ಬೆಂಗಳೂರು (ಅ.09):  ರಾಜ್ಯದ ಎಲ್ಲಾ ಸರ್ಕಾರಿ, ಅನುದಾನಿತ ಹಾಗೂ ಖಾಸಗಿ ಅನುದಾನರಹಿತ ಶಾಲೆಗಳಲ್ಲಿ 2020-21ನೇ ಶೈಕ್ಷಣಿಕ ಸಾಲಿನಲ್ಲಿ ಮಕ್ಕಳ ದಾಖಲಾತಿಗೆ ನೀಡಲಾಗಿದ್ದ ಕಾಲಾವಕಾಶವನ್ನು ಸಾರ್ವಜನಿಕ ಶಿಕ್ಷಣ ಇಲಾಖೆ ಅಕ್ಟೋಬರ್‌ 16ರವರೆಗೂ ವಿಸ್ತರಿಸಿದೆ.

ಈ ಹಿಂದೆ ಮಕ್ಕಳ ದಾಖಲಾತಿ ಪ್ರಕ್ರಿಯೆ ಪೂರ್ಣಗೊಳಿಸಲು ಸೆ.30ರ ವರೆಗೆ ಕಾಲಾವಕಾಶ ನೀಡಲಾಗಿತ್ತು. ಆದರೆ, ಕೊರೋನಾ ಆತಂಕದಿಂದಾಗಿ ಮಕ್ಕಳನ್ನು ದಾಖಲಿಸಬೇಕೇ, ಬೇಡವೇ ಎಂಬ ಗೊಂದಲದಿಂದ ಸಾಕಷ್ಟುಶಾಲೆಗಳಲ್ಲಿ ಮಕ್ಕಳ ದಾಖಲಾತಿ ಕಡಿಮೆಯಾಗಿತ್ತು. ಹಾಗಾಗಿ ಖಾಸಗಿ ಶಾಲಾ ಶಿಕ್ಷಣ ಸಂಸ್ಥೆಗಳು ದಾಖಲಾತಿಗೆ ನೀಡಿದ್ದ ಅವಧಿಯನ್ನು ಅ.30ರವರೆಗೆ ವಿಸ್ತರಿಸಲು ಪತ್ರ ಬರೆದು ಸರ್ಕಾರಕ್ಕೆ ಕೋರಿದ್ದವು. ಆದರೆ, ಸರ್ಕಾರ ಅ.16ರವರೆಗೆ ಕಾಲಾವಲಾಶ ನೀಡಿ ಗುರುವಾರ ಪರಿಷ್ಕೃತ ಆದೇಶ ಹೊರಡಿಸಿದೆ.

ಮಾಹಿತಿ ದಾಖಲಿಸಲು ಆಕ್ಷೇಪ:

ಈ ಮಧ್ಯೆ,ದಾಖಲಾತಿ ಮಾಹಿತಿಯನ್ನು ಸ್ಟೂಡೆಂಟ್‌ ಟ್ರ್ಯಾಕಿಂಗ್‌ ಸಿಸ್ಟಂ (ಎಸ್‌ಎಟಿಎಸ್‌) ನಲ್ಲಿ ಅಳವಡಿಸುವಂತೆ ಒತ್ತಡ ಹೇರಬಾರದೆಂದು ಖಾಸಗಿ ಶಾಲಾ ಆಡಳಿತ ಮಂಡಳಿಗಳ ಒಕ್ಕೂಟ (ಕ್ಯಾಮ್ಸ್‌) ಸರ್ಕಾರವನ್ನು ಆಗ್ರಹಿಸಿದೆ.

ಪೋಷಕನಾಗಿ ಶಾಲೆ ಆರಂಭ ಬೇಡ ಅನ್ನುವೆ : ಪ್ರೀತಂ ಗೌಡ ...

ಸಾಕಷ್ಟುಶಾಲೆಗಳಲ್ಲಿ ಇನ್ನೂ ಕೂಡ ಮಕ್ಕಳು ದಾಖಲಾಗಿಲ್ಲ. ಕೆಲವು ಶಾಲೆಗಳಲ್ಲಿ ಮಕ್ಕಳ ದಾಖಲಾತಿಗೆ ಪೋಷಕರು ಶುಲ್ಕ ಪಾವತಿಸಿದ್ದರೂ ಇನ್ನೂ ಪ್ರವೇಶ ಪಡೆದುಕೊಳ್ಳಲು ಶಾಲೆಗಳಿಗೆ ಕರೆತಂದಿಲ್ಲ. ಆದರೂ, ಮಾಹಿತಿ ದಾಖಲಿಸಲು ಶಾಲೆಗಳ ಮೇಲೆ ಒತ್ತಡ ತರಲಾಗುತ್ತಿದೆ. ಪೋಷಕರು ಕನಿಷ್ಠ ತಮ್ಮ ಮಕ್ಕಳಿಗೆ ಶುಲ್ಕ ಪಾವತಿಸಿ ದಾಖಲಾತಿ ಮಾಡಿಸಿದ್ದಲ್ಲಿ ಭಾಗವಹಿಸದೇ ಇದ್ದ ಪಕ್ಷದಲ್ಲಿ ತಂತ್ರಾಂಶದಲ್ಲಿ ಮಕ್ಕಳ ದಾಖಲಾತಿ ಕಷ್ಟಸಾಧ್ಯವಾಗಿದೆ. ಇದರಿಂದ ಆರ್‌ಟಿಇ ಮರುಪಾವತಿ ಕೂಡ ಕಷ್ಟವಾಗಲಿದೆ. ಈ ಬಗ್ಗೆ ತಕ್ಷಣ ಸಭೆ ಕರೆದು ಚರ್ಚಿಸಿ ನ್ಯಾಯ ದೊರಕಿಸಿ ಕೊಡಬೇಕೆಂದು ಕ್ಯಾಮ್ಸ್‌ ಒತ್ತಾಯಿಸಿದೆ.