ಶಿಕ್ಷಕರ ಪ್ಯಾಕೇಜ್‌ಗೆ ಆರ್‌ಟಿಇ ಹಣ ಬೇಡ: ಖಾಸಗಿ ಶಾಲೆಗಳು
* ಸರ್ಕಾರದ ನಿರ್ಧಾರಕ್ಕೆ ಕೆಲ ಖಾಸಗಿ ಶಾಲೆ ಸಂಘಟನೆಗಳ ವಿರೋಧ
* ಆರ್‌ಟಿಇ ಮರುಪಾವತಿ ಹಣ ಮತ್ತಷ್ಟು ವಿಳಂಬ
* ಸರ್ಕಾರ ಆರ್‌ಟಿಇ ಮರುಪಾವತಿ ಹಣ ನೀಡಲು ಕ್ರಮ ವಹಿಸಲು ಒತ್ತಾಯ
ಬೆಂಗಳೂರು(ಜು.04): ರಾಜ್ಯ ಸರ್ಕಾರ ಖಾಸಗಿ ಶಾಲಾ ಶಿಕ್ಷಕರು ಹಾಗೂ ಬೋಧಕೇತರ ಸಿಬ್ಬಂದಿಗೆ ಆರ್ಥಿಕ ಪ್ಯಾಕೇಜ್ ನೀಡಲು ಶಿಕ್ಷಣ ಹಕ್ಕು ಕಾಯ್ದೆ (ಆರ್‌ಟಿಇ) ಮೀಸಲಾತಿ ಸೀಟುಗಳಿಗೆ ನೀಡಬೇಕಾದ ಮರುಪಾವತಿ ಹಣವನ್ನು ಬಳಸಲು ಸೂಚಿಸಿರುವುದಕ್ಕೆ ಕೆಲ ಖಾಸಗಿ ಶಾಲಾ ಸಂಘಟನೆಗಳು ಆಕ್ಷೇಪ ವ್ಯಕ್ತಪಡಿಸಿವೆ.
ಶಾಲೆಗಳಿಗೆ ಜನವರಿಯಲ್ಲೇ ಆರ್‌ಟಿಇ ಮರುಪಾವತಿ ಹಣ ನೀಡಬೇಕಿತ್ತಾದರೂ ಸರ್ಕಾರ ಇದುವರೆಗೂ ನೀಡಿಲ್ಲ. ಇದರ ನಡುವೆ ಈಗ ಅದೇ ಹಣವನ್ನು ಶಿಕ್ಷಕರ ಪರಿಹಾರ ಪ್ಯಾಕೇಜ್‌ಗೆ ಬಳಸಲು ಅಧಿಕಾರಿಗಳಿಗೆ ಸೂಚಿಸಿದೆ. ಇದರಿಂದ ಖಾಸಗಿ ಶಾಲೆಗಳಿಗೆ ಬರಬೇಕಾದ ಆರ್‌ಟಿಇ ಮರುಪಾವತಿ ಹಣ ಮತ್ತಷ್ಟು ವಿಳಂಬದ ಜೊತೆಗೆ ಮೊಟಕಾಗುವ ಆತಂಕ ಶುರುವಾಗಿದೆ. ಈಗಾಗಲೇ ಇಲಾಖೆಯು ಇಂತಹ ವಿವಿಧ ಕಾರ್ಯಗಳ ಹೆಸರಲ್ಲಿ ಒಂದಷ್ಟು ಆರ್‌ಟಿಇ ಹಣವನ್ನು ಮೊಟಕು ಮಾಡಿ ನೀಡುತ್ತಿದೆ. ಈಗ ಇನ್ನಷ್ಟು ಹಣ ಮೊಟಕು ಮಾಡಲು ಹುನ್ನಾರ ನಡೆಸಿದೆ. ಕೂಡಲೇ ಸರ್ಕಾರ ಆರ್‌ಟಿಇ ಮರುಪಾವತಿ ಹಣದ ಬದಲು ಇತರೆ ಅನುದಾನ ನೀಡುವುದಾಗಿ ಸರ್ಕಾರ ಘೋಷಿಸಬೇಕು. ಇಲ್ಲವೇ, ಆರ್‌ಟಿಇ ಮರುಪಾವತಿ ಹಣದಲ್ಲಿ ಬಳಸುವ ಪರಿಹಾರ ಪ್ಯಾಕೇಜ್ ಮೊತ್ತವನ್ನು ಬರಿಸುವುದಾಗಿ ಭರವಸೆ ನೀಡಬೇಕು ಎಂದು ಕರ್ನಾಟಕ ರಾಜ್ಯ ಪ್ರಾಥಮಿಕ ಮತ್ತು ಪ್ರೌಢಶಾಲಾ ಆಡಳಿತ ಮಂಡಳಿಗಳ ಒಕ್ಕೂಟದ (ಕ್ಯಾಮ್ಸ್) ಕಾರ್ಯದರ್ಶಿ ಡಿ.ಶಶಿಕುಮಾರ್ ಸರ್ಕಾರವನ್ನು ಆಗ್ರಹಿಸಿದ್ದಾರೆ.
ಶಿಕ್ಷಕರಿಗೆ 5000 ಪರಿಹಾರ : ಯಾವ ಶಿಕ್ಷಕರಿಗೆ..?
2020 ಸೆಪ್ಟಂಬರ್ 30ರ ಒಳಗೆ ರಾಜ್ಯಾದ್ಯಂತ ಖಾಸಗಿ ಅನುದಾನ ರಹಿತ ಶಿಕ್ಷಣ ಸಂಸ್ಥೆಗಳಿಗೆ ಆರ್‌ಟಿಇ ಮರುಪಾವತಿ ನೀಡಬೇಕಾದರೂ ಈವರೆಗೆ ಬಹುತೇಕ ಶಾಲೆಗಳಿಗೆ ನೀಡಿಲ್ಲ. 2020-21ನೇ ಸಾಲಿನ ಅನುದಾನದಲ್ಲಿ ಜನವರಿಯಲ್ಲಿ ಮೊದಲ ಕಂತು ಬಿಡುಗಡೆಯಾಗಬೇಕಿತ್ತು. ಅದೂ ಕೂಡ ನೀಡಿಲ್ಲ. ಕೂಡಲೇ ಸರ್ಕಾರ ಆರ್‌ಟಿಇ ಮರುಪಾವತಿ ಹಣ ನೀಡಲು ಕ್ರಮ ವಹಿಸಬೇಕೆಂದು ಅವರು ಒತ್ತಾಯಿಸಿದ್ದಾರೆ.