ತುಮಕೂರು(ಅ.24):  ಒಂದು ವರ್ಷ ಎಲ್ಲರನ್ನು ಪಾಸ್‌ ಮಾಡಿದರೆ ಜಗತ್ತು ಪ್ರಳಯ ಆಗುವುದಿಲ್ಲ ಎನ್ನುವ ಮೂಲಕ ನವೆಂಬರ್‌ 17ರಿಂದ ಕಾಲೇಜು ಆರಂಭ ಮಾಡಲು ನಿರ್ಧರಿಸಿರುವ ಸರ್ಕಾರದ ತೀರ್ಮಾನಕ್ಕೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ.

"

ಶುಕ್ರವಾರ ಜಿಲ್ಲೆಯ ಶಿರಾ ಉಪಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಪರ ಚುನಾವಣಾ ಪ್ರಚಾರ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು. ಕೊರೋನಾ ಹಿನ್ನೆಲೆಯಲ್ಲಿ ಜನರ ಜೀವ ಮುಖ್ಯ. ಹೀಗಾಗಿ ಕಾಲೇಜು ಪ್ರಾರಂಭಿಸಿ ಆತುರದ ನಿರ್ಧಾರ ಕೈಗೊಳ್ಳಬೇಡಿ ಎಂದು ಅಶ್ವಥ್‌ ನಾರಾಯಣ್‌, ಸುರೇಶ್‌ ಕುಮಾರ್‌, ಯಡಿಯೂರಪ್ಪ ಅವರಿಗೆ ಹೇಳುವುದಾಗಿ ತಿಳಿಸಿದರು.

ಒಂದು ವರ್ಷ ಶಾಲೆ ಮುಂದಕ್ಕೆ ಹಾಕಿದರೆ ಆಕಾಶ ಬೀಳುವುದಿಲ್ಲ. ಯಾವುದೇ ಕಾರಣಕ್ಕೂ ಶಾಲಾ ಕಾಲೇಜು ತೆಗೆಯಬೇಡಿ. ಒಂದು ವೇಳೆ ಶಾಲಾ ಕಾಲೇಜು ತೆಗೆಯಲು ಹೊರಟರೆ ಅದೊಂದು ಮೂರ್ಖತನದ ನಿರ್ಧಾರವಾಗುತ್ತದೆ. ಸರ್ಕಾರ ಜನರ ಜೀವನದ ಜೊತೆ ಚೆಲ್ಲಾಟವಾಡಲು ಹೊರಟಿದೆ ಎಂದರು.

ನಾನು ಮುಖ್ಯಮಂತ್ರಿ ಆಗುವುದು, ಬಿಡುವುದು ಕೇಂದ್ರ ಹೈಕಮಾಂಡ್‌ಗೆ ಬಿಟ್ಟವಿಷಯ. ಜಮೀರ್‌ ಅವರದ್ದು ವೈಯಕ್ತಿಕ ಅಭಿಪ್ರಾಯ. ಅಭಿಮಾನದಿಂದ ಎಲ್ಲರೂ ಹೇಳುತ್ತಾರೆ. ಆದರೆ ಅದು ಪಕ್ಷದ ನಿರ್ಧಾರವಲ್ಲ ಎಂದರು.
ಡಿಸಿಎಂ ಮಾಡಿದ್ದೇ ನಾನು ಎಂಬ ದೇವೇಗೌಡರ ಹೇಳಿಕೆಗೆ ತೀಕ್ಷ್ಮಣವಾಗಿ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಮಾಡಿದ್ದು ಅವರಲ್ಲ. ಆಗಲೇ ನಾನು ಮುಖ್ಯಮಂತ್ರಿಯಾಗಬೇಕಾಗಿತ್ತು. ಇವರೇನು ಮಾಡಿದರು? 1983ರಲ್ಲಿ ನಾನು ಪಕ್ಷೇತರರವಾಗಿ ನಾನು ಗೆದ್ದೆ. ಆಗ ದೇವೇಗೌಡರು ಬೆಂಬಲಿಸಿದ್ದರಾ ಎಂದು ಪ್ರಶ್ನಿಸಿದರು.

ಇನ್ನು ಕನ್ನಡದಲ್ಲೂ ಜೆಇಇ ಬರೆಯಲು ಕೇಂದ್ರ ಅವಕಾಶ!

ವಿಶ್ವನಾಥ್‌ ಒಬ್ಬ ಯಕಶ್ಚಿತ್‌ ರಾಜಕಾರಣಿ. ಅವರಿಗೆ ರಾಜಕೀಯ ಪ್ರೌಢಿಮೆಯೇ ಬಂದಿಲ್ಲ. ಕಾಂಗ್ರೆಸ್‌ ಮನೆಯೊಂದು ಮೂರು ಬಾಗಿಲು ಎಂಬ ಡಿಸಿಎಂ ಲಕ್ಷ್ಮಣ ಸವದಿ ಹೇಳಿಕೆಗೆ ಬಿ.ಎಸ್‌.ಯಡಿಯೂರಪ್ಪನವರನ್ನು ಕೆಳಗಿಳಿಸಲು ಯಾರು ಪ್ರಯತ್ನ ಮಾಡಿದ್ದಾರೆ ಅಂತ ಸವದಿ ಹೇಳಲಿ ಎಂದು ಸವಾಲು ಹಾಕಿದರು.

ಇದಕ್ಕೂ ಮೊದಲು ಶಿರಾ ತಾಲೂಕು ಗೌಡಗೆರೆಯಲ್ಲಿ ಪಕ್ಷದ ಅಭ್ಯರ್ಥಿ ಜಯಚಂದ್ರ ಪರ ಪ್ರಚಾರ ಸಭೆಯಲ್ಲಿ ಮಾತನಾಡಿದ ಸಿದ್ದರಾಮಯ್ಯ, ನಾವು ಯಾರೂ ಈ ಚುನಾವಣೆಯನ್ನು ನಿರೀಕ್ಷೆ ಮಾಡಿರಲಿಲ್ಲ. ಆದರೆ ಸತ್ಯನಾರಾಯಣ ಅವರ ನಿಧನದಿಂದ ಅನಿವಾರ್ಯವಾಗಿ ಚುನಾವಣೆ ಬಂದಿದೆ ಎಂದರು.

ಕಳೆದ ಚುನಾವಣೆಯಲ್ಲಿ ಜಯಚಂದ್ರ ವಿರುದ್ಧ ಮಾಡಿದ ಅಪಪ್ರಚಾರದಿಂದ ಸೋಲು ಅನುಭವಿಸುವಂತಾಯಿತು. ಅವರು ಶಿರಾದಲ್ಲಿ ಈಗಲೂ ಕೆಲಸ ನಡೆಯುತ್ತಿದ್ದರೆ ಅದಕ್ಕೆ ಕಾರಣ ಜಯಚಂದ್ರ ಎಂದರು. ಭರ್ತಿ 2500 ಕೋಟಿ ರುಪಾಯಿ ಅನುದಾನ ತಂದು ಜಯಚಂದ್ರ ಅವರು ಚೆಕ್‌ ಡ್ಯಾಮ್‌, ಹೇಮಾವತಿ, ಭದ್ರ, ಎತ್ತಿನಹೊಳೆ, ಬಿಡ್ಜ್‌, ರಸ್ತೆಗಳನ್ನು ಮಾಡಿದ್ದಾರೆ. ಅಲ್ಲದೆ ವಿಧಾನಸಭೆಯಲ್ಲಿ ಇವರು ಪರಿಣಾಮಕಾರಿ ಶಾಸಕರಾಗಿದ್ದು ಶಿರಾ ಜನರ ಪರ ಮಾತನಾಡುವ ಶಕ್ತಿ ಯಾರಿಗಿದೆ ಎಂದರು.

ನಿಮ್ಮ ಪರ ಆ ಮಹಿಳೆಯಾಗಲಿ, ಆ ಡಾಕ್ಟರ್‌ ಆಗಲಿ ಮಾತನಾಡುತ್ತಾರಾ? ಆ ಡಾಕ್ಟರ್‌ ಇನ್ನು ರಾಜಕೀಯದಲ್ಲಿ ಕಣ್ಣು ಬಿಟ್ಟಿಲ್ಲ ಎಂದರು. ಶಿರಾ ಕ್ಷೇತ್ರದ ಸಮಸ್ಯೆ ತಿಳಿದಿರುವುದು ಜಯಚಂದ್ರಗೆ ಮಾತ್ರ ಆಗಿರುವ ಕೆಲಸ ಯಾವುದು, ಬಾಕಿ ಇರುವ ಕೆಲಸ ಯಾವುದು ಎಂಬುದು ನಿಖರವಾಗಿ ಗೊತ್ತಿರುವುದು. ಹೀಗಾಗಿ ಅವರನ್ನು ಬೆಂಬಲಿಸಿ ಎಂದರು. ನಮ್ಮ ಪಕ್ಷ ಅಧಿಕಾರಕ್ಕೆ ಬಂದರೆ 10 ಅಕ್ಕಿ ಕೊಡುತ್ತೀವಿ. ಸೋನಾ ಮಸೂರಿ ಅಕ್ಕಿ ಬೇಕಾದರೆ ಜಯಚಂದ್ರಗೆ ಮತ ಹಾಕಬೇಕು ಎಂದರು.