Asianet Suvarna News Asianet Suvarna News

ಸರ್ಕಾರಿ ಕಾಲೇಜುಗಳಿಗೆ ಕನಿಷ್ಠ 1500 ವಿದ್ಯಾರ್ಥಿಗಳ ದಾಖಲಾತಿಗೆ ಪ್ರಾಂಶುಪಾಲರಿಗೆ ಟಾರ್ಗೆಟ್‌

ಸರ್ಕಾರಿ ಕಾಲೇಜುಗಳಿಗೆ ಕನಿಷ್ಠ 1500 ವಿದ್ಯಾರ್ಥಿಗಳ ಟಾರ್ಗೆಟ್‌  ಪ್ರವೇಶ ಹೆಚ್ಚಿಸುವ ಗುರಿ ಪ್ರಾಂಶುಪಾಲರದ್ದಾಗಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್‌.ಅಶ್ವತ್ಥ ನಾರಾಯಣ ಸೂಚಿಸಿದ್ದಾರೆ.

 

respective colleges responsibility to increase student enrollment says minister Ashwath Narayan gow
Author
Bengaluru, First Published Jul 16, 2022, 12:01 PM IST

ಬೆಂಗಳೂರು (ಜು.16): ಸರ್ಕಾರಿ ಪದವಿ, ಎಂಜಿನಿಯರಿಂಗ್‌, ಪಾಲಿಟೆಕ್ನಿಕ್‌ ಕಾಲೇಜುಗಳಲ್ಲಿ ದಾಖಲಾತಿ ಹೆಚ್ಚಿಸುವ ಜವಾಬ್ದಾರಿಯನ್ನು ಆಯಾ ಕಾಲೇಜು ಪ್ರಾಂಶುಪಾಲರಿಗೆ ನೀಡಿದ್ದು, ಪ್ರತಿ ಕಾಲೇಜಿನಲ್ಲೂ ಕನಿಷ್ಠ 1,500ದಿಂದ 2,000 ವಿದ್ಯಾರ್ಥಿಗಳಾದರೂ ಇರುವಂತೆ ನೋಡಿಕೊಳ್ಳಬೇಕು ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್‌.ಅಶ್ವತ್ಥ ನಾರಾಯಣ ಸೂಚಿಸಿದ್ದಾರೆ. ನಗರದಲ್ಲಿ ಇದೇ ಮೊದಲ ಬಾರಿಗೆ ಇಲಾಖೆ ಏರ್ಪಡಿಸಿದ್ದ ರಾಜ್ಯದ ಎಲ್ಲ ಸರ್ಕಾರಿ ಪ್ರಥಮ ದರ್ಜೆ, ಎಂಜಿನಿಯರಿಂಗ್‌ ಮತ್ತು ಪಾಲಿಟೆಕ್ನಿಕ್‌ ಕಾಲೇಜುಗಳ ಪ್ರಾಂಶುಪಾಲರುಗಳ ಕಾರ್ಯಾಗಾರವನ್ನು ಉದ್ದೇಶಿಸಿ ಅವರು ಶುಕ್ರವಾರ ವರ್ಚುಯಲ್‌ ಆಗಿ ಮಾತನಾಡಿದರು. ರಾಜ್ಯದ ಉನ್ನತ ಶಿಕ್ಷಣ ವಲಯದಲ್ಲಿ ಈಗಾಗಲೇ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಯಾಗಿದೆ. ಇದಕ್ಕೆ ತಕ್ಕಂತೆ ಗುಣಮಟ್ಟದ ಕಲಿಕೆಯು ಸರ್ಕಾರಿ ಕಾಲೇಜುಗಳಲ್ಲಿ ಸಾಧ್ಯವಾಗಬೇಕು. ಈಗಾಗಲೇ ಅಭಿವೃದ್ಧಿ ಪಡಿಸಿರುವ 2,500 ಸ್ಮಾರ್ಚ್‌ ಕ್ಲಾಸ್‌-ರೂಮುಗಳಲ್ಲಿ ಪಿಪಿಟಿ, ಆಡಿಯೋ ಮತ್ತು ವಿಡಿಯೋಗಳನ್ನು ಬೋಧನೆಯಲ್ಲಿ ಅಳವಡಿಸಿಕೊಳ್ಳಬೇಕು. ಉಳಿದಿರುವ 6,500 ತರಗತಿಗಳನ್ನು ಇನ್ನು ಆರು ತಿಂಗಳಲ್ಲಿ ಸ್ಮಾರ್ಚ್‌ ಕ್ಲಾಸ್‌ ರೂಮುಗಳನ್ನಾಗಿ ಮೇಲ್ದರ್ಜೆಗೆ ಏರಿಸಲಾಗುವುದು ಎಂದು ಅವರು ಹೇಳಿದರು.

ಉನ್ನತ ಶಿಕ್ಷಣ ಇಲಾಖೆಯು ಪರಿಣಾಮಕಾರಿ ಕಲಿಕೆಯನ್ನು ಸಾಧ್ಯವಾಗಿಸಲು ಕಲಿಕಾ ನಿರ್ವಹಣಾ ವ್ಯವಸ್ಥೆಯನ್ನು (ಎಲ್‌ಎಂಎಸ್‌) ಅಭಿವೃದ್ಧಿ ಪಡಿಸಿದೆ. ಇದರಲ್ಲಿರುವ ಪಠ್ಯ ಮತ್ತು ವಿಚಾರಗಳನ್ನು ವಿದ್ಯಾರ್ಥಿಗಳು ನೂರಕ್ಕೆ ನೂರರಷ್ಟುಬಳಸಿಕೊಳ್ಳುವಂತೆ ಪ್ರಾಂಶುಪಾಲರು ಸೂಕ್ತ ಗಮನ ಹರಿಸಬೇಕು. ಏಕೀಕೃತ ವಿಶ್ವವಿದ್ಯಾಲಯ ಮತ್ತು ಕಾಲೇಜು ನಿರ್ವಹಣೆ ವ್ಯವಸ್ಥೆ ( ಯುಯುಸಿಎಂಎಸ್‌) ಜಾರಿಗೆ ಬಂದಿದ್ದು ಅದನ್ನು ಪರಿಣಾಮಕಾರಿಯಾಗಿ ಪ್ರತಿಯೊಂದು ಕಾಲೇಜು ಬಳಸಬೇಕು ಎಂದು ಅವರು ಸೂಚಿಸಿದರು.

ಕಾಲೇಜುಗಳಲ್ಲಿ ಶುಲ್ಕದ ರೂಪದಲ್ಲಿ ಸಂಗ್ರಹವಾಗುತ್ತಿರುವ ಹಣವನ್ನು ಈಗ ಆಯಾ ಕಾಲೇಜುಗಳ ಅಭಿವೃದ್ಧಿಗೆ ಕೊಡಲಾಗುತ್ತಿದೆ. ನಮ್ಮ ಕಾಲೇಜುಗಳಲ್ಲಿ ಕಲಿಯುವ ಎಲ್ಲ ಮಕ್ಕಳಿಗೂ ಉದ್ಯೋಗ ಸಿಗುವಂತೆ ಮಾಡಬೇಕು. ಇದಕ್ಕಾಗಿ ಅಗತ್ಯ ಕೌಶಲ್ಯ ಕಲಿಕೆ ಮತ್ತು ಸೂಕ್ತ ಪಠ್ಯ ಅಳವಡಿಸಿಕೊಳ್ಳಲಾಗಿದೆ ಎಂದು ಸಚಿವರು ಹೇಳಿದರು.

ಪ್ರತಿಯೊಂದು ಸರಕಾರಿ ಕಾಲೇಜಿನಲ್ಲೂ ಸ್ವಾತಂತ್ರ್ಯದ ಅಮೃತ ಮಹೋತ್ಸವವನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಸಬೇಕು. ಇದಕ್ಕೆ ತಮ್ಮ ವ್ಯಾಪ್ತಿಯಲ್ಲೇ ಯೋಜನೆಗಳನ್ನು ರೂಪಿಸಬೇಕು ಎಂದು ಅವರು ಸೂಚಿಸಿದರು. ಉನ್ನತ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ರಶ್ಮಿ ಮಹೇಶ್‌, ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆಯ ಆಯುಕ್ತ ಪಿ.ಪ್ರದೀಪ್‌ ಉಪಸ್ಥಿತರಿದ್ದರು.

Follow Us:
Download App:
  • android
  • ios