ಬೆಂಗ​ಳೂರು(ಅ.13): ರಾಜ್ಯದಲ್ಲಿ ಕೊರೋನಾ ಸೋಂಕು ತೀವ್ರವಾಗುತ್ತಿರುವ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಹಾಗೂ ಶಿಕ್ಷಕರ ಹಿತದೃಷ್ಟಿಯಿಂದ ಅ.12ರಿಂದ ಅ.30ರ ವರೆಗೆ ರಾಜ್ಯದ ಎಲ್ಲ ಶಾಲೆಗಳಿಗೆ ಮಧ್ಯಂತರ ರಜೆ ನೀಡಿದ್ದರೂ ಕೆಲವು ಖಾಸಗಿ ಶಾಲೆಗಳು ಆನ್‌ಲೈನ್‌ ತರಗತಿ ಮುಂದುವರಿಸುವ ಮೂಲಕ ಸರ್ಕಾರದ ಆದೇಶ ಉಲ್ಲಂಘನೆ ಮಾಡುತ್ತಿವೆ.

ಮಧ್ಯಂತರ ರಜೆ ಸರ್ಕಾರಿ, ಅನುದಾನಿತ ಶಾಲೆಗಳು ಸೇರಿದಂತೆ ಅನುದಾನ ರಹಿತ ಖಾಸಗಿ ಶಾಲೆಗಳಿಗೂ ಇದು ಅನ್ವಯವಾಗಲಿದೆ ಎಂದು ಶಿಕ್ಷಣ ಇಲಾಖೆ ತಿಳಿಸಿದೆ. ಇದಕ್ಕೆ ಪ್ರತಿಯಾಗಿ ಕೆಲವು ಖಾಸಗಿ ಶಾಲೆಗಳು ಸರ್ಕಾರದಿಂದ ಅಧಿಕೃತ ಆದೇಶ ಬಾರದ ಕಾರಣ ಆನ್‌ಲೈನ್‌ ತರಗತಿ ಮುಂದುವರಿಸಿದ್ದೇವೆ. ಅಧಿಕೃತ ಆದೇಶ ಬಂದರೆ ಆನ್‌ಲೈನ್‌ ತರಗತಿ ಸಂಪೂರ್ಣ ಸ್ಥಗಿತಗೊಳಿಸುತ್ತೇವೆ ಎಂದು ಹೇಳುತ್ತಿವೆ.

ಕಲ್ಬುರ್ಗಿ ಮಾಶಾಳ ಗ್ರಾಮದ 19 ವಠಾರ ಶಾಲೆಗಳು ಬಂದ್!

ಶಿಕ್ಷಣ ಇಲಾಖೆ ಮಧ್ಯಂತರ ರಜೆ ಜಾರಿಗೊಳಿಸಿದ್ದು, ಬಹುತೇಕ ಖಾಸಗಿ ಶಾಲೆಗಳು ಆನ್‌ಲೈನ್‌ ತರಗತಿ ಸ್ಥಗಿತಗೊಳಿಸಿವೆ. ಆದರೆ, ಆದೇಶದಲ್ಲಿ ಖಾಸಗಿ ಶಾಲೆಗಳು ಆನ್‌ಲೈನ್‌ ತರಗತಿ ಸ್ಥಗಿತಗೊಳಿಸಬೇಕು ಎಂದು ಅಧಿಕೃತವಾಗಿ ಸೂಚಿಸಿಲ್ಲ. ಈ ಆದೇಶ ಖಾಸಗಿ ಶಾಲೆಗಳಿಗೂ ಅನ್ವಯವಾಗಲಿದೆ ಶಿಕ್ಷಣ ಇಲಾಖೆ ಹಿರಿಯ ಅಧಿಕಾರಿಗಳು ಮೌಖಿಕವಾಗಿ ಹೇಳಿದ್ದಾರೆ. ಹೀಗಾಗಿ ಕೆಲ ಶಾಲೆಗಳು ಆನ್‌ಲೈನ್‌ ತರಗತಿ ಮುಂದುವರಿಸಿವೆ. ನಾವು ಸಹ ಈ ಸಂಬಂಧ ಲಿಖಿತ ಆದೇಶ ಹೊರಡಿಸುವಂತೆ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿಗೆ ಮನವಿ ಮಾಡಿದ್ದೇವೆ. ಲಿಖಿತ ಆದೇಶ ಹೊರಬಿದ್ದ ಬಳಿಕ ಆನ್‌ಲೈನ್‌ ತರಗತಿಗಳು ಸಂಪೂರ್ಣ ಸ್ಥಗಿತಗೊಳ್ಳಲಿವೆ ಎಂದು ರಾಜ್ಯ ಖಾಸಗಿ ಅನುದಾನ ರಹಿತ ಶಾಲೆಗಳ ಒಕ್ಕೂಟ(ಕ್ಯಾಮ್ಸ್‌) ಕಾರ್ಯದರ್ಶಿ ಶಶಿಕುಮಾರ್‌ ತಿಳಿಸಿದರು.