ಪಠ್ಯವಾಪ್ಸಿ ವೈಚಾರಿಕ ಭಯೋತ್ಪಾದನೆ: ಚಕ್ರತೀರ್ಥ
* ರಾಜಕೀಯ ಹಿತಾಸಕ್ತಿಗಾಗಿ ಸಾಹಿತಿಗಳ ಟೂಲ್‌ಕಿಟ್ ಚಳವಳಿ
* ರಾಜಕೀಯ ಶಕ್ತಿಗಳು ಸಾಹಿತಿಗಳನ್ನು ಛೂ ಬಿಡುತ್ತಿವೆ: ಆಕ್ರೋಶ
* ನನ್ನ ನೇತೃತ್ವದ ಸಮಿತಿಯಿಂದ ಆಗಿರುವ ಪಠ್ಯ ಪರಿಷ್ಕರಣೆಗೆ ನಾನು ಬದ್ಧನಾಗಿದ್ದೇನೆ
ಬೆಂಗಳೂರು(ಜೂ.03): ಪಠ್ಯ ಪರಿಷ್ಕರಣೆಯಾಗಿ ಪುಸ್ತಕಗಳು ಮುದ್ರಣವಾಗಿ ಶಾಲೆಗಳಿಗೆ ತಲುಪುತ್ತಿರುವ ಹೊತ್ತಿನಲ್ಲಿ ವಿವಿಧ ಸಾಹಿತಿಗಳು ಪಠ್ಯ ವಾಪಸಿ ಚಳವಳಿ ನಡೆಸುತ್ತಿರುವುದು ವೈಚಾರಿಕ ಭಯೋತ್ಪಾದನೆ, ರಾಜಕೀಯ ಹಿತಾಸಕ್ತಿಗಾಗಿ ಬಳಸುತ್ತಿರುವ ಸಾಹಿತಿಗಳ ಟೂಲ್‌ಕಿಟ್ ಎಂದು ಪಠ್ಯ ಪರಿಷ್ಕರಣಾ ಸಮಿತಿ ಅಧ್ಯಕ್ಷ ರೋಹಿತ್ ಚಕ್ರತೀರ್ಥ ಟೀಕಿಸಿದ್ದಾರೆ.
ಸಾಹಿತಿಗಳ ಪಠ್ಯ ವಾಪಸಿ ಚಳವಳಿ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಅವರು, ಈಗ ಪಠ್ಯ ವಾಪಸಿ ಚಳವಳಿ ನಡೆಸುತ್ತಿರುವವರು ತಮ್ಮನ್ನು ಸರ್ಕಾರ ಸಮಿತಿಯ ಅಧ್ಯಕ್ಷನ್ನಾಗಿ ನೇಮಿಸಿದಾಗಲೇ ಏಕೆ ಮಾಡಲಿಲ್ಲ. ಪಠ್ಯ ಪರಿಷ್ಕರಣೆಯಲ್ಲಿ ಕೇಸರೀಕರಣವಾಗಿದೆ, ಬ್ರಾಹ್ಮಣೀಕರಣವಾಗಿದೆ ಎಂದು ಆರೋಪಿಸುವವರು ಚರ್ಚೆಗೆ ಬನ್ನಿ, ದಾಖಲೆ ಕೊಡಿ ಎಂದರೆ ಮಾತ್ರ ಬರುತ್ತಿಲ್ಲ. ಪಠ್ಯದಲ್ಲಿ ತಮ್ಮ ಬರಹಗಳು ಇಲ್ಲದ ಕೆಲವರೂ ಪತ್ರಗಳನ್ನು ಬರೆದು ಗೊಂದಲ ಸೃಷ್ಟಿಸುತ್ತಿದ್ದಾರೆ. ಇದೆಲ್ಲವನ್ನೂ ನೋಡಿದಾಗ ಇದು ರಾಜಕೀಯ ಹಿತಾಸಕ್ತಿಗಾಗಿ ನಡೆಯುತ್ತಿರುವ ಟೂಲ್ ಕಿಟ್ ಎಂಬುದು ತಿಳಿಯುತ್ತದೆ ಎಂದಿದ್ದಾರೆ.
ರಾಜಕೀಯ ಶಕ್ತಿಗಳು ಛೂ ಬಿಡುತ್ತಿವೆ:
ಚಳವಳಿ ನಡೆಸುತ್ತಿರುವವರು ಯಾರೂ ಕೂಡ ಸಮಿತಿ ಅಧ್ಯಕ್ಷನಾದ ನನಗಾಗಲಿ, ಸರ್ಕಾರಕ್ಕಾಗಲಿ, ಶಿಕ್ಷಣ ಇಲಾಖೆಗಾಗಲಿ, ಪಠ್ಯಪುಸ್ತಕ ಸಂಘಕ್ಕಾಗಲಿ ಅಧಿಕೃತವಾಗಿ ಇದುವರೆಗೂ ಪತ್ರ ಬರೆದಿಲ್ಲ. ಇದನ್ನು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಕೇವಲ ಮಾಧ್ಯಮಗಳಲ್ಲಿ, ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಪತ್ರಗಳನ್ನು ನೀಡುತ್ತಿದ್ದಾರೆ. ನನ್ನ ಪ್ರಕಾರ ಅವರಾರಯರೂ ಪರಿಷ್ಕರಣೆಯಾಗಿರುವ ಪಠ್ಯವನ್ನೇ ಓದಿಲ್ಲ. ಪರಿಷ್ಕರಣೆಯೇ ಆಗದ ವಿಚಾರಗಳ ಬಗ್ಗೆ ಚರ್ಚಿಸಿ ವಿವಾದ ಸೃಷ್ಟಿಸುತ್ತಿದ್ದಾರೆ. ಕುವೆಂಪು ಅವರ ಪಠ್ಯದ ವಿಚಾರದಲ್ಲಿ ಇದೇ ಆಗಿದ್ದು. ಇದರ ಹಿಂದೆ ದೊಡ್ಡ ಷಡ್ಯಂತ್ರವೇ ಇದೆ. ಸಾಹಿತಿಗಳನ್ನು ರಾಜಕೀಯ ಶಕ್ತಿಗಳು ಛೂ ಬಿಡುತ್ತಿದ್ದಾರೆ. ಶಿಕ್ಷಣ ಕ್ಷೇತ್ರವನ್ನು ಸಂಪೂರ್ಣವಾಗಿ ಸ್ಥಗಿತ ಮಾಡುವ ಕುತಂತ್ರ ಇದರ ಹಿಂದಿದೆ ಎಂದು ಆರೋಪಿಸಿದರು.
Textbook Revision: ರಾಜಕೀಯಕ್ಕಾಗಿ ನನ್ನ ತೇಜೋವಧೆ: ರೋಹಿತ್ ಚಕ್ರತೀರ್ಥ
ಎಎಸ್‌ಯುಐ ಕಾರ್ಯಕರ್ತರು ಶಿಕ್ಷಣ ಸಚಿವರ ನಾಗೇಶ್ ಅವರ ಮನೆ ಮುಂದೆ ಬೆಂಕಿ ಹಚ್ಚಿ ಪ್ರತಿಭಟಿಸಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, 75 ವರ್ಷಗಳ ಕಾಲ ಶಿಕ್ಷಣ ವ್ಯವಸ್ಥೆಯನ್ನು ತಮ್ಮ ಸುರ್ಪದಿಯಲ್ಲಿ ಇಟ್ಟುಕೊಂಡಿದ್ದವರ ಕೋಟೆ ಒಡೆದು ಶಿಕ್ಷಣ ವ್ಯವಸ್ಥೆ ಸುಧಾರಿಸಲು ಹೊರಟಿರುವ ಸಚಿವರ ಮನೆಗೆ ಬೆಂಕಿ ಹಾಕುವ ಕಲ್ಲು ಹೊಡೆಯುವುದನ್ನು ನೋಡಿದರೆ ಅವರಿಗೆ ತಮ್ಮ ಅಸ್ತಿತ್ವದ ಭಯ ಹುಟ್ಟಿದೆ. ಇದು ರಾಷ್ಟ್ರಮಟ್ಟದಲ್ಲಿ ಚರ್ಚೆಯಾಗುವ ವಿಚಾರ. ಸರ್ಕಾರ ಇದನ್ನು ಗಂಭೀರವಾಗಿ ತೆಗೆದುಕೊಂಡು ರಾಷ್ಟ್ರೀಯ ತನಿಖಾ ದಳದಿಂದ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.
ನನ್ನ ನೇತೃತ್ವದ ಸಮಿತಿಯಿಂದ ಆಗಿರುವ ಪಠ್ಯ ಪರಿಷ್ಕರಣೆಗೆ ನಾನು ಬದ್ಧನಾಗಿದ್ದೇನೆ. ನಾನು ರಾಜೀನಾಮೆ ನೀಡುವ ಪ್ರಶ್ನೆ ಇಲ್ಲ. ಸರ್ಕಾರಕ್ಕೆ ನನ್ನ ಮನವಿ ಇಷ್ಟೆ. ಪಠ್ಯ ಪರಿಷ್ಕರಣೆ ಪರವಾಗಿ ನಿಂತು ಸ್ಪಷ್ಟನಿಲುವು ಪ್ರಕಟಿಸಬೇಕು. ಮುಂದಿನ ದಿನಗಳಲ್ಲಿ ಹೊಸ ಶಿಕ್ಷಣ ನೀತಿ ಬರುತ್ತಿದೆ. ಸೈದ್ದಾಂತಿಕ ದಾಳಿ ನಿಲ್ಲಬೇಕು. ಸರ್ಕಾರ ದಿಟ್ಟನಿರ್ಧಾರ ತೆಗೆದುಕೊಳ್ಳದಿದ್ದರೆ ಮುಂದೆ ಪಠ್ಯ ಪರಿಷ್ಕರಣೆ ಮಾಡಲು ಯಾರು ಮುಂದೆ ಬರುವುದಿಲ್ಲ ಅಂತ , ಪಠ್ಯ ಪರಿಷ್ಕರಣಾ ಸಮಿತಿ ಅಧ್ಯಕ್ಷ ರೋಹಿತ್ ಚಕ್ರತೀರ್ಥ ತಿಳಿಸಿದ್ದಾರೆ.