ಕನಿಷ್ಠ ಶುಲ್ಕವನ್ನೂ ಕಟ್ಟದಿದ್ದರೆ ಶಾಲೆ ನಡೆಸೋದು ಹೇಗೆ?
* ಶಿಕ್ಷಕರು, ಸಿಬ್ಬಂದಿಗೆ ವೇತನ ಪಾವತಿ ಹೇಗೆ?
* ಸ್ಪಷ್ಟೀಕರಣಕ್ಕೆ ಖಾಸಗಿ ಶಾಲೆಗಳ ಆಗ್ರಹ
* ಸರ್ಕಾರವೇ ಪೋಷಕರ ನೆರವಿಗೆ ಬಂದು ಖಾಸಗಿ ಶಾಲಾ ಮಕ್ಕಳ ಶುಲ್ಕ ಪಾವತಿಸಲಿದೆಯಾ?
ಬೆಂಗಳೂರು(ಜೂ.13): ಶುಲ್ಕ ಕಟ್ಟದ ಮಕ್ಕಳಿಗೆ ಶಿಕ್ಷಣ ಸೌಲಭ್ಯ ಮುಂದುವರೆಸುವುದು ಹೇಗೆ ಎಂದು ಶಿಕ್ಷಣ ಇಲಾಖೆ ಕೂಡಲೇ ಸ್ಪಷ್ಟೀಕರಣ ನೀಡಬೇಕು ಎಂದು ಕರ್ನಾಟಕ ಖಾಸಗಿ ಪ್ರಾಥಮಿಕ ಮತ್ತು ಪ್ರೌಢ ಶಾಲಾ ಆಡಳಿತ ಮಂಡಳಿಗಳ ಒಕ್ಕೂಟ (ಕ್ಯಾಮ್ಸ್) ಆಗ್ರಹಿಸಿದೆ.
ಶುಲ್ಕ ಕೇಳುತ್ತಿರುವ ಶಾಲೆಗಳ ವಿರುದ್ಧ ದೂರು, ಆಕ್ಷೇಪಗಳು ಕೇಳಿ ಬರುತ್ತಿರುವ ಹಿನ್ನೆಲೆಯಲ್ಲಿ ಮಾಧ್ಯಮಗಳಿಗೆ ಹೇಳಿಕೆ ನೀಡಿರುವ ಕ್ಯಾಮ್ಸ್ ಕಾರ್ಯದರ್ಶಿ ಡಿ.ಶಶಿಕುಮಾರ್, ಕೋವಿಡ್ ಕಾರಣದಿಂದ ಅನೇಕ ಪೋಷಕರು ಕಳೆದ ವರ್ಷ ಸರ್ಕಾರ ಸೂಚಿಸಿದ ಕನಿಷ್ಠ ಶುಲ್ಕವನ್ನೂ ಪಾವತಿಸಿಲ್ಲ. ಅದಕ್ಕೂ ಹಿಂದಿನ ಎರಡು ವರ್ಷಗಳ ಶುಲ್ಕದಲ್ಲಿ ಒಂದಷ್ಟು ಹಣ ಬಾಕಿ ಉಳಿಸಿಕೊಂಡಿದ್ದಾರೆ.
SSLC ಬಹು ಆಯ್ಕೆ ಪರೀಕ್ಷೆ: ವಿದ್ಯಾರ್ಥಿಗಳಿಂದ ಶಿಕ್ಷಣ ಸಚಿವರಿಗೆ ಪತ್ರ
ಈಗ ಈ ವರ್ಷವೂ ಕನಿಷ್ಠ ಶುಲ್ಕ ಪಾವತಿಸಿ ದಾಖಲಾತಿ ಪಡೆಯದಿದ್ದರೆ ಅಂತಹ ಮಕ್ಕಳಿಗೆ ಶಿಕ್ಷಣ ಸೌಲಭ್ಯ ಹೇಗೆ ಮುಂದುವರೆಸೋಣ? ಪೋಷಕರು ತಮ್ಮ ಮಕ್ಕಳಿಗೆ ಈ ವರ್ಷ ಕೂಡ ಕನಿಷ್ಠ ಶುಲ್ಕವನ್ನೂ ಪಾವತಿಸದಿದ್ದರೆ ಖಾಸಗಿ ಶಾಲೆಗಳು ನಡೆಯುವುದು ಹೇಗೆ? ಶಿಕ್ಷಕರು, ಇತರೆ ಸಿಬ್ಬಂದಿಗೆ ವೇತನ ಹೇಗೆ ನೀಡುವುದು? ಶುಲ್ಕ ಕೇಳಿದ ತಕ್ಷಣ ಅದನ್ನು ಟಾರ್ಚರ್ ಎನ್ನುವುದಾದರೆ, ಶುಲ್ಕ ಕೇಳುವುದೇ ಬೇಡವೇ? ಸರ್ಕಾರವೇ ಪೋಷಕರ ನೆರವಿಗೆ ಬಂದು ಖಾಸಗಿ ಶಾಲಾ ಮಕ್ಕಳ ಶುಲ್ಕವನ್ನು ಪಾವತಿಸಲಿದೆಯಾ? ಸರ್ಕಾರ ದ್ವಂದ್ವ ನೀತಿ ಬಿಟ್ಟು ಈ ಎಲ್ಲದರ ಬಗ್ಗೆ ಸ್ಪಷ್ಟೀಕರಣ ನೀಡಿ ಆದೇಶ ಹೊರಡಿಸಬೇಕು ಎಂದು ಅವರು ಮನವಿ ಮಾಡಿದ್ದಾರೆ.