ರಾಮನಗರ: ವಿದ್ಯಾರ್ಥಿಗಳ ಮೇಲೆ ಪ್ರಾಂಶುಪಾಲೆ ಪತಿಯಿಂದ ಹಲ್ಲೆ!
ಪ್ರಾಂಶುಪಾಲೆಯ ಪತಿ ವಿದ್ಯಾರ್ಥಿಗಳನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ ದೊಣ್ಣೆಯಿಂದ ಹಲ್ಲೆ ನಡೆಸಿರುವ ಘಟನೆ ತಾಲೂಕಿನ ಕೈಲಾಂಚ ಹೋಬಳಿಯ ಗುನ್ನೂರಿನ ಡಾ. ಬಿ.ಆರ್.ಅಂಬೇಡ್ಕರ್ ವಸತಿ ಶಾಲೆಯಲ್ಲಿ ನಡೆದಿದೆ.
ರಾಮನಗರ (ಜು.20): ಪ್ರಾಂಶುಪಾಲೆಯ ಪತಿ ವಿದ್ಯಾರ್ಥಿಗಳನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ ದೊಣ್ಣೆಯಿಂದ ಹಲ್ಲೆ ನಡೆಸಿರುವ ಘಟನೆ ತಾಲೂಕಿನ ಕೈಲಾಂಚ ಹೋಬಳಿಯ ಗುನ್ನೂರಿನ ಡಾ. ಬಿ.ಆರ್.ಅಂಬೇಡ್ಕರ್ ವಸತಿ ಶಾಲೆಯಲ್ಲಿ ನಡೆದಿದೆ. ಪ್ರಾಂಶುಪಾಲೆ ಜಯಲಕ್ಷ್ಮೇ ಪತಿ ಸುರೇಶ್ ವಿದ್ಯಾರ್ಥಿಗಳ ಮೇಲೆ ದೌರ್ಜನ್ಯ ಎಸಗಿದವನು. ಪತ್ನಿ ಜಯಲಕ್ಷ್ಮೇ ಕೆಲಸ ಮಾಡುತ್ತಿರುವ ಶಾಲೆಗೆ ಅವರ ಪತಿ ಸುರೇಶ್ ಆಗಾಗ ಭೇಟಿ ನೀಡುತ್ತಿದ್ದರು. ಈ ಸಂದರ್ಭದಲ್ಲಿ ಮಕ್ಕಳಿಗೆ ಅವಾಚ್ಯವಾಗಿ ನಿಂದಿಸುತ್ತಿದ್ದರು. ಇತ್ತೀಚೆಗೆ 9ನೇ ತರಗತಿ ವಿದ್ಯಾರ್ಥಿ ಸೇರಿದಂತೆ ಇತರ ಮಕ್ಕಳ ಮೇಲೆ ದೊಣ್ಣೆಯಿಂದ ಹಲ್ಲೆ ನಡೆಸಿದ್ದಾನೆ. ಈ ಘಟನೆ ಕುರಿತು ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಯೋಗೇಶ್ ನೀಡಿದ ದೂರಿನ ಮೇರೆಗೆ ರಾಮನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಹಾಯವಾಣಿಗೆ ಕರೆ: ಘಟನೆ ಕುರಿತು ವಿದ್ಯಾರ್ಥಿಗಳು ಮಕ್ಕಳ ಸಹಾಯವಾಣಿಗೆ ಕರೆ ಮಾಡಿ ದೂರು ನೀಡಿದ್ದರು. ಅಲ್ಲಿಂದ ವಿಷಯ ಗೊತ್ತಾಗುತ್ತಿದ್ದಂತೆ ಶಾಲೆಗೆ ಭೇಟಿ ನೀಡಿ ಮಕ್ಕಳು ಮತ್ತು ಸಿಬ್ಬಂದಿಯನ್ನು ವಿಚಾರಿಸಿದಾಗ ಶಾಲೆಗೆ ಯಾವುದೇ ರೀತಿಯಲ್ಲೂ ಸಂಬಂಧವಿರದ ಸುರೇಶ್ ಕೃತ್ಯ ಎಸಗಿರುವುದು ಬೆಳಕಿಗೆ ಬಂದಿದೆ. ಸುರೇಶ ವಿರುದ್ಧ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ದೂರು ನೀಡಿದ ಬೆನ್ನಲ್ಲೇ, ಪ್ರಾಂಶುಪಾಲರಾದ ಜಯಲಕ್ಷ್ಮೇ ಅವರನ್ನು ಕರ್ತವ್ಯದಿಂದ ಬಿಡುಗಡೆ ಮಾಡಲಾಗಿದೆ. ಅಮಾನತುಗೊಳಿಸಲು ಮೇಲಧಿಕಾರಿಗಳಿಗೆ ಶಿಫಾರಸು ಮಾಡಲಾಗಿದೆ ಎಂದು ಯೋಗೇಶ್ ಕನ್ನಡಪ್ರಭಕ್ಕೆ ತಿಳಿಸಿದರು.
ರಾಮನಗರ: ಇ-ಸ್ವತ್ತು ತಂತ್ರಾಂಶಕ್ಕೆ ಕನ್ನ ಹಾಕಲು ಭೂಗಳ್ಳರ ಯತ್ನ