Asianet Suvarna News Asianet Suvarna News

ಅರ್ಧ ವರ್ಷ ಕಳೆದರೂ ಶಾಲೆಗಳಿಗಿಲ್ಲ ಕನ್ನಡ ಪುಸ್ತಕ..!

ಸಿಬಿಎಸ್‌ಇ, ಐಸಿಎಸ್‌ಇ ಶಾಲೆಗಳಿಗೆ ಸರ್ಕಾರ ಕನ್ನಡ ಪಠ್ಯ ನೀಡಿಲ್ಲ, ಅನುದಾನಿತ, ಅನುದಾನರಹಿತ ಖಾಸಗಿ ಶಾಲೆಗಳಿಗೂ ಪುಸ್ತಕ ಬಂದಿಲ್ಲ

Schools Still do Not Have Kannada Books in Karnataka grg
Author
First Published Nov 6, 2022, 8:00 AM IST

ಬೆಂಗಳೂರು(ನ.06):  ಕರುನಾಡು ರಾಜ್ಯೋತ್ಸವದ ಸಂಭ್ರಮದಲ್ಲಿದೆ. ಆದರೆ, ರಾಜ್ಯ ಶಿಕ್ಷಣ ಇಲಾಖೆ ವಿದ್ಯಾರ್ಥಿ ಜೀವನದ ಅತಿ ಪ್ರಮುಖ ಘಟ್ಟ ಎನಿಸಿದ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಇನ್ನೂ ಕನ್ನಡ ಪಠ್ಯ ಪೂರೈಸದೆ ನಿರ್ಲಕ್ಷ್ಯ ತೋರಿದೆ. ಅಷ್ಟೇ ಅಲ್ಲ, ಸಿಬಿಎಸ್‌ಇ ಹಾಗೂ ಐಸಿಎಸ್‌ಇ ಶಾಲೆಗಳಿಗೆ ರಾಜ್ಯ ಸರ್ಕಾರ ನೀಡುವ ಕನ್ನಡ ಭಾಷಾ ಪುಸ್ತಕಗಳನ್ನು ಕೂಡ ಪೂರೈಸಿಲ್ಲ.

ರಾಜ್ಯದ ಬಹುತೇಕ ಅನುದಾನಿತ ಹಾಗೂ ಅನುದಾನ ರಹಿತ ಖಾಸಗಿ ಶಾಲೆಗಳಿಗೆ ಶಿಕ್ಷಣ ಇಲಾಖೆಯು ಇನ್ನೂ ಕೂಡ ಸಮರ್ಪಕವಾಗಿ ಪಠ್ಯಪುಸ್ತಕಗಳನ್ನು ಪೂರೈಸಿಲ್ಲ. ಬೆಂಗಳೂರು ಉತ್ತರ, ದಕ್ಷಿಣ, ಬೆಂಗಳೂರು ಗ್ರಾಮಾಂತರ, ಕೋಲಾರ, ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ, ತುಮಕೂರು ಜಿಲ್ಲೆಯ ಪಾವಗಡ ತಾಲ್ಲೂಕು ಸೇರಿದಂತೆ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಹಲವು ಖಾಸಗಿ ಶಾಲೆಗಳಿಗೆ ಪಠ್ಯಪುಸ್ತಕಗಳು ಪೂರ್ಣ ಪ್ರಮಾಣದಲ್ಲಿ ತಲುಪಿಲ್ಲ ಎಂದು ವಿವಿಧ ಖಾಸಗಿ ಶಾಲಾ ಸಂಘಟನೆಗಳು ಹಾಗೂ ಆಡಳಿತ ಮಂಡಳಿಗಳ ಸಂಘದ ಪ್ರತಿನಿಧಿಗಳು ಆರೋಪಿಸಿದ್ದಾರೆ.

ಸರ್ಕಾರಿ ಶಾಲೆಗಳಲ್ಲಿನ್ನು ತಿಂಗಳಲ್ಲಿ ಒಂದು ಶನಿವಾರ ಬ್ಯಾಗ್‌ ಇರಲ್ಲ

ಅಲ್ಲದೆ, ಸಿಬಿಎಸ್‌ಇ, ಐಸಿಎಸ್‌ಇ ಶಾಲೆಗಳಿಗೆ ರಾಜ್ಯ ಸರ್ಕಾರ ನೀಡುವ ಒಂದೇ ಪುಸ್ತಕ ಅದು ಕನ್ನಡ ಭಾಷಾ ಪುಸ್ತಕ. ಅದನ್ನೂ ಕೂಡ ಈವರೆಗೆ ಪೂರೈಕೆ ಮಾಡಿಲ್ಲ ಎಂದು ಆಪಾದಿಸಲಾಗಿದೆ. ಮಾಹಿತಿ ಪ್ರಕಾರ, ಹತ್ತನೆ ತರಗತಿಯ ಕನ್ನಡ ಪಠ್ಯ ಹಾಗೂ 5, 6ನೇ ತರಗತಿಗಳ ಸಮಾಜ ವಿಜ್ಞಾನ ಪಠ್ಯ ಸೇರಿದಂತೆ ಇನ್ನೂ ಹಲವು ತರಗತಿಗಳ ಬೇರೆ ಬೇರೆ ಪಠ್ಯಪುಸ್ತಕಗಳನ್ನು ನೀಡಲಾಗಿಲ್ಲ.

ಸಮಯಕ್ಕೆ ಸರಿಯಾಗಿ ಇಂಡೆಂಟ್‌ ಸಲ್ಲಿಸಿದರೂ ನಾಲ್ಕು ಬಾರಿ ಇಲಾಖೆ ತಿರಸ್ಕರಿಸಿತ್ತು. ಬಳಿಕ ಸ್ವೀಕರಿಸಲಾಗಿತ್ತು. ಅದರಂತೆ ಇಲಾಖೆ ಇದುವರೆಗೂ ನಮಗೆ ಸರಿಯಾಗಿ ಪಠ್ಯಪುಸ್ತಕಗಳನ್ನು ಸರಬರಾಜು ಮಾಡಿಲ್ಲ. ಇಲಾಖಾ ಅಧಿಕಾರಿಗಳನ್ನು ಕೇಳಿದರೆ ಇಂಡೆಂಟ್‌ ನೀಡಿರುವ ಎಲ್ಲರಿಗೂ ಪುಸ್ತಕಗಳನ್ನು ಪೂರೈಸಲಾಗಿದೆ ಎಂದು ಆನ್‌ಲೈನ್‌ನಲ್ಲಿ ಪುಸ್ತಕ ಬಿಡುಗಡೆಯಾಗಿರುವ ಮಾಹಿತಿ ತೋರಿಸುತ್ತಾರೆ. ಆದರೆ, ಸ್ಥಳೀಯ ಮಟ್ಟದಲ್ಲಿ ಬಿಇಒ, ಡಿಡಿಪಿಐಗಳು ಪುಸ್ತಕ ಬಂದಿಲ್ಲ. ತಡವಾಗಿ ಇಂಡೆಂಟ್‌ ಸಲ್ಲಿಸಿದ್ದೀರಿ ಎಂದು ಸಬೂಬು ಹೇಳುತ್ತಾರೆ. ಪರಿಣಾಮ ಹಣ ಕಟ್ಟಿದರೂ ಸಮಯಕ್ಕೆ ಸರಿಯಾಗಿ ನಮ್ಮ ಮಕ್ಕಳಿಗೆ ಪಠ್ಯಪುಸ್ತಕ ಸಿಗದೆ ಪರಿತಪಿಸುವಂತಾಗಿದೆ ಎಂದು ಆಡಳಿತ ಮಂಡಳಿಗಳಿಂದ ಆಕ್ರೋಶ ವ್ಯಕ್ತವಾಗುತ್ತಿದೆ.

ಈಗಾಗಲೇ ದಸರಾ ರಜೆ ಮುಗಿದು ಅರ್ಧ ವಾರ್ಷಿಕ ಪರೀಕ್ಷೆ (ಈಗಿನ ಸಂಕಲನಾತ್ಮಕ ಮಾದರಿ ಪರೀಕ್ಷೆ) ಮುಗಿದಿದೆ. ಮೂರು ತಿಂಗಳು ಕಳೆದರೆ ವಾರ್ಷಿಕ ಪರೀಕ್ಷೆ ಎದುರಾಗಲಿದೆ. ತಡವಾಗಿ ಇಂಡೆಂಟ್‌ ಹಾಕಿದರೂ ಕೂಡ ಪಠ್ಯ ಪುಸ್ತಕ ನೀಡುವುದು ಒಂದೆರಡು ತಿಂಗಳು ತಡವಾಗಬಹುದು. ಆದರೆ, ಅದನ್ನೇ ನೆಪ ಮಾಡಿಕೊಂಡು ಶೈಕ್ಷಣಿಕ ಅವಧಿ ಮುಗಿಯುವ ವೇಳೆಗೆ ಪಠ್ಯಪುಸ್ತಕ ನೀಡಿದರೆ ಏನು ಪ್ರಯೋಜನ. ಇದನ್ನು ಹಲವು ಬಾರಿ ಶಿಕ್ಷಣ ಸಚಿವರಿಗೆ, ಉನ್ನತ ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋನವಾಗಿಲ್ಲ ಎನ್ನುತ್ತಾರೆ ಖಾಸಗಿ ಶಾಲಾ ಸಂಘಟನೆಗಳ ಪ್ರತಿನಿಧಿಗಳು.

ಬಿಇಒ, ಡಿಡಿಪಿಐಗಳ ಆಟ!

ಬಿಇಒ, ಡಿಡಿಪಿಐಗಳು ಶಾಲೆಗಳಿಗೆ ಪಠ್ಯ ದೊರಕಿಸಿಕೊಡುವ ದಿಸೆಯಲ್ಲಿ ಯಾವುದೇ ಪ್ರಯತ್ನ ಮಾಡುತ್ತಿಲ್ಲ. ಈ ಬಗ್ಗೆ ಪ್ರಶ್ನಿಸಿದರೆ ಪಠ್ಯ ಬಂದಿಲ್ಲ ಎಂದು ಸುಳ್ಳು ಹೇಳುತ್ತಿದ್ದಾರೆ. ಅವರು ಆಡಳಿತ ಮಂಡಳಿಗಳಿಂದ ಬೇರೆ ಏನೋ ನಿರೀಕ್ಷಿಸುವಂತೆ ಕಾಣುತ್ತಿದೆ ಎಂದು ಕೆಲ ಆಡಳಿತ ಮಂಡಳಿ ಸದಸ್ಯರು ಅನುಮಾನ ವ್ಯಕ್ತಪಡಿಸಿದ್ದಾರೆ. ಇನ್ನು ಖಾಸಗಿ ಶಾಲೆಗಳಲ್ಲಿ ಆರ್‌ಟಿಇ ಕಾಯ್ದೆಯಡಿ ಪ್ರವೇಶ ಪಡೆದಿರುವ ಮಕ್ಕಳಿಗೆ ಇಲಾಖೆಯೇ ಉಚಿತವಾಗಿ ಪುಸ್ತಕ ನೀಡಬೇಕು. ಇದಕ್ಕೆ ಯಾವುದೇ ಇಂಡೆಂಟ್‌ ಹಾಕಬೇಕಿಲ್ಲ. ಆದರೆ, ಆ ಮಕ್ಕಳಿಗೂ ಇದುವರೆಗೆ ಪುಸ್ತಕ ನೀಡಿಲ್ಲ. ಅನಿವಾರ್ಯವಾಗಿ ಖಾಸಗಿ ಪಬ್ಲಿಕೇಷನ್‌ನವರು ಮುದ್ರಿಸಿರುವ ಪುಸ್ತಕಗಳನ್ನು ಪಡೆದು ಪಾಠ ಮಾಡುವಂತಾಗಿದೆ ಎಂದು ದೂರಿದ್ದಾರೆ.

ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೆ ಅಗತ್ಯ ತಯಾರಿ; ಶಿಕ್ಷಣ ಸಚಿವ ಬಿ.ಸಿ.ನಾಗೇಶ್

ಸರ್ಕಾರಿ ಪಠ್ಯಪುಸ್ತಕಗಳು ಮುಕ್ತ ಮಾರುಕಟ್ಟೆಯಲ್ಲಿ ಲಭ್ಯವಾಗುವಂತೆ ಮಾಡಿದರೆ ವಿದ್ಯಾರ್ಥಿಗಳಿಗೆ ಹೆಚ್ಚು ಪ್ರಯೋಜನವಾಗುತ್ತದೆ. ಸರ್ಕಾರಿ ಪಠ್ಯಪುಸ್ತಕಗಳ ಬೇಡಿಕೆ ಮತ್ತು ಸರಬರಾಜು ವಿಚಾರದಲ್ಲಿ ಇರುವ ಸಾಕಷ್ಟುಸಮಸ್ಯೆಗಳು ಇದರಿಂದ ಶಾಶ್ವತವಾಗಿ ದೂರವಾಗುತ್ತವೆ ಅಂತ ಅವರ್‌ ಸ್ಕೂಲ್ಸ್‌ ಖಾಸಗಿ ಶಾಲಾ ಸಂಘಟನೆ ಕಾರ್ಯದರ್ಶಿ ಎನ್‌.ಪ್ರಭಾಕರ್‌ ಅರಸ್‌ ಹೇಳಿದ್ದಾರೆ.  

ಸಮಯಕ್ಕೆ ಸರಿಯಾಗಿ ಪಠ್ಯಪುಸ್ತಕಕ್ಕೆ ಇಂಡೆಂಟ್‌ ಸಲ್ಲಿಸಿದ್ದ ಶಾಲೆಗಳಿಗೆ ಪಠ್ಯಪುಸ್ತಕಗಳ ಪೂರೈಕೆಯಾಗಿದೆ. ತಡವಾಗಿ ಇಂಡೆಂಟ್‌ ಸಲ್ಲಿಸಿದ್ದ ಶಾಲೆಗಳಿಗೆ ತಡವಾಗಿದೆ. ಇನ್ನು ಎರಡು ವಾರದಲ್ಲಿ ಪಠ್ಯಪುಸ್ತಕಗಳನ್ನು ಸರಬರಾಜು ಮಾಡಲಾಗುವುದು ಅಂತ ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತ ಡಾ.ಆರ್‌.ವಿಶಾಲ್‌ ತಿಳಿಸಿದ್ದಾರೆ.  
 

Follow Us:
Download App:
  • android
  • ios