Asianet Suvarna News Asianet Suvarna News

Rain Effect: ಭಾರೀ ಮಳೆ, ಈ ಜಿಲ್ಲೆಗಳಲ್ಲಿ 2 ದಿನ ಶಾಲಾ -ಕಾಲೇಜುಗಳಿಗೆ ರಜೆ ಘೋಷಣೆ

* ರಾಜ್ಯದ ಹಲವು ಜಿಲ್ಲೆಗಳಲ್ಲಿ ಭಾರೀ ಮಳೆ ಮುನ್ಸೂಚನೆ
* ಕೆಲ ಜಿಲ್ಲೆಗಳಲ್ಲಿ ಎರಡು ದಿನ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ
* ನ.19, 20 ರಂದು ರಜೆ ಶಾಲೆಗಳಿಗೆ ರಜೆ ನೀಡಿ ಆದೇಶ

Rain Effect holiday announced for schools colleges in kolar chikkaballapur and bengaluru Rural districts rbj
Author
Bengaluru, First Published Nov 18, 2021, 8:52 PM IST

ಬೆಂಗಳೂರು, (ನ.18): ರಾಜ್ಯದ ಹಲವು ಜಿಲ್ಲೆಗಳಲ್ಲಿ ಮಳೆಯ (Rain) ಆರ್ಭಟ ಮುಂದುವರೆದಿದೆ. ಈ ಹಿನ್ನೆಲೆಯಲ್ಲಿ ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಶಾಲೆ-ಕಾಲೇಜುಗಳಿಗೆ (School, Colleges Holiday) ಎರಡು ದಿನ ರಜೆ ಘೋಷಣೆ ಮಾಡಲಾಗಿದೆ.

ಹೌದು...ಕೋಲಾರ(Kolar), ಚಿಕ್ಕಬಳ್ಳಾಪುರ ಹಾಗೂ ಬೆಂಗಳೂರು ಗ್ರಾಮಾಂತರ (Bengaluru Rural) ಜಿಲ್ಲೆಯಲ್ಲಿ ನ.19, 20 ರಂದು ರಜೆ ಶಾಲೆಗಳಿಗೆ ನೀಡಲಾಗಿದೆ.

Rain Effect: ಭಾರೀ ಮಳೆಗೆ ಕರ್ನಾಟಕದಲ್ಲಿ 7.31 ಲಕ್ಷ ಹೆಕ್ಟೇರ್‌ ಬೆಳೆ ಹಾನಿ

ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ನ. 19, 20 ರಂದು ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿಗೆ ಜಿಲ್ಲಾಧಿಕಾರಿ ಕೆ. ಶ್ರೀನಿವಾಸ್ ಘೋಷಿಸಿ ಇಂದು (ನ.18) ಆದೇಶ ಹೊರಡಿಸಿದ್ದಾರೆ.

ಕೋಲಾರ ಜಿಲ್ಲೆಯಲ್ಲಿ ಶಾಲೆ, ಕಾಲೇಜುಗಳಿಗೆ ರಜೆ ಘೋಷಿಸಿದ್ರೆ,  ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಶಾಲೆ, ಕಾಲೇಜು, ಅಂಗನವಾಡಿಗಳಿಗೆ ರಜೆ ನೀಡಲಾಗಿದೆ. ಕೋಲಾರ ಜಿಲ್ಲೆಯ ಡಿಡಿಪಿಐ ರೇವಣಸಿದ್ದಪ್ಪ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯ ಡಿಡಿಪಿಐ ಜಯರಾಮ ರೆಡ್ಡಿ ಈ ವಿಷಯವನ್ನು ಎರಡು ಪ್ರತ್ಯೇಕ ಪತ್ರಿಕಾ ಹೇಳಿಕೆಗಳ ಮೂಲಕ ಸ್ಪಷ್ಟಪಡಿಸಿದ್ದಾರೆ. 

ಇತರ ಜಿಲ್ಲೆಗಳಲ್ಲೂ ಪರಿಸ್ಥಿತಿ ನೋಡಿಕೊಂಡು ರಜೆ ನೀಡುವ ಅಧಿಕಾರವನ್ನು ಜಿಲ್ಲಾಧಿಕಾರಿಗಳಿಗೆ ನೀಡಿ ಶಿಕ್ಷಣ ಇಲಾಖೆ ಸುತ್ತೋಲೆ ಹೊರಡಿಸಿದೆ. ಮಳೆಯಿಂದಾಗಿ ಶಾಲೆಗಳಿಗೆ ಬರಲು ವಿದ್ಯಾರ್ಥಿಗಳಿಗೆ ಕಷ್ಟವಾಗುವಂತಿದ್ದರೆ ಜಿಲ್ಲಾಧಿಕಾರಿಗಳೇ ಅಗತ್ಯ ಕ್ರಮಕೈಗೊಳ್ಳಬಹುದು ಎಂದು ಶಿಕ್ಷಣ ಇಲಾಖೆ ಹೇಳಿದೆ.

ನ. 23ರವರೆಗೆ ಭಾರಿ ಮಳೆ ಸಾಧ್ಯತೆ
ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಇದೇ ಪರಿಸ್ಥಿತಿ ಇನ್ನೂ ಒಂದು ವಾರ ಮುಂದುವರಿಯುವ ಸಾಧ್ಯತೆಯಿದೆ. ನವೆಂಬರ್ 23ರವರೆಗೆ ಭಾರಿ ಮಳೆ ನಿರೀಕ್ಷಿತ ಎಂದು ಹವಾಮಾನ ಇಲಾಖೆ ಹೇಳಿದೆ. ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ, ಹಾಸನ, ಶಿವಮೊಗ್ಗ, ಕೊಡಗು ಜಿಲ್ಲೆಗಳಲ್ಲಿ ಹೆಚ್ಚು ಮಳೆ ಸುರಿಯುವ ಭೀತಿ ಎದುರಾಗಿದ್ದು, ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ. ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆ, ಕೋಲಾರ, ಮಂಡ್ಯ, ರಾಮನಗರ, ತುಮಕೂರು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಬಾಗಲಕೋಟೆ, ಬೆಳಗಾವಿ, ಬೀದರ್, ಧಾರವಾಡ, ಗದಗ, ಹಾವೇರಿ, ಕಲಬುರಗಿ, ಕೊಪ್ಪಳ, ರಾಯಚೂರು, ವಿಜಯಪುರ, ಯಾದಗಿರಿ ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್ ಘೋಷಿಸಲಾಗಿದೆ ಎಂದು ಹವಾಮಾನ ಇಲಾಖೆ ಹೇಳಿದೆ.

ಈಗಾಗಲೇ ಬೆಂಗಳೂರಿನಲ್ಲಿ ಕಳೆದ 10 ದಿನಗಳಿಂದ ಮಳೆಯಾಗುತ್ತಿದ್ದು, ಇನ್ನೂ ಮೂರ್ನಾಲ್ಕು ದಿನಗಳ ಕಾಲ ಭಾರಿ ಮಳೆಯಾಗಲಿದೆ ಎಂದು ಇಲಾಖೆ ತಿಳಿಸಿದೆ. ಮುಂದಿನ 48 ಗಂಟೆ ಧಾರಾಕಾರ ಮಳೆಯಾಗಲಿದ್ದು, ನ.24ರವರೆಗೂ ಮೋಡಕವಿದ ವಾತಾವರಣ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಮಳೆಗೆ ರಾಜ್ಯದಲ್ಲಿ 7.31 ಲಕ್ಷ ಹೆಕ್ಟೇರ್‌ ಬೆಳೆ ಹಾನಿ
 ಭಾರೀ ಮಳೆಯಿಂದಾಗಿ ರಾಜ್ಯದ ರೈತರು ತತ್ತರಿಸಿದ್ದು ಕೈಗೆ ಬರಬೇಕಿದ್ದ ಫಸಲು ಕಣ್ಣ ಮುಂದೆಯೇ ನೆಲಕಚ್ಚುತ್ತಿದೆ. ಕೃಷಿ ಇಲಾಖೆಯ ಪ್ರಾಥಮಿಕ ಅಂದಾಜಿನ ಪ್ರಕಾರ ಜುಲೈನಿಂದ ನವೆಂಬರ್‌ 16 ರವರೆಗೂ 7.31 ಲಕ್ಷ ಹೆಕ್ಟೇರ್‌ಗೂ ಅಧಿಕ ಪ್ರದೇಶದಲ್ಲಿ ಬೆಳೆದಿದ್ದ ವಿವಿಧ ಬೆಳೆ ಹಾನಿಗೊಳಗಾಗಿ ಸಾವಿರಾರು ಕೋಟಿ ರು. ನಷ್ಟಉಂಟಾಗಿದೆ.

ಬೆಳೆ ಹಾನಿ ಬಗ್ಗೆ ಮೊದಲು ಕೃಷಿ ಇಲಾಖೆ ನಷ್ಟದ ಅಂದಾಜಿನ ಬಗ್ಗೆ ಪ್ರಾಥಮಿಕ ವರದಿಯನ್ನು ಕಂದಾಯ ಇಲಾಖೆಗೆ ಶೀಘ್ರದಲ್ಲೇ ಸಲ್ಲಿಸಲಿದ್ದು, ಬಳಿಕ ಕಂದಾಯ ಮತ್ತು ಕೃಷಿ ಇಲಾಖೆಯಿಂದ ಜಂಟಿ ಸರ್ವೇ ನಡೆಸಿ ಹಾನಿಯ ಅಂದಾಜು ಮಾಡಲಿವೆ. ಸೆಪ್ಟೆಂಬರ್‌ನಿಂದ ಅಕ್ಟೋಬರ್‌ ವರೆಗಿನ ಅಂದಾಜನ್ನು ಲೆಕ್ಕ ಹಾಕಲಾಗಿದೆ. ನವೆಂಬರ್‌ನಲ್ಲಿ ಅಕಾಲಿಕ ಮಳೆ ಮುಂದುವರೆಯುತ್ತಿರುವುದರಿಂದ ಕೃಷಿ ಇಲಾಖೆಯು ಪ್ರಾಥಮಿಕ ಮಾಹಿತಿ ಸಂಗ್ರಹಿಸುತ್ತಿದ್ದು ಕಂದಾಯ ಇಲಾಖೆಗೆ ರವಾನಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿದೆ.

15 ದಿನದಲ್ಲಿ 48 ಸಾವಿರ ಹೆಕ್ಟೇರ್‌ಗೆ ಹಾನಿ
ನವೆಂಬರ್‌ 16 ರವರೆಗೆ 14 ಜಿಲ್ಲೆಯ 48647 ಹೆಕ್ಟೇರ್‌ ಪ್ರದೇಶದಲ್ಲಿ ಬೆಳೆದಿದ್ದ ವಿವಿಧ ಬೆಳೆಗಳಿಗೆ ಹಾನಿಯಾಗಿದೆ. ಕೋಲಾರದಲ್ಲಿ ಅತಿ ಹೆಚ್ಚು ಅಂದರೆ 34447 ಹೆಕ್ಟೇರ್‌ ಬೆಳೆ ಹಾನಿಗೊಳಗಾಗಿದೆ. ರಾಮನಗರ 10371, ಚಾಮರಾಜನಗರ 1566, ಉತ್ತರ ಕನ್ನಡದಲ್ಲಿ 794 ಹೆಕ್ಟೇರ್‌ನಲ್ಲಿದ್ದ ಬೆಳೆಗೆ ಹಾನಿ ಉಂಟಾಗಿದೆ. ಇನ್ನುಳಿದ ಕೆಲ ಜಿಲ್ಲೆಗಳಲ್ಲಿ ಕಡಿಮೆ ಹಾನಿಯಾಗಿದ್ದು ಮಳೆ ಮುಂದುವರೆಯುತ್ತಿರುವುದರಿಂದ ಹಾನಿ ಪ್ರಮಾಣ ಇನ್ನೂ ಹೆಚ್ಚಲಿದೆ.

ತಿಂಗಳು ಬೆಳೆ ಹಾನಿ(ಹೆಕ್ಟೇರ್‌ಗಳಲ್ಲಿ)
ಜುಲೈ 250322
ಆಗಸ್ಟ್‌ 3421
ಸೆಪ್ಟೆಂಬರ್‌ 371647
ಅಕ್ಟೋಬರ್‌ 57914
ನವೆಂಬರ್‌ 48647
ಒಟ್ಟಾರೆ 731951

Follow Us:
Download App:
  • android
  • ios