ಪದವಿ ಪರೀಕ್ಷೆ ಬರೆದು 10 ವರ್ಷಗಳ ಬಳಿಕ ಫಲಿತಾಂಶ.!: ಬೆಂಗಳೂರು ವಿವಿ ಎಡವಟ್ಟು
ಪದವಿ ವಿಧ್ಯಾರ್ಥಿಗಳು ಬರೆದ ಉತ್ತರ ಪತ್ರಿಕೆಗಳನ್ನೇ ಕಳೆದು ಹಾಕಿದ ಸಿಬ್ಬಂದಿ
115 ಪದವಿ ವಿದ್ಯಾರ್ಥಿಗಳ ಜೀವನ ಹಾಳು ಮಾಡಿದ ವಿಶ್ವವಿದ್ಯಾಲಯ
ಉತ್ತರ ಪತ್ರಿಕೆ ಮಿಸ್ಸಿಂಗ್ ತನಿಖಾ ವರದಿ ನೀಡುವಲ್ಲಿ ಸಮಿತಿ ನಿರ್ಲಕ್ಷ್ಯ
ವರದಿ- ನಂದೀಶ್ ಮಲ್ಲೇನಹಳ್ಳಿ, ಏಷ್ಯಾನೆಟ್ ಸುವರ್ಣ ನ್ಯೂಸ್
ಬೆಂಗಳೂರು ( ಫೆ.15): ಬೆಂಗಳೂರು ವಿಶ್ವವಿದ್ಯಾಲಯ (ಜ್ಞಾನಭಾರತಿ) ಕಳೆದ ಹತ್ತು ವರ್ಷಗಳ ಹಿಂದೆ ನಡೆದ ಪರೀಕ್ಷೆಗೆ ಈ ಫಲಿತಾಂಶ ಪ್ರಕಟ ಮಾಡುತ್ತಿದೆ. ಹೌದು, ವೊಶ್ವವಿದ್ಯಾಲಯ ಮೌಲ್ಯಮಾಪನ ಸಿಬ್ಬಂದಿ ಮಾಡಿದ ಎಡವಟ್ಟಿನಿಂದಾಗಿ 115 ವಿದ್ಯಾರ್ಥಿಗಳ ಫಲಿತಾಂಶ ಪ್ರಕಟ ಮಾಡಲು ಸಾಧ್ಯವಾಗಿರಲಿಲ್ಲ. ಯಾಕೆಂದರೆ ವಿದ್ಯಾರ್ಥಿಗಳು ಬರೆದಿದ್ದ ಉತ್ತರ ಪತ್ರಿಕೆಗಳನ್ನ ಕಳೆದುಕೊಂಡಿತ್ತು. ಈ ಕಾರಣದಿಂದಾಗಿ ವಿದ್ಯಾರ್ಥಿಗಳಿಗೆ ಫಲಿತಾಂಶ ಸಿಕ್ಕಿರಲಿಲ್ಲ.
ವಿದ್ಯಾರ್ಥಿಗಳು ಪರೀಕ್ಷೆ ಬರೆದರೂ ರಿಸಲ್ಟ್ ಮಾತ್ರ ಬಂದಿಲ್ಲ ಎಂದು ಸಾಕಷ್ಟು ಭಾರಿ ಅಳಲು ತೋಡಿಕೊಂಡಿದ್ದರು. ಆದರೆ, ವಿದ್ಯಾರ್ಥಿಗಳು ಬರೆದ ಪರೀಕ್ಷೆಯ ಉತ್ತರ ಪತ್ರಿಕೆಗಳು ವಿಶ್ವವಿದ್ಯಾಲಯದ ಬಳಿ ಇಲ್ಲದೆ ರಿಸಲ್ಟ್ ನೀಡಲು ವಿವಿ ವಿಳಂಭ ಮಾಡಿತ್ತು. ಹೀಗಾಗಿ, 2013ರಲ್ಲಿ ನಡೆದಿದ್ದ ಪರೀಕ್ಷೆಗೆ ಈವರೆಗೆ ರಿಸಲ್ಟ್ ನೀಡಿರಲಿಲ್ಲ. ಸುಮಾರು 115 ವಿಧ್ಯಾರ್ಥಿಗಳ ಉತ್ತರ ಪತ್ರಿಕೆ ಮಿಸ್ಸಿಂಗ್ ಆಗಿದ್ದರಿಂದ ಫಲಿತಾಂಶವನ್ನ ವಿಶ್ವವಿದ್ಯಾಲಯದಿಂದ ಪ್ರಕಟವನ್ನೇ ಮಾಡಿರಲಿಲ್ಲ.
ಬೆಂಗಳೂರು ವಿವಿ ಬಿಕಾಂ ಪಠ್ಯ ಪುಸ್ತಕದಲ್ಲಿ ಪುನೀತ್ ರಾಜ್‌ಕುಮಾರ್!
ಪ್ರತಿಭಟನೆ ಮಾಡಿದರೂ ಬಾರದ ಫಲಿತಾಂಶ: ಒಟ್ಟಾರೆ 95 ಪದವಿ ವಿದ್ಯಾರ್ಥಿಗಳು ಹಾಗೂ 15 ಸ್ನಾತಕೋತ್ತರ ಪದವಿ ವಿಧ್ಯಾರ್ಥಿಗಳ ಭವಿಷ್ಯ ಅತಂತ್ರಕ್ಕೆ ಸಿಲುಕಿತ್ತು. ಹತ್ತು ವರ್ಷಗಳ ಬಳಿಕ ಈಗ ವಿಶ್ವವಿದ್ಯಾಲಯ ಇತರ ವಿಷಯದಲ್ಲಿ ಪಡೆದ ಅಂಕಗಳ ಆಧಾರದ ಮೇಲೆ ರಿಸಲ್ಟ್ ನೀಡಲು ನಿರ್ಧಾರ ತೆಗೆದುಕೊಂಡಿದೆ. ಈ ಬಗ್ಗೆ ಸಿಂಡಿಕೇಟ್ ಸಭೆಯಲ್ಲಿ ತೀರ್ಮಾನ ತೆಗೆದುಕೊಂಡು 115 ವಿದ್ಯಾರ್ಥಿಗಳಿಗೆ ಪ್ರಕಟಿಸಲು ನಿರ್ಣಯವನ್ನು ಕೈಗೊಂಡಿದೆ. ಇನ್ನು ಪದವಿ ಓದಿ ಅಭ್ಯಾಸ ಮಾಡಿ ಪರೀಕ್ಷೆ ಬರೆದಿದ್ದರೂ ಫಲಿತಾಂಶವಿಲ್ಲದ ಹಿನ್ನೆಲೆಯಲ್ಲಿ ನೊಂದ ವಿದ್ಯಾರ್ಥಿಗಳು ಕೆಲ ದಿನಗಳ ಕಾಲ ಪ್ರತಿಭಟನೆ ನಡೆಸಿ ಫಲಿತಾಂಶ ಬಾರದೇ ಸುಮ್ಮನಾಗಿದ್ದರು.
ಉತ್ತರ ಪತ್ರಿಕೆ ಮಿಸ್ಸಿಂಗ್ ಆಗೋಕೆ ಕಾರಣವೇನು..? : ಪರೀಕ್ಷೆ ನಡೆದು ಹತ್ತು ವರ್ಷಗಳಾದರೂ ಫಲಿತಾಂಶ ಸಿಕ್ಕಿಲ್ಲ. ಕಾರಣ ಉತ್ತರ ಪತ್ರಿಕೆ ಮಿಸ್ ಮಾಡಿದ್ದ ಬೆಂಗಳೂರು ವಿಶ್ವವಿದ್ಯಾಲಯದ ಪರೀಕ್ಷಾ ವಿಭಾಗದ ಮೌಲ್ಯಮಾಪನ ಸಿಬ್ಬಂದಿ ನಿರ್ಲಕ್ಷ್ಯದಿಂದಾಗಿ ವಿದ್ಯಾರ್ಥಿಗಳು ಸಂಕಷ್ಟ ಅನುಭವಿಸಬೇಕಾಯಿತು. ಸಾಮಾನ್ಯವಾಗಿ ಪರೀಕ್ಷೆ ಮುಗಿದ ಬಳಿಕ ಪೋಸ್ಟಲ್ ಮೂಲಕ ಬೆಂಗಳೂರು ವಿವಿ ಮೌಲ್ಯಮಾಪನ ಕೇಂದ್ರಕ್ಕೆ ಉತ್ತರ ಪತ್ರಿಕೆ ರವಾನೆ ಮಾಡಲಾಗುತ್ತಿತ್ತು. ಆದರೆ, ಈ ಪ್ರಕ್ರಿಯೆಯಲ್ಲಿ ಉತ್ತರ ಪತ್ರಿಕೆ ಕಾಣೆಯಾಗಿದೆ ಎಂದು ವಿವಿ ಮೌಲ್ಯಮಾಪನ ಸಿಬ್ಬಂದಿ ಹಾರಿಕೆ ಉತ್ತರ ನೀಡಿದ್ದಾರೆ.
ಸೋಲಾರ್ ಯೋಜನೆ ನೆಪದಲ್ಲಿ ಹಣ ಕಬಳಿಸಲು ಬೆಂಗಳೂರು ವಿವಿ ಹುನ್ನಾರ?
ಪರೀಕ್ಷಾ ಮೌಲ್ಯಮಾಪನ ಕುಲಸಚಿವ ಡಾ. ಶ್ರೀನಿವಾಸ್ ಸ್ಪಷ್ಟನೆ: ಹತ್ತು ವರ್ಷದ ಹಿಂದೆ ನಡೆದಿರುವ ಸ್ನಾತಕೋತ್ತರ ಹಾಗೂ ಪದವಿ ಪರೀಕ್ಷೆ ಉತ್ತರ ಪತ್ರಿಕೆಗಳು ಮಿಸ್ ಆಗಿದ್ದವು. ವಿಧ್ಯಾರ್ಥಿಗಳಿಗೆ ಫಲಿತಾಂಶ ಸಿಗದೇ ಸಮ್ಯಸೆ ಆಗಿತ್ತು. ಹಿಂದಿನ ಕುಲಸಚಿವರು ಈ ಸಂಬಂಧ ಕುಲಪತಿಗಳಿಗೆ ಪತ್ರ ಬರೆದಿದ್ದರು. ಸಿಂಡಿಕೇಟ್ ಸದಸ್ಯ ಟಿ.ವಿ. ರಾಜು ನೇತೃತ್ವದಲ್ಲಿ ವರದಿ ನೀಡುವುದಕ್ಕೆ ಒಂದು ಪ್ರತ್ಯೇಕ ಸಮಿತಿಯನ್ನೂ ರಚನೆ ಮಾಡಲಾಗಿತ್ತು. ಈ ಸಮಿತಿಯಿಂದ ಹತ್ತು ವರ್ಷಗಳ ಬಳಿಕ ವರದಿ ಬಂದಿದೆ. ವರದಿಯಲ್ಲಿ ಹಿಂದಿನ ಪರೀಕ್ಷೆಗಳಲ್ಲಿ ವಿಧ್ಯಾರ್ಥಿಗಳು ಗಳಿಸಿದ ಅಂಕದ ಆಧಾರದ ಮೇಲೆ ಫಲಿತಾಂಶ ಪ್ರಕಟ ಮಾಡುವುದಾಗಿ ತೀರ್ಮಾನ ಕೈಗೊಳ್ಳಲಾಗಿದೆ ಎಂದು ವಿವಿ ರಿಜಿಸ್ಟ್ರಾರ್ ಡಾ.ಶ್ರೀನಿವಾಸ್ ಹೇಳಿದ್ದಾರೆ.
ಇಂದು ಅಥವಾ ನಾಳೆಯೊಳಗೆ ಫಲಿತಾಂಶ ಪ್ರಕಟ ಮಾಡುವುದಾಗಿ ಬೆಂಗಳೂರು ವಿವಿ ಮೌಲ್ಯಮಾಪನ ವಿಭಾಗದ ರಿಜಿಸ್ಟ್ರಾರ್ ಶ್ರೀನಿವಾಸ್ ಮಾಹಿತಿ ನೀಡಿದ್ದಾರೆ.