ಕೇಂದ್ರದ ಭಾಷಾ ಹೇರಿಕೆ ನೀತಿಯಿಂದ ಕರ್ನಾಟಕದ ಬೋರ್ಡ್‌ ಪರೀಕ್ಷೆಯಲ್ಲಿ 90 ಸಾವಿರ ವಿದ್ಯಾರ್ಥಿಗಳು ಅನುತ್ತೀರ್ಣರಾಗಿದ್ದಾರೆ ಎಂದು ತಮಿಳುನಾಡು ಶಿಕ್ಷಣ ಸಚಿವ ಅನ್ಬಿಲ್‌ ಮಹೇಶ್‌ ಪೊಯ್ಯಮೊಯಿ ನೀಡಿರುವ ಹೇಳಿಕೆ ಭಾರೀ ಚರ್ಚೆ, ವಿವಾದಕ್ಕೆ ಗ್ರಾಸವಾಗಿದೆ.

ಬೆಂಗಳೂರು (ಜು.01): ಕೇಂದ್ರದ ಭಾಷಾ ಹೇರಿಕೆ ನೀತಿಯಿಂದ ಕರ್ನಾಟಕದ ಬೋರ್ಡ್‌ ಪರೀಕ್ಷೆಯಲ್ಲಿ 90 ಸಾವಿರ ವಿದ್ಯಾರ್ಥಿಗಳು ಅನುತ್ತೀರ್ಣರಾಗಿದ್ದಾರೆ ಎಂದು ತಮಿಳುನಾಡು ಶಿಕ್ಷಣ ಸಚಿವ ಅನ್ಬಿಲ್‌ ಮಹೇಶ್‌ ಪೊಯ್ಯಮೊಯಿ ನೀಡಿರುವ ಹೇಳಿಕೆ ಭಾರೀ ಚರ್ಚೆ, ವಿವಾದಕ್ಕೆ ಗ್ರಾಸವಾಗಿದೆ. ಆದರೆ, ಹಿಂದಿ ಭಾಷಾ ವಿಷಯದಲ್ಲಿ ಈ ಬಾರಿ ರಾಜ್ಯದ ಎಸ್ಸೆಸ್ಸೆಲ್ಸಿ ಪರೀಕ್ಷೆ 1ರಲ್ಲಿ ಅನುತ್ತೀರ್ಣ ಮಕ್ಕಳ ಸಂಖ್ಯೆ 90 ಸಾವಿರ ಅಲ್ಲ, 1.42 ಲಕ್ಷಕ್ಕೂ ಹೆಚ್ಚು ಎಂಬುದು ಬಹಿರಂಗವಾಗಿದೆ.

ಹೌದು, ಇದು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿಯೇ ನೀಡಿರುವ ಅಧಿಕೃತ ಮಾಹಿತಿ. ಹಿಂದಿ ಭಾಷಾ ಪರೀಕ್ಷೆಯಲ್ಲಿ ಶೇ.19.72 ರಷ್ಟು ಮಕ್ಕಳು ಅನುತ್ತೀರ್ಣರಾಗಿದ್ದಾರೆ. ಮಾರ್ಚ್‌-ಏಪ್ರಿಲ್‌ನಲ್ಲಿ ನಡೆದ 2024-25ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆ 1ರಲ್ಲಿ ನೋಟ್ಸ್ 7,21,72 ವಿದ್ಯಾರ್ಥಿಗಳು ತೃತೀಯ ಭಾಷೆ ಹಿಂದಿ ಪರೀಕ್ಷೆ ಬರೆದಿದ್ದರು. ಈ ಪೈಕಿ 5,79,382 ಮಕ್ಕಳು ಪಾಸಾಗಿದ್ದು, ಉಳಿದ 1,42,400 ವಿದ್ಯಾರ್ಥಿಗಳು ಫೇಲಾಗಿದ್ದಾರೆ.

ಒಂದೆಡೆ ಮಹಾರಾಷ್ಟ್ರ ಸರ್ಕಾರ ತ್ರಿಭಾಷಾ ಸೂತ್ರಕ್ಕೆ ಸಚಿವ ಸಂಪುಟದಲ್ಲಿ ವಿರೋಧ ವ್ಯಕ್ತವಾಗಿದ್ದರಿಂದ ಆ ಪದ್ಧತಿ ಕೈಬಿಟ್ಟು ಹಿಂದಿಯನ್ನು ತೃತೀಯ ಭಾಷೆಯಾಗಿ ಕಲಿಸುವ ವಿಚಾರಕ್ಕೆ ತಿಲಾಂಜಲಿ ನೀಡಿದೆ. ಮತ್ತೊಂದೆಡೆ ತಮಿಳುನಾಡು ಸಚಿವರು ಕೇಂದ್ರ ಸರ್ಕಾರವನ್ನು ಟೀಕಿಸುವಾಗ ಕರ್ನಾಟಕದಲ್ಲಿ ಭಾಷಾ ಹೇರಿಕೆಯಿಂದ 90 ಸಾವಿರ ಮಕ್ಕಳು ಅನುತ್ತಿರ್ಣರಾಗಿದ್ದು, ಇದು ಭಾಷಾ ನೀತಿ ಹೇರಿಕೆ ವೈಫಲ್ಯಕ್ಕೆ ಸಾಕ್ಷಿ ಎಂದು ಹೇಳಿಕೆ ನೀಡಿದ್ದರು. ಇವುಗಳ ನಡುವೆ ರಾಜ್ಯದಲ್ಲೂ ತ್ರಿಭಾಷಾ ಸೂತ್ರದ ವಿರುದ್ಧ ಮೊದಲಿಂದಲೂ ಇದ್ದ ಅಪಸ್ವರ ಈಗ ಗಟ್ಟಿಯಾಗತೊಡಗಿವೆ.

1528 ಹಿಂದಿ ಬೋಧನಾ ಶಿಕ್ಷಕರ ಹುದ್ದೆ ಖಾಲಿ: ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ಹಿಂದಿ ಭಾಷಾ ವಿಷಯ ಬೋಧನೆಗೆ ಮಂಜೂರಾಗಿರುವ ಹುದ್ದೆಗಳ ಪೈಕಿ 1,528 ಹುದ್ದೆಗಳು ಖಾಲಿ ಇರುವುದಾಗಿ ಶಿಕ್ಷಣ ಇಲಾಖೆ ಅಂಕಿ-ಅಂಶಗಳು ಹೇಳುತ್ತವೆ. ಮಂಜೂರಾಗಿರುವ 5,060 ಹಿಂದಿ ಭಾಷಾ ಶಿಕ್ಷಕ ಹುದ್ದೆಗಳಲ್ಲಿ 3,532 ಶಿಕ್ಷಕರು ಮಾತ್ರ ಕಾರ್ಯನಿರ್ವಹಿಸುತ್ತಿದ್ದಾರೆ. ಉಳಿದ 1,528 ಹುದ್ದೆಗಳು ಖಾಲಿ ಇವೆ. ಇದರಿಂದ ಸರ್ಕಾರಿ ಶಾಲೆಗಳಲ್ಲಿ 6ರಿಂದ 10ನೇ ತರಗತಿವರೆಗೆ ಹಿಂದಿ ಭಾಷಾ ಬೋಧನೆಗೆ ಶಿಕ್ಷಕರ ಕೊರತೆ ಇದೆ. ಆ ಹುದ್ದೆಗಳಿಗೆ ಅತಿಥಿ ಶಿಕ್ಷಕರನ್ನು ನೇಮಕ ಮಾಡಿಕೊಂಡು ಬೋಧನೆ ಮಾಡಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.