ಎಸ್ಸೆಸ್ಸೆಲ್ಸಿ ಪರೀಕ್ಷೆ ವಂಚಿತರ ಪರ ಕೋರ್ಟ್‌ ಮೆಟ್ಟಿಲೇರಲು ಸಿದ್ಧತೆ

* ಶಿಕ್ಷಕರು ಮಾಡಿದ ತಪ್ಪಿನಿಂದ ವಿದ್ಯಾರ್ಥಿಗಳಿಗೆ ತೊಂದರೆ
* ವಿದ್ಯಾರ್ಥಿಗಳಿಗೆ ನ್ಯಾಯ ಕೊಡಿಸಲು ಮುಂದಾದ ಗುರುಲಿಂಗ ಸ್ವಾಮೀಜಿ 
* ಪರೀಕ್ಷೆ ಬರೆಯಲು ಅವಕಾಶ ನೀಡದೆ ವಿದ್ಯಾರ್ಥಿಗಳಿಗೆ ಅನ್ಯಾಯ

Gurulinga Swamy Preparing Appeal to High Court for Missed SSLC Students Pro grg

ಹಾವೇರಿ(ಜು.17):  ಪರೀಕ್ಷಾ ಶುಲ್ಕ ನೀಡಿದರೂ ಹಾಲ್‌ ಟಿಕೆಟ್‌ ನೀಡದೆ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆಯುವುದರಿಂದ ವಂಚನೆಗೊಳಗಾದ ಹಿರೇಕೆರೂರು ತಾಲೂಕು ಚಿಕ್ಕೇರೂರು ಶಾಲೆಯ 30 ವಿದ್ಯಾರ್ಥಿಗಳ ಪರವಾಗಿ ತಾಲೂಕಿನ ಅಕ್ಕಿಮಠದ ಗುರುಲಿಂಗ ಸ್ವಾಮೀಜಿ ನಿಂತಿದ್ದು, ಹೈಕೋರ್ಟ್‌ ಮೆಟ್ಟಿಲೇರಲು ಸಿದ್ಧತೆ ನಡೆಸಿದ್ದಾರೆ.

ಜಿಲ್ಲೆಯ ಹಿರೆಕೇರೂರು ತಾಲೂಕು ಚಿಕ್ಕೇರೂರು ಗ್ರಾಮದ ಮಹಾತ್ಮ ಗಾಂಧಿ ಪ್ರೌಢಶಾಲೆಯ 30 ವಿದ್ಯಾರ್ಥಿಗಳು ಪರೀಕ್ಷಾ ಶುಲ್ಕ ಪಾವತಿಸಿದರೂ ಅದನ್ನು ಭರಿಸದೇ ವಿದ್ಯಾರ್ಥಿಗಳಿಗೆ ಹಾಲ್‌ ಟಿಕೆಟ್‌ ನೀಡಿಲ್ಲ. ತಾವು ಮಾಡದ ತಪ್ಪಿಗಾಗಿ ಅನ್ಯಾಯಕ್ಕೊಳಗಾದ ವಿದ್ಯಾರ್ಥಿಗಳ ಪರವಾಗಿ ಗುರುಲಿಂಗ ಸ್ವಾಮೀಜಿ ನಿಂತಿದ್ದಾರೆ. ಅದಕ್ಕಾಗಿ ಗುರುವಾರ ಶಿಕ್ಷಣ ಸಚಿವರನ್ನು ಭೇಟಿಯಾಗಿ ಚರ್ಚಿಸಿದ್ದಾರೆ. ಆದರೆ, ಅವರಿಂದ ಸಮರ್ಪಕ ಸ್ಪಂದನೆ ದೊರೆತಿಲ್ಲ. ವಕೀಲರೊಂದಿಗೆ ಚರ್ಚಿಸಿದ್ದು, ಹೈಕೋರ್ಟ್‌ ಮೊರೆ ಹೋಗಿ ಪರೀಕ್ಷೆಗೆ ಸ್ಟೇ ತರಲು ನಿರ್ಧರಿಸಿದ್ದಾರೆ.

ವಿದ್ಯಾರ್ಥಿಗಳ ಭವಿಷ್ಯದೊಂದಿಗೆ ಚೆಲ್ಲಾಟ ನಡೆಸಿದ ಚಿಕ್ಕೇರೂರು ಗ್ರಾಮದ ಮಹಾತ್ಮಾ ಗಾಂಧಿ ಪ್ರೌಢಶಾಲೆಯ ಮುಖ್ಯಶಿಕ್ಷಕ ಮತ್ತು ಸಿಬ್ಬಂದಿ ವಿರುದ್ಧ ಪಾಲಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಮ್ಮ ಮಕ್ಕಳು ಪರೀಕ್ಷಾ ಶುಲ್ಕವನ್ನು ನೀಡಿದ್ದಾರೆ. ಶಾಲೆಯ ಎಲ್ಲ ಚಟುವಟಿಕೆಯಲ್ಲಿ ಪಾಲ್ಗೊಂಡಿದ್ದಾರೆ. ಆದರೂ ಪರೀಕ್ಷೆ ಬರೆಯಲು ಅವಕಾಶ ನೀಡದೆ ಅನ್ಯಾಯ ಮಾಡಿದ್ದಾರೆ ಎಂದು ಪೋಷಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಎಸ್ಸೆಸ್ಸೆಲ್ಸಿ ಫಲಿತಾಂಶದ ಬಗ್ಗೆ ಸಚಿವ ಸುರೇಶ್‌ ಕುಮಾರ್‌ ಹೇಳಿದ್ದಿಷ್ಟು

ಹಾಲ್‌ ಟಿಕೆಟ್‌ ನೀಡದೇ ಪರೀಕ್ಷೆಯಿಂದ ವಂಚಿತರಾದ ವಿದ್ಯಾರ್ಥಿಗಳು ಕೂಡ ನಾಲ್ಕು ದಿನಗಳಿಂದ ಬೇಸರಗೊಂಡಿದ್ದಾರೆ. ಕೆಲವರು ಊಟ ಬಿಟ್ಟು ಅಳುತ್ತ ಕೂತಿದ್ದಾರೆ. ಶಿಕ್ಷಕರು ಮಾಡಿದ ತಪ್ಪಿಗೆ ನಮಗೇಕೆ ಶಿಕ್ಷೆ ಎಂದು ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆಗಸ್ಟ್‌ನಲ್ಲಿ ನಡೆಯುವ ಪೂರಕ ಪರೀಕ್ಷೆಗೆ ಅವಕಾಶ ನೀಡುವುದಾಗಿ ಮುಖ್ಯಾಧ್ಯಾಪಕರು ತಿಳಿಸಿದ್ದಾರೆ. ನಾವು ಈಗಲೇ ಪರೀಕ್ಷೆ ಬರೆಯಲು ಸಿದ್ಧರಿದ್ದೇವೆ. ಅವಕಾಶ ಕಲ್ಪಿಸಿಕೊಡಬೇಕು ಎಂದು ವಿದ್ಯಾರ್ಥಿಗಳು ಆಗ್ರಹಿಸಿದ್ದಾರೆ.

ಶಿಕ್ಷಕರು ಮಾಡಿದ ತಪ್ಪಿನಿಂದ ವಿದ್ಯಾರ್ಥಿಗಳಿಗೆ ತೊಂದರೆಯಾಗಿದೆ. ಅದಕ್ಕಾಗಿ ಅವರಿಗೆ ನ್ಯಾಯ ಕೊಡಿಸಲು ಮುಂದಾಗಿದ್ದೇನೆ. ಸದ್ಯ ನಾನು ಬೆಂಗಳೂರಿನಲ್ಲೇ ಇದ್ದು, ಶಿಕ್ಷಣ ಸಚಿವರನ್ನು ಭೇಟಿಯಾಗಿ ಮಾತನಾಡ್ದಿದೇನೆ. ಆದರೆ, ಅವರು ಸಮರ್ಪಕವಾಗಿ ಸ್ಪಂದಿಸದ್ದರಿಂದ ನೋವಾಗಿದೆ. ಅದಕ್ಕಾಗಿ ಕೋರ್ಟ್‌ ಮೆಟ್ಟಿಲೇರಲು ಸಿದ್ಧತೆ ನಡೆಸಿದ್ದೇನೆ. ಸಾಧ್ಯವಾದರೆ ಪರೀಕ್ಷೆಗೆ ತಡೆಯಾಜ್ಞೆ ತರಲು ನಿರ್ಧರಿಸಿದ್ದೇನೆ ಎಂದು ಹಾವೇರಿ ಅಕ್ಕಿಮಠದ ಗುರುಲಿಂಗ ಸ್ವಾಮೀಜಿ ತಿಳಿಸಿದ್ದಾರೆ. 
 

Latest Videos
Follow Us:
Download App:
  • android
  • ios