ಕರ್ನಾಟಕ ಜಾನಪದ ವಿವಿಯಲ್ಲಿ ರಾತ್ರೋರಾತ್ರಿ ಅಕ್ರಮ ನೇಮಕಾತಿ!
ವಿಧಾನಸಭಾ ಚುನಾವಣೆಯ ನೀತಿ ಸಂಹಿತೆ ಜಾರಿಯಲ್ಲಿರುವಾಗ ಹಾವೇರಿಯ ಕರ್ನಾಟಕ ಜಾನಪದ ವಿಶ್ವವಿದ್ಯಾಲಯದಲ್ಲಿ ರಾತೋರಾತ್ರಿ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ನೇಮಕಾತಿ ನಡೆದಿದೆ ಎನ್ನಲಾಗಿದೆ.
ಬೆಂಗಳೂರು (ಮೇ): ವಿಧಾನಸಭಾ ಚುನಾವಣೆಯ ನೀತಿ ಸಂಹಿತೆ ಜಾರಿಯಲ್ಲಿರುವಾಗ ಹಾವೇರಿಯ ಕರ್ನಾಟಕ ಜಾನಪದ ವಿಶ್ವವಿದ್ಯಾಲಯದಲ್ಲಿ ರಾತೋರಾತ್ರಿ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಯನ್ನು ನಿಯಮಾವಳಿ ಮೀರಿ ಅಕ್ರಮವಾಗಿ ನೇಮಕ ಮಾಡಿರುವುದರಿಂದ ನೇಮಕಾತಿಗೆ ತಡೆ ನೀಡಿ ವಿಶೇಷ ತನಿಖಾ ಸಂಸ್ಥೆಯ ಮೂಲಕ ತನಿಖೆ ನಡೆಸಬೇಕು ಎಂದು ರಾಜ್ಯ ಸರ್ಕಾರಕ್ಕೆ ಕೆಪಿಸಿಸಿ ವಕ್ತಾರ ರಮೇಶ್ ಬಾಬು ಮನವಿ ಮಾಡಿದ್ದಾರೆ. ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿರುವ ಅವರು, ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿದ್ದ ಸಂದರ್ಭದಲ್ಲಿ ಸಹಾಯಕ ಪ್ರಾಧ್ಯಾಪಕರು, ಬೋಧಕ ಸಿಬ್ಬಂದಿ, ಬೋಧಕೇತರ ಸಿಬ್ಬಂದಿಗೆ ಆತುರವಾಗಿ ಅರ್ಹತಾ ಪರೀಕ್ಷೆ ನಡೆಸಲಾಗಿದೆ. ಚುನಾಯಿತ ಸರ್ಕಾರ ಇಲ್ಲದ ಸಂದರ್ಭದಲ್ಲಿ ಸ್ವಜನ ಪಕ್ಷಪಾತ ಮತ್ತು ಹಣದ ವ್ಯವಹಾರ ನಡೆಸಲು ಸಂದರ್ಶನಕ್ಕೆ ಕರೆದು ನೇಮಕಾತಿಗೆ ಚಾಲನೆ ನೀಡಲಾಗಿದೆ. ಅರ್ಧ ರಾತ್ರಿಯಲ್ಲಿ ಸಂದರ್ಶನ ನಡೆಸಿ ಕಾನೂನುಬಾಹಿರವಾಗಿ ಗೊತ್ತುವಳಿ ಮಾಡಿರುವುದು ಅನುಮಾನಕ್ಕೆ ಕಾರಣವಾಗಿದೆ ಎಂದು ತಿಳಿಸಿದ್ದಾರೆ.
KCET 2023: ಆನ್ ಲೈನ್ ನಲ್ಲಿ ಪಿಯು ಅಂಕ ದಾಖಲಿಸಲು ಕೆಇಎ ಕಡ್ಡಾಯ ಸೂಚನೆ
ರಾತ್ರೋರಾತ್ರಿ ಸಂದರ್ಶನ:
2018ರಲ್ಲಿ ನೇಮಕಾತಿಗೆ ಅರ್ಜಿ ಆಹ್ವಾನಿಸಿದ್ದು, ಕಳೆದ 5 ವರ್ಷದಿಂದಲೂ ನೇಮಕಾತಿ ಚಾಲನೆಯಲ್ಲಿಟ್ಟು ಇದೀಗ ಚುನಾವಣೆ ನಂತರ ಆತುರವಾಗಿ ಅಭ್ಯರ್ಥಿಗಳನ್ನು ರಾತ್ರೋರಾತ್ರಿ ಸಂದರ್ಶನಕ್ಕೆ ಕರೆಯಲಾಗಿದೆ. ಉನ್ನತ ಶಿಕ್ಷಣ ಇಲಾಖೆಯ ಅಧಿಕಾರಿಗಳು ವಿವಿಯ ಅಕ್ರಮ ತಡೆಯುವ ಪ್ರಯತ್ನ ಮಾಡಿಲ್ಲ. ವಿವಿಯ ಕುಲಪತಿ, ಕುಲಸಚಿವ ಮತ್ತು ಇತರೆ ಅಧಿಕಾರಿಗಳು ಶಿಕ್ಷಣ ಇಲಾಖೆಯ ಅಧಿಕಾರಿಗಳು ಮತ್ತು ರಾಜ್ಯ ಸರ್ಕಾರವನ್ನು ಕತ್ತಲಲ್ಲಿ ಇಟ್ಟು ಅಕ್ರಮಕ್ಕೆ ಮುಂದಾಗಿದ್ದಾರೆ ಎಂದು ಪತ್ರದಲ್ಲಿ ವಿವರಿಸಿದ್ದಾರೆ.
ಹಾವೇರಿ: ಶಿಥಿಲಾವಸ್ಥೆಯಲ್ಲಿ 2565 ಶಾಲಾ ಕೊಠಡಿಗಳು; ಕಣ್ಮುಚ್ಚಿ ಕುಳಿತ ಶಿಕ್ಷಣ ಇಲಾಖೆ!
ಈ ವಿವಿಯು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುತ್ತಿದ್ದು, ವಿಶ್ವವಿದ್ಯಾಲಯದ ನಡೆ ರಾಜಕೀಯ ಹಸ್ತಕ್ಷೇಪದ ಕರಿ ನೆರಳಿನಿಂದಲೂ ಕೂಡಿದೆ. ಆದ್ದರಿಂದ ಮುಖ್ಯ ಕಾರ್ಯದರ್ಶಿಗಳಿಗೆ ನಿರ್ದೇಶನ ನೀಡಿ ನೇಮಕಾತಿ ಪ್ರಕ್ರಿಯೆಗೆ ತಡೆ ನೀಡಬೇಕು ಎಂದು ಕೋರಿದ್ದಾರೆ.