ಬೆಂಗಳೂರು (ಫೆ.13):  ರಾಜ್ಯದಲ್ಲಿ 9ರಿಂದ 12ನೇ ತರಗತಿವರೆಗೆ ಶಾಲೆಗಳು ಸುಗಮವಾಗಿ ನಡೆಯುತ್ತಿರುವ ಹಿನ್ನೆಲೆಯಲ್ಲಿ 6ರಿಂದ 8ನೇ ತರಗತಿಗಳನ್ನೂ ಪೂರ್ಣ ಪ್ರಮಾಣದಲ್ಲಿ ಶೀಘ್ರವಾಗಿ ಆರಂಭಿಸಲು ಶಿಕ್ಷಣ ಇಲಾಖೆ ಉದ್ದೇಶಿಸಿದ್ದು, ಈ ಸಂಬಂಧ ಫೆ.16ರಂದು ಆರೋಗ್ಯ ಇಲಾಖೆಯೊಂದಿಗೆ ಚರ್ಚಿಸಿ ಅಂತಿಮ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆ ಇದೆ.

ಫೆ.16ರಂದು ಆರೋಗ್ಯ ಇಲಾಖೆಯೊಂದಿಗೆ ನಡೆಯಲಿರುವ ಸಭೆಯಲ್ಲಿ 1ರಿಂದ 5ನೇ ತರಗತಿಗಳನ್ನು ಆರಂಭಿಸುವ ಬಗ್ಗೆಯೂ ಚರ್ಚಿಸುವ ಸಾಧ್ಯತೆಗಳಿವೆ ಎಂದು ತಿಳಿದು ಬಂದಿದೆ.

ಶುಕ್ರವಾರ ನಡೆದ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್‌. ಸುರೇಶ್‌ಕುಮಾರ್‌, 9ರಿಂದ 12ನೇ ತರಗತಿ ಹೊರತುಪಡಿಸಿ ಉಳಿದ ತರಗತಿಗಳನ್ನೂ ಆರಂಭಿಸುವಂತೆ ವ್ಯಾಪಕವಾದ ಒತ್ತಾಯ ಕೇಳಿಬರುತ್ತಿದೆ. ಹೀಗಾಗಿ, ಫೆ.16ರಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವರು ಮತ್ತು ರಾಜ್ಯ ಕೋವಿಡ್‌ ತಾಂತ್ರಿಕ ಸಲಹಾ ಸಮಿತಿ ಸಭೆಯಲ್ಲಿ ಚರ್ಚಿಸಿ ನಿರ್ಧರಿಸಲಾಗುವುದು ಎಂದು ತಿಳಿಸಿದರು.

1ರಿಂದ 5ನೇ ತರಗತಿಗಳ ಆರಂಭ : ದಿಕ್ಕು ತೋಚದಾದ ಪೋಷಕರು

ಪ್ರಸ್ತುತ 9ರಿಂದ 12ನೇ ತರಗತಿಗಳಿಗೆ ಹಾಜರಾಗುತ್ತಿರುವ ವಿದ್ಯಾರ್ಥಿಗಳ ಸಂಖ್ಯೆ ಮತ್ತು 6ರಿಂದ 9ರವರೆಗಿನ ಪರಿಷ್ಕೃತ ವಿದ್ಯಾಗಮ ತರಗತಿಗಳಿಗೆ ಹಾಜರಾಗುತ್ತಿರುವ ವಿದ್ಯಾರ್ಥಿಗಳ ವಿವರಗಳನ್ನು ಪಡೆದುಕೊಂಡ ಸಚಿವರು, ಈಗಾಗಲೇ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ತರಗತಿಗಳು ಪೂರ್ಣ ಪ್ರಮಾಣದಲ್ಲಿ ನಡೆಯುತ್ತಿದ್ದು, ಭೌತಿಕ ತರಗತಿಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚುತ್ತಿದೆ. ತಾತ್ಕಾಲಿಕ ಪರೀಕ್ಷಾ ವೇಳಾಪಟ್ಟಿಪ್ರಕಟಿಸಿರುವುದರಿಂದ ವಿದ್ಯಾರ್ಥಿಗಳು ಕಲಿಕಾ ಪ್ರಕ್ರಿಯೆಯಲ್ಲಿ ತೊಡಗಿಸಿಕೊಂಡಿದ್ದಾರೆ ಎಂದರು.

ಜೂನ್‌ 10ರೊಳಗೆ ಎಲ್ಲಾ ಪರೀಕ್ಷೆ ಪೂರ್ಣ

ಇದೇ ವೇಳೆ ಪ್ರಸಕ್ತ ಸಾಲಿನ ಪರೀಕ್ಷೆಗಳ ದಿನಾಂಕ, ಮೌಲ್ಯಮಾಪನ, ಫಲಿತಾಂಶ ಪ್ರಕಟಿಸುವುದು ಮತ್ತು ಮುಂದಿನ ಶೈಕ್ಷಣಿಕ ವರ್ಷದ ಆರಂಭ ಕುರಿತಂತೆ ಚರ್ಚಿಸಲಾಯಿತು. 10 ಮತ್ತು 12ನೇ ತರಗತಿಗಳ ಪರೀಕ್ಷೆ ಮತ್ತು ಫಲಿತಾಂಶಗಳನ್ನು ಜೂನ್‌ ಅಂತ್ಯದೊಳಗೆ ಮತ್ತು ಉಳಿದ ತರಗತಿಗಳ ಪರೀಕ್ಷೆ ಮತ್ತು ಫಲಿತಾಂಶ ಘೋಷಣೆಯನ್ನು ಜೂ.10ರೊಳಗೆ ಪೂರ್ಣಗೊಳಿಸಬೇಕು. ಈ ಎಲ್ಲ ಪ್ರಕ್ರಿಯೆ ಮುಗಿದ ತಕ್ಷಣವೇ ಮುಂದಿನ ಶೈಕ್ಷಣಿಕ ವರ್ಷದ ತರಗತಿಗಳನ್ನು ಏಕಕಾಲಕ್ಕೆ ಆರಂಭಗೊಳಿಸಬೇಕು ಎಂದು ತಿಳಿಸಿದರು.

ಕಡತ ವಿಲೇವಾರಿ ಯಜ್ಞ:  ಇಲಾಖೆಯ ಕ್ಷೇತ್ರ ಶಿಕ್ಷಣಾಧಿಕಾರಿ ಮತ್ತು ಉಪನಿರ್ದೇಶಕರ ಕಚೇರಿಗಳಲ್ಲಿ ಕೆಲಸಗಳು ಸರಿಯಾಗಿ ಹಾಗೂ ಸಕಾಲದಲ್ಲಿ ಆಗುತ್ತಿಲ್ಲವೆಂದು ಸಾರ್ವಜನಿಕರಿಂದ ದೂರುಗಳು ಬರುತ್ತಿರುವ ಹಿನ್ನೆಲೆಯಲ್ಲಿ ಮಾ.1ರಂದು ಧಾರವಾಡ ಆಯುಕ್ತರ ಕಚೇರಿಯಲ್ಲಿ ಕಡತ ವಿಲೇವಾರಿ ಅದಾಲತ್‌ ನಡೆಸಲಾಗುತ್ತಿದ್ದು, ಅದೇ ಮಾದರಿಯಲ್ಲಿ ಉಳಿದ ಆಯುಕ್ತರ ಕಚೇರಿಗಳಲ್ಲಿಯೂ ಕ್ರಮ ವಹಿಸುವಂತೆ ಸಚಿವರು ಸೂಚಿಸಿದರು.

ಇದೇ ವೇಳೆ ಶಿಕ್ಷಕರ ವರ್ಗಾವಣೆಗೆ ಕೆಎಟಿ ತಡೆಯಾಜ್ಞೆ ತೆರವು, ಪಿಯು ಉಪನ್ಯಾಸಕರ ವರ್ಗಾವಣೆ ನಿಯಮ ತಯಾರಿ, ದಾಖಲಾತಿ ಪ್ರಕ್ರಿಯೆ, ಹೊಸ ಶಾಲೆಗಳಿಗೆ ಅನುಮತಿ ನೀಡುವ ಬಗ್ಗೆಯೂ ಚರ್ಚಿಸಿ ಅಧಿಕಾರಿಗಳಿಗೆ ಸಲಹೆ-ಸೂಚನೆಗಳನ್ನು ನೀಡಿದರು.

ಸಭೆಯಲ್ಲಿ ಇಲಾಖೆ ಪ್ರಧಾನ ಕಾರ್ಯದರ್ಶಿ ಎಸ್‌.ಆರ್‌. ಉಮಾಶಂಕರ್‌, ಆಯುಕ್ತ ವಿ.ಅನ್ಬುಕುಮಾರ್‌, ಸಮಗ್ರ ಶಿಕ್ಷಣ-ಕರ್ನಾಟಕ ರಾಜ್ಯ ಯೋಜನಾ ನಿರ್ದೇಶಕಿ ದೀಪಾಚೋಳನ್‌ ಸೇರಿದಂತೆ ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.