದ್ಯಾರ್ಥಿಗಳ ಪರೀಕ್ಷಾ ಸಿದ್ಧತೆಗೂ ಸಾಕಷ್ಟು ಸಮಯ ನೀಡಲಾಗುತ್ತದೆ. ಕಡಿಮೆ ಅವಧಿಯಲ್ಲಿ ಪರೀಕ್ಷೆಗೆ ಸಿದ್ಧವಾಗುವುದು ಹೇಗೆಂದು ಪೋಷಕರು ಹಾಗೂ ವಿದ್ಯಾರ್ಥಿಗಳು ಆತಂಕಗೊಳ್ಳುವುದು ಬೇಡ ಎಂದೂ ಅವರು ಅಭಯ ನೀಡಿದ್ದಾರೆ.

ಸೋಮವಾರ ‘ಕನ್ನಡಪ್ರಭ’ ಸೋದರ ಸಂಸ್ಥೆಯಾಗಿರುವ ಏಷ್ಯಾನೆಟ್‌ ಸುವರ್ಣ ನ್ಯೂಸ್‌ ಸುದ್ದಿವಾಹಿನಿಯ ‘ಹಲೋ ಮಿನಿಸ್ಟರ್‌’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಎಸ್‌ಎಸ್‌ಎಲ್‌ಸಿ ಮತ್ತು ದ್ವಿತೀಯ ಪಿಯುಸಿಗೆ ಬೋರ್ಡ್‌ ಪರೀಕ್ಷೆ ನಡೆಸಬೇಕಿರುವುದರಿಂದ ಬರುವ ಜ.1ರಿಂದ ತರಗತಿಗಳನ್ನು ಆರಂಭಿಸಲಾಗುತ್ತಿದೆ. ಶಾಲೆ- ಕಾಲೇಜು ಆರಂಭಿಸುವ ವೇಳೆ ಸರ್ಕಾರ, ಶಿಕ್ಷಕರು ಮತ್ತು ಖಾಸಗಿ ಶಾಲಾ ಆಡಳಿತ ಮಂಡಳಿಗಳಷ್ಟೇ ಜವಾಬ್ದಾರಿಯನ್ನು ಪೋಷಕರು ವಹಿಸಿಕೊಳ್ಳುವಂತೆ ಮನವಿ ಮಾಡಿದರು.

ಇಂದಿನಿಂದ ಆನ್‌ಲೈನ್ ತರಗತಿಗಳು ಬಂದ್; ರುಪ್ಸಾ ಶಾಲೆಗಳ ಬೇಡಿಕೆಗಳೇನು?

ಎಸ್‌ಎಸ್‌ಎಲ್‌ಸಿ ಮತ್ತು ದ್ವಿತೀಯ ಪಿಯುಸಿ ಬಳಿಕ ವಿದ್ಯಾರ್ಥಿಗಳು ಎದುರಿಸುವ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ತರಗತಿಗಳನ್ನು ಆರಂಭಿಸಲಾಗುತ್ತಿದೆ. ಆನ್‌ಲೈನ್‌ ತರಗತಿಗಳನ್ನು ಎಷ್ಟೇ ಸಮರ್ಪಕವಾಗಿ ಮಾಡಿದರೂ ಸ್ಪರ್ಧಾತ್ಮಕ ಪರೀಕ್ಷೆ ದೃಷ್ಟಿಯಿಂದ ತರಗತಿ ಬೋಧನೆ ಅನಿವಾರ್ಯವಾಗಿದೆ. ಅದರಲ್ಲೂ ಗ್ರಾಮೀಣ ಪ್ರದೇಶದ ಮಕ್ಕಳಿಗೆ ಹೆಚ್ಚಿನ ಸೌಲಭ್ಯ ಇಲ್ಲದಿರುವುದರಿಂದ ಜ.1ರಿಂದ ತರಗತಿಗಳ ಆರಂಭ ಅನಿವಾರ್ಯ ಎಂದರು.

ಆನ್‌ಲೈನ್‌ನಲ್ಲಿ ಪಠ್ಯವನ್ನು ಬೋಧಿಸಿದ್ದರೂ ಮತ್ತೊಮ್ಮೆ ಪುನರಾವರ್ತನೆ ಮಾಡಿಸಲಾಗುತ್ತದೆ. ಪಠ್ಯ ಕಡಿತ ವಿಷಯದಲ್ಲಿಯೂ ಎಷ್ಟುಪ್ರಮಾಣದಲ್ಲಿ ಮತ್ತು ಯಾವುದನ್ನು ಕಡಿತ ಮಾಡಬೇಕೆಂಬ ಚರ್ಚೆ ನಡೆಯುತ್ತಿದೆ. ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ಮುಂದಿನ ತರಗತಿಗಳಿಗೆ ಅನುಕೂಲವಾಗುವ ವಿಷಯಗಳನ್ನು ಮಾತ್ರ ಉಳಿಸಿಕೊಳ್ಳಲಾಗುತ್ತದೆ ಎಂದು ತಿಳಿಸಿದರು.

ಪೋಷಕರು, ವಿದ್ಯಾರ್ಥಿಗಳಿಗೆ ಆತಂಕ ಬೇಡ:

ವರ್ಷದ ಆರಂಭದಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ ನಡೆಸಿದ್ದ ಸಂದರ್ಭದಲ್ಲಿಯೂ ಇದೇ ಪರಿಸ್ಥಿತಿ ಇತ್ತು. ಸರ್ಕಾರ ದೃಢ ನಿರ್ಧಾರ ಮಾಡಿ ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ಪರೀಕ್ಷೆ ನಡೆಸಿತ್ತು. ಪರೀಕ್ಷಾ ಕೊಠಡಿಗಳನ್ನು ಸುರಕ್ಷತಾ ಕೊಠಡಿಗಳು ಎಂದು ಭಾವಿಸಿ ಕ್ರಮ ಕೈಗೊಂಡಿದ್ದರಿಂದ ಯಶಸ್ವಿಯಾಗಿ ಪರೀಕ್ಷೆ ನಡೆಸಿದ್ದೆವು. ಅದೇ ರೀತಿ ಎಸ್‌ಎಸ್‌ಎಲ್‌ಸಿ ಮತ್ತು ದ್ವಿತೀಯ ಪಿಯು ತರಗತಿಗಳ ಆರಂಭದಲ್ಲಿಯೂ ಸುರಕ್ಷತೆ ಕಾಪಾಡಲಾಗುತ್ತದೆ. ಆದ್ದರಿಂದ ಪೋಷಕರು ಮತ್ತು ವಿದ್ಯಾರ್ಥಿಗಳು ಆತಂಕಪಡುವ ಅಗತ್ಯವಿಲ್ಲ ಎಂದು ಭರವಸೆ ನೀಡಿದರು.

ಜನವರಿಯಲ್ಲಿ ಶಾಲಾ, ಕಾಲೇಜು ಆರಂಭ ಬೇಡ: ಸುಬುಧೇಂದ್ರ ತೀರ್ಥರು

ತರಗತಿಗಳು ಆರಂಭವಾದ ಬಳಿಕ ಮಕ್ಕಳು ಮತ್ತು ಪೋಷಕರು ವಹಿಸಬೇಕಾದ ಕ್ರಮಗಳು, ಶಾಲೆಯಲ್ಲಿ ದೈಹಿಕ ಅಂತರ ಕಾಯ್ದುಕೊಳ್ಳಲು ಶಾಲೆಗಳು ಕೈಗೊಳ್ಳಬೇಕಿರುವ ಕ್ರಮಗಳು, ವಿದ್ಯಾರ್ಥಿ ಮತ್ತು ಶಿಕ್ಷಕರ ನಡುವಿನ ಸೌಹಾರ್ದತೆ ಹೆಚ್ಚಿಸಲು ಕೈಗೊಳ್ಳಬೇಕಾದ ಕ್ರಮಗಳು ಸೇರಿದಂತೆ ಬಗ್ಗೆ ತುಂಬಾ ವಿಸ್ತೃತವಾಗಿ ಮಾರ್ಗಸೂಚಿ ರಚಿಸಲಾಗಿದೆ. ಶಾಲಾ ಆವರಣ, ಕೊಠಡಿ, ಶಾಲೆಗೆ ಹೋಗುವಾಗ ಮತ್ತು ಬರುವಾಗ ಹೇಗಿರಬೇಕು ಎಂಬುದನ್ನು ತಿಳಿಸಿದ್ದೇವೆ.

ಆರೋಗ್ಯ ಇಲಾಖೆಯ ಕೊರೋನಾ ತಾಂತ್ರಿಕ ಸಲಹಾ ಸಮಿತಿ ನೀಡಿರುವ 19 ಅಂಶಗಳ ಶಿಫಾರಸು ಜೊತೆಗೆ ಶಿಕ್ಷಣ ಇಲಾಖೆಯ ಡಿಎಸ್‌ಇಆರ್‌ಟಿ ನೀಡಿರುವ ಮಾರ್ಗಸೂಚಿಯನ್ನು ರಾಜ್ಯದ ಎಲ್ಲಾ ಜಿಲ್ಲೆಗಳ ಉಪ ನಿರ್ದೇಶಕರು (ಡಿಡಿಪಿಐ) ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳ (ಬಿಇಒ) ಮೂಲಕ ಎಲ್ಲಾ ಶಾಲೆಗಳಿಗೆ ತಲುಪಿಸುವ ಕೆಲಸ ಮಾಡಲಾಗುತ್ತಿದೆ. ಇದಕ್ಕಾಗಿ ತಾಲೂಕು ಮಟ್ಟದಲ್ಲಿ ಕಾರ್ಯಾಗಾರ ಮಾಡಲಾಗುತ್ತಿದೆ. ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯಿತಿ ಸಿಇಒಗಳಿಗೂ ಜವಾಬ್ದಾರಿ ನೀಡಲಾಗುತ್ತಿದೆ. ಇಷ್ಟೆಲ್ಲಾ ಕ್ರಮಗಳ ಹೊರತಾಗಿಯೂ ಮಕ್ಕಳನ್ನು ಶಾಲೆಗೆ ಕಳುಹಿಸುವ ನಿರ್ಧಾರವನ್ನು ಪೋಷಕರಿಗೆ ಬಿಡಲಾಗಿದೆ ಎಂದರು.

ಶುಲ್ಕ ನಿಯಂತ್ರಣಕ್ಕೆ ಚರ್ಚೆ:

ಶುಲ್ಕವನ್ನು ನಿಯಂತ್ರಿಸಬಾರದು ಎಂದು ಖಾಸಗಿ ಶಾಲೆಗಳು ಹೈಕೋರ್ಟ್‌ ಮೆಟ್ಟಿಲೇರಿವೆ. ಮತ್ತೊಂದೆಡೆ ಪೋಷಕರು, ಸರ್ಕಾರ ತಮ್ಮ ಸಹಾಯಕ್ಕೆ ಬರಬೇಕು. ಶುಲ್ಕದಿಂದ ತಮ್ಮನ್ನು ಪಾರು ಮಾಡಬೇಕು ಎಂದು ಮನವಿ ಮಾಡಿದ್ದಾರೆ. ಈ ಸಂಬಂಧ ರಾಜ್ಯದಲ್ಲಿರುವ ಸಿಬಿಎಸ್‌ಇ ಹಾಗೂ ಐಸಿಎಸ್‌ಇ ಶಾಲೆಗಳ ಶುಲ್ಕ ನಿಯಂತ್ರಣಕ್ಕೆ ಯಾವ ರೀತಿ ಕ್ರಮ ಕೈಗೊಳ್ಳಬಹುದು ಎಂದು ಸರ್ಕಾರದ ಮಟ್ಟದಲ್ಲಿ ಚರ್ಚಿಸಲಾಗುತ್ತಿದೆ. ಈ ಎಲ್ಲಾ ವಿಷಯಗಳನ್ನು ಕುರಿತು ಸದ್ಯದಲ್ಲಿಯೇ ನಿರ್ಣಯ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದರು.

ಶೂನ್ಯ ಕಲಿಕಾ ವರ್ಷ ಘೋಷಣೆ ಇಲ್ಲ:

ಕೊರೋನಾ ವರ್ಷವನ್ನು ಶೂನ್ಯ ಕಲಿಕಾ ವರ್ಷವೆಂದು ಘೋಷಿಸಲು ಸಾಧ್ಯವಿಲ್ಲ. ಏಕೆಂದರೆ, ದೂರದರ್ಶನದಲ್ಲಿ ಸಂವೇದಾ ತರಗತಿಗಳನ್ನು ನಡೆಸಲಾಗುತ್ತಿದೆ. ಖಾಸಗಿ ಶಾಲೆಗಳು ಆನ್‌ಲೈನ್‌ ತರಗತಿಗಳನ್ನು ನಡೆಸುತ್ತಿವೆ. ಕೆಲವು ಶಾಲೆಗಳು ಪರೀಕ್ಷೆಯನ್ನೂ ಆನ್‌ಲೈನ್‌ ಮೂಲಕವೇ ನಡೆಸಿವೆ. ಗ್ರಾಮೀಣ ಪ್ರದೇಶದಲ್ಲಿ ವಿದ್ಯಾಗಮ ತರಗತಿಗಳು ನಡೆಯುತ್ತಿರುವುದರಿಂದ ಶೂನ್ಯ ಕಲಿಕಾ ವರ್ಷ ಎಂದು ಘೋಷಿಸಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದರು.

ಖಾಸಗಿ ಶಾಲೆಗಳಲ್ಲೂ ವಿದ್ಯಾಗಮ?

ಸರ್ಕಾರಿ ಮತ್ತು ಅನುದಾನಿತ ಶಾಲೆಗಳ ಮಾದರಿಯಲ್ಲಿ ಖಾಸಗಿ ಶಾಲೆಗಳಲ್ಲೂ ಕೂಡ ವಿದ್ಯಾಗಮ ಆರಂಭಿಸಬೇಕು ಎಂಬ ಚಿಂತನೆ ಇದೆ ಎಂದು ಸಚಿವ ಸುರೇಶ್‌ ಕುಮಾರ್‌ ತಿಳಿಸಿದರು.
ಖಾಸಗಿ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ 6, 7 ಮತ್ತು 8ನೇ ತರಗತಿ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ವಿದ್ಯಾಗಮ ಯೋಜನೆಯನ್ನು ವಿಸ್ತರಿಸುವ ಚರ್ಚೆಗಳು ನಡೆಯುತ್ತಿವೆ ಎಂದು ಮಾಹಿತಿ ನೀಡಿದರು.