*  ಸೋರಿ​ಕೆ​ಯಾ​ದರೂ ತಾಂತ್ರಿಕ ಕಾರ​ಣ​ವೊಡ್ಡಿ ಮುಂದೂ​ಡಿ​ಕೆ*  ತೀವ್ರ ಚರ್ಚೆಗೆ ಗ್ರಾಸ​ವಾದ ವಿವಿ ಆದೇ​ಶ*  ವಿಶ್ವವಿದ್ಯಾಲಯದಲ್ಲಿಯೇ ಪ್ರಶ್ನೆಪತ್ರಿಕೆ ಸೋರಿಕೆಯಾಗಿರುವ ಗುಮಾನಿ  

ಬಳ್ಳಾರಿ(ಸೆ.27):  ಬಿಕಾಂ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆ ಹಿನ್ನೆಲೆಯಲ್ಲಿ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯ(Vijayanagara Sri Krishnadevaraya University) ಪರೀಕ್ಷೆ ಮುಂದೂಡಿದೆ. ಆದರೆ, ವಿವಿಯ ಕುಲಸಚಿವರು ತಾಂತ್ರಿಕ ಕಾರಣದಿಂದ ಪರೀಕ್ಷೆಯನ್ನು ಮುಂದೂಡಲಾಗಿದೆ ಎಂದು ಎಲ್ಲ ಕಾಲೇಜುಗಳ ಪ್ರಾಂಶುಪಾಲರಿಗೆ ಆದೇಶ ಹೊರಡಿಸಿರುವುದು ತೀವ್ರ ಚರ್ಚೆಗೆ ಗ್ರಾಸವಾಗಿದೆ.

2020/21ನೇ ಸಾಲಿನ ಬಿಕಾಂನ(B.com) ಮ್ಯಾನೇಜ್‌ಮೆಂಟ್‌ ಅಕೌಂಟಿಂಗ್‌ನ 6ನೇ ಸೆಮಿಸ್ಟರ್‌ ಪರೀಕ್ಷೆ ಸೆ. 26ರಂದು ಮಧ್ಯಾಹ್ನ 2 ಗಂಟೆಯಿಂದ ಸಂಜೆ 5ರ ವರೆಗೆ ನಡೆಯಬೇಕಿತ್ತು. ಆದರೆ, ಬೆಳಗ್ಗೆಯಿಂದಲೇ ಉತ್ತರಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿವೆ. ಮಧ್ಯಾಹ್ನ ಪರೀಕ್ಷೆ ಶುರುವಾದ ಬಳಿಕವಷ್ಟೇ ಪ್ರಶ್ನೆಪತ್ರಿಕೆ ಸೋರಿಕೆಯಾಗಿ, ಉತ್ತರಪತ್ರಿಕೆಗಳು ಹರಿದಾಡುತ್ತಿರುವುದು ಗೊತ್ತಾಗಿದೆ. ಈ ಹಿನ್ನೆಲೆಯಲ್ಲಿಯೇ ಪರೀಕ್ಷೆಯನ್ನು ಮುಂದೂಡಲಾಗಿದೆ ಎಂದು ಹೇಳಲಾಗುತ್ತಿದ್ದು, ವಿಶ್ವವಿದ್ಯಾಲಯ ಮಾತ್ರ ಪ್ರಕರಣದಿಂದ ಜಾರಿಕೊಳ್ಳಲು ಪರೀಕ್ಷೆ ಮುಂದೂಡಿಕೆಗೆ ತಾಂತ್ರಿಕ ಕಾರಣವೊಡ್ಡುತ್ತಿದೆ ಎಂಬ ಆರೋಪಗಳು ಕೇಳಿ ಬಂದಿವೆ. ವಿಶ್ವವಿದ್ಯಾಲಯದಲ್ಲಿಯೇ ಪ್ರಶ್ನೆಪತ್ರಿಕೆ ಸೋರಿಕೆಯಾಗಿರುವ ಗುಮಾನಿಗಳು ಇದ್ದು, ಈ ಕುರಿತು ಸೂಕ್ತ ತನಿಖೆಗೆ ಮುಂದಾದಲ್ಲಿ ಮಾತ್ರ ಈ ದುಷ್ಕೃತ್ಯದ ಹಿಂದಿನ ಕೈವಾಡ ಯಾರದ್ದು ಎಂಬುದು ಗೊತ್ತಾಗಲಿದೆ.

ಈ ಕುರಿತು ವಿಶ್ವವಿದ್ಯಾಲಯ ಕುಲಸಚಿವ ಎಸ್‌.ಸಿ. ಪಾಟೀಲ್‌ ಅವರನ್ನು ‘ಕನ್ನಡಪ್ರಭ’ ಸಂಪರ್ಕಿಸಿದಾಗ, ‘ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದೆ ಎಂದು ನಿಮಗೆ ಯಾರು ಹೇಳಿದ್ದು’ ಎಂದು ಪ್ರಶ್ನಿಸಿದರಲ್ಲದೆ, ತಾಂತ್ರಿಕ ಕಾರಣ ಏನು ಎಂಬುದರ ನಿರ್ದಿಷ್ಟಮಾಹಿತಿ ನೀಡಿದೆ ಜಾರಿಕೊಂಡರು. ಈ ಕುರಿತು ವಿಶ್ವವಿದ್ಯಾಲಯದ ಕುಲಪತಿ ಹಾಗೂ ಮೌಲ್ಯಮಾಪನ ಕುಲಸಚಿವರನ್ನು ಸಂಪರ್ಕಿಸಲು ಪ್ರಯತ್ನಿಸಲಾಯಿತಾದರೂ, ವಿಸಿ ಹಾಗೂ ಕುಲಸಚಿವರು ಮೊಬೈಲ್‌ ಕರೆ ಸ್ವೀಕರಿಸಲಿಲ್ಲ. ಪ್ರಶ್ನೆಪತ್ರಿಕೆ ಸೋರಿಕೆಯಿಂದಾದ ಪರೀಕ್ಷೆ(Exam) ಮುಂದೂಡಿಕೆಗೆ ಬಳ್ಳಾರಿ ಹಾಗೂ ಕೊಪ್ಪಳ ಜಿಲ್ಲೆಗಳ ವಿದ್ಯಾರ್ಥಿಗಳು(Students) ತೀವ್ರ ಸಮಸ್ಯೆ ಎದುರಿಸಿದರು. ಬೆಳಗ್ಗೆಯೇ ಪರೀಕ್ಷೆಗೆಂದು ಕೇಂದ್ರಗಳಿಗೆ ಆಗಮಿಸಿದ್ದ ವಿದ್ಯಾರ್ಥಿಗಳು ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದೆ ಎಂದು ಗೊತ್ತಾಗುತ್ತಿದ್ದಂತೆಯೇ ನಿರಾಸೆಯಿಂದ ಊರುಗಳಿಗೆ ಮರಳಿದರು.

ಕೆಪಿಎಸ್ಸಿ ಎಫ್‌ಡಿಎ ಪ್ರಶ್ನೆಪತ್ರಿಕೆ ಸೋರಿಕೆ ನಿಜ?

ಪರೀಕ್ಷೆ ಮುಂದೂಡಿಕೆ ಕುರಿತು ಆದೇಶ ನೀಡಿರುವ ಮೌಲ್ಯಮಾಪನ ಕುಲಸಚಿವರು, ಪುನಃ ಪರೀಕ್ಷೆಯನ್ನು ಯಾವುದೇ ಕ್ಷಣದಲ್ಲಿ ಆಯೋಜಿಸಬಹುದಾಗಿದೆ. ಆದ್ದರಿಂದ ವಿದ್ಯಾರ್ಥಿಗಳು ಪರೀಕ್ಷೆಗೆ ಸಿದ್ಧರಾಗಬೇಕು ಎಂದು ಸೂಚಿಸಿದ್ದಾರೆ.
ಪ್ರಶ್ನೆಪತ್ರಿಕೆ ಸೋರಿಕೆಯಾಗಿರುವುದು ನನ್ನ ಗಮನಕ್ಕೆ ಬಂದಿದೆ. ಈ ಕುರಿತು ಕುಲಪತಿ ಹಾಗೂ ಮೌಲ್ಯಮಾಪನ ಕುಲಸಚಿವರ ಮಾತನಾಡಿರುವೆ. ಮುಂದಿನ ಪರೀಕ್ಷೆ ಆಯೋಜನೆ ಕುರಿತು ಹಾಗೂ ಈ ರೀತಿಯ ಪ್ರಕರಣಗಳು ಮತ್ತೆ ಮತ್ತೆ ನಡೆಯದಂತೆ ಕ್ರಮ ವಹಿಸುವಂತೆ ಸೂಚಿಸಲಾಗಿದೆ ಎಂದು ಬಳ್ಳಾರಿ ವಿವಿ ಸಿಂಡಿಕೇಟ್‌ ಸದಸ್ಯ ಡಾ. ಮರ್ಚೇಡ್‌ ಮಲ್ಲಿಕಾರ್ಜುನಗೌಡ ತಿಳಿಸಿದ್ದಾರೆ. 

ಪ್ರಶ್ನೆಪತ್ರಿಕೆ ಸೋರಿಕೆ(Question Paper Leak) ಕುರಿತು ಕುಲಸಚಿವರ ಗಮನಕ್ಕೆ ತರಲಾಯಿತು. ಬಳಿಕ ಅವರೇ ಫೋನ್‌ ಮಾಡಿ ಪರೀಕ್ಷೆ ಮುಂದೂಡಿದ್ದೇವೆ ಎಂದು ಹೇಳಿದರು. ಬೆಳಗ್ಗೆ 11 ಗಂಟೆಯೊಳಗೆ ಅವರ ಗಮನಕ್ಕೆ ತಂದೆವು. ಪ್ರಶ್ನೆಪತ್ರಿಕೆ ಸೋರಿಕೆಯಿಂದ ವಿದ್ಯಾರ್ಥಿಗಳಿಗೆ ತೀವ್ರ ತೊಂದರೆಯಾಗಿದೆ. ಇಂತಹ ಕೃತ್ಯ ನಡೆಯದಂತೆ ಕ್ರಮ ವಹಿಸಬೇಕು ಎಂದು ಒತ್ತಾಯಿಸುತ್ತೇವೆ. ನಾಳೆ ವಿಶ್ವವಿದ್ಯಾಲಯ ಎದುರು ಪ್ರತಿಭಟನೆ ನಡೆಸುತ್ತೇವೆ ಎಂದು ಬಳ್ಳಾರಿ ಎಬಿವಿಪಿ ಸಂಘಟನಾ ಕಾರ್ಯದರ್ಶಿ ಕೌಶಿಕ್‌ ಹೇಳಿದ್ದಾರೆ.