Hijab Row:ಪಿಯುಸಿ, ಪದವಿ ಕಾಲೇಜು ಆರಂಭ ಯಾವಾಗ? ಸುಳಿವು ನೀಡಿದ ಶಿಕ್ಷಣ ಸಚಿವ

* ಕರ್ನಾಟಕದಲ್ಲಿ ಹಿಜಾಬ್, ಕೇಸರಿ ಶಾಲು ವಿವಾದ
* ಕಾಲೇಜು ಪುನಾರಂಭದ ಬಗ್ಗೆ ಸುಳಿವು ಕೊಟ್ಟ ಶಿಕ್ಷಣ ಸಚಿವ
* ಹಿಜಾಬ್‌ ವಿವಾದ ಹಿನ್ನೆಲೆಯಲ್ಲಿ ಕಾಲೇಜುಗಳಿಗೆ ರಜೆ ನೀಡಲಾಗಿತ್ತು

PUC and degree colleges Likely Start From Next Week Says Minister BC Nagesh rbj

ಹಾಸನ, (ಫೆ.13): ಕರ್ನಾಟಕದಲ್ಲಿ ಹಿಜಾಬ್ (Hijab Row)ಹಾಗೂ ಕೇಸರಿ ಶಾಲು ಗಲಾಟೆ ಹಿನ್ನೆಲೆಯಲ್ಲಿ ಶಾಲಾ-ಕಾಲೇಜುಗಳಿಗೆ ರಜೆ ನೀಡಲಾಗಿತ್ತು. ಇದೀಗ  ಸೋಮವಾರದಿಂದ (ಫೆ.14) ಪ್ರೌಢಶಾಲೆಗಳ 9 ಮತ್ತು 10ನೇ ತರಗತಿಗಳು ಆರಂಭವಾಗಲಿವೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸರು ಸಹ ಆಯಾ ಜಿಲ್ಲೆಗಳಲ್ಲಿ ಮುಂಜಾಗ್ರತಾ ಕ್ರಮಕೈಗೊಂಡಿದ್ದಾರೆ.

ಇನ್ನು ಪಿಯುಸಿ ಮತ್ತು ಪದವಿ ಕಾಲೇಜುಗಳ (College) ಆರಂಭದ ಬಗ್ಗೆ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಬಿಸಿ ನಾಗೇಶ್ (BC Nagesh) ಪ್ರತಿಕ್ರಿಯೆ ಕೊಟ್ಟಿದ್ದಾರೆ.

Hijab Row: ಕಾಲೇಜು ಆರಂಭ ವಿಳಂಬ, ಸರ್ಕಾರದ ಮುಂದಿನ ಸವಾಲುಗಳಿವು

ಹಾಸನ(Hassan)) ಜಿಲ್ಲೆ ಅರಸೀಕೆರೆಯಲ್ಲಿ ಮಾತನಾಡಿರುವ ಬಿ.ಸಿ.ನಾಗೇಶ್, ಸೋಮವಾರದಿಂದ (ಫೆ.14) ಪ್ರೌಢಶಾಲೆಗಳ 9 ಮತ್ತು 10ನೇ ತರಗತಿಗಳು ಆರಂಭವಾಗಲಿವೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ನೇತೃತ್ವದಲ್ಲಿ ನಡೆಯಲಿರುವ ಸಭೆಯಲ್ಲಿ ಪಿಯು ಮತ್ತು ಪದವಿ ಕಾಲೇಜುಗಳನ್ನು ಆರಂಭಿಸುವ ಬಗ್ಗೆ ನಿರ್ಧಾರ ಮಾಡಲಾಗುವುದು. ಬಹುತೇಕ ಮುಂದಿನ ವಾರದಿಂದ ಪದವಿ ತರಗತಿಗಳು ಆರಂಭವಾಗಲಿವೆ ಎಂದು ಸುಳಿವು ನೀಡಿದರು.

ದೇಶದಲ್ಲಿ ಗೊಂದಲ ಸೃಷ್ಟಿಸಲು ಹಲವರು ಯತ್ನಿಸುತ್ತಿದ್ದಾರೆ. ಕೋವಿಡ್ ಲಸಿಕೆ ಬಗ್ಗೆಯೂ ಗೊಂದಲ ಸೃಷ್ಟಿ ಮಾಡಿದ್ದರು. ಮಕ್ಕಳಲ್ಲಿ ನನ್ನ ದೇಶ ಎಂಬ ಮನೋಭಾವನೆ ಬೆಳೆಯಬೇಕು. ಡಿ.28ರವರೆಗೆ ವಿದ್ಯಾರ್ಥಿನಿಯರು ಸಮವಸ್ತ್ರದಲ್ಲಿ ಬರುತ್ತಿದ್ದರು. ಬಳಿಕ ಸಮವಸ್ತ್ರದ ಜತೆ ಹಿಜಾಬ್ ಧರಿಸಿ ಬರುವುದಾಗಿ ಹಟ ಹಿಡಿದರು. ಆ ವಿದ್ಯಾರ್ಥಿನಿಯರು ಯಾಕೆ ಹಾಗೆ ವರ್ತಿಸಿದರೆಂದು ಗೊತ್ತಿಲ್ಲ. ಒಂದು ಶಾಲೆಯ 6 ವಿದ್ಯಾರ್ಥಿಗಳ ಸಮಸ್ಯೆಯನ್ನು ಈಗ ಅಂತಾರಾಷ್ಟ್ರೀಯ ಸಮಸ್ಯೆ ಮಾಡಲು ಕೆಲವರು ಪ್ರಯತ್ನಿಸುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

ಈಗಾಗಲೇ ವಿಶ್ವದ ಹಲವು ದೇಶಗಳಲ್ಲಿ ಹಿಜಾಬ್, ಬುರ್ಖಾ ನಿಷೇಧ ಆಗಿದೆ. ಇಟಲಿಯಲ್ಲಿ ಬ್ಯಾನ್ ಆದಾಗ ಯಾರಿಗೂ ಸಮಸ್ಯೆ ಇರಲಿಲ್ಲ. ಫ್ರಾನ್ಸ್, ಜರ್ಮನ್, ರಷ್ಯಾದಲ್ಲಿ ಆದಾಗಲೂ ಸಮಸ್ಯೆ ಆಗಿಲ್ಲ. ಹಲವು ಮುಸ್ಲಿಂ ದೇಶಗಳಲ್ಲೂ ಹಿಜಾಬ್, ಬುರ್ಖಾ ನಿಷೇಧವಾಗಿದೆ. ನಮ್ಮಲ್ಲಿ ಬುರ್ಖಾ-ಹಿಜಾಬ್ ಧರಿಸುವ ಕುರಿತು ಚರ್ಚೆಯೇ ಆಗಿಲ್ಲ. ಮಕ್ಕಳು ಸಮವಸ್ತ್ರದಲ್ಲಿ ಶಾಲೆಗೆ ಬರಬೇಕೆಂದು ಹೇಳಿದ್ದೇವೆ ಅಷ್ಟೇ. ಸಮವಸ್ತ್ರ ವಿಚಾರದಲ್ಲಿ ಹೈಕೋರ್ಟ್ ನೀಡಿರುವ ಆದೇಶಕ್ಕೆ ಸರ್ಕಾರ ಬದ್ಧವಾಗಿರುತ್ತದೆ. ವಿನಾಕಾರಣ ಸಮಸ್ಯೆಯನ್ನು ಹುಟ್ಟಿಸಿದ್ದರಿಂದ ಹಾಗೂ ಅನಗತ್ಯವಾಗಿ ಒಂದು ರಾಜಕೀಯ ಪಕ್ಷ ಭಾಗಿಯಾಗಿದ್ದರಿಂದ ಮನಸುಗಳು ಸರಿಯಾಗಲಿ ಎಂದು ಶಾಲೆಗಳಿಗೆ ರಜೆ ನೀಡಿದ್ದೆವು ಎಂದರು.

ಹಿಜಾಬ್ ವಿವಾದದ ತನಿಖೆ
ಹಿಜಾಬ್ ವಿವಾದದ ಹಿಂದೆ ಯಾರಿದ್ದಾರೆಂದು ತನಿಖೆ ನಡೆಸಲಾಗುವುದು. ಸಮಗ್ರ ತನಿಖೆಯ ನಂತರವಷ್ಟೇ ಸತ್ಯಾಂಶ ಬಯಲಾಗಲಿದೆ. ಏಕಾಏಕಿ ಹಿಜಾಬ್ ವಿವಾದ ಹೇಗೆ ಸೃಷ್ಟಿಯಾಯಿತು? ಯಾವ ವಿದ್ಯಾರ್ಥಿನಿಯರು ಇಂಥ ವಿಚಾರಗಳನ್ನು ರಿಟ್ವೀಟ್ ಮಾಡುತ್ತಿದ್ದಾರೆ ಎಂಬ ಅಂಶಗಳ ಬಗ್ಗೆಯೂ ತನಿಖೆ ನಡೆಯಲಿದೆ ಎಂದು ಹೇಳಿದರು.

 ಗೃಹ ಇಲಾಖೆ ಇದನ್ನ ತನಿಖೆ ಮಾಡುತ್ತಿದೆ. ಹಿಜಾಬ್ ವಿವಾದವನ್ನು ದೇಶದಾದ್ಯಂತ ಹರಡಿಸಲು ಪಾಕಿಸ್ತಾನದ ಐಎಸ್ಐ ಪ್ರಯತ್ನ ಮಾಡಿದೆ ಎಂಬ ಮಾತುಗಳ ಕುರಿತು ಪ್ರತಿಕ್ರಿಯಿಸಿದ ಅವರು, ಮೋದಿಯವರ ಸರ್ಕಾರ ಬಂದ ಬಳಿಕ ಪಾಕಿಸ್ತಾನದ ಎಲ್ಲಾ ಪ್ರಯತ್ನ ಏನಾಗಿದೆ ಎಂದು ಗೊತ್ತಿದೆ. ಜಮ್ಮುವನ್ನು ದಾಟಿ ಒಂದೇ ಒಂದು ಬಾಂಬ್ ಸಿಡಿಸಲು ಆಗಿಲ್ಲ. ಅದಕ್ಕಿಂತ ಮುಂಚೆ ಹೇಗೆ ಬಾಂಬೆ, ಟಾಟಾ ಸಂಸ್ಥೆಯಲ್ಲಿ ಬಾಂಬ್ ಬ್ಲಾಸ್ಟ್ ಆಯ್ತು ಇದೆಲ್ಲವನ್ನು ನೋಡಿದ್ದೇವೆ ಎಂದು ತಿಳಿಸಿದರು.

 ಮೋದಿ ಸರ್ಕಾರ ಬಂದ ಬಳಿಕ ಭಯೋತ್ಪಾದಕತೆ ಕಡಿಮೆ ಆಗಿದೆ. ಜಗತ್ತಿನಲ್ಲಿ ಭಾರತಕ್ಕೆ ಸಿಗುತ್ತಿರೊ ಬೆಲೆ ತಡೆಯಲಾಗದ ಪಾಕಿಸ್ತಾನ ಇನ್ನೇನು ತಾನೆ ಮಾಡಲು ಸಾಧ್ಯ. ಭಾರತವು ಈ ಸವಾಲನ್ನು ಒಂದಾಗಿ ಎದುರಿಸಲಿದೆ ಎಂದರು.

Latest Videos
Follow Us:
Download App:
  • android
  • ios