ಹಾಸನ (ಅ.09): ನನಗೂ ಇಬ್ಬರು ಮಕ್ಕಳು ಇದ್ದಾರೆ. ಶಾಲೆಗೆ ಮಕ್ಕಳು ಹೋಗುವ ಬಗ್ಗೆ ನಾನೊಬ್ಬ ಪೋಷಕನಾಗಿ ಶಾಲೆ ಆರಂಭವಾಗುವುದು ಬೇಡ ಎನ್ನುತ್ತೇನೆ ಎಂದು ಶಾಸಕ ಪ್ರೀತಂ ಗೌಡ ತಿಳಿಸಿದ್ದಾರೆ.

 ಶಾಲೆಯನ್ನು ಆರಂಭಿಸಬೇಕೋ ಬೇಡವೋ ಅನ್ನುವ ಬಗ್ಗೆ ಭಾರೀ ಚರ್ಚೆ ನಡೆಯುತ್ತಿರುವ ನಡುವೆ ಶಾಸಕರೊಬ್ಬರು ಹೀಗೆ ಹೇಳಿರುವುದು ಮಹತ್ವ ಪಡೆದಿದೆ. ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಕ್ಕಳ ಜೀವನಕ್ಕಿಂತ ಜೀವ ಮುಖ್ಯ. ಆದರೆ, ನಾನೊಬ್ಬ ಶಾಸಕನಾಗಿ ಸರ್ಕಾರ ಏನು ತೀರ್ಮಾನ ತೆಗೆದುಕೊಳ್ಳುತ್ತದೋ ಅದಕ್ಕೆ ನಾನು ಬದ್ಧನಾಗಿರುತ್ತೇನೆ. 

ಸರ್ಕಾರ ಒಳ್ಳೆಯ ನಿರ್ಧಾರವನ್ನೇ ತೆಗೆದುಕೊಳ್ಳುತ್ತದೆ ಎಂದು ತಿಳಿಸಿದರು. ಇದೇ ವೇಳೆ ಮಾಜಿ ಸಚಿವ ಎಚ್‌.ಡಿ.ರೇವಣ್ಣ ವಿರುದ್ಧ ವಾಗ್ದಾಳಿ ನಡೆಸಿದ ಅವರು, ರೇವಣ್ಣ ಅವರನ್ನು ಮಾತಾನಾಡುವುದಕ್ಕೆ ಬಿಟ್ಟರೆ, ಹಳೇಬೀಡು, ಬೇಲೂರು ದೇವಾಲಯ ಹಾಗೂ ಶ್ರವಣಬೆಳಗೊಳದ ಗೊಮ್ಮಟೇಶ್ವರನ ಮೂರ್ತಿಯನ್ನು ತಾವೇ ಕಟ್ಟಿಸಿದ್ದು ಅಂತಾರೆ ಎಂದು ವ್ಯಂಗ್ಯವಾಡಿದರು.