ಕೋಲಾರ (ಫೆ.12): ಜಿಲ್ಲೆಯಲ್ಲಿ ಕೆಲ ಖಾಸಗಿ ಸಂಸ್ಥೆಗಳು ಸದ್ದು ಗದ್ಧಲವಿಲ್ಲದೆ 1 ರಿಂದ 5 ನೇ ತರಗತಿಗಳನ್ನು ಆರಂಭಿಸಿದ್ದಾರೆ. ಸರ್ಕಾರದ ಅದೇಶವಿಲ್ಲದಿದ್ದರೂ ಕೆಲ ಶಿಕ್ಷಣ ಸಂಸ್ಥೆಗಳು ಪ್ರಾಥಮಿಕ ಶಾಲೆಗಳನ್ನು ಕದ್ದುಮುಚ್ಚಿ ನಡೆಸುತ್ತಿದ್ದು ಇದು ಪೋಷಕರ ಆತಂಕಕ್ಕೆ ಕಾರಣವಾಗಿದೆ.

"

6 ನೇ ತರಗತಿಯಿಂದ ಶಾಲೆಗಳನ್ನು ಆರಂಭಿಸಲು ಸರ್ಕಾರ ಅನುಮತಿ ನೀಡಿದೆಯಾದರೂ ಈ ತರಗತಿಗಳಿಗೆ ಕೊರೋನಾ ಸೋಂಕಿನ ಭೀತಿಯಲ್ಲಿ ಮಕ್ಕಳನ್ನು ಶಾಲೆಗಳಿಗೆ ಕಳಿಸಲು ಪೋಷಕರು ಹಿಂಜರಿಯುತ್ತಿರುವಾಗ 1 ನೇ ತರಗತಿಯಿಂದ ಶಾಲೆಗಳನ್ನು ತೆರೆಯುತ್ತಿರುವುದಕ್ಕೆ ವಿರೋಧ ವ್ಯಕ್ತವಾಗುತ್ತಿದೆ.

ಶಾಲೆಗಳಿಂದ ಶುಲ್ಕ ವಸೂಲಿ :  ಶಿಕ್ಷಣ ಸಚಿವ ಸುರೇಶ್‌ ಕುಮಾರ್‌ ಅವರು ಫೆ.15 ರ ನಂತರ ಪ್ರಾಥಮಿಕ ಶಾಲೆಗಳನ್ನು ಆರಂಭಿಸುವ ಕುರಿತು ಚಿಂತನೆ ನಡೆಸಲಾಗಿದೆ ಎಂದು ಹೇಳಿದ್ದೇ ತಡ ಇತ್ತ ಕೆಲವು ಖಾಸಗಿ ಶಾಲೆಗಳವರು ತರಗತಿಗಳನ್ನು ಆರಂಭಿಸಿ ಶಾಲೆಗಳಲ್ಲಿ ಮಕ್ಕಳನ್ನು ತುಂಬಿಸಿಕೊಂಡು ಹಣ ವಸೂಲಿ ಮಾಡಿಕೊಳ್ಳಲು ಮುಂದಾಗಿದ್ದಾರೆ ಎಂಬ ಆರೋಪಗಳೂ ಕೇಳಿ ಬಂದಿವೆ.

ಕೊರೊನಾ ಹಿನ್ನೆಲೆಯಲ್ಲಿ 2020 ರ ಮಾರ್ಚಿಂದ ಶಾಲೆಗಳನ್ನು ಮುಚ್ಚಲಾಗಿತ್ತು, ಕಳೆದ ವರ್ಷದಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳ ಪರೀಕ್ಷೆಗಳನ್ನು ನಡೆಸದೆ ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳನ್ನು ಮಾತ್ರ ನಡೆಸಿ ಉಳಿದ 1 ರಿಂದ 9 ನೇ ತರಗತಿಯಲ್ಲಿ ಓದುತ್ತಿರುವ ಎಲ್ಲರನ್ನೂ ಪಾಸ್‌ ಮಾಡಲಾಗಿತ್ತು.

ಸರ್ಕಾರದ ಶುಲ್ಕ ಕಡಿತ ಆದೇಶ ಪಾಲಿಸದ ಶಾಲೆಗಳ ವಿರುದ್ಧ ಪೋಷಕರಿಂದ ದೂರು

ನಷ್ಟತುಂಬಿಸಿಕೊಳ್ಳುವ ಕಾತುರ:  ಸಾಮಾನ್ಯವಾಗಿ ಶೈಕ್ಷಣಿಕ ವರ್ಷದ ಕೊನೆಯಲ್ಲಿ ಅಂದರೆ ಫೆಬ್ರವರಿ ಮತ್ತು ಮಾರ್ಚ್ ತಿಂಗಳಲ್ಲಿ ಪರೀಕ್ಷೆಗಳು ಬಂದಾಗ ಪರೀಕ್ಷಾ ಪ್ರವೇಶ ಪತ್ರ ಪಡೆಯುವ ಹೊತ್ತಿನಲ್ಲಿ ಶಾಲೆಯ ಬಾಕಿ ಇರುವ ಎಲ್ಲ ಹಣವನ್ನು ಮಕ್ಕಳಿಂದ ವಸೂಲಿ ಮಾಡುವುದು ಶಿಕ್ಷಣ ಸಂಸ್ಥೆಗಳು ವಾಡಿಕೆ. ಆದರೆ ಕಳೆದ ವರ್ಷ ಪರೀಕ್ಷೆ ಹೊತ್ತಿಗೆ ಕೊರೊನಾ ವಕ್ಕರಿಸಿದ್ದರಿಂದ ಮಕ್ಕಳಿಂದ ಬಾಕಿ ವಸೂಲಿ ಮಾಡಲು ಸಾಧ್ಯವಾಗಲಿಲ್ಲ. ಕಳೆದ ಒಂದು ವರ್ಷದಿಂದ ಹಣವೇ ಇಲ್ಲದೆ ಒದ್ದಾಡುತ್ತಿರುವವರು ಕೊರೊನಾ ಸೋಂಕು ಹರಡುವಿಕೆ ಕಡಿಮೆ ಆಗಿರುವುದರಿಂದ ಶಾಲೆಗಳನ್ನು ಆರಂಭಿಸಿ ಹಣ ವಸೂಲಿಯಲ್ಲಿ ತೊಡಗುವ ಹುಮ್ಮಸ್ಸಿನಲ್ಲಿರುವ ಕೆಲವು ಶಿಕ್ಷಣ ಸಂಸ್ಥೆಗಳು ಈಗಾಗಲೇ ಪ್ರಾಥಮಿಕ ಶಾಲೆಗಳ 1 ರಿಂದ 5 ನೇ ತರಗತಿ ಮಕ್ಕಳನ್ನು ಶಾಲೆಗೆ ಸೇರಿಸಿಕೊಂಡು ಹಣ ವಸೂಲಿ ಮಾಡಲು ಮುಂದಾಗಿವೆ.

ಅನೇಕರು ಶಿಕ್ಷಣ ಇಲಾಖೆಯ ಆದೇಶಕ್ಕೆ ಕಾಯುತ್ತಿದ್ದಾರಾದರೂ ಕೆಲವರು ಹಣದ ಆಸೆಯಿಂದ ನಷ್ಟದ ಹೆಸರನ್ನು ಹೇಳಿಕೊಂಡು ಮೊಂಡು ಧೈರ್ಯ ಮಾಡಿಕೊಂಡು ವಸೂಲಿಗಿಳಿದಿದ್ದಾರೆ ಎಂದು ದೂರುಗಳು ಸಾಕಷ್ಟಿವೆ.

ನಿದ್ರೆ ಮಾಡುತ್ತಿರುವ ಅಧಿಕಾರಿಗಳು

ಕೆಲ ಖಾಸಗಿ ಶಿಕ್ಷಣ ಸಂಸ್ಥೆಗಳು ಹಣ ವಸೂಲಿ ಮಾಡಲು 1 ರಿಂದ 5 ನೇ ತರಗತಿಗಳನ್ನು ಆರಂಭಿಸಿದ್ದರೂ ಶಿಕ್ಷಣ ಇಲಾಖೆ ಅಧಿಕಾರಿಗಳು ಇತ್ತ ತಲೆ ಹಾಕದೆ ತಮಗೂ ಇದಕ್ಕೂ ಸಂಬಂಧ ಇಲ್ಲವೇನೋ ಎಂಬಂತೆ ಜಾಣ ಕುರುಡುತನ ಪ್ರದರ್ಶಿಸುತ್ತಿದ್ದಾರೆ. ಶಿಕ್ಷಣ ಸಚಿವ ಸುರೇಶ್‌ ಕುಮಾರ್‌ ಅವರೇ ಇದನ್ನು ಗಮನಿಸಿ ತಪ್ಪು ಮಾಡುತ್ತಿರುವ ಅಧಿಕಾರಿಗಳು ಮತ್ತು ಶಿಕ್ಷಣ ಸಂಸ್ಥೆಗಳನ್ನು ಗುರ್ತಿಸಿ ಕ್ರಮ ತೆಗೆದುಕೊಳ್ಳಬೇಕಾಗಿರುವುದು ಅನಿವಾರ್ಯವಾಗಿದೆ.

ಸಣ್ಣ ಮಕ್ಕಳ ಆರೋಗ್ಯ ಸ್ಥಿತಿಗಿಂತಲೂ ಹಣವೇ ಹೆಚ್ಚಾಗಿರುವ ಶಿಕ್ಷಣ ಸಂಸ್ಥೆಗಳನ್ನು ಪತ್ತೆ ಹಚ್ಚಿ ಅಂತವರಿಗೆ ಶಿಕ್ಷೆ ನೀಡಬೇಕೆಂಬುದು ಪೋಷಕರ ಒತ್ತಾಯವಾಗಿದೆ.

1 ರಿಂದ 5 ನೇ ತರಗತಿವರೆಗೆ ಶಾಲೆಗಳನ್ನು ತೆರೆಯುವಂತಿಲ್ಲ, ತೆರೆದರೆ ಕ್ರಿಮಿನಲ್‌ ಕೇಸು ಹಾಕಲಾಗುವುದು. ನನ್ನ ಗಮನಕ್ಕೂ ದೂರುಗಳು ಬಂದಿವೆ. ಕೋಲಾರದಲ್ಲೇ ಕೆಲ ಶಾಲೆಗಳು ತೆರೆದಿರುವ ಬಗ್ಗೆ ದೂರುಗಳು ಬಂದು ಕೂಡಲೇ ಆ ಶಾಲೆಗಳಲ್ಲಿ ಪರಿಶೀಲನೆ ನಡೆಸಿ ಮುಚ್ಚಿಸಲಾಯಿತು. ನಾಳೆಯೇ ನಮ್ಮ ಸಿಬ್ಬಂದಿಯನ್ನು ಕಳಿಸಿ ಅಂತಹ ಶಾಲೆಗಳ ಮೇಲೆ ಕ್ರಮ ತೆಗೆದುಕೊಳ್ಳಲಾಗುವುದು, ಪೋಷಕರೂ ಮಕ್ಕಳನ್ನು ಶಾಲೆಗೆ ಕಳಿಸಬಾರದು.

ಕೆ.ಎಸ್‌.ನಾಗರಾಜಗೌಡ, ಬಿಇಒ, ಕೋಲಾರ.