9ನೇ ಕ್ಲಾಸ್‌ವರೆಗೆ ಎಲ್ಲರನ್ನು ಪಾಸ್ ಮಾಡೋದು ದಡ್ಡತನ: ಬಸವರಾಜ ಹೊರಟ್ಟಿ
ಶಿಕ್ಷಕರಲ್ಲಿ ಹೋರಾಟದ ಮನೋಭಾವ ಕಡಿಮೆಯಾಗಿದೆ. ಶಿಕ್ಷಕರು ಸಂಘಟಿತರಾಗಬೇಕು. ಮತ್ತು ಅಧ್ಯಯನಶೀಲರಾಗಿ ವಾರಕ್ಕೊಂದು ದಿನ ಮಕ್ಕಳಿಗೆ ನೈತಿಕ ಶಿಕ್ಷಣ ಕಡ್ಡಾಯವಾಗಿ ನೀಡಬೇಕು. ಸಂಸ್ಕಾರ ಮಕ್ಕಳಿಗೆ ದೊರೆಯದೇ ಯುವಕರು ಪಾಲಕರನ್ನು ವೃದ್ಧಾಶ್ರಮಕ್ಕೆ ತಳ್ಳುತ್ತಿದ್ದಾರೆ. ಆದ್ದರಿಂದ ಪಾಲಕರ ಮತ್ತು ಶಿಕ್ಷಕರ ಪಾತ್ರ ಅತ್ಯಂತ ಮಹತ್ವದ್ದಾಗಿದೆ ಎಂದ ಸಭಾಪತಿ ಬಸವರಾಜ ಹೊರಟ್ಟಿ
ಯಲ್ಲಾಪುರ(ಜ.07): ಶೈಕ್ಷಣಿಕ ವ್ಯವಸ್ಥೆಯಲ್ಲಿ 1ರಿಂದ 9ನೇ ತರಗತಿ. ಯವರೆಗೆ ಅನುತ್ತೀರ್ಣರಾದ ವಿದ್ಯಾರ್ಥಿಗಳನ್ನು ಸಾಮೂಹಿಕವಾಗಿ ಉತ್ತೀರ್ಣಗೊಳಿಸಲಾಗುತ್ತಿದೆ. ಸರ್ಕಾರದ ಇಂಥ ಕ್ರಮ ಜಗತ್ತಿನಲ್ಲೆಲ್ಲೂ ಇಲ್ಲದ ಮೂರ್ಖತನದ್ದು. ಅದೇ ರೀತಿ ಎಸ್‌ಎಸ್ಎಲ್‌ಸಿಯಲ್ಲಿಯೂ ಕಾಪಿ ಹೊಡೆಸಿ ಪಾಸು ಮಾಡಲಾಗುತ್ತದೆಯೇ ಎಂದು ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಪ್ರಶ್ನಿಸಿದರು.
ಜ. 6ರಂದು ರಾಜ್ಯ ಮಾಧ್ಯಮಿಕ ಶಾಲಾ ನೌಕರರ ಸಂಘ ಮತ್ತು ಪ್ರೌಢಶಾಲಾ ಸಹ ಶಿಕ್ಷಕರ ಸಂಘ, ಜಿಲ್ಲಾ ತಾಲೂಕು ಘಟಕಗಳು, ಶಿರಸಿ ಶೈಕ್ಷಣಿಕ ಜಿಲ್ಲೆಯ ಜಿಲ್ಲಾಮಟ್ಟದ ಪ್ರೌಢಶಾಲಾ ಶಿಕ್ಷಕರ ಶೈಕ್ಷಣಿಕ ಸಮಾವೇಶದ ಅಧ್ಯಕ್ಷತೆ ವಹಿಸಿ ಮಾತನಾಡಿ, ಶಿಕ್ಷಣ ವ್ಯವಸ್ಥೆ ಸಾಕಷ್ಟು ಸುಧಾರಣೆ ಕಾಣಬೇಕಿದೆ ಎಂದು ಅಭಿಪ್ರಾಯ ಪಟ್ಟರು.
ಸದಾ ಶಿಕ್ಷಣ ಇಲಾಖೆಯಲ್ಲಿ ಆರ್ಥಿಕ ಇಲಾಖೆಯ ಅಧಿಕಾರಿಗಳು ಹಸ್ತಕ್ಷೇಪ ಮಾಡುತ್ತಿದ್ದಾರೆ. ಶಿಕ್ಷಣ ಇಲಾಖೆಯ ವ್ಯವಸ್ಥೆಯನ್ನು ವಾಣಿಜ್ಜೀಕರಣ ಮಾಡಲಾಗದು. ಸರ್ಕಾರಿ ಶಾಲೆಗೆ ಮತ್ತು ಶಿಕ್ಷಕರಿಗೆ ಸಿಗುವ ಎಲ್ಲ ಸೌಲಭ್ಯಗಳು ಅನು ದಾನಿತರಿಗೂ ಸಿಗುವಂತಾಗಬೇಕು. ನ್ಯಾಯಾಲ ಯವೇ ಪ್ರತಿಯೊಬ್ಬ ನೌಕರನಿಗೂ ಪಿಂಚಣಿ ನೀಡಲೇಬೆಂಕೆಂದು ಆದೇಶಿಸಿದೆ. ಸರ್ಕಾರ ಏಕೆ ಮೀನಮೇಷ ಮಾಡುತ್ತಿದೆ ಎಂದು ಪ್ರಶ್ನಿಸಿದರು.
ಶಿಕ್ಷಕರಲ್ಲಿ ಹೋರಾಟದ ಮನೋಭಾವ ಕಡಿಮೆಯಾಗಿದೆ. ಶಿಕ್ಷಕರು ಸಂಘಟಿತರಾಗಬೇಕು. ಮತ್ತು ಅಧ್ಯಯನಶೀಲರಾಗಿ ವಾರಕ್ಕೊಂದು ದಿನ ಮಕ್ಕಳಿಗೆ ನೈತಿಕ ಶಿಕ್ಷಣ ಕಡ್ಡಾಯವಾಗಿ ನೀಡಬೇಕು. ಸಂಸ್ಕಾರ ಮಕ್ಕಳಿಗೆ ದೊರೆಯದೇ ಯುವಕರು ಪಾಲಕರನ್ನು ವೃದ್ಧಾಶ್ರಮಕ್ಕೆ ತಳ್ಳುತ್ತಿದ್ದಾರೆ. ಆದ್ದರಿಂದ ಪಾಲಕರ ಮತ್ತು ಶಿಕ್ಷಕರ ಪಾತ್ರ ಅತ್ಯಂತ ಮಹತ್ವದ್ದಾಗಿದೆ ಎಂದರು.
ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಮಾತನಾಡಿ, ವಿದ್ಯಾರ್ಥಿಗಳಿಗೆ ವೈಯಕ್ತಿಕ ಶಿಸ್ತು, ರಾಷ್ಟ್ರೀಯತೆ, ಸಾಮಾಜಿಕ ನೆಲೆಗಟ್ಟಿನಲ್ಲಿ ಬದುಕುವ ಅರಿವು ಮೂಡಿಸುವ ಮಹತ್ವದ ಕಾರ್ಯವನ್ನು ಶಿಕ್ಷಕರು ಮಾಡಬೇಕು. ಅದರಲ್ಲೂ ಯುವಜನಾಂಗ ಮೊಬೈಲಿಗೆ ದಾಸರಾಗುತ್ತಿದ್ದಾರೆ. ಚಟಗಳಿಗೆ ಬಲಿಯಾಗುತ್ತಿದ್ದಾರೆ. ಹೊಸ ಶಿಕ್ಷಣ ನೀತಿ ಜಾರಿಗೆ ಬರುತ್ತಿದೆ. ನಮ್ಮ ಮಾತೃಭಾಷೆ, ರಾಷ್ಟ್ರೀಯ ಭಾಷೆ ಎಲ್ಲವನ್ನೂ ಗೌರವಿಸಬೇಕು. ಮಾತೃಭಾಷೆ ಯಲ್ಲಿಯೇ ಶಿಕ್ಷಣಕ್ಕೆ ಹೆಚ್ಚು ಮಹತ್ವ ನೀಡಬೇಕು. ಭಾರತ ಜಗತ್ತಿನ ಬಹುದೊಡ್ಡ ಶಕ್ತಿಯಾಗಿ ರೂಪುಗೊಳ್ಳುತ್ತಿದೆ. ಯುವಪೀಳಿಗೆಯವರನ್ನೂ ಉತ್ತಮ ಪ್ರಜೆಯನ್ನಾಗಿಸುವ ಹೊಣೆ ಶಿಕ್ಷಕರ ಮೇಲಿದೆ ಎಂದರು.
ಶಾಸಕ ಶಿವರಾಮ ಹೆಬ್ಬಾರ ಮಾತನಾಡಿ, ಶಿಕ್ಷಕರ ಮೇಲೆ ಮಹತ್ವದ ಹೊಣೆಯಿದೆ. ಜಿಲ್ಲೆಯಲ್ಲಿ ಪ್ರತಿಭಾವಂತ ಸಾಕಷ್ಟು ವಿದ್ಯಾರ್ಥಿ ಗಳಿದ್ದಾರೆ. ಅವರಿಗೆ ಸರಿಯಾದ ಮಾರ್ಗದರ್ಶನ, ಸಂಸ್ಕಾರ ನೀಡಿ, ಜಿಲ್ಲೆಯ ಶಿಕ್ಷಣ ವ್ಯವಸ್ಥೆಯನ್ನು ಇನ್ನೂ ಎತ್ತರದ ಸ್ಥಿತಿಗೆ ತರುವ ಮೂಲಕ ಜಿಲ್ಲೆಯ ಗೌರವವನ್ನು ಹೆಚ್ಚಿಸಬೇಕು. ಗಿನ್ನಿಸ್ ದಾಖಲೆ ನಿರ್ಮಿಸಿದ ಬಸವರಾಜ ಹೊರಟ್ಟಿಯವರು ಸದಾ ಶಿಕ್ಷಕರಿಗೆ ಮಾರ್ಗದರ್ಶಕರಾಗಿ ನಿಂತಿದ್ದಾರೆ. ಅವರ ಅನುಭವ ನಮಗೆಲ್ಲರಿಗೂ ವೇದ್ಯವಾಗಿದೆ ಎಂದರು.
ಖಾಸಗಿ ಶಿಕ್ಷಣ ಸಂಸ್ಥೆಗಳ ಜಿಲ್ಲಾ ಅಧ್ಯಕ್ಷಡಾ, ಶಶಿಭೂಷಣ ಹೆಗಡೆ ಮಾತನಾಡಿ, ಜಿಲ್ಲೆಯಲ್ಲಿ ಪ್ರೌಢಶಾಲೆಗಳು ಮುಚ್ಚುತ್ತಿವೆ. ಶಿಕ್ಷಕರ ನೇಮಕಾತಿಯೇ ಇಲ್ಲವಾಗಿದೆ. ಖಾಸಗಿ ಮತ್ತು ಸರ್ಕಾರಿ ಎಂಬ ತಾರತಮ್ಯ ನೀತಿ ಹೋಗಬೇಕು ಮತ್ತು ನ್ಯಾಯಯುತವಾಗಿ ಕೆಲಸ ಮಾಡಿದ ಶಿಕ್ಷಕರಿಗೆ ಸರಿಯಾದ ಪಿಂಚಣಿ ದೊರೆಯಬೇಕು ಎಂದು ಆಗ್ರಹಿಸಿದರು.
ಶಿರಸಿಯ ಸಹಾಯಕ ಆಯುಕ್ತ ಕಾವ್ಯಾವಾಣಿ ಮತ್ತು ಶಿಕ್ಷಕರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಿ.ಆರ್.ಭಟ್ಟ ಮಾತನಾಡಿದರು. ಶಿರಸಿ ಶೈಕ್ಷಣಿಕ ಜಿಲ್ಲೆಯ ಉಪನಿರ್ದೇಶಕ ಪಾರಿ ಬಸವರಾಜ, ಡಯಟ್ ಪ್ರಾಚಾರ್ಯ ಎಂ. ಎಸ್. ಹೆಗಡೆ, ಕ್ಷೇತ್ರ ಶಿಕ್ಷಣಾಧಿಕಾರಿ ಎನ್.ಆರ್. ಹೆಗಡೆ ಸೇರಿದಂತೆ ಹಲವು ಪದಾಧಿಕಾರಿಗಳು ವೇದಿಕೆಯಲ್ಲಿದ್ದರು.
ವಿಶ್ವದರ್ಶನ ಪಿಯು ಕಾಲೇಜು ಪ್ರಾಚಾರ್ಯ ಡಾ.ಡಿ.ಕೆ.ಗಾಂಶ್ವರ ಅವರು, ಬದಲಾಗುತ್ತಿರುವ ಶಿಕ್ಷಣ ವ್ಯವಸ್ಥೆಯಲ್ಲಿ ಮೌಲ್ಯ ಶಿಕ್ಷಣದ ಪುನರುತ್ತಾನೆ ವಿಷಯದ ಕುರಿತು ಉಪನ್ಯಾಸ ನೀಡಿದರು. ವಿದ್ಯಾರ್ಥಿಗಳು ನಾಡಗೀತೆ ಮತ್ತು ಪ್ರಾರ್ಥನೆ ನಡೆಸಿಕೊಟ್ಟರು. ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷನಾರಾಯಣ ದೈಮನೆ ಸ್ವಾಗತಿಸಿದರು.
ಜಿಲ್ಲಾ ಸಂಚಾಲಕ ಎಂ.ರಾಜಶೇಖರ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಕ್ಷಕರಾದ ಡಾ. ನವೀನಕುಮಾರ, ನೆಲ್ಸನ್ ಗೊನ್ಸಾಲ್ವಿನ್ ನಿರ್ವಹಿಸಿದರು. ಚಂದ್ರಶೇಖರ ಸಿ.ಎಸ್. ವಂದಿಸಿದರು. ಎಸ್‌ಎಸ್ಎಲ್‌ಸಿಯಲ್ಲಿ ರಾಜ್ಯ ಮಟ್ಟದಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು, ಶಿಕ್ಷಕರನ್ನು ಸನ್ಮಾನಿಸಲಾಯಿತು.
ಶಿಕ್ಷಕರಿಗೆ ಪಾಠ ಮಾಡಲು ಮಾನಸಿಕ ನೆಮ್ಮದಿ ಬೇಕು. ಇಲ್ಲ ಸಲ್ಲದ ಕೆಲಸ ಹಚ್ಚುವಂತಾಗಬಾರದು. ಮಕ್ಕಳೆಂದರೆ ದೇವರು ಎನ್ನುತ್ತೇವೆ. ಆದರೆ ಶಿಕ್ಷಣ ಇಲಾಖೆಯಲ್ಲಿ ಸರ್ಕಾರಿ ಮಕ್ಕಳು, ಖಾಸಗಿ ಮಕ್ಕಳೆಂದು ತಾರತಮ್ಯ, ಮಾಡುತ್ತಿದ್ದೇವೆ ಎಂದು ಸಭಾಪತಿ ಬಸವರಾಜ ಹೊರಟ್ಟಿ ತಿಳಿಸಿದ್ದಾರೆ.