ನವದೆಹಲಿ(ಅ.24): ದೇಶದ ಸರ್ಕಾರಿ ಎಂಜಿನಿಯರಿಂಗ್‌ ಮತ್ತು ಆರ್ಕಿಟೆಕ್ಚರ್‌ ಪದವಿ ಕೋರ್ಸ್‌ಗಳ ಪ್ರವೇಶಕ್ಕಾಗಿ ನಡೆಸುವ ಜೆಇಇ (ಜಂಟಿ ಪ್ರವೇಶ ಪರೀಕ್ಷೆ) ಪರೀಕ್ಷೆಗಳನ್ನು ಇನ್ನು ಮುಂದೆ ಕನ್ನಡದಲ್ಲೂ ಬರೆಯಬಹುದು. ಇದರಿಂದಾಗಿ ಇಂಗ್ಲಿಷ್‌ ಅಥವಾ ಹಿಂದಿಯಲ್ಲಿ ಪರೀಕ್ಷೆ ಬರೆಯಲು ಸಮಸ್ಯೆ ಎದುರಿಸುವವರಿಗೆ ಭಾರಿ ಅನುಕೂಲವಾಗಲಿದೆ.

ಇಂಗ್ಲಿಷ್‌, ಹಿಂದಿ ಹಾಗೂ ಗುಜರಾತಿಯಲ್ಲಿ ಮಾತ್ರ ಜೆಇಇ ಪರೀಕ್ಷೆ ಬರೆಯಲು ಹಾಲಿ ಅವಕಾಶವಿದ್ದು, 2021ರ ಜನವರಿಯಿಂದ ಹೊಸದಾಗಿ ಕನ್ನಡ ಸೇರಿ 8 ಭಾಷೆಗಳಿಗೆ ಅವಕಾಶ ನೀಡುವಂತೆ ಪರೀಕ್ಷೆ ನಡೆಸುವ ರಾಷ್ಟ್ರೀಯ ಪರೀಕ್ಷಾ ಸಂಸ್ಥೆಗೆ ಕೇಂದ್ರ ಮಾನವ ಸಂಪನ್ಮೂಲ ಸಚಿವಾಲಯ ಸೂಚನೆ ನೀಡಿದೆ. ಹೀಗಾಗಿ ಕನ್ನಡ, ಅಸ್ಸಾಮಿ, ಬಂಗಾಳಿ, ಇಂಗ್ಲಿಷ್‌, ಗುಜರಾತಿ, ಹಿಂದಿ, ಮರಾಠಿ, ಒಡಿಯಾ, ತಮಿಳು, ತೆಲುಗು ಹಾಗೂ ಉರ್ದುವಿನಲ್ಲಿ ಇನ್ನು ವಿದ್ಯಾರ್ಥಿಗಳು ಪರೀಕ್ಷೆ ಬರೆಯಬಹುದಾಗಿದೆ.

ಎನ್‌ಐಟಿ, ಐಐಐಟಿ ಹಾಗೂ ಇನ್ನಿತರೆ ಸರ್ಕಾರಿ ಅನುದಾನಿತ ತಾಂತ್ರಿಕ ಕಾಲೇಜುಗಳ ಪ್ರವೇಶಕ್ಕೆ ಜೆಇಇ ನಡೆಸಲಾಗುತ್ತದೆ. ಐಐಟಿಗಳ ಪ್ರವೇಶಕ್ಕಾಗಿ ನಡೆಸಲಾಗುವ ಜೆಇಇ (ಅಡ್ವಾನ್ಸ್‌$್ಡ)ಗೂ ಇದು ಅರ್ಹತಾ ಪರೀಕ್ಷೆಯಾಗಿದೆ.

ಈ ಹಿಂದೆ ಸಿಬಿಎಸ್‌ಇ ಸಂಸ್ಥೆಯೇ ಜೆಇಇ ನಡೆಸುತ್ತಿತ್ತು. ಇದೀಗ ಈ ಕಂಪ್ಯೂಟರ್‌ ಆಧರಿತ ಪರೀಕ್ಷೆ ನಡೆಸುವ ಹೊಣೆಗಾರಿಕೆ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ ಹೆಗಲಿಗೇರಿದೆ. ಗುಜರಾತಿ ಭಾಷೆಯಲ್ಲಿ ಪರೀಕ್ಷೆ ಬರೆಯಲು ಅವಕಾಶ ನೀಡಿದ್ದು ಇತ್ತೀಚೆಗೆ ವಿವಾದಕ್ಕೂ ಕಾರಣವಾಗಿತ್ತು. ಇತರೆ ಭಾಷೆ ಬಿಟ್ಟು ಗುಜರಾತಿಯನ್ನು ಮಾತ್ರವೇ ಸೇರ್ಪಡೆ ಮಾಡಿಕೊಂಡಿದ್ದೇಕೆ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಪ್ರಶ್ನಿಸಿದ್ದರು. ಗುಜರಾತ್‌ನಿಂದ ಕೋರಿಕೆ ಬಂದ ಹಿನ್ನೆಲೆಯಲ್ಲಿ ಸೇರ್ಪಡೆ ಮಾಡಿಕೊಳ್ಳಲಾಗಿದೆ ಎಂದು ಸರ್ಕಾರ ತಿಳಿಸಿತ್ತು. ಬಳಿಕ ಬಂಗಾಳಿಯನ್ನೂ ಸೇರ್ಪಡೆ ಮಾಡುವಂತೆ ಮಮತಾ ಪತ್ರ ಬರೆದಿದ್ದರು.