Asianet Suvarna News Asianet Suvarna News

ಇಂದಿನಿಂದ ಎಸ್ಸೆಸ್ಸೆಲ್ಸಿ ಪರೀಕ್ಷೆ: 8.69 ಲಕ್ಷ ವಿದ್ಯಾರ್ಥಿಗಳ ನೋಂದಣಿ, ಆಲ್‌ ದಿ ಬೆಸ್ಟ್‌!

ಪ್ರಸಕ್ತ ಸಾಲಿನ ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆ-1 ಸೋಮವಾರದಿಂದ (ಮಾ.25) ಆರಂಭವಾಗುತ್ತಿದ್ದು, ರಾಜ್ಯಾದ್ಯಂತ 2,750 ಕೇಂದ್ರಗಳಲ್ಲಿ ನಡೆಯಲಿದೆ. ಒಟ್ಟು 8,69,968 ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದು, ಮೊದಲ ದಿನ ಪ್ರಥಮ ಭಾಷಾ ವಿಷಯ ಪರೀಕ್ಷೆಗಳು ನಡೆಯಲಿವೆ. 

SSLC Exam from march 25th in karnataka 8 69 lakh students registered gvd
Author
First Published Mar 25, 2024, 8:03 AM IST

ಬೆಂಗಳೂರು (ಮಾ.25): ಪ್ರಸಕ್ತ ಸಾಲಿನ ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆ-1 ಸೋಮವಾರದಿಂದ (ಮಾ.25) ಆರಂಭವಾಗುತ್ತಿದ್ದು, ರಾಜ್ಯಾದ್ಯಂತ 2,750 ಕೇಂದ್ರಗಳಲ್ಲಿ ನಡೆಯಲಿದೆ. ಒಟ್ಟು 8,69,968 ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದು, ಮೊದಲ ದಿನ ಪ್ರಥಮ ಭಾಷಾ ವಿಷಯ ಪರೀಕ್ಷೆಗಳು ನಡೆಯಲಿವೆ. ದ್ವಿತೀಯ ಪಿಯುಸಿಯಂತೆ ಎಸ್ಸೆಸ್ಸೆಲ್ಸಿಗೂ ಪ್ರಸಕ್ತ ಸಾಲಿನಿಂದ ವರ್ಷದಲ್ಲಿ ಮೂರು ಬಾರಿ ಪರೀಕ್ಷೆ (ಪರೀಕ್ಷೆ 1, 2, 3) ಬರೆದು ಯಾವ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಬರುತ್ತದೋ ಅದನ್ನು ಉಳಿಸಿಕೊಳ್ಳುವ ಅವಕಾಶವನ್ನು ಸರ್ಕಾರ ಕಲ್ಪಿಸಿದೆ. ಹಾಗಾಗಿ ವಿದ್ಯಾರ್ಥಿಗಳು ಆತಂಕ ಪಡುವಂತಿಲ್ಲ. 

ಪರೀಕ್ಷೆ 1ನ್ನು ಆರಾಮಾಗಿ ಬರೆಯಿರಿ. ಪೂರ್ಣ ಪ್ರಮಾಣದಲ್ಲಿ ಪರೀಕ್ಷೆಗಳು ಮುಗಿದ ಮೇಲೆ ತಾವು ಯಾವ ವಿಷಯದ ಪರೀಕ್ಷೆಯನ್ನು ಸರಿಯಾಗಿ ಬರೆಯಲಾಗಿಲ್ಲ ಎನಿಸುತ್ತದೋ ಆ ವಿಷಯಕ್ಕೆ ಏಪ್ರಿಲ್‌-ಮೇನಲ್ಲಿ ನಡೆಯುವ ಪರೀಕ್ಷೆ 2 ಇಲ್ಲವೇ ಪರೀಕ್ಷೆ 3 ಬರೆಯಬಹುದು. ಒಂದು ವೇಳೆ ಯಾವ ವಿಷಯದ ಪರೀಕ್ಷೆಯನ್ನೂ ಸರಿಯಾಗಿ ಬರೆದಿಲ್ಲ ಎಂಬ ಅಳುಕಿದ್ದರೆ ಪರೀಕ್ಷೆ 2 ಅಥವಾ ಪರೀಕ್ಷೆ 3ರಲ್ಲಿ ಎಲ್ಲಾ ವಿಷಯಗಳನ್ನೂ ಮತ್ತೆ ಬರೆಯಬಹುದು. ಈ ಮೂರದಲ್ಲಿ ಹೆಚ್ಚು ಅಂಕ ಬಂದ ಫಲಿತಾಂಶ ಉಳಿಸಿಕೊಳ್ಳುವ ಅವಕಾಶ ನಿಮ್ಮ ಮುಂದಿದೆ. ಮಾ.25ರಿಂದ ಏ.6ರವರೆಗೆ ಪರೀಕ್ಷೆಗಳು ನಡೆಯಲಿದ್ದು, ಸಂಗೀತ ಪರೀಕ್ಷೆಗಳನ್ನು ಹೊರತುಪಡಿಸಿ ಉಳಿದೆಲ್ಲ ಪರೀಕ್ಷೆಗಳು ನಿತ್ಯ 10.15ರಿಂದ ಮಧ್ಯಾಹ್ನ 1.30ರ ವರೆಗೆ ನಡೆಯಲಿವೆ. 

ಸಿಎಂ ಸಿದ್ದರಾಮಯ್ಯರಿಂದ ಡ್ರಾಮಾ, ಅವರಿಗಿದು ಶೋಭೆಯಲ್ಲ: ಬಿ.ವೈ.ವಿಜಯೇಂದ್ರ

ಮಾ.30ರಂದು ಸಂಗೀತ ಪರೀಕ್ಷೆಗಳು ಮಧ್ಯಾಹ್ನ 2ರಿಂದ ಸಂಜೆ 5.15ರವರೆಗೆ ನಡೆಯಲಿವೆ. ಪ್ರಶ್ನೆ ಪತ್ರಿಕೆ ಸೋರಿಕೆ ಸೇರಿದಂತೆ ಯಾವುದೇ ಪರೀಕ್ಷಾ ಅಕ್ರಮಗಳಿಗೆ ಅವಕಾಶವಾಗದೆ ಸುಸೂತ್ರವಾಗಿ ಪರೀಕ್ಷೆ ನಡೆಸಲು ಪರೀಕ್ಷಾ ಕೇಂದ್ರಗಳಲ್ಲಿ ಸಿಸಿಟಿವಿ ಕಣ್ಗಾವಲು, ಮೊಬೈಲ್‌ ನಿಷೇಧ ಸೇರಿದಂತೆ ಎಲ್ಲ ರೀತಿಯ ಸಿದ್ಧತೆ ಹಾಗೂ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ಅಧಿಕಾರಿಗಳು ತಿಳಿಸಿದ್ದಾರೆ. ಈ ಬಾರಿ ಪರೀಕ್ಷೆಗೆ ಒಟ್ಟು 8,69,968 ವಿದ್ಯಾರ್ಥಿಗಳು ನೋಂದಾಯಿಸಿದ್ದಾರೆ. ಈ ಪೈಕಿ 4,41,910 ಬಾಲಕರು, 4,28,058 ಬಾಲಕಿಯರಾಗಿದ್ದಾರೆ. 

ಒಟ್ಟು ವಿದ್ಯಾರ್ಥಿಗಳ ಪೈಕಿ 8.10 ಲಕ್ಷಕ್ಕೂ ಹೆಚ್ಚು ಶಾಲಾ ವಿದ್ಯಾರ್ಥಿಗಳು (ರೆಗ್ಯುಲರ್‌), 18,225 ಖಾಸಗಿ ವಿದ್ಯಾರ್ಥಿಗಳು ಹಾಗೂ 41,375 ಪುನರಾವರ್ತಿತ ವಿದ್ಯಾರ್ಥಿಗಳಿದ್ದಾರೆ. 5,4254 ವಿಶೇಷ ಚೇತನ ವಿದ್ಯಾರ್ಥಿಗಳಿದ್ದಾರೆ. ಪರೀಕ್ಷಾ ಕೇಂದ್ರಗಳ ಸುತ್ತ 200 ಮೀಟರ್‌ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಯಲ್ಲಿರಲಿದ್ದು, ಬಿಗಿ ಪೊಲೀಸ್‌ ಬಂದೋಬಸ್ತ್‌ ಇರುತ್ತದೆ. ಪರೀಕ್ಷೆ ನಡೆಸಲಿರುವ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿಯ (ಕೆಎಸ್‌ಇಎಬಿ) ಕೇಂದ್ರ ಕಚೇರಿಯಿಂದ ಹಿಡಿದು ಪರೀಕ್ಷಾ ಕೇಂದ್ರಗಳವರೆಗೂ ಪ್ರಶ್ನೆ ಪತ್ರಿಕೆ ಹಾಗೂ ಉತ್ತರ ಪತ್ರಿಕೆಗಳ ಸಾಗಣೆ, ಸಂಗ್ರಹಣೆ ಕೇಂದ್ರಗಳಲ್ಲಿ ಎಲ್ಲೆಡೆ 24/7 ಸಿಸಿಟಿವಿ ನಿಗಾ ಹಾಗೂ ಪೊಲೀಸ್‌ ಭದ್ರತೆ ವ್ಯವಸ್ಥೆ ಮಾಡಲಾಗಿದೆ. ಪರೀಕ್ಷಾ ಕೇಂದ್ರಗಳ ಸುತ್ತಮುತ್ತಲ ಟ್ಯೂಷನ್‌, ಕೋಚಿಂಗ್‌ ಕೇಂದ್ರಗಳು, ಝೆರಾಕ್ಸ್‌ ಕೇಂದ್ರಗಳು, ಸೈಬರ್‌ ಕೇಂದ್ರ, ಕಂಪ್ಯೂಟರ್‌ ಕೇಂದ್ರ ಹಾಗೂ ಗೇಮ್ಸ್‌ ಕೇಂದ್ರಗಳ ಮೇಲೆ ಗಮನ ಹರಿಸಲಾಗಿದೆ.

50 ಕೋಟಿ ಆಮಿಷ: ಸಿದ್ದರಾಮಯ್ಯ ವಿರುದ್ಧ ಬಿಜೆಪಿ ದೂರು

ವಿದ್ಯಾರ್ಥಿಗಳ ಗಮನಕ್ಕೆ
* ಪರೀಕ್ಷೆ-1 ಆತಂಕವಿಲ್ಲದೆ ಬರೆಯಿರಿ, ಪರೀಕ್ಷೆ 2, 3 ಆಯ್ಕೆಗೂ ಅವಕಾಶವಿದ್ದು, ಉತ್ತಮ ಫಲಿತಾಂಶ ಉಳಿಸಿಕೊಳ್ಳಬಹುದು
* ಪರೀಕ್ಷೆಗೂ ಒಂದು ತಾಸು ಮೊದಲೇ ಕೇಂದ್ರದಲ್ಲಿರಿ
* ಹಾಲ್‌ ಟಿಕೆಟ್‌, ಪೆನ್ನು ಕೊಂಡೊಯ್ಯುವುದು ಮರೆಯಬೇಡಿ
* ಮೊಬೈಲ್‌, ವಾಚ್‌, ಕ್ಯಾಲ್ಕ್ಯುಲೇಟರ್‌ ಸೇರಿ ಎಲೆಕ್ಟ್ರಾನಿಕ್ಸ್‌ ಉಪಕರಣ ನಿಷಿದ್ಧ
* ಪ್ರತಿ ಪ್ರಶ್ನೆಗೂ ನಿಧಾನವಾಗಿ ಯೋಚಿಸಿ ಸರಿಯಾಗಿ ಉತ್ತರಿಸಿ
* ಉತ್ತರ ಗೊತ್ತಿರುವ ಪ್ರಶ್ನೆಗಳಿಗೆ ಮೊದಲು ಉತ್ತರಿಸಿ
* ಉಳಿದ ಪ್ರಶ್ನೆಗಳನ್ನು ಬಿಡಬೇಡಿ, ಗೊತ್ತಿರುವಷ್ಟು ಉತ್ತರ ಬರೆಯಲು ಪ್ರಯತ್ನಿಸಿ

Follow Us:
Download App:
  • android
  • ios