ಅಪ್ರಾಪ್ತೆಯ ವಯಸ್ಸು ನಿರ್ಧಾರಕ್ಕೆ ಶಾಲೆ ದಾಖಲೆ ಸೂಕ್ತ: ಹೈಕೋರ್ಟ್
- ಅಪ್ರಾಪ್ತೆ ವಯಸ್ಸು ನಿರ್ಧರಿಸಲು ಶಾಲೆ ದಾಖಲೆಗೆ ಆದ್ಯತೆ
- ರೇಪ್ ಸಂತ್ರಸ್ತೆಯ ವಯಸ್ಸು ಅರಿಯಲು ವೈದ್ಯಕೀಯ ಅಭಿಪ್ರಾಯಕ್ಕಿಂತ ಶಾಲಾ ಪ್ರಮಾಣಪತ್ರಕ್ಕೆ ಪ್ರಾಮುಖ್ಯ
- ಹೈಕೋರ್ಚ್ ಅಭಿಪ್ರಾಯ
ಬೆಂಗಳೂರು (ನ.8) : ಅತ್ಯಾಚಾರ ಪ್ರಕರಣದಲ್ಲಿ ಸಂತ್ರಸ್ತೆಯಾಗಿರುವ ಅಪ್ರಾಪ್ತೆಯ ವಯಸ್ಸು ನಿರ್ಧರಿಸುವ ವಿಚಾರದಲ್ಲಿ ವೈದ್ಯರು ನೀಡಿದ ವೈದ್ಯಕೀಯ ಅಭಿಪ್ರಾಯಕ್ಕಿಂತ ಶಾಲಾ ಪ್ರಾಧಿಕಾರಗಳು ವಿತರಿಸಿದ ಪ್ರಮಾಣ ಪತ್ರ ಹೆಚ್ಚು ಪ್ರಾಮುಖ್ಯತೆ ಹೊಂದಿರುತ್ತದೆ ಎಂದು ಹೈಕೋರ್ಚ್ ಅಭಿಪ್ರಾಯಪಟ್ಟಿದೆ.
ಆ್ಯಪ್ ಆಟೋ ದರ ನಿಗದಿಗೆ 4 ವಾರ ಅವಕಾಶ; ಹೈಕೋರ್ಟ್ ಸಮ್ಮತಿ
15 ವರ್ಷದ ಅಪ್ರಾಪ್ತೆ ಮೇಲೆ ಅತ್ಯಾಚಾರ ಎಸಗಿದ ಆರೋಪಿ ಕಲಬುರಗಿ ಕೇರೂರ ತಾಲೂಕಿನ ನಿವಾಸಿ ಶರಣು (34) ಎಂಬಾತನನ್ನು ಖುಲಾಸೆಗೊಳಿಸಿದ ವಿಚಾರಣಾ ನ್ಯಾಯಾಲಯದ ತೀರ್ಪು ಪ್ರಶ್ನಿಸಿ ಸರ್ಕಾರ ಸಲ್ಲಿಸಿರುವ ಕ್ರಿಮಿನಲ್ ಮೇಲ್ಮನವಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಡಾ.ಎಚ್.ಬಿ. ಪ್ರಭಾಕರ ಶಾಸ್ತ್ರಿ ಅವರ ನೇತೃತ್ವದ ನ್ಯಾಯಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿದೆ.
ಘಟನೆ ನಡೆದಾಗ ಸಂತ್ರಸ್ತೆ ವಯಸ್ಕಳಾಗಿದ್ದಳು ಎಂಬ ಆರೋಪಿಯ ವಾದಕ್ಕೆ ಪ್ರತಿಕ್ರಿಯಿಸಿರುವ ನ್ಯಾಯಪೀಠ, ಮೆಟ್ರಿಕ್ಯುಲೇಷನ್ ಅಥವಾ ಅದಕ್ಕೆ ಸಮಾನವಾದ ಪ್ರಮಾಣ ಪತ್ರ ಅಥವಾ ಶಾಲೆ, ನಗರ ಪಾಲಿಕೆ, ಪೌರಾಡಳಿತ ಪ್ರಾಧಿಕಾರ ಅಥವಾ ಪಂಚಾಯಿತಿ ನೀಡುವ ಜನನ ಪ್ರಮಾಣ ಪತ್ರ ಲಭ್ಯವಿಲ್ಲದ ಸಂದರ್ಭದಲ್ಲಿ ಅಪ್ರಾಪ್ತರ ಅಥವಾ ಮಕ್ಕಳ ವಯಸ್ಸು ನಿರ್ಧರಿಸಲು ವೈದ್ಯಕೀಯ ಅಭಿಪ್ರಾಯ ಕೋರಲಾಗುತ್ತದೆ ಎಂದು ನ್ಯಾಯಪೀಠ ತಿಳಿಸಿದೆ.
ಆಸ್ಪತ್ರೆಯ ವೈದ್ಯಕೀಯ ದಾಖಲೆಗಳಲ್ಲಿ ಆಕೆ ನಮೂದಿಸಿರುವ ಹೆಸರು ಹಾಗೂ ವಯಸ್ಸನ್ನು ಸತ್ಯ ಎಂಬುದಾಗಿ ಒಪ್ಪಬೇಕು, ವಯಸ್ಸು ನಿರ್ಧರಿಸಲು ಅದೊಂದೇ ಆಧಾರವಾಗಿದೆ ಎಂದು ಆರೋಪಿ ಹೇಳುತ್ತಾನೆ. ಆದರೆ, ಸಂತ್ರಸ್ತೆ 8ನೇ ತರಗತಿಯವರೆಗೆ ಓದಿದ್ದಾರೆ. ತನ್ನ ಸಾಕ್ಷ್ಯದಲ್ಲಿ ಜನ್ಮ ದಿನಾಂಕದ ಬಗ್ಗೆ ಮಾಹಿತಿ ನೀಡದಿದ್ದರೂ ವಿಚಾರಣಾ ನ್ಯಾಯಾಲಯದಲ್ಲಿ ತಾನು ಅಪ್ರಾಪ್ತೆಯೆಂಬುದಾಗಿ ಸ್ವತಃ ತಿಳಿಸಿದ್ದಾರೆ. ಘಟನೆ ನಡೆದಾಗ ತಾನು ವಯಸ್ಕಳಾಗಿದ್ದೆ ಎಂಬ ಸಂಗತಿಯನ್ನು ಸ್ಪಷ್ಟವಾಗಿ ನಿರಾಕರಿಸಿದ್ದಾಳೆ ಎಂದು ನ್ಯಾಯಪೀಠ ನುಡಿದಿದೆ.
ಅಲ್ಲದೆ, ಸಂತ್ರಸ್ತೆ ಓದಿದ ಶಾಲೆಯ ಮುಖ್ಯೋಪಾಧ್ಯಾಯರು ನೀಡಿರುವ ಪ್ರಮಾಣ ಪತ್ರದಲ್ಲಿ ಸಂತ್ರಸ್ತೆಯೇ ತನ್ನ ಜನನ ದಿನಾಂಕದ ಬಗ್ಗೆ ಸರಿಯಾದ ಮಾಹಿತಿ ನೀಡಿಲ್ಲ ಎಂಬುದನ್ನು ಸಂಶಯ ಪಡಲಾಗದು. ವೈದ್ಯಕೀಯ ದಾಖಲೆಗಳಿಂತ ಶಾಲಾ ಪ್ರಾಧಿಕಾರವು ನೀಡಿರುವ ಪ್ರಮಾಣಪತ್ರವು ಹೆಚ್ಚಿನ ಆದ್ಯತೆ ಹೊಂದಿರುತ್ತದೆ ಎಂದು ತಿಳಿಸಿದ ನ್ಯಾಯಪೀಠ, ವಿಚಾರಣಾ ನ್ಯಾಯಾಲಯದ ಆದೇಶ ರದ್ದುಪಡಿಸಿ, ಆರೋಪಿಗೆ ಏಳು ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ಮತ್ತು 20 ಸಾವಿರ ರು. ದಂಡ ವಿಧಿಸಿದೆ.
ಪ್ರಕರಣದ ವಿವರ:
ವಿವಾಹಿತ ವ್ಯಕ್ತಿಯೊಬ್ಬ ತನ್ನದೇ ಗ್ರಾಮದ ಅಪ್ರಾಪ್ತೆ ಮೇಲೆ ಹಲವು ಬಾರಿ ಅತ್ಯಾಚಾರ ನಡೆಸಿದ್ದ ಹಾಗೂ ಘಟನೆ ಬಹಿರಂಗ ಪಡಿಸದಂತೆ ಬೆದರಿಕೆ ಹಾಕಿದ್ದ. ಸಂತ್ರಸ್ತೆ ಗರ್ಭಿಣಿಯಾದಾಗ ಘಟನೆ ಬಹಿರಂಗವಾಗಿತ್ತು. ಇದರಿಂದ ಸಂತ್ರಸ್ತೆ ಪೋಷಕರು ಅತ್ಯಾಚಾರ, ಬೆದರಿಕೆ ಮತ್ತು ಮನೆ ಅತಿಕ್ರಮ ಪ್ರವೇಶ ಆರೋಪ ಸಂಬಂಧ ದೂರು ದಾಖಲಿಸಿದ್ದರು. ಸ್ಥಳೀಯ ಪೋಕ್ಸೋ ನ್ಯಾಯಾಲಯ ಆರೋಪಿಯನ್ನು ಖುಲಾಸೆಗೊಳಿಸಿದ್ದ ಆದೇಶ ರದ್ದು ಕೋರಿ ಸರ್ಕಾರ ಹೈಕೋರ್ಚ್‌ಗೆ ಮೇಲ್ಮನವಿ ಸಲ್ಲಿಸಿತ್ತು. ಆರೋಪಿಯ ಪರ ವಕೀಲರು, ಆರೋಪಿಯು ಸಂತ್ರಸ್ತೆಯ ಸಮ್ಮತಿಯೊಂದಿಗೆ ಲೈಂಗಿಕ ಸಂಪರ್ಕ ಬೆಳೆಸಿದ್ದಾನೆ. ಘಟನೆ ನಡೆದಾಗ ಸಂತ್ರಸ್ತೆ ವಯಸ್ಕಳಾಗಿದ್ದಳು. ತನ್ನ ವಯಸ್ಸು 19 ವರ್ಷ ಎಂದು ಸಂತ್ರಸ್ತೆ ಹೇಳಿಕೆ ನೀಡಿರುವುದಾಗಿ ಸಂತ್ರಸ್ತೆಯ ವೈದ್ಯಕೀಯ ತಪಾಸಣೆ ನಡೆಸಿರುವ ವೈದ್ಯರು ದೃಢಪಡಿಸಿದ್ದಾರೆ ಎಂದು ತಿಳಿಸಿದ್ದರು.
ಕೈ ಬರಹದ ಪೊಲೀಸ್ ದಾಖಲೆ ಇನ್ನು ಸ್ವೀಕರಿಸಲ್ಲ: ಹೈಕೋರ್ಟ್
ಸರ್ಕಾರಿ ಅಭಿಯೋಜಕರು, ಘಟನೆ ನಡೆದಾಗ ಸಂತ್ರಸ್ತೆ ಅಪ್ರಾಪ್ತಳಾಗಿದ್ದಳು. ಸಂತ್ರಸ್ತೆ ಸಮ್ಮತಿ ನೀಡಿದ್ದರೆ, ಅದು ಕಾನೂನಿನಡಿ ಮಾನ್ಯವಾಗುವುದಿಲ್ಲ ಎಂದು ತಿಳಿಸಿದ್ದರು.