ನಾಳೆಯಿಂದ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಆರಂಭ
* ಸೋಮವಾರ ಕೋರ್ ವಿಷಯಗಳಿಗೆ ನಡೆಯಲಿದೆ ಪರೀಕ್ಷೆ
* ಗುರುವಾರ ಭಾಷಾ ವಿಷಯಗಳಿಗೆ ಪರೀಕ್ಷೆ
* 4884 ಪರೀಕ್ಷಾ ಕೇಂದ್ರ, 73066 ಕೊಠಡಿ, ಪರೀಕ್ಷೆಗೆ 8.76 ಲಕ್ಷ ವಿದ್ಯಾರ್ಥಿಗಳು
ಬೆಂಗಳೂರು(ಜು.18): ಕೋವಿಡ್ ಹಿನ್ನೆಲೆಯಲ್ಲಿ ಹಲವು ಬಾರಿ ಮುಂದೂಡಲ್ಪಟ್ಟಿದ್ದ 2020-21ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳು ಕೊನೆಗೂ ಸಮೀಪಿಸಿದ್ದು, ಜು.19 ಮತ್ತು ಜು.22ರಂದು ರಾಜ್ಯದಾದ್ಯಂತ ಪರೀಕ್ಷೆಗಳು ನಡೆಯಲಿವೆ. ಕೋವಿಡ್ ಹಿನ್ನೆಲೆಯಲ್ಲಿ ಇತಿಹಾಸದಲ್ಲೇ ಮೊದಲ ಬಾರಿಗೆ ಕೇವಲ 2 ದಿನಗಳ ಕಾಲ ಪರೀಕ್ಷೆ ನಡೆಸಲಾಗುತ್ತಿದ್ದು, ಒಟ್ಟು 8,76,581 ವಿದ್ಯಾರ್ಥಿಗಳು ಈ ಬಾರಿ ಪರೀಕ್ಷೆಗೆ ಹಾಜರಾಗಲಿದ್ದಾರೆ.
ಕೋವಿಡ್ ನಡುವೆ ವಿದ್ಯಾರ್ಥಿಗಳು ಅತ್ಯಂತ ಸುರಕ್ಷಿತ ವಾತಾವರಣದಲ್ಲಿ ಪರೀಕ್ಷೆ ಬರೆಯಲು ಸಿದ್ಧತೆ ಮಾಡಿಕೊಂಡಿರುವ ಶಿಕ್ಷಣ ಇಲಾಖೆ, ಪೂರ್ವಭಾವಿಯಾಗಿ ಬೆಂಗಳೂರು ಸೇರಿದಂತೆ ಕೆಲವು ಜಿಲ್ಲೆಗಳಲ್ಲಿ ಶನಿವಾರ ಅಣಕು ಪರೀಕ್ಷೆ ನಡೆಸಿದೆ.
ಪರೀಕ್ಷಾ ಕೇಂದ್ರ ದುಪ್ಪಟ್ಟು: ಸಾಮಾಜಿಕ ಅಂತರ ಕಾಪಾಡಲು ಈ ಬಾರಿ ಪರೀಕ್ಷಾ ಕೇಂದ್ರ ದುಪ್ಪಟ್ಟುಗೊಳಿಸಲಾಗಿದೆ. ಒಟ್ಟಾರೆ 4884 ಪರೀಕ್ಷಾ ಕೇಂದ್ರಗಳ 73,066 ಕೊಠಡಿಗಳಲ್ಲಿ ಪರೀಕ್ಷೆ ನಡೆಯಲಿದೆ. ಪ್ರತಿ ಕೊಠಡಿಯಲ್ಲಿ 12 ವಿದ್ಯಾರ್ಥಿಗಳು ಮಾತ್ರ ಪರೀಕ್ಷೆ ಬರೆಯಲಿದ್ದಾರೆ. ಪರೀಕ್ಷಾ ಕಾರ್ಯಕ್ಕೆ ನಿಯೋಜಿಸಿರುವ ಬಹುತೇಕ ಎಲ್ಲ ಅಧಿಕಾರಿಗಳು, ಶಿಕ್ಷಕರು ಹಾಗೂ ಇತರೆ ಸಿಬ್ಬಂದಿಗೆ ಕನಿಷ್ಠ ಒಂದು ಡೋಸ್ ಕೋವಿಡ್ ಲಸಿಕೆ ನೀಡುವ ಕಾರ್ಯ ಪೂರ್ಣಗೊಂಡಿದೆ ಎಂದು ಶಿಕ್ಷಣ ಇಲಾಖೆ ತಿಳಿಸಿದೆ.
ಎಸ್ಸೆಸ್ಸೆಲ್ಸಿ ಪರೀಕ್ಷೆ ವಂಚಿತರ ಪರ ಕೋರ್ಟ್ ಮೆಟ್ಟಿಲೇರಲು ಸಿದ್ಧತೆ
ಆರೋಗ್ಯ ತಪಾಸಣೆ:
ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರಕ್ಕೆ ಆಗಮಿಸುತ್ತಿದ್ದಂತೆ ಅವರ ಆರೋಗ್ಯ ತಪಾಸಣೆಗೆ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಈ ವೇಳೆ ಯಾವುದೇ ವಿದ್ಯಾರ್ಥಿಗಳಿಗೆ ನೆಗಡಿ, ಕೆಮ್ಮು, ಜ್ವರದಂತಹ ಕೋವಿಡ್ ಲಕ್ಷಣಗಳು ಕಂಡು ಬಂದರೆ ಅಂತಹವರು ಪರೀಕ್ಷೆ ಬರೆಯಲು ಪ್ರತ್ಯೇಕ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಒಂದು ವೇಳೆ ಪರೀಕ್ಷೆಗೆ ನೋಂದಾಯಿಸಿಕೊಂಡಿರುವ ಯಾವುದೇ ವಿದ್ಯಾರ್ಥಿಗೆ ಪರೀಕ್ಷೆ ಸಂದರ್ಭದಲ್ಲಿ ಕೋವಿಡ್ ಸೋಂಕಿಗೆ ಒಳಗಾದಲ್ಲಿ ಅವರಿಗೆ ಕೋವಿಡ್ ನಿಗಾ ಕೇಂದ್ರಗಳಲ್ಲಿ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಲಾಗಿದೆ.
ಯಾವ್ಯಾವ ಪರೀಕ್ಷೆ?
ಜು.19ರಂದು ಗಣಿತ, ವಿಜ್ಞಾನ, ಸಮಾಜ ವಿಜ್ಞಾನ ವಿಷಯ, ಜು. 22ರಂದು ಪ್ರಥಮ, ದ್ವಿತೀಯ ಹಾಗೂ ತೃತೀಯ ಭಾಷಾ ವಿಷಯಗಳಿಗೆ ಪರೀಕ್ಷೆಗಳು ನಡೆಯಲಿವೆ. ಎರಡೂ ದಿನ ಬೆಳಗ್ಗೆ 10.30ರಿಂದ ಮಧ್ಯಾಹ್ನ 1.30ರವರೆಗೆ ಪರೀಕ್ಷೆ ನಡೆಯಲಿದೆ. ಪ್ರತಿ ಕೇಂದ್ರದಲ್ಲೂ ಸ್ಯಾನಿಟೈಸರ್ ವ್ಯವಸ್ಥೆ, ಅಗತ್ಯವಿರುವ ವಿದ್ಯಾರ್ಥಿಗಳಿಗೆ ಮಾಸ್ಕ್ ನೀಡಲಾಗುತ್ತದೆ.
2 ದಿನದಲ್ಲಿ 6 ಪರೀಕ್ಷೆ:
ಮೂರು ಭಾಷಾ ವಿಷಯಗಳಿಗೆ ಒಂದು ಪ್ರಶ್ನೆ ಪತ್ರಿಕೆ, ಕೋರ್ ಸಬ್ಜೆಕ್ಟ್‌ಗಳಿಗೆ ಮತ್ತೊಂದು ಪ್ರಶ್ನೆ ಪತ್ರಿಕೆ ಸಿದ್ಧಪಡಿಸಲಾಗಿದೆ. ಪ್ರತಿ ಪ್ರಶ್ನೆ ಪತ್ರಿಕೆಯಲ್ಲಿ ಮೂರು ವಿಷಯಗಳಿಗೆ ತಲಾ 40 ಅಂಕಗಳ ಪ್ರಶ್ನೆಗಳುಳ್ಳ ಒಟ್ಟು 120 ಪ್ರಶ್ನೆಗಳನ್ನು ನೀಡಲಾಗಿರುತ್ತದೆ. ಯಾವುದೇ ಪ್ರಶ್ನೆಗಳಿಗೆ ಲಿಖಿತ ಉತ್ತರ ಬರೆಯುವಂತಿಲ್ಲ. ಸ್ಪರ್ಧಾತ್ಮಕ ಪರೀಕ್ಷೆಗಳ ಮಾದರಿಯಲ್ಲಿ ಪ್ರಶ್ನೆ ಪತ್ರಿಕೆಯಲ್ಲೇ ಪ್ರತಿ ಪ್ರಶ್ನೆಗೆ ನಾಲ್ಕು ಉತ್ತರಗಳನ್ನು ನೀಡಲಾಗಿರುತ್ತದೆ. ಅವುಗಳಲ್ಲಿ ಸರಿಯಾದ ಉತ್ತರದ ಸಂಖ್ಯೆಯನ್ನು ಒಎಂಆರ್ ಪ್ರತಿಯಲ್ಲಿ ಗುರುತಿಸಬೇಕಷ್ಟೆ. ಪ್ರತಿ ವಿಷಯದ ಪರೀಕ್ಷೆಗೂ ಬೇರೆ ಬೇರೆ ಬಣ್ಣದ ಒಎಂಆರ್ ಶೀಟ್‌ಗಳನ್ನು ನೀಡಲಾಗುತ್ತದೆ.