ರಾಜ್ಯದಲ್ಲಿ 10 ನಾರಾಯಣಗುರು ವಸತಿ ಶಾಲೆ ಆರಂಭ ಪ್ರಸ್ತಾಪ

ಬ್ರಹ್ಮಶ್ರೀ ನಾರಾಯಣ ಗುರುಗಳ ಹೆಸರಿನಲ್ಲಿ ರಾಜ್ಯದಲ್ಲಿ ನಾಲ್ಕು ವಸತಿಯುತ ಶಾಲೆಗಳನ್ನು ಆರಂಭಿಸಲಾಗಿದ್ದು, ಇನ್ನೂ 10 ಶಾಲೆ ಆರಂಭಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಹಮತ ವ್ಯಕ್ತಪಡಿಸಿದ್ದಾರೆ ಎಂದು ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.

Proposal to start 10 Narayanguru residential schools in the state karnataka rav

ಮಂಗಳೂರು (ಸೆ.11) : ಬ್ರಹ್ಮಶ್ರೀ ನಾರಾಯಣ ಗುರುಗಳ ಹೆಸರಿನಲ್ಲಿ ರಾಜ್ಯದಲ್ಲಿ ನಾಲ್ಕು ವಸತಿಯುತ ಶಾಲೆಗಳನ್ನು ಆರಂಭಿಸಲಾಗಿದ್ದು, ಇನ್ನೂ 10 ಶಾಲೆ ಆರಂಭಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಹಮತ ವ್ಯಕ್ತಪಡಿಸಿದ್ದಾರೆ ಎಂದು ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ದಕ್ಷಿಣ ಕನ್ನಡ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಮಂಗಳೂರು ಮಹಾನಗರ ಪಾಲಿಕೆ ವತಿಯಿಂದ ನಗರದ ಟಿಎಂಎ ಪೈ ಸಭಾಂಗಣದಲ್ಲಿ ಶನಿವಾರ ರಾಜ್ಯಮಟ್ಟದ ಬ್ರಹ್ಮಶ್ರೀ ನಾರಾಯಣ ಗುರು ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ನಾರಾಯಣಗುರು ಪಠ್ಯ ಮರುಸೇರ್ಪಡೆ ಹೋರಾಟಕ್ಕೆ ಸಂದ ಜಯ; ಬಿಲ್ಲವ ನಾಯಕರ ಸ್ಪಷ್ಟನೆ

ರಾಜ್ಯದಲ್ಲಿ ನಾಲ್ಕು ಕಡೆ ವಸತಿ ಶಾಲೆ ಆರಂಭಿಸಿದ ಬಳಿಕ ಅಲ್ಲಿ ಮಕ್ಕಳ ಸಂಖ್ಯೆ ಗಣನೀಯವಾಗಿ ಹೆಚ್ಚಳವಾದ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಇನ್ನೂ ಹತ್ತು ವಸತಿ ಶಾಲೆಗಳ ಪ್ರಸ್ತಾಪ ಮುಖ್ಯಮಂತ್ರಿಗಳ ಎದುರು ಇರಿಸಲಾಗಿದೆ ಎಂದರು. 3 ಸೇನಾಪೂರ್ವ ತರಬೇತಿ ಸಂಸ್ಥೆ: ಈಗಾಗಲೇ ಉಡುಪಿಯಲ್ಲಿ ಕೋಟಿ ಚೆನ್ನಯರ ಹೆಸರಿನಲ್ಲಿ ಸೇನಾ ಪೂರ್ವಾ ತರಬೇತಿ ಸಂಸ್ಥೆ ಕಾರ್ಯಾರಂಭ ಆಗಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ರಾಣಿ ಅಬ್ಬಕ್ಕ ಹೆಸರಿನಲ್ಲಿ ಸೇನಾ ಪೂರ್ವ ತರಬೇತಿ ಸಂಸ್ಥೆ ಆರಂಭವಾಗಲಿದ್ದು, ಇದರ ಉದ್ಘಾಟನೆಗೆ ಕೇಂದ್ರ ರಕ್ಷಣಾ ಸಚಿವರನ್ನು ಆಹ್ವಾನಿಸಲಾಗುವುದು. ಅದೇ ರೀತಿ ಉತ್ತರ ಕನ್ನಡ ಜಿಲ್ಲೆಯಲ್ಲಿ ಕೂಡ ಶೀಘ್ರದಲ್ಲೇ ತರಬೇತಿ ಸಂಸ್ಥೆ ಆರಂಭವಾಗಲಿದೆ ಎಂದರು.

ಜಿಲ್ಲಾ ಉಸ್ತುವಾರಿ ಸಚಿವ ಸುನಿಲ್‌ ಕುಮಾರ್‌(V.Sunil Kumar) ಮಾತನಾಡಿ, ಸಮಾಜವನ್ನು ಬದಲಾಯಿಸಿದ ಮಹಾಪುರುಷರ ಜಯಂತಿಯನ್ನು ಬೆಂಗಳೂರಿನಲ್ಲಿ ಆಚರಿಸಿದರೆ ಕೆಲವೇ ಕೆಲವು ಮಂದಿ ಭಾಗವಹಿಸಲು ಸಾಧ್ಯವಾಗುತ್ತದೆ. ಹೆಚ್ಚು ಜನರಿಗೆ ಆ ದಾರ್ಶನಿಕರ ತತ್ವ ಸಿದ್ಧಾಂತಗಳನ್ನು ತಲುಪಿಸಲು ಸಾಧ್ಯವಾಗದು. ಹಾಗಾಗಿ ಜಿಲ್ಲೆಗಳಲ್ಲಿ ಜನರ ನಡುವೆ ಜಯಂತಿಗಳನ್ನು ಆಚರಿಸಬೇಕು ಎನ್ನುವ ನಿರ್ಧಾರವನ್ನು ಆರು ತಿಂಗಳ ಹಿಂದೆಯೇ ಮಾಡಲಾಗಿತ್ತು. ಅದರಂತೆ ನಾರಾಯಣ ಗುರುಗಳ ರಾಜ್ಯಮಟ್ಟದ ಜಯಂತಿಯನ್ನು ಮಂಗಳೂರಿನಲ್ಲಿ ಆಚರಿಸಲಾಗಿದೆ ಎಂದರು. ಸಮಾಜದ ನೂರಾರು ದಾರ್ಶನಿಕರು ಸಮಾನತೆಯ ಸಂದೇಶವನ್ನು ಸಾರಿದ್ದಾರೆ. ಅವರನ್ನೆಲ್ಲ ಒಂದೊಂದು ಜಾತಿಗೆ ಸೀಮಿತ ಮಾಡುವುದು ಸರಿಯಲ್ಲ. ನಾರಾಯಣ ಗುರುಗಳ ತತ್ವ ಸಿದ್ಧಾಂತಗಳು ಇಡೀ ಮಾನವ ಕುಲಕ್ಕೆ ಅನ್ವಯಿಸುವಂಥದ್ದು ಎಂದು ಹೇಳಿದರು.

ಸಂಸದ ನಳಿನ್‌ ಕುಮಾರ್‌ ಕಟೀಲು ಮಾತನಾಡಿ, ಕೇರಳದಲ್ಲಿ ಹಿಂದೂ ಧರ್ಮ ಮತ್ತು ಸಂಸ್ಕೃತಿಯನ್ನು ಉಳಿಸಿದ್ದು ನಾರಾಯಣ ಗುರುಗಳು. ಅವರ ಹೆಸರಿನಲ್ಲಿ ರಾಜ್ಯದಲ್ಲಿ ವಸತಿ ಶಾಲೆಗಳನ್ನು ಆರಂಭಿಸಿರುವುದು ಅಭಿನಂದನೀಯ. ನಾರಾಯಣ ಗುರುಗಳ ಕುರಿತು ರಸ್ತೆಯಲ್ಲಿ ನಿಂತು ಚರ್ಚೆ ಮಾಡುವುದು ಸರಿಯಲ್ಲ, ಅವರ ಆದರ್ಶಗಳು, ಸಂದೇಶಗಳನ್ನು ಪಾಲನೆ ಮಾಡಬೇಕಾಗಿದೆ. ನಾರಾಯಣ ಗುರುಗಳು ಯಾವುದೇ ಜಾತಿಗೆ ಸೀಮಿತರಲ್ಲ ಎಂದರು.

ಶಾಸಕರಾದ ವೇದವ್ಯಾಸ ಕಾಮತ್‌(MLA Vedavyas Kamath), ಭರತ್‌ ಶೆಟ್ಟಿ(Bharath Shetty), ಸಂಜೀವ ಮಠಂದೂರು(Sanjeev Matandoor), ರಾಜೇಶ್‌ ನಾೖಕ್‌, ಹರೀಶ್‌ ಪೂಂಜ(Harish poonja), ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ(Ratnakar hegde), ಮೇಯರ್‌ ಜಯಾನಂದ ಅಂಚನ್‌(Mayor Jayananda Anchan), ಉಪಮೇಯರ್‌ ಪೂರ್ಣಿಮಾ, ಜಿಲ್ಲಾ ಪಂಚಾಯಿತಿ ಸಿಇಒ ಡಾ.ಕುಮಾರ್‌, ಮಂಗಳೂರು ನಗರ ಪೊಲೀಸ್‌ ಆಯುಕ್ತ ಶಶಿಕುಮಾರ್‌ ಮತ್ತಿತರರು ಇದ್ದರು.

ಬಾಕ್ಸ್‌

ಅದ್ಧೂರಿ ಮೆರವಣಿಗೆ: ಟ್ರಾಫಿಕ್‌ ಜಾಮ್:

ಜಯಂತಿ ಆಚರಣೆ ಅಂಗವಾಗಿ ಶನಿವಾರ ಸಂಜೆ ನಗರದ ಲೇಡಿಹಿಲ್‌ನಲ್ಲಿರುವ ಬ್ರಹ್ಮಶ್ರೀ ನಾರಾಯಣ ಗುರುಗಳ ವೃತ್ತದಲ್ಲಿ ಅದ್ಧೂರಿ ಮೆರವಣಿಗೆಗೆ ಜಿಲ್ಲಾ ಉಸ್ತುವಾರಿ ಸಚಿವ ವಿ.ಸುನಿಲ್‌ ಕುಮಾರ್‌ ಚಾಲನೆ ನೀಡಿದರು. ನಾರಾಯಣ ಗುರುಗಳ ವಿವಿಧ ಸ್ತಬ್ಧ ಚಿತ್ರಗಳು,ಚೆಂಡೆ, ಡೊಳ್ಳು ಕುಣಿತ, ವಿವಿಧ ಕಲಾತಂಡಗಳು ಈ ಮೆರವಣಿಗೆಯಲ್ಲಿ ಭಾಗವಹಿಸಿದ್ದವು. ಅಲ್ಲಿಂದ ಕಾರ್ಯಕ್ರಮ ನಡೆಯುವ ಟಿಎಂಎ ಪೈ ಕನ್ವೆನ್ಶನ್‌ ಸೆಂಟರ್‌ವರೆಗೆ ಮೆರವಣಿಗೆ ನಡೆಯಿತು. ಇದಕ್ಕಾಗಿ ಈ ಮುಖ್ಯ ರಸ್ತೆಯಲ್ಲಿ ವಾಹನ ಸಂಚಾರ ಸ್ಥಗಿತಗೊಳಿಸಿದ್ದರಿಂದ ಸುಮಾರು ಒಂದು ಗಂಟೆಗೂ ಅಧಿಕ ಕಾಲ ನಗರದ ಬಹುತೇಕ ರಸ್ತೆಗಳಲ್ಲಿ ವಿಪರೀತ ಟ್ರಾಫಿಕ್‌ ಜ್ಯಾಂ ಉಂಟಾಗಿತ್ತು. ಜನಸಾಮಾನ್ಯರು ತೀವ್ರ ಬವಣೆ ಅನುಭವಿಸಿದರು.

Latest Videos
Follow Us:
Download App:
  • android
  • ios