ಸೋಮವಾರಪೇಟೆಯಲ್ಲಿ ನಿರ್ಮಿಸಲು ಉದ್ದೇಶಿಸಿರುವ ಹಿಂದೂ ಮಲಯಾಳಿ ಸಮಾಜ ಭವನ ನಿರ್ಮಾಣಕ್ಕೆ 50 ಲಕ್ಷ ರು. ಅನುದಾನ ಸಹಾಯ ನೀಡುವ ಭರವಸೆ ನೀಡಿದ ಸಚಿವ ಕೋಟ ಶ್ರೀನಿವಾಸ ಪೂಜಾರಿ 

ಸೋಮವಾರಪೇಟೆ(ಅ.10): ರಾಜ್ಯ ಸರ್ಕಾರ ರಾಜ್ಯದ ನಾಲ್ಕು ಕಡೆಗಳಲ್ಲಿ ನಾರಾಯಣಗುರುಗಳ ಹೆಸರಿನಲ್ಲಿ ತಲಾ 25 ಕೋಟಿ ರು. ವೆಚ್ಚದಲ್ಲಿ 4 ಶಾಲೆಗಳ ನಿರ್ಮಾಣಕ್ಕೆ ಮುಂಗಡಪತ್ರದಲ್ಲಿ ಘೋಷಣೆ ಮಾಡಿದೆ. ಇಂದಿನ ಸರ್ಕಾರ ಕೂಲಿ ಕಾರ್ಮಿಕರ ಮಕ್ಕಳು ಉನ್ನತ ಹುದ್ದೆಯನ್ನು ಪಡೆಯುವಂತಹ ಅವಕಾಶ ನೀಡಿದೆ. ಸರ್ಕಾರದ ಯೋಜನೆಗಳು ಕೂಡ ಬಡವರ್ಗದ ಜನರ ಮನೆ ಬಾಗಿಲಿಗೆ ತಲುಪುತ್ತಿವೆ ಎಂದು ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.

ಹಿಂದೂ ಮಲಯಾಳಿ ಸಮಾಜದ ವತಿಯಿಂದ ಇಲ್ಲಿನ ಒಕ್ಕಲಿಗರ ಸಮುದಾಯ ಭವನದಲ್ಲಿ ಭಾನುವಾರ ನಡೆದ ಓಣಂ ಉತ್ಸವದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಸೋಮವಾರಪೇಟೆಯಲ್ಲಿ ನಿರ್ಮಿಸಲು ಉದ್ದೇಶಿಸಿರುವ ಹಿಂದೂ ಮಲಯಾಳಿ ಸಮಾಜ ಭವನ ನಿರ್ಮಾಣಕ್ಕೆ 50 ಲಕ್ಷ ರು. ಅನುದಾನ ಸಹಾಯ ನೀಡುವ ಭರವಸೆ ನೀಡಿದರು.

5, 8ನೇ ತರಗತಿಗೆ ಪಬ್ಲಿಕ್‌ ಪರೀಕ್ಷೆ ಪ್ರಸ್ತಾವನೆ ಕೈಬಿಡಲು ರುಪ್ಸಾ, ಎಐಡಿಎಸ್‌ಒ ಆಗ್ರಹ

ದಿವ್ಯ ಸಾನ್ನಿಧ್ಯ ವಹಿಸಿದ್ದ ಸೋಲೂರು ಆರ್ಯ ಈಡಿಗ ಮಠದ ಪೀಠಾಧ್ಯಕ್ಷ ವಿಖ್ಯಾತನಂದ ಸ್ವಾಮೀಜಿ ಹಾಗೂ ಕಾಂಞಂಗಾಡ್‌ ಗೃಹಸ್ಥಾಶ್ರಮದ ಗಂಗಾಜೀ ನಾಯರ್‌ ಆಶೀರ್ವಚನ ನೀಡಿದರು. ಹಿಂದೂ ಮಲಯಾಳಿ ಸಮಾಜ ಅಧ್ಯಕ್ಷ ವಿ.ಎಂ. ವಿಜಯ ಅಧ್ಯಕ್ಷತೆವಹಿಸಿ, ಯಾವುದೇ ಸಮಾಜ ಅಭಿವೃದ್ಧಿ ಹೊಂದಬೇಕಾದರೆ ನಾವು ಶೈಕ್ಷಣಿಕವಾಗಿ ಮುಂದೆ ಬರಬೇಕು ಎಂದರು.

ಮಡಿಕೇರಿ ಶಾಸಕ ಅಪ್ಪಚ್ಚು ರಂಜನ್‌, ವೀರಾಜಪೇಟೆ ಶಾಸಕ ಕೆ.ಜಿ.ಬೋಪಯ್ಯ, ಮಾಜಿ ಸಚಿವ ಬಿ.ಎ. ಜೀವಿಜಯ, ಹಿರಿಯ ವಕೀಲ ಎಚ್‌.ಎಸ್‌. ಚಂದ್ರಮೌಳಿ, ಕಾಂಗ್ರೆಸ್‌ ಮುಖಂಡ ಡಾ. ಮಂಥರ್‌ ಗೌಡ. ಓಣಂ ಉತ್ಸವ ಸಮಿತಿ ಅಧ್ಯಕ್ಷ ಪಿ.ಡಿ. ಪ್ರಕಾಶ್‌ ಮಾತನಾಡಿದರು.

ಸಮಾಜದ ಮುಖಂಡರಾದ ಕೆ.ಎಸ್‌. ರಮೇಶ್‌, ವಿ.ಕೆ. ಲೋಕೇಶ್‌, ಡಾ.ಸಿ.ಆರ್‌. ಉದಯ ಕುಮಾರ್‌, ಜೆಡಿಎಸ್‌ ಮುಖಂಡ ಎಚ್‌.ಆರ್‌. ಸುರೇಶ್‌, ಡಿಸಿಸಿ ಬ್ಯಾಂಕ್‌ ನಿರ್ದೇಶಕ ಭರತ್‌ಕುಮಾರ್‌ ಮತ್ತಿತರರು ಇದ್ದರು. ಸಮಾಜದ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಡಾ. ಪುಟ್ಟರಾಜು, ಕೃಷಿ ವಿಜ್ಞಾನಿ ಎ.ಡಿ. ಮೋಹನ್‌ ಕುಮಾರ್‌, ಶಿಲ್ಪ ಕಲೆಯ ಸಾಧಕ ಅನೀಶ್‌, ಶೈಕ್ಷಣಿಕ ಕ್ಷೇತ್ರದ ಸಾಧನೆಗಾಗಿ ವೈಶಾಖ್‌, ಯಕ್ಷಿತ್‌, ಸ್ನೇಹಾ, ಜೀವನ್‌ ಅವರನ್ನು ಸನ್ಮಾನಿಸಲಾಯಿತು. ಹತ್ತನೇ ತರಗತಿ, ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಸಭಾ ಕಾರ್ಯಕ್ರಮಕ್ಕೆ ಮುನ್ನ ಪಟ್ಟಣದ ಮುಖ್ಯ ಬೀದಿಗಳಲ್ಲಿ ಸಿಂಗಾರಿ ಮೇಳದೊಂದಿಗೆ ಮೆರವಣಿಗೆ ನಡೆಯಿತು.