*  3 ಪರೀಕ್ಷೆಗಳ ಮರು ಪರೀಕ್ಷೆಗೆ ಉಪಸಮಿತಿ ಶಿಫಾರಸು*  ಅ. 10ರೊಳಗೆ ನಡೆಸುವ ಸಾಧ್ಯತೆ*  ವಿವಿಯ ಆಡಳಿತದ ನಿರ್ಲಕ್ಷ್ಯವೇ ಪ್ರಶ್ನೆಪತ್ರಿಕೆ ಸೋರಿಕೆಗೆ ಕಾರಣ 

ಬಳ್ಳಾರಿ(ಸೆ.30):  ಇಲ್ಲಿಯ ವಿಜಯನಗರ ಶ್ರೀ ಕೃಷ್ಣದೇವರಾಯ ವಿವಿಯ (Sri Krishnadevaraya University) ಬಿಕಾಂ ಪರೀಕ್ಷೆಯ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣ ಕುರಿತು ಸೈಬರ್‌ ಕ್ರೈಂಗೆ ದೂರು ನೀಡಲು ಸಿಂಡಿಕೇಟ್‌ ಸದಸ್ಯ ಡಾ. ಮರ್ಚೇಡ್‌ ಮಲ್ಲಿಕಾರ್ಜುನಗೌಡ ಅವರ ನೇತೃತ್ವದ ಉಪ ಸಮಿತಿ ನಿರ್ಧರಿಸಿದ್ದು, ಇದೇ ವೇಳೆ ವಿವಿಯ ಪರೀಕ್ಷಾ ಮಂಡಳಿ ಚೇರ್ಮನ್‌ ಹಾಗೂ ಸದಸ್ಯರನ್ನು ಕಪ್ಪುಪಟ್ಟಿಗೆ ಸೇರಿಸುವ ನಿಲುವು ತೆಗೆದುಕೊಂಡಿದೆ.

ಅಕ್ಟೋಬರ್‌ 1ರಂದು ವಿವಿಯಲ್ಲಿ ಸಿಂಡಿಕೇಟ್‌ ಸಭೆ ಕರೆದಿದ್ದು ಈ ಸಭೆಯಲ್ಲಿ ಪ್ರಶ್ನೆಪತ್ರಿಕೆ ಸೋರಿಕೆ9question Paper Leak) ಸಂಬಂಧಿಸಿದಂತೆ ಮಹತ್ವದ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ. ಪ್ರಶ್ನೆಪತ್ರಿಕೆ ಸೋರಿಕೆಯಿಂದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಅನ್ಯಾಯವಾಗಲಿದೆ ಎಂಬುದರಿತು ಮ್ಯಾನೇಜ್‌ಮೆಂಟ್‌ ಅಕೌಂಟಿಂಗ್‌ ಸೇರಿ ಮೂರು ಪರೀಕ್ಷೆಗಳನ್ನು ಮರು ಪರೀಕ್ಷೆ ಮಾಡುವಂತೆ ಉಪ ಸಮಿತಿಯು ವಿವಿಗೆ ಮಾಡಿರುವ ಶಿಫಾರಸಿನಲ್ಲಿ ಸೂಚಿಸಿದೆ.

ಪ್ರಶ್ನೆ ಪತ್ರಿಕೆ ಸೋರಿಕೆಯಾಗಿಲ್ಲವೇ?

ಒಂದೆಡೆ ಪ್ರಶ್ನೆಪತ್ರಿಕೆ ಸೋರಿಕೆಯಿಂದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ(Students) ತೊಂದರೆಯಾಗಿದೆ ಎಂದು ಆರೋಪಿಸಿ ಅಖಿಲ ಭಾರತ ವಿದ್ಯಾರ್ಥಿ ಪರಿಷತ್ತಿನ ಕಾರ್ಯಕರ್ತರು ವಿವಿಯ ಎದುರು ಪ್ರತಿಭಟನೆ ನಡೆಸಿದ್ದರಲ್ಲದೆ, ಕುಲಪತಿ ಚೇಂಬರ್‌ಗೆ ನುಗ್ಗಲು ಪ್ರಯತ್ನಿಸಿದರು. ಮಧ್ಯಾಹ್ನ ನಡೆದ ಪರೀಕ್ಷೆಯ ಪ್ರಶ್ನೆವಾರು ಉತ್ತರಗಳು ಬೆಳಗ್ಗೆಯಿಂದಲೇ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿವೆ. ಇದನ್ನು ಎಬಿವಿಪಿ ಮುಖಂಡರು ಮೌಲ್ಯಮಾಪನ ಕುಲಸಚಿವರ ಗಮನಕ್ಕೂ ತಂದಿದ್ದಾರೆ. ಇದನ್ನು ಅವರು ಸಹ ಒಪ್ಪಿದ್ದಾರೆ. ಆದರೆ, ಪ್ರಕರಣಕ್ಕೆ ತೆರೆ ಎಳೆಯಲು ವಿವಿಯ ಕುಲಪತಿಗಳು, ಕುಲಸಚಿವರು ಪ್ರಯತ್ನಿಸುವುದು ಎಷ್ಟುಸರಿ? ಎಂಬ ಪ್ರಶ್ನೆ ಮೂಡಿದೆ.

ಬಿಕಾಂ ಪರೀಕ್ಷೆ ಪ್ರಶ್ನೆಪತ್ರಿಕೆ ಸೋರಿಕೆ: ವಿಜಯನಗರ ವಿವಿ ಪರೀಕ್ಷೆ ರದ್ದು

ಇನ್ನು ಪ್ರಗತಿಯ ಹಂತದಲ್ಲಿ ಹೆಜ್ಜೆ ಇಡುತ್ತಿರುವ ಬಳ್ಳಾರಿ ವಿಶ್ವವಿದ್ಯಾಲಯ ಈ ಹಿಂದಿನಿಂದಲೂ ವಿವಾದಾತ್ಮಕ ವಿಷಯಗಳಿಗೆ ಮುನ್ನೆಲೆಗೆ ಬರುತ್ತಿರುವುದು ಈ ಭಾಗದ ಶಿಕ್ಷಣ ಪ್ರಿಯರಲ್ಲಿ ಬೇಸರ ಮೂಡಿಸಿದೆ. ವಿವಿಯ ಆಡಳಿತದ ನಿರ್ಲಕ್ಷ್ಯವೇ ಪ್ರಶ್ನೆಪತ್ರಿಕೆ ಸೋರಿಕೆಯಂತಹ ಪ್ರಕರಣಗಳಿಗೆ ಕಾರಣ ಎಂಬ ದೂರುಗಳು ಕೇಳಿ ಬರುತ್ತಿವೆ.

ಮರು ಪರೀಕ್ಷೆ

ಪ್ರಶ್ನೆಪತ್ರಿಕೆ ಸೋರಿಕೆ ಹಿನ್ನೆಲೆಯಲ್ಲಿ ವಿಶ್ವವಿದ್ಯಾಲಯ ಮೂರು ಪರೀಕ್ಷೆಗಳನ್ನು(Exam) ಮರು ಪರೀಕ್ಷೆ ಮಾಡಬೇಕು ಎಂದು ಸಿಂಡಿಕೇಟ್‌ ಸದಸ್ಯ ಡಾ. ಮರ್ಚೇಡ್‌ ಮಲ್ಲಿಕಾರ್ಜುನಗೌಡ ಅವರ ನೇತೃತ್ವದ ಉಪ ಸಮಿತಿ ಶಿಫಾರಸು ಮಾಡಿದೆ. ಮ್ಯಾನೇಜ್‌ಮೆಂಟ್‌ ಅಕೌಂಟಿಂಗ್‌, ಫೈನಾನ್ಸಿಯಲ್‌ ಸವೀರ್‍ಸಸ್‌, ಹ್ಯೂಮನ್‌ ರಿಸೋರ್ಸ್‌ ಮ್ಯಾನೇಜ್‌ಮೆಂಟ್‌ ಪರೀಕ್ಷೆಗಳು ನಡೆಯಲಿವೆ ಎಂದು ತಿಳಿದು ಬಂದಿದೆ. ಅ. 10ರೊಳಗೆ ಈ ಮೂರು ಪರೀಕ್ಷೆಗಳು ನಡೆಯಲಿವೆ ಎಂದು ವಿವಿ ಮೂಲಗಳು ತಿಳಿಸಿವೆ.

ಸತ್ಯಶೋಧನೆ ಸಮಿತಿ ತೀರ್ಮಾನದಂತೆ ಸೈಬರ್‌ ಕ್ರೈಂಗೆ ದೂರು ನೀಡಲು ನಿರ್ಧರಿಸಲಾಗಿದೆ. ಮೂರು ವಿಷಯಗಳ ಮರು ಪರೀಕ್ಷೆ ಮಾಡಲು ನಿರ್ಧರಿಸಲಾಗಿದೆ. ಈ ಕುರಿತು ಅ. 1ರಂದು ಜರುಗುವ ಸಿಂಡಿಕೇಟ್‌ ಸಭೆಯಲ್ಲಿ ಅನುಮೋದನೆ ಪಡೆಯುತ್ತೇವೆ ಎಂದು ಸಿಂಡಿಕೇಟ್‌ ಸದಸ್ಯ ಡಾ. ಮರ್ಚೇಡ್‌ ಮಲ್ಲಿಕಾರ್ಜುನಗೌಡ ತಿಳಿಸಿದ್ದಾರೆ. 

ಮೂರು ವಿಷಯಗಳ ಮರು ಪರೀಕ್ಷೆ ಮಾಡಲು ಉಪ ಸಮಿತಿ ಶಿಫಾರಸು ಮಾಡಿರುವುದನ್ನು ಸ್ವಾಗತಿಸುತ್ತೇವೆ. ಆದರೆ, ಪ್ರಶ್ನೆಪತ್ರಿಕೆ ಸೋರಿಕೆ ಮಾಡಿರುವವರ ವಿರುದ್ಧ ಶಿಸ್ತುಕ್ರಮವಾಗಬೇಕು ಎಂಬುದು ನಮ್ಮ ಒತ್ತಾಯವಾಗಿದೆ ಎಂದು ಬಳ್ಳಾರಿ ಜಿಲ್ಲಾ ಎಬಿವಿಪಿ ಸಂಘಟನಾ ಕಾರ್ಯದರ್ಶಿ ಕೌಶಿಕ್‌ ಹೇಳಿದ್ದಾರೆ.