ಬೆಂಗಳೂರು (ಅ.07):  ರಾಜ್ಯದಲ್ಲಿ ಮೊದಲ ಹಂತದಲ್ಲಿ ಪದವಿ, ಸ್ನಾತಕೋತ್ತರ ಪದವಿ ಕಾಲೇಜುಗಳು, 2ನೇ ಹಂತದಲ್ಲಿ ಪಿಯು ಮತ್ತು 3ನೇ ಹಂತದಲ್ಲಿ 6ನೇ ತರಗತಿಯಿಂದ ವಿದ್ಯಾರ್ಥಿಗಳಿಗೆ ಶಾಲೆಗಳನ್ನು ಆರಂಭಿಸುವಂತೆ ರಾಜ್ಯ ಸರ್ಕಾರದ ಶಿಕ್ಷಣ ಸುಧಾರಣೆಗಳ ಸಲಹೆಗಾರ ಪ್ರೊ. ಎಂ.ಆರ್‌. ದೊರೆಸ್ವಾಮಿ ಅವರು ಉನ್ನತ ಶಿಕ್ಷಣ ಹಾಗೂ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರಿಗೆ ಪತ್ರ ಬರೆದು ಸಲಹೆ ನೀಡಿದ್ದಾರೆ. 

ಈ ಸಂಬಂಧ ಮಂಗಳವಾರ ಪತ್ರ ಬರೆದಿರುವ ಅವರು, ಯುವಕರಿಗೆ ಮೊದಲು ಕಾಲೇಜುಗಳನ್ನು ಆರಂಭಿಸುವುದರಿಂದ ಕೊರೋನಾ ಬಗ್ಗೆ ಜಾಗೃತಿ ಹಾಗೂ ರೋಗ ನಿರೋಧಕ ಶಕ್ತಿಯೂ ಹೆಚ್ಚಿರುತ್ತದೆ ಎಂದು ತಿಳಿಸಿದ್ದಾರೆ.

ಆನ್‌ಲೈನ್ ಶಿಕ್ಷಣ ಯಶಸ್ಸಿಗೆ ಪಂಚ ಸೂತ್ರಗಳು ..

‘ಆರಂಭದಲ್ಲಿ ಸ್ಥಳೀಯ ವಿದ್ಯಾರ್ಥಿಗಳಿಗೆ ಶಾಲೆಗಳನ್ನು ಆರಂಭಿಸಬೇಕು. ಇನ್ನು ಹಾಸ್ಟೆಲ್‌ಗಳು ಹಾಗೂ ಅಂತಾರಾಜ್ಯ ಸಾರಿಗೆಗಳಲ್ಲಿ ಪ್ರಯಾಣಿಸುವ ವಿದ್ಯಾರ್ಥಿಗಳ ವಿಚಾರದಲ್ಲಿ ಉದ್ಭವವಾಗುವ ಸಮಸ್ಯೆಗಳನ್ನು ನಿವಾರಿಸುವ ನಿಟ್ಟಿನಲ್ಲಿ ಪರ್ಯಾಯ ಮಾರ್ಗವಾಗಿ ಆನ್‌ಲೈನ್‌ ತರಗತಿಗಳನ್ನು ನಡೆಸುವ ಮೂಲಕ ಶಿಕ್ಷಣ ನೀಡಬೇಕು. 

ಶಿಕ್ಷಣ ಸಂಸ್ಥೆಗಳಲ್ಲಿ ಆರೋಗ್ಯ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಜಾರಿಗೊಳಿಸಬೇಕು. ಇದರ ಜೊತೆಗೆ ವಿದ್ಯಾರ್ಥಿಗಳು ಹಾಗೂ ಶಾಲಾ- ಕಾಲೇಜಿನ ಸಿಬ್ಬಂದಿ ಸುರಕ್ಷತಾ ನಿರ್ವಹಣೆವನ್ನು ಶಿಕ್ಷಣ ಸಂಸ್ಥೆಯೇ ಹೊರಬೇಕು. ಶಿಕ್ಷಣ ಸಂಸ್ಥೆಯು ಎರಡು ಪಾಳಿಯಲ್ಲಿ ಬೋಧನೆ ಮಾಡಬೇಕು ಮತ್ತು ಪರ್ಯಾಯ ದಿನಗಳಂದು ತರಗತಿಗಳನ್ನು ನಡೆಸಬೇಕು’ ಎಂದು ಪತ್ರದಲ್ಲಿ ತಿಳಿಸಿದ್ದಾರೆ.