ಖಾಸಗಿ ಶಾಲೆಗಳ ಶುಲ್ಕ ಏರಿಕೆ ಪೋಷಕರ ಆಕ್ರೋಶಕ್ಕೆ ಕಾರಣವಾಗಿದೆ. ಶುಲ್ಕ ಏರಿಕೆ ಶೇ.50ಕ್ಕಿಂತ ಹೆಚ್ಚಿದ್ದು, ಪೋಷಕರು ಪ್ರತಿಭಟನೆ ನಡೆಸುತ್ತಿದ್ದಾರೆ.
ಶಿಕ್ಷಣ, ಆರೋಗ್ಯ, ಇವಿಷ್ಟು ಕಡಿಮೆ ಬೆಲೆಗೆ ಎಲ್ಲರಿಗೂ ಸಿಗುವಂತಾಗಬೇಕು ಹಾಗಾದಾಗ ಮಾತ್ರ ದೇಶ ಉದ್ಧಾರವಾಗಲು ಸಾಧ್ಯ. ಆದರೆ ಈಗ ಶಿಕ್ಷಣ ಹಾಗೂ ಆರೋಗ್ಯ ದೇಶದಲ್ಲಿ ದೊಡ್ಡ ಉದ್ಯಮವಾಗಿ ಬೆಳೆದಿದ್ದು, ಇದರ ಭಾರವನ್ನು ಜನರಿಗೆ ತಡೆದುಕೊಳ್ಳಲಾಗುತ್ತಿಲ್ಲ. ದೇಶದಲ್ಲಿ ಸರ್ಕಾರಿ ಶಾಲೆಗಳಲ್ಲಿ ಶಿಕ್ಷಣ ಕಳಪೆಯಾಗಿದೆ ಎಂದು ಜನ ಖಾಸಗಿಯತ್ತ ಮುಖ ಮಾಡುತ್ತಿದ್ದಾರೆ. ಇದನ್ನೇ ಬಳಸಿಕೊಂಡಿರುವ ಖಾಸಗಿ ಶಿಕ್ಷಣ ಸಂಸ್ಥೆಗಳು ಶಾಲಾ ಶುಲ್ಕವನ್ನು ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಹೋಗುತ್ತಿದೆ. ಇದರಿಂದ ಮಕ್ಕಳ ಶಿಕ್ಷಣಕ್ಕಾಗಿಯೇ ಪೋಷಕರು ಜೀವಮಾನವಿಡೀ ದುಡಿದ ದುಡಿಮೆಯನ್ನು ಮೀಸಲಿಡುವಂತಹ ಸ್ಥಿತಿ ನಿರ್ಮಾಣವಾಗಿದೆ. ಅದರಲ್ಲೂ ಮೆಟ್ರೋ ನಗರಗಳಲ್ಲಿ ಶಿಕ್ಷಣ ಕೈಗೆಟುಕದ ಹಣ್ಣಾಗಿದ್ದು, ಪೋಷಕರ ನಿದ್ದೆಗೆಡಿಸುತ್ತದೆ. ಪ್ರತಿವರ್ಷವೂ ಶಾಲೆಗಳು ಶುಲ್ಕವನ್ನು ನಿರಂತರವಾಗಿ ಏರಿಕೆ ಮಾಡುತ್ತಿವೆ. ಪ್ರತಿಷ್ಠಿತ ಖಾಸಗಿ ಶಾಲೆಗಳಲ್ಲಿ ಎಲ್‌ಕೆಜಿ ಮಕ್ಕಳ ಶಾಲಾ ಶುಲ್ಕ ಲಕ್ಷ ದಾಟಿದೆ. ಇದರಿಂದ ಖಾಸಗಿ ಶಾಲೆಗಳ ವಿರುದ್ಧ ಪೋಷಕರ ಆಕ್ರೋಶ ತೀವ್ರವಾಗಿದ್ದು, ಮಹಾನಗರಗಳಲ್ಲಿ ಪೋಷಕರು ಪ್ರತಿಭಟನೆಗೆ ಮುಂದಾಗಿದ್ದಾರೆ.
ಲೋಕಲ್ ಸರ್ಕಲ್ಸ್ ನಡೆಸಿದ ರಾಷ್ಟ್ರವ್ಯಾಪಿ ಸಮೀಕ್ಷೆಯ ಪ್ರಕಾರ, ಖಾಸಗಿ ಶಾಲೆಗಳಲ್ಲಿ ಮಕ್ಕಳಿರುವ ಶೇ. 81 ರಷ್ಟು ಪೋಷಕರು ಈ ಶೈಕ್ಷಣಿಕ ವರ್ಷದಲ್ಲಿ ಶೇ. 10 ಕ್ಕಿಂತ ಹೆಚ್ಚು ಶುಲ್ಕ ಹೆಚ್ಚಳದ ಆಘಾತವನ್ನು ಅನುಭವಿಸಿದ್ದಾರೆ. ದೆಹಲಿ, ಬೆಂಗಳೂರು ಮತ್ತು ಹೈದರಾಬಾದ್‌ನಂತಹ ನಗರಗಳಲ್ಲಿ, ಇದರ ನೇರ ಪರಿಣಾಮ ದರ್ಶನವಾಗುತ್ತದೆ, ಅನೇಕ ಶಾಲೆಗಳು ಶುಲ್ಕವನ್ನು ಶೇಕಡಾ 50 ರಷ್ಟು ಹೆಚ್ಚಿಸಿವೆ. ಇದು ಪೋಷಕರನ್ನು ಕಷ್ಟಕ್ಕೆ ಸಿಲುಕಿಸಿದ್ದು, ವ್ಯಾಪಕ ಪ್ರತಿಭಟನೆಗಳಿಗೆ ಕಾರಣವಾಗಿವೆ.
ರಾಷ್ಟ್ರ ರಾಜಧಾನಿಯಲ್ಲಿ ಪೋಷಕರ ಹತಾಶೆ ಬೀದಿಗೆ ತಲುಪಿದೆ. ದೆಹಲಿಯ ದ್ವಾರಕಾದ ದೆಹಲಿ ಪಬ್ಲಿಕ್ ಸ್ಕೂಲ್ (ಡಿಪಿಎಸ್) ನಲ್ಲಿ, ಪೋಷಕರು ಶಾಲೆಯ ಹೊರಗೆ ಮತ್ತು ಶಿಕ್ಷಣ ನಿರ್ದೇಶನಾಲಯದ (ಡಿಒಇ) ಹೊರಗೆ ಪ್ರತಿಭಟನೆ ನಡೆಸಿದ್ದಾರೆ. ಇದಕ್ಕೆ ಕಾರಣವಾಗಿದ್ದು, ಶಾಲೆಯ ವಾರ್ಷಿಕ ಶುಲ್ಕವನ್ನು ₹1.4 ಲಕ್ಷಕ್ಕೆ ಏರಿಸಿರುವುದು. ಪೋಷಕರ ಪ್ರಕಾರ, ಶಾಲೆಯು 2020 ರಿಂದ ಪ್ರತಿ ವರ್ಷ ಬೋಧನಾ ಶುಲ್ಕವನ್ನು ಹೆಚ್ಚಿಸಿದೆ. ವಾರ್ಷಿಕವಾಗಿ ಶೇಕಡಾ 8 ರಿಂದ ಶೇಕಡಾ 20 ರವರೆಗೆ ಏರಿಕೆ ಮಾಡಲಾಗುತ್ತಿದೆ.
ಇದು ಬರೀ ದೆಹಲಿ ಕತೆಯಲ್ಲ, ಹಲವು ಮೆಟ್ರೋ ಸಿಟಿಗಳಲ್ಲಿ ಇದೇ ಸ್ಥಿತಿ ಇದೆ. ದೆಹಲಿ ಎನ್‌ಸಿಆರ್ ಪ್ರದೇಶದಾದ್ಯಂತ ಹಠಾತ್, ದುಬಾರಿ ಶುಲ್ಕ ಹೆಚ್ಚಳವನ್ನು ಜಾರಿಗೆ ತಂದಿರುವ ಖಾಸಗಿ ಅನುದಾನರಹಿತ ಶಾಲೆಗಳ ಹೊರಗೆ ಪೋಷಕರ ಪ್ರತಿಭಟನೆ ಆಕ್ರೋಶ ಕಂಡು ಬರುತ್ತಿದೆ. ಮಕ್ಕಳ ಶುಲ್ಕ ಕಟ್ಟುವುದಕ್ಕಾಗಿಯೇ ಪೋಷಕರು ಜೀವನವನ್ನು ಆರ್ಥಿಕ ಸಂಕಷ್ಟಕ್ಕೆ ದೂಡುವಂತಹ ಕಷ್ಟಕರವಾದ ಹಣಕಾಸಿನ ನಿರ್ಧಾರಗಳನ್ನು ಕೈಗೊಳ್ಳುವಂತೆ ಮಾಡಿದೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಡಿಒಇ ಮಧ್ಯಪ್ರವೇಶಿಸಿದ ನಂತರವೂ ಅನೇಕ ಶಾಲೆಗಳು ವಿವಿಧ ಪಟ್ಟಿಗಳ ಅಡಿಯಲ್ಲಿ ಶುಲ್ಕವನ್ನು ಹೆಚ್ಚಿಸುತ್ತಲೇ ಇವೆ.
ಅದೇ ರೀತಿ ಅತೀಯಾದ ಶುಲ್ಕದಿಂದ ಬೇಸತ್ತ ಕರ್ನಾಟಕದಲ್ಲಿಯೂ, ಪೋಷಕರಿಂದ ಹೆಚ್ಚುತ್ತಿರುವ ಒತ್ತಡದ ಹಿನ್ನೆಲೆ ಶಾಲಾ ಶಿಕ್ಷಣ ಇಲಾಖೆಯು ಹೊಸ ಸುತ್ತೋಲೆಯನ್ನು ಹೊರಡಿಸಿದೆ ಇದರಂತೆ ಶಾಲೆಗಳು ಈಗ ವಿವರವಾದ ಪ್ರವೇಶ ಅಧಿಸೂಚನೆಗಳು, ಮೀಸಲಾತಿ ನೀತಿಗಳು ಮತ್ತು ಪೂರ್ಣ ಶುಲ್ಕ ರಚನೆಗಳನ್ನು ಸಾರ್ವಜನಿಕವಾಗಿ ಪ್ರದರ್ಶಿಸಬೇಕಾಗುತ್ತದೆ. ಶಿಕ್ಷಣ ಇಲಾಖೆ ಈ ಬಗ್ಗೆ ದೂರು ಪಡೆಯಲು ಹಾಗೂ ಪರಿಹಾರ ಒದಗಿಸಲು ಕೂಡ ವೇದಿಕೆಯನ್ನು ಸ್ಥಾಪಿಸಬೇಕು. ಈ ಬಗ್ಗೆ ಕ್ಷೇತ್ರ ಶಿಕ್ಷಣ ಅಧಿಕಾರಿಗಳಿಗೆ ಕುಂದುಕೊರತೆಗಳನ್ನು ಪರಿಶೀಲಿಸಿ ತ್ವರಿತವಾಗಿ ಪರಿಹರಿಸಲು ಸೂಚಿಸಲಾಗಿದೆ. ಈ ನೀತಿಯನ್ನು ಅನೇಕರು ಸ್ವಾಗತಿಸಿದ್ದರೂ ಬರೀ ಇವುಗಳಿಂದ ತಮ್ಮ ಸಮಸ್ಯೆ ಪರಿಹಾರವಾಗುವುದಿಲ್ಲ ಎಂಬುದು ಹೆಚ್ಚಿನ ಪೋಷಕರ ಅಳಲಾಗಿದೆ.
ಭಾರತದಾದ್ಯಂತ 301 ಜಿಲ್ಲೆಗಳಲ್ಲಿ ಲೋಕಲ್ ಸರ್ಕಲ್ಸ್ ಸಮೀಕ್ಷೆ ನಡೆಸಿದೆ. ಸುಮಾರು 18,000 ಕ್ಕೂ ಪೋಷಕರಿಂದ ಈ ಬಗ್ಗೆ ಹೆಚ್ಚು ಪ್ರತಿಕ್ರಿಯೆಗಳನ್ನು ಪಡೆಯಲಾಗಿದೆ ಇದು ಈ ಶಾಲಾ ಶುಲಕ್ದ ಬಿಕ್ಕಟ್ಟು ಎಷ್ಟು ವ್ಯಾಪಕವಾಗಿದೆ ಎಂಬುದರ ಸ್ಪಷ್ಟ ಚಿತ್ರಣವನ್ನು ನೀಡುತ್ತಿದೆ. ದತ್ತಾಂಶದ ಪ್ರಕಾರ, ಶೇ. 44 ರಷ್ಟು ಪೋಷಕರು ಕಳೆದ ಮೂರು ವರ್ಷಗಳಲ್ಲಿ ಶಾಲೆಗಳು ಶಾಲಾ ಶುಲ್ಕಗಳು ಶೇ. 50–80 ಅಥವಾ ಅದಕ್ಕಿಂತ ಹೆಚ್ಚು ಏರಿಕೆ ಮಾಡಿದ್ದಾರೆ ಎಂದು ಹೇಳಿದ್ದಾರೆ. ಹಾಗೆಯೇ ಉನ್ನತ ತರಗತಿಗಳಲ್ಲಿ ಮಕ್ಕಳಿರುವ ಕುಟುಂಬಗಳಿಗೆ, ವೆಚ್ಚಗಳು ಇನ್ನೂ ಹೆಚ್ಚಿರುತ್ತವೆ, ಏಕೆಂದರೆ ಅನೇಕರು ನಿಯಮಿತ ಶಾಲಾ ಶುಲ್ಕದ ಜೊತೆಗೆ ಖಾಸಗಿ ತರಬೇತಿಗೂ ಹಣ ಪಾವತಿ ಮಾಡುತ್ತಿದ್ದಾರೆ.


