ಕಲಬುರಗಿ: ಆನೂರು ಪ್ರಾಥಮಿಕ ಶಾಲೆ ಗೋಡೆ ಕುಸಿತ, ತಪ್ಪಿದ ಭಾರೀ ದುರಂತ..!
ನಮ್ಮ ಮಕ್ಕಳನ್ನು ಯಾವ ಭರವಸೆ ಮೇಲೆ ಶಾಲೆಗೆ ಕಳುಹಿಸಬೇಕೆಂದು ತಿಳಿಯುತ್ತಿಲ್ಲ. ಕುಸಿದು ಬಿದ್ದರೂ ಯಾರು ಕೇಳುವವರಿಲ್ಲದಂತಾಗಿದೆ. ಹೊಸ ಕಟ್ಟಡ ನಿರ್ಮಾಣ ಆಗುವ ತನಕ ನಾವು ನಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸುವುದಿಲ್ಲ ಎಂದು ಆಕ್ರೋಶ
ಚವಡಾಪುರ(ಡಿ.06): 1992ರಲ್ಲಿ ನಿರ್ಮಾಣಗೊಂಡ ಅಫಜಲ್ಪುರ ತಾಲೂಕಿನ ಆನೂರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಗೋಡೆ ಕುಸಿತವಾಗಿದ್ದು, ಅದೃಷ್ಟವಶಾತ್ ಯಾವುದೇ ಜೀವಹಾನಿ ಸಂಭವಿಸಿಲ್ಲ. ಡಿ.5ರಂದು ಬೆಳಿಗ್ಗೆ ಎಂದಿನಂತೆ ಶಾಲೆಗೆ ಬಂದ ಮಕ್ಕಳು ಪ್ರಾರ್ಥನೆ ಮುಗಿಸಿದ ಬಳಿಕ ನೇರವಾಗಿ ಕೋಣೆಗೆ ಹೋಗದೆ ಹಾಲು ಕುಡಿಯುವುದಕ್ಕಾಗಿ ಸರತಿ ಸಾಲಿನಲ್ಲಿ ನಿಂತಿದ್ದರು. ಸರತಿಯಲ್ಲಿ ಮುಂದೆ ನಿಂತವರು ಹಾಲು ಕುಡಿದು ಕೋಣೆ ಸೇರಬೇಕೆನ್ನುವುದರಲ್ಲಿ ಜೋರಾಗಿ ಶಬ್ದ ಬಂದಿದ್ದರಿಂದ ಆತಂಕಗೊಂಡು ಹೊರಗಡೆ ನಿಂತಿದ್ದಾರೆ. ಶಿಕ್ಷಕರು ಬಂದು ನೋಡಿದಾಗ ಶಾಲೆಯ ಒಳಭಾಗದ ಗೋಡೆ ಕುಸಿದು ಬೆಂಚುಗಳ ಮೇಲೆ ಬಿದ್ದಿದೆ. ಇದನ್ನು ಕಂಡ ಶಿಕ್ಷಕರು ಎಸ್‌ಡಿಎಂಸಿಯವರು ಮತ್ತು ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ.
ಈ ಕುರಿತು ಎಸ್‌ಡಿಎಂಸಿ ಅಧ್ಯಕ್ಷ ಶ್ರೀಶೈಲ್ ಸ್ವಾಮಿ ಮಾತನಾಡಿ, 1992ರಲ್ಲಿ ಈ ಶಾಲೆ ನಿರ್ಮಾಣವಾಗಿದೆ. ಅಲ್ಲಿಂದ ಇಲ್ಲಿಯ ತನಕ ಅದೇ ಕಟ್ಟಡದಲ್ಲೇ ವಿದ್ಯಾಭ್ಯಾಸ ನಡೆಯುತ್ತಿದೆ. ಅನೇಕ ಬಾರಿ ಹೊಸ ಕೊಣೆಗಳನ್ನು ಕಟ್ಟಿಸುವಂತೆ ಸಂಬಂಧ ಪಟ್ಟಅಧಿಕಾರಿಗಳು, ಶಾಸಕರಿಗೆ, ಕೆಕೆಆರ್‌ಡಿಬಿಯವರಿಗೆ ಮನವಿ ನೀಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂದಿದ್ದಾರೆ.
Karnataka Teacher Recruitment: ಶಿಕ್ಷಕರ ಆಯ್ಕೆ ಪಟ್ಟಿಗೆ ಆಕ್ಷೇಪಣೆ ಸಲ್ಲಿಕೆ ಅವಧಿ ವಿಸ್ತರಣೆ
ಮುಖ್ಯಗುರು ಅಪ್ಪಾಸಾಹೇಬ್ ಚವ್ಹಾಣ ಮಾತನಾಡಿ, ಘಟನೆ ಕುರಿತು ಮೇಲಾಧಿಕಾರಿಗಳ ಗಮನಕ್ಕೆ ತಂದಿದ್ದೇನೆ. ಪಾಠ ಬೋಧನೆಗೆ ಬೇರೆ ವ್ಯವಸ್ಥೆ ಮಾಡಲಾಗುತ್ತದೆ ಎಂದಿದ್ದಾರೆ.
ಪಾಲಕರ ಆಕ್ರೋಶ:
ಘಟನೆ ಬಳಿಕ ಶಾಲೆಗೆ ಓಡಿ ಬಂದ ಮಕ್ಕಳ ಪಾಲಕರು, ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ವಿರುದ್ದ ಕಿಡಿಕಾರಿದ್ದಾರೆ. ಅಲ್ಲದೆ ಬಡ ಮಕ್ಕಳ ಜೀವಕ್ಕೆ ಕಿಮ್ಮತ್ತಿಲ್ಲದಂತೆ ವರ್ತಿಸಲಾಗುತ್ತಿದೆ. ಹೊಸ ಕಟ್ಟಡ ಕಟ್ಟಿಸಬೇಕೆಂದು ಅನೇಕ ಬಾರಿ ಮನವಿ ಮಾಡಿದರೂ ಪ್ರಯೋಜನವಾಗುತ್ತಿಲ್ಲ. ನಮ್ಮ ಮಕ್ಕಳನ್ನು ಯಾವ ಭರವಸೆ ಮೇಲೆ ಶಾಲೆಗೆ ಕಳುಹಿಸಬೇಕೆಂದು ತಿಳಿಯುತ್ತಿಲ್ಲ. ಕುಸಿದು ಬಿದ್ದರೂ ಯಾರು ಕೇಳುವವರಿಲ್ಲದಂತಾಗಿದೆ. ಹೊಸ ಕಟ್ಟಡ ನಿರ್ಮಾಣ ಆಗುವ ತನಕ ನಾವು ನಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.