Asianet Suvarna News Asianet Suvarna News

ಮಕ್ಕಳ ಮನಸ್ಸನ್ನು ಕಲುಷಿತಗೊಳಿಸುವ ಪಠ್ಯಪುಸ್ತಕಕ್ಕೆ ಅವಕಾಶವಿಲ್ಲ: ಸಿಎಂ ಸಿದ್ದರಾಮಯ್ಯ

ನೂತನ ಶಿಕ್ಷಣ ರೀತಿ ವಿರುದ್ಧ ಸಿದ್ದು ಕಿಡಿಕಾರಿದ್ದು, ಎನ್‌ಇಪಿ ನೆಪದಲ್ಲಿ ಶಿಕ್ಷಣ ಕ್ಷೇತ್ರ ಹಾಳಾಗಲು ಬಿಡಲ್ಲ. ಈ ಬಗ್ಗೆ ನಿಷ್ಠುರ ತೀರ್ಮಾನ ಮಾಡುವೆ. ರೈತರು, ದಲಿತರು, ಹೋರಾಟಗಾರರ ಮೇಲಿನ ಸುಳ್ಳು ಕೇಸು ರದ್ದು. ಅನೈತಿಕ ಪೊಲೀಸ್‌ಗಿರಿ ವಿರುದ್ಧ ಕ್ರಮ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

Proper action will be taken on textbooks revision says CM Siddaramaiah kannada news gow
Author
First Published May 30, 2023, 10:51 AM IST

ಬೆಂಗಳೂರು (ಮೇ.30): ಹೊಸ ಶಿಕ್ಷಣ ನೀತಿ ಹೆಸರಿನಲ್ಲಿ ಶಿಕ್ಷಣ (education) ಕ್ಷೇತ್ರವನ್ನು ಹಾಳುಗೆಡವಲು ಅವಕಾಶ ಕೊಡುವುದಿಲ್ಲ. ಅನೈತಿಕ ಪೊಲೀಸ್‌ ಗಿರಿ (Moral policing) ವಿರುದ್ಧ ಕಠಿಣ ಕ್ರಮಕೈಗೊಳ್ಳುತ್ತೇನೆ. ರೈತರು, ಕಾರ್ಮಿಕ ದಲಿತರು ಮತ್ತು ಕನ್ನಡಪರ ಹೋರಾಟಗಾರರ ಮೇಲಿನ ಸುಳ್ಳು ಮೊಕದ್ದಮೆ ವಾಪಸ್‌ ಮಾಡಲಾಗುವುದು. ಹೀಗಂತ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮನ್ನು ಭೇಟಿ ಮಾಡಿದ ಸಾಹಿತಿಗಳು ಹಾಗೂ ವಿವಿಧ ಜನಪರ ಸಂಘಟನೆಗಳ ಮುಖ್ಯಸ್ಥರಿಗೆ ಭರವಸೆ ನೀಡಿದ್ದಾರೆ.

ಸೋಮವಾರ ಗೃಹ ಕಚೇರಿ ಕೃಷ್ಣಾದಲ್ಲಿ ಸಾಹಿತಿಗಳು ಹಾಗೂ ವಿವಿಧ ಜನಪರ ಸಂಘಟನೆಗಳ ಮುಖ್ಯಸ್ಥರು ಈ ಕುರಿತು ಸಲ್ಲಿಸಿದ ಮನವಿ ಅವರು ಸ್ವೀಕರಿಸಿ ಮಾತನಾಡಿದ ಅವರು, ಪಠ್ಯ ಮತ್ತು ಪಾಠಗಳ ಮೂಲಕ ಮಕ್ಕಳ ಮನಸ್ಸನ್ನು ಕಲುಷಿತಗೊಳಿಸಲು ನಡೆಸಿರುವ ಕೃತ್ಯವನ್ನು ಕ್ಷಮಿಸಲು ಸಾಧ್ಯವಿಲ್ಲ. ಶೈಕ್ಷಣಿಕ ವರ್ಷ ಆರಂಭ ಆಗಿರುವುದರಿಂದ ಮಕ್ಕಳ ಶಿಕ್ಷಣಕ್ಕೆ ತೊಂದರೆ ಆಗದಂತೆ ಈ ಕುರಿತು ಚರ್ಚಿಸಿ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.

ನೂತನ ಶಿಕ್ಷಣ ನೀತಿಗೆ ಕೊಕ್‌?: ರಾಜ್ಯದಲ್ಲಿ ಸೌಹಾರ್ದ ಮತ್ತು ಜಾತ್ಯತೀತ ಪರಂಪರೆಯ ರಕ್ಷಣೆ ವಿಚಾರದಲ್ಲಿ ಯಾವುದೇ ರಾಜಿ ಇಲ್ಲ. ದ್ವೇಷದ ರಾಜಕಾರಣವನ್ನು ಕೊನೆಗಾಣಿಸುತ್ತೇವೆ. ಹೊಸ ಶಿಕ್ಷಣ ನೀತಿ ಹೆಸರಲ್ಲಿ ಶಿಕ್ಷಣ ಕ್ಷೇತ್ರವನ್ನು ಗಬ್ಬೆಬ್ಬಿಸಲು ಅವಕಾಶ ಕೊಡುವುದಿಲ್ಲ. ಈ ಬಗ್ಗೆ ಮತ್ತೊಮ್ಮೆ ಪ್ರತ್ಯೇಕವಾದ ಸಭೆ ಕರೆದು ಸಮಗ್ರವಾಗಿ ಚರ್ಚಿಸಿ ನಿಷ್ಠುರವಾದ ಮತ್ತು ಖಚಿತವಾದ ತೀರ್ಮಾನಗಳನ್ನು ತೆಗೆದುಕೊಳ್ಳಲಾಗುವುದು ಎಂದರು.

ರಾಜ್ಯದಲ್ಲಿ ಅನೈತಿಕ ಪೊಲೀಸ್‌ ಗಿರಿ, ದ್ವೇಷದ ರಾಜಕಾರಣ, ತೇಜೋವಧೆ ಮಾಡುವ ಟ್ರೋಲ್‌ಗಳು ಮತ್ತು ಸಾಹಿತಿಗಳಿಗೆ ಬೆದರಿಕೆ ಹಾಕುವವರ ವಿರುದ್ಧ ಕಠಿಣ ಕಾನೂನು ಕ್ರಮಕ್ಕೆ ಈಗಾಗಲೇ ರಾಜ್ಯ ಪೊಲೀಸ್‌ ಮಹಾ ನಿರ್ದೇಶಕರಿಗೆ ಖಡಕ್‌ ಸೂಚನೆ ನೀಡಿದ್ದೇನೆ ಎಂದು ತಿಳಿಸಿದರು.

ಅ ಸಭೆಯಲ್ಲಿ ಸಾಹಿತಿಗಳಾದ ಡಾ.ಕೆ.ಮರುಳಸಿದ್ದಪ್ಪ, ಪ್ರೊ.ಎಸ್‌.ಜಿ.ಸಿದ್ದರಾಮಯ್ಯ, ಡಾ.ನಿರಂಜನಾರಾಧ್ಯ, ಪ್ರೊ.ಎಲ್‌.ಎನ್‌.ಮುಕುಂದರಾಜ್‌, ಡಾ.ಬಂಜಗೆರೆ ಜಯಪ್ರಕಾಸ್‌, ಜಾಣಗೆರೆ ವೆಂಕಟರಾಮಯ್ಯ, ಕೆ.ಎಸ್‌.ವಿಮಲಾ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

ಸಾಹಿತಿಗಳ ಪತ್ರದಲ್ಲೇನಿದೆ?: ಸಂವಿಧಾನ ವಿರೋಧಿ, ಕೋಮುವಾದಿ ಪಠ್ಯಪುಸ್ತಕಕ್ಕೆ (Textbook) ಕೂಡಲೇ ತಿದ್ದುಪಡಿ ಮಾಡಿ, ಮಕ್ಕಳ ಮನಸಿನ ಮೇಲೆ ಬೀರುವ ದುಷ್ಪರಿಣಾಮ ತಡೆಯಬೇಕು. ಮುಂದಿನ ವರ್ಷದ ವೇಳೆಗೆ ಪಠ್ಯಪುಸ್ತಕ ಪರಿಷ್ಕರಣೆ ಮಾಡಬೇಕು. ಶಿಕ್ಷಣ ಇಲಾಖೆಯ ಆಡಳಿತ ವ್ಯವಸ್ಥೆಯಲ್ಲಿ ಬದಲಾವಣೆ ಮಾಡಬೇಕು. ರದ್ದಾಗಿರುವ ವಿದ್ಯಾರ್ಥಿ (Student) ವೇತನ ಮರು ಜಾರಿಯಾಗಬೇಕು. ರಾಷ್ಟ್ರೀಯ ಶಿಕ್ಷಣ ನೀತಿಯನ್ನು (National Education Policy) ಹಿಂಪಡೆಯಬೇಕು. ಕನ್ನಡ ಸಾಹಿತ್ಯ ಪರಿಷತ್ತಿನ ಸ್ವಾಯತ್ತತೆ ರಕ್ಷಣೆ ಮಾಡಲು ಮಸೂದೆ ಮಂಡಿಸಬೇಕು. ಹಿಜಾಬ್‌ ವಿವಾದದ ಹಿನ್ನಲೆಯಲ್ಲಿ ಜಾರಿಗೊಳಿಸಲಾಗಿದ್ದ ಸಮವಸ್ತ್ರ ಕುರಿತ ಸರ್ಕಾರಿ ಆದೇಶ ಹಿಂಪಡೆಯಬೇಕು ಎಂಬುದು ಸೇರಿದಂತೆ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಸಾಹಿತಿಗಳು ಮನವಿ ಸಲ್ಲಿಸಿದರು.

ಕರ್ನಾಟಕ ಜಾನಪದ ವಿವಿಯಲ್ಲಿ ರಾತ್ರೋರಾತ್ರಿ ಅಕ್ರಮ ನೇಮಕಾತಿ!

ಬಿಜೆಪಿ ಅವಧಿಯ ಪಠ್ಯ ಪರಿಷ್ಕರಣೆ ರದ್ದತಿಗೆ ಒತ್ತಾಯ
ಬೆಂಗಳೂರು: ಮುಂಬರುವ ಆಯವ್ಯಯದಲ್ಲಿ ಶಿಕ್ಷಣಕ್ಕೆ ಶೇ.20ರಷ್ಟುಅನುದಾನ ಮೀಸಲಿಡಬೇಕು, ಕಳೆದ ಬಿಜೆಪಿ ಸರ್ಕಾರದಲ್ಲಿ ಪಠ್ಯಪರಿಷ್ಕರಣೆ ಮೂಲಕ ಬದಲಾಯಿಸಿದ್ದ ಎಲ್ಲ ಪಾಠಗಳು ಅಥವಾ ಕಲಿಕಾಂಶಗಳನ್ನು ಪಠ್ಯಪುಸ್ತಕದಿಂದ ಕೈಬಿಡಬೇಕು. ಜೊತೆಗೆ ಎಲ್ಲ ಪಠ್ಯಪುಸ್ತಕಗಳನ್ನು ಕೂಲಂಕಷವಾಗಿ ಪರಿಶೀಲಿಸಿ ಪುನರ್‌ ಪರಿಶೀಲಿಸಲು ಕೂಡಲೇ ತಜ್ಞರ ಸಮಿತಿ ರಚಿಸಬೇಕೆಂದು ಕರ್ನಾಟಕ ರಾಜ್ಯ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಗಳ ಸಮನ್ವಯ ವೇದಿಕೆ ಸರ್ಕಾರವನ್ನು ಒತ್ತಾಯಿಸಿದೆ.

ಈ ಸಂಬಂಧ ಸಮನ್ವಯ ವೇದಿಕೆಯ ಮಹಾ ಪೋಷಕ ಪ್ರೊ.ವಿ.ಪಿ.ನಿರಂಜನಾರಾಧ್ಯ ಅವರ ಅಧ್ಯಕ್ಷತೆಯಲ್ಲಿ ಸೋಮವಾರ ನಡೆದ ರಾಜ್ಯ ಸಮಿತಿ ಸಭೆಯಲ್ಲಿ ಚರ್ಚಿಸಿ ಕೆಲವು ಹಕ್ಕೊತ್ತಾಯಗಳನ್ನು ಮಂಡಿಸಲಾಗಿದೆ.

ನಿನ್ನೆಯೇ ಬಹುತೇಕ ಖಾಸಗಿ ಶಾಲೆ ಶುರು, ನಾಳೆಯಿಂದ ಸರ್ಕಾರಿ ಸ್ಕೂಲ್‌ ಆರಂಭ

ಬಿಜೆಪಿ ಅವಧಿಯಲ್ಲಿ ಸಂವಿಧಾನ ಬಾಹಿರವಾಗಿ ಪಠ್ಯಪರಿಷ್ಕರಣೆ ಮಾಡಿ ಮಕ್ಕಳಲ್ಲಿ ಕೋಮುಭಾವನೆ ಮುಡಿಸುವ ಪಾಠಗಳನ್ನು ಸೇರಿಸಲಾಗಿದೆ. ಅಂತಹ ಎಲ್ಲ ಪಾಠಗಳನ್ನೂ ಕೈಬಿಟ್ಟು ಉಳಿದ ಪಾಠಗಳನ್ನು ಮಾತ್ರ ಬೋಧಿಸಲು ಶಿಕ್ಷಕರಿಗೆ ಸೂಚನೆ ನೀಡಬೇಕು. ಜತೆಗೆ ಅಂತಹ ಪಾಠಗಳನ್ನು ಪುನರ್‌ ಪರಿಷ್ಕರಣೆ ಮೂಲಕ ತೆಗೆದುಹಾಕಲು ತಜ್ಞರ ಸಮಿತಿ ರಚಿಸಬೇಕು. 15 ಸಾವಿರ ಶಿಕ್ಷಕರ ನೇಮಕಾತಿ ಪ್ರಕ್ರಿಯೆ ಪೂರ್ಣಗೊಳಿಸಲು ಕ್ರಮ ವಹಿಸಬೇಕು. ಖಾಲಿ ಇರುವ ಇನ್ನಷ್ಟುಶಿಕ್ಷಕ ಹುದ್ದೆಗಳ ಭರ್ತಿಗೂ ತಕ್ಷನ ಮುಂದಾಗಬೇಕು. ಸಮವಸ್ತ್ರ, ಪಠ್ಯಪುಸ್ತಕ, ಶೂ ಮತ್ತು ಸಾಕ್ಸ್‌ ಅನ್ನು ವಿಳಂಬವಾಗದಂತೆ ವಿದ್ಯಾರ್ಥಿಗಳಿಗೆ ನೀಡಬೇಕು. ಪ್ರೌಢ ಶಾಲಾ ಮಕ್ಕಳಿಗೆ ಸೈಕಲ್‌ ನೀಡುವ ಯೋಜನೆ ಪುನಾರಂಭಸಬೇಕೆಂದು ಕೋರಿದೆ. ಸರ್ಕಾರಿ, ಅನುದಾನಿತ ಶಾಲಾ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟದ ಜೊತೆಗೆ ಬೆಳಗಿನ ಉಪಹಾರ ಯೋಜನೆ ಜಾರಿಗೆ ತರಬೇಕು. ಅಂಗನವಾಡಿಯಿಂದ 10ನೇ ತರಗತಿ ವರೆಗೆ ಎಲ್ಲ ಮಕ್ಕಳಿಗೂ ಅಪೌಷ್ಠಿಕತೆ ತಡೆಗಟ್ಟಲು ಮೊಟ್ಟೆವಿತರಿಸಬೇಕು ಎಂದು ಮನವಿ ಮಾಡಲಾಗಿದೆ.

Follow Us:
Download App:
  • android
  • ios