ಬೀದರ್: ಶಾಲಾ ಕೋಣೆ ಕುಸಿತ, ತಪ್ಪಿದ ಭಾರೀ ಅನಾಹುತ
ಔರಾದ್ ತಾಲೂಕಿನ ಕರಂಜಿ (ಬಿ) ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯ ಕೋಣೆಯ ಛಾವಣಿಯಲ್ಲಿ ನೀರು ನಿಂತು ಕುಸಿದು, ಅದಕ್ಕೆ ಹೊಂದಿಕೊಂಡಿದ್ದ ಒಂದು ಭಾಗದ ಗೋಡೆಯೂ ನೆಲಕ್ಕುರುಳಿದೆ
ಬೀದರ್(ಜು.15): ನೂರಾರು ಪುಟ್ಟಮಕ್ಕಳು ವಿದ್ಯಾಭ್ಯಾಸ ಮಾಡುವ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯ ಕೋಣೆಯೊಂದು ಶಾಲೆ ಬುಧವಾರ ತಡ ರಾತ್ರಿ ಛಾವಣಿ ಕುಸಿದು ಬಿದ್ದಿದ್ದು, ರಾತ್ರಿ ಸಮಯ ಅವಘಡ ಸಂಭವಿಸಿದ್ದರಿಂದ ಭಾರೀ ಅನಾಹುತವೊಂದು ತಪ್ಪಿದೆ. ಔರಾದ್ ತಾಲೂಕಿನ ಕರಂಜಿ (ಬಿ) ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯ ಕೋಣೆಯ ಛಾವಣಿಯಲ್ಲಿ ನೀರು ನಿಂತು ಕುಸಿದು, ಅದಕ್ಕೆ ಹೊಂದಿಕೊಂಡಿದ್ದ ಒಂದು ಭಾಗದ ಗೋಡೆಯೂ ನೆಲಕ್ಕುರುಳಿದೆ. ಕಳೆದ ಒಂದು ವಾರದಿಂದ ಸುರಿಯುತ್ತಿರುವ ನಿರಂತರ ಮಳೆಯಿಂದಾಗಿ ಧರೆಗುರುಳಿರುವ ಈ ಶಾಲಾ ಕೋಣೆಯು ಒಂದೂವರೆ ದಶಕದ ಹಿಂದಷ್ಟೇ ನಿರ್ಮಾಣವಾಗಿತ್ತು.
ಜಿಲ್ಲೆಯಾದ್ಯಂತ ನೂರಾರು ಇಂಥ ಶಾಲಾ ಕೋಣೆಗಳಿದ್ದು ಕುಸಿತದ ಆತಂಕದಲ್ಲಿಯೇ ವಿದ್ಯಾರ್ಥಿಗಳಷ್ಟೇ ಅಲ್ಲ ಶಿಕ್ಷಕರೂ ದಿನಗಳನ್ನು ಕಳೆಯುತ್ತಿದ್ದಾರೆ. ಅದೃಷ್ಟವಶಾತ್ ಈ ಶಾಲೆಯ ಕೋಣೆ ತಡರಾತ್ರಿ ನೆಲಕ್ಕುರುಳಿದ್ದರಿಂದ ಯಾವುದೇ ಅನಾಹುತ ಸಂಭವಿಸಿಲ್ಲ.
ಅನುಮತಿ ಇಲ್ಲದೆ ನಕಲಿ ಶಾಲೆ, ಆರ್ಕಿಡ್ ದಿ ಇಂಟರ್ ನ್ಯಾಷನಲ್ ವಿರುದ್ಧ ಕೇಸ್
ನಿಮ್ಮ ಹೊಸದಾಗಿ ನಿರ್ಮಿಸಿದ ಮನೆ 14 ವರ್ಷದಲ್ಲಿ ಬೀಳಲು ಸಾಧ್ಯನಾ ಎಂದು ಪ್ರಶ್ನಿಸಿರುವ ಗ್ರಾಮಸ್ಥರು, ಕಳಪೆ ಕಾಮಗಾರಿ ನಡೆದಿದ್ದರೂ ಮೌನವಾಗಿರುವ ಅಧಿಕಾರಿಗಳ ಮತ್ತು ಜನಪತ್ರಿನಿಧಿಗಳ ಕಾರ್ಯವೈಖರಿಯನ್ನು ಪ್ರಶ್ನಿಸಿದ್ದಾರೆ. ಶಾಲೆಯಲ್ಲಿ ಅಭ್ಯಶಿಸುತ್ತಿರುವ 150 ಮಕ್ಕಳ ಪ್ರಾಣದ ಜೊತೆ ಚೆಲ್ಲಾಟವಾಡಿದ್ದಾರೆ ಎಂದು ಗ್ರಾಮಸ್ಥರು ಆಕೊ›ೕಶ ವ್ಯಕ್ತಪಡಿಸಿದ್ದಾರೆ.
ಇನ್ನು ಕಳೆದ 2007-08ನೇ ಶೈಕ್ಷಣಿಕ ಸಾಲಿನಲ್ಲಿ ಸರ್ವ ಶಿಕ್ಷಣ ಅಭಿಯಾನ ಯೋಜನೆಯಡಿ ನಿರ್ಮಾಣವಾದ ಕೋಣೆಯು ನಿರಂತರ ಎರಡು ಮೂರು ವರ್ಷಗಳಿಂದ ಬಳಕೆ ಮಾಡುತ್ತಿರಲಿಲ್ಲ. ಅದನ್ನು ಶಾಲೆಯಲ್ಲಿನ ಅನಗತ್ಯ ವಸ್ತುಗಳ ದಾಸ್ತಾನಿಗೆ ಮಾತ್ರ ಬಳಸುತ್ತಿದ್ದು, ಯಾವ ರೀತಿಯಲ್ಲಿಯೂ ಹಾನಿಯಾಗಿಲ್ಲ ಎಂದು ಮುಖ್ಯ ಶಿಕ್ಷಕ ನಾಗರೆಡ್ಡಿ ಸ್ಪಷ್ಟಪಡಿಸಿದ್ದಾರೆ.
1500 ಮಾದರಿ ಸರ್ಕಾರಿ ಶಾಲೆಗಳ ಅಭಿವೃದ್ಧಿ: ಸಚಿವ ನಾಗೇಶ್
ಇಲಾಖಾ ಅಧಿಕಾರಿ ಗೋವಿಂದ ಪಾಟೀಲ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದು ನಂತರ ಕುಸಿಯದಿರುವ ಅರ್ಧ ಗೋಡೆಯನ್ನೂ ಜೆಸಿಬಿ ಮೂಲಕ ನೆಲಸಮಗೊಳಿಸಿದರೆ ಅಂತಹ ಅಪಾಯದ ಮಟ್ಟದಲ್ಲಿರುವ ಕಟ್ಟಡದಲ್ಲಿ ಮಕ್ಕಳನ್ನು ಕೂಡಿಸಬಾರದು ಎಂದು ಎಲ್ಲ ಶಾಲೆ ಮುಖ್ಯ ಶಿಕ್ಷಕರಿಗೆ ಕ್ಷೇತ್ರ ಶಿಕ್ಷಣಾಧಿಕಾರಿ ಎಚ್.ಎಸ್. ನಾಗನೂರ ಇದೀಗ ಆದೇಶಿಸಿದ್ದಾರೆ.
ಸರ್ಕಾರಿ ಶಾಲೆ ಅಂದರೆ ಹೆಚ್ಚು ನಿರ್ವಹಣೆ ಹಾಗೂ ಕಾಳಜಿ ಇಲ್ಲವೇ ಇಲ್ಲ. ಸ್ವಲ್ಪ ಮಳೆ ಆದರೆ ಸಾಕು ಕಳಪೆ ಕಟ್ಟಡಗಳು ಕುಸಿಯುತ್ತಿವೆ. ಕಳಪೆ ವಸ್ತುಗಳನ್ನು ಬಳಸಿ ಶಾಲಾ ಕಟ್ಟಡ ನಿರ್ಮಾಣ ಮಾಡಿ ಕೈತೊಳೆದುಕೊಂಡ ಗುತ್ತಿಗೆದಾರರ ವಿರುದ್ಧ ಕ್ರಮ ಕೈಗೊಳ್ಳಬೇಕು. ಕೇವಲ 13-14 ವರ್ಷದಲ್ಲಿಯೇ ಕಟ್ಟಡ ಕುಸಿದಿರುವುದು ಸರ್ಕಾರಿ ಕಟ್ಟಡಗಳತ್ತ ಗುತ್ತಿಗೆದಾರರು ತೋರುವ ನಿರ್ಲಕ್ಷ್ಯ ಎದ್ದು ತೋರುತ್ತಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಶಾಲೆಯಲ್ಲಿ 1 ರಿಂದ 8ನೇ ತರಗತಿಗಳಿದ್ದು, ಅಗತ್ಯ ಕೋಣೆಗಳನ್ನು ನಿರ್ಮಿಸಿ ಬಾಕಿ ಉಳಿದ ಕೋಣೆಗಳನ್ನು ಸಹ ಪರಿಶೀಲಿಸುವಂತೆ ಆಗ್ರಹಿಸಿದ್ದಾರೆ.