ಮಕ್ಕಳ ದಾಖಲಾತಿಗೆ ವಾಮಮಾರ್ಗ ಹಿಡಿದ ಪೋಷಕರು: ಎಲ್‌ಕೆಜಿಗೆ 4 ವರ್ಷ, ಯುಕೆಜಿಗೆ 5 ವರ್ಷ
2025-26ನೇ ಶೈಕ್ಷಣಿಕ ಸಾಲಿನಿಂದ ಅನ್ವಯವಾಗುವಂತೆ ಜೂನ್ 1ನೇ ತಾರೀಖಿಗೆ ಕಡ್ಡಾಯವಾಗಿ 6 ವರ್ಷ ಪೂರ್ಣಗೊಂಡಿರುವ ಮಗುವನ್ನು 1ನೇ ತರಗತಿಗೆ ದಾಖಲಿಸಲು ವಯೋಮಿತಿ ನಿಗದಿಪಡಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿರುವ ಕಾರಣ ಪೋಷಕರು ಅರ್ಹ ವಯಸ್ಸಿಲ್ಲದ ಮಗುವನ್ನು ಎಲ್ ಕೆಜಿ ಮತ್ತು ಯುಕೆಜಿ ತರಗತಿಗೆ ದಾಖಲು ಮಾಡಲು ವಾಮಮಾರ್ಗ ಹಿಡಿದಿದ್ದಾರೆ.
ಎಂ.ಅಫ್ರೋಜ್ ಖಾನ್
ರಾಮನಗರ (ಜೂ.02): 2025-26ನೇ ಶೈಕ್ಷಣಿಕ ಸಾಲಿನಿಂದ ಅನ್ವಯವಾಗುವಂತೆ ಜೂನ್ 1ನೇ ತಾರೀಖಿಗೆ ಕಡ್ಡಾಯವಾಗಿ 6 ವರ್ಷ ಪೂರ್ಣಗೊಂಡಿರುವ ಮಗುವನ್ನು 1ನೇ ತರಗತಿಗೆ ದಾಖಲಿಸಲು ವಯೋಮಿತಿ ನಿಗದಿಪಡಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿರುವ ಕಾರಣ ಪೋಷಕರು ಅರ್ಹ ವಯಸ್ಸಿಲ್ಲದ ಮಗುವನ್ನು ಎಲ್ ಕೆಜಿ ಮತ್ತು ಯುಕೆಜಿ ತರಗತಿಗೆ ದಾಖಲು ಮಾಡಲು ವಾಮಮಾರ್ಗ ಹಿಡಿದಿದ್ದಾರೆ. ರಾಜ್ಯಸರ್ಕಾರ ಜಾರಿಗೆ ತಂದಿರುವ ನಿಯಮದ ಪ್ರಕಾರ 2025-26ನೇ ಶೈಕ್ಷಣಿಕ ಸಾಲಿನಿಂದ 1ನೇ ತರಗತಿಗೆ ಮಗು ದಾಖಲಾಗಲು 6 ವರ್ಷ ಆಗಿರಬೇಕು. ಅಂದರೆ 2023-24ನೇ ಸಾಲಿಗೆ ಎಲ್.ಕೆ.ಜಿ ತರಗತಿಗೆ ದಾಖಲಿಸಲು ಮಗುವಿಗೆ ಕನಿಷ್ಠ 4 ವರ್ಷ, ಯು.ಕೆ.ಜಿ.ಗೆ 5 ವರ್ಷ ತುಂಬಿರಬೇಕು.
ಆದರೀಗ ಪೋಷಕರು ಅರ್ಹ ವಯಸ್ಸು ತುಂಬದ ಮಕ್ಕಳನ್ನು ಎಲ್.ಕೆ.ಜಿ ಮತ್ತು ಯು.ಕೆ.ಜಿ ತರಗತಿಗಳಿಗೆ ದಾಖಲಿಸಲು ಮಗುವಿನ ಜನನ ಪ್ರಮಾಣ ಪತ್ರವನ್ನೇ ಮರೆ ಮಾಚಿ, ನ್ಯಾಯಾಲಯದಿಂದ ಅಫಿಡೆವಿಚ್ ಅಥವಾ ತಿದ್ದುಪಡಿ ಮಾಡಿದ ಜನನ ಪ್ರಮಾಣ ಪತ್ರಗಳನ್ನು ಹಾಜರುಪಡಿಸುತ್ತಿರುವ ಆರೋಪಗಳು ಕೇಳಿ ಬಂದಿವೆ. ಸರ್ಕಾರಿ ಶಾಲೆ ಕೆಲ ಶಿಕ್ಷಕರು ಹಾಗೂ ವ್ಯಾಪಾರಿ ಮನೋಭಾವವುಳ್ಳ ಕೆಲವು ಖಾಸಗಿ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿ ಸದಸ್ಯರು ತಮ್ಮ ಬಳಿ ಬರುವ ಪೋಷಕರಿಗೆ ಇಂತಹ ವಾಮ ಮಾರ್ಗ ಅನುಸರಿಸುವ ಮನೆಹಾಳು ಐಡಿಯಾ ನೀಡುತ್ತಿದ್ದಾವ
ಮಂಚನಬೆಲೆಗೆ ಶಾಶ್ವತ ಸೇತುವೆ ನಿರ್ಮಾಣ ಯಾವಾಗ?: ತಾತ್ಕಾಲಿಕ ಸೇತುವೆಯು ಮುಳುಗಡೆ ಸಾಧ್ಯತೆ
ವಾಮಮಾರ್ಗ ಅನುಸರಿಸಲು ಕುಮ್ಮಕ್ಕು: ಇನ್ನೊಂದೆಡೆ ಸರ್ಕಾರಿ , ಅನುದಾನಿತ ಹಾಗೂ ಅನುದಾನ ರಹಿತ ಶಾಲೆಗಳಲ್ಲಿ 2023-24ನೇ ಸಾಲಿಗೆ 1ನೇ ತರಗತಿಗೆ ದಾಖಲಾಗಲು ಮಗುವಿನ ವಯಸ್ಸು ಕನಿಷ್ಠ 5 ವರ್ಷ 5 ತಿಂಗಳು ತುಂಬಿರಬೇಕು. ಈ ವಯೋಮಿತಿಯ ಅರ್ಹತೆ ತಲುಪದ ಮಗುವಿನ ಅಸಲಿ ಜನನ ಪ್ರಮಾಣ ಪತ್ರವನ್ನು ಮರೆಮಾಚಿ, ಅಫಿಡವಿಚ್ ತಂದು ಕೊಡಿ ಎಂದು ಕೆಲವು ಸರ್ಕಾರಿ ಶಾಲೆಗಳು ಸೇರಿದಂತೆ ಖಾಸಗಿ ಶಾಲೆಯ ಶಿಕ್ಷಕರು ಪೋಷಕರಿಗೆ ವಾಮಮಾರ್ಗ ಅನುಸರಿಸಲು ಕುಮ್ಮಕ್ಕು ನೀಡುತ್ತಿದ್ದಾರೆ ಎಂದು ಗೊತ್ತಾಗಿದೆ.
ಎಲ್.ಕೆ.ಜಿ ತರಗತಿಗೆ ದಾಖಲು ಮಾಡಲು ಬಯಸಿದ ಗುರುತಿಸಿಕೊಳ್ಳಲು ಇಚ್ಚಿಸದ ಪೋಷಕರೊಬ್ಬರ ಮಗುವಿನ ವಯಸ್ಸು 3 ವರ್ಷ 11 ತಿಂಗಳು ತುಂಬಿದೆ. 4 ವರ್ಷಕ್ಕೆ ಕೇವಲ 1 ತಿಂಗಳು ಮಾತ್ರ ಕೊರತೆ. ಆದರೆಸ ನಿಯಮಗಳ ಪ್ರಕಾರ ಈ ಮಗು ಎಲ್.ಕೆ.ಜಿಗೆ ದಾಖಲಾಗಲು ಅರ್ಹತೆ ಪಡೆದಿಲ್ಲ. ಹೀಗಾಗಿ ಖಾಸಗಿ ಶಾಲೆಯ ಆಡಳಿತ ಮಂಡಳಿ ಸದಸ್ಯರೊಬ್ಬರು 4 ವರ್ಷ ವಯಸ್ಸು ತುಂಬಿರುವ ಬಗ್ಗೆ ನ್ಯಾಯಾಲಯದಿಂದ ಅಫಿಡೆವಿಚ್ ತನ್ನಿ ಎಂಬ ಸಲಹೆ ಕೊಟ್ಟಿದ್ದಾರೆ ಎಂದು ಗೊತ್ತಾಗಿದೆ.
ಮಗುವೊಂದರ ಜನನ ದಿನಾಂಕವನ್ನು ಸ್ಥಳೀಯ ಸಂಸ್ಥೆಗಳು ದಾಖಲೆ ಇಟ್ಟಿರುತ್ತವೆ. ಆಸ್ಪತ್ರೆ ಅಥವಾ ಮನೆಯಲ್ಲಿ ಜನಿಸಿದ ಮಗುವಿನ ಜನನ ದಿನ ಮತ್ತು ಸಮಯವನ್ನು ನಿಗದಿತ ಸಮಯದಲ್ಲಿ ಸ್ಥಳೀಯ ಸಂಸ್ಥೆಗಳ ಗಮನಕ್ಕೆ ತಂದು ದಾಖಲು ಮಾಡುವ ನಿಯಮ ಹಲವಾರು ವರ್ಷಗಳಿಂದ ಜಾರಿಯಲ್ಲಿದೆ. ಇತ್ತೀಚಿನ ವರ್ಷಗಳಲ್ಲಿ ಈ ವ್ಯವಸ್ಥೆ ಗಣಕೀಕರಣವೂ ಆಗಿದೆ. ಸರ್ಕಾರದ ಈ ವ್ಯವಸ್ಥೆಯನ್ನು ಮೀರಿ ಅನ್ಯ ಮಾರ್ಗಗಳಲ್ಲಿ ಮಗುವಿನ ಜನನ ಪ್ರಮಾಣದ ದಾಖಲಾತಿಗಳನ್ನು ಪಡೆಯಲು ಶಿಕ್ಷಣ ವಲಯದಲ್ಲಿನ ವ್ಯಾಪಾರಿ ಬುದ್ಧಿಯ ಕೆಲವು ಖಾಸಗಿ ಶಿಕ್ಷಣ ಸಂಸ್ಥೆಗಳು ಸಲಹೆ ಕೊಡುತ್ತಿದ್ದಾರೆ.
ಆದರೆ, ಮಕ್ಕಳ ಭವಿಷ್ಯ ರೂಪಿಸುವ ಹೊಣೆಗಾರಿಕೆ ಅರಿತಿರುವ ಬೆರಳಣಿಕೆಯಷ್ಟುಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರಿಂದ ಖಾಸಗಿ ಶಿಕ್ಷಣ ಸಂಸ್ಥೆಗಳು ಅನುಸರಿಸುತ್ತಿರುವ ವಾಮಮಾರ್ಗದ ವಿರುದ್ಧ ಅಪಸ್ವರವೂ ಕೇಳಿ ಬರುತ್ತಿದೆ. 1ನೇ ತರಗತಿ ದಾಖಲಾತಿ ಸಮಯದಲ್ಲಿ ಮಗುವಿನ ಜನನ ಪ್ರಮಾಣ ಪತ್ರ ಸಂಬಂಧ ಪ್ರಮಾಣ ಪತ್ರದ ನಕಲು, ತಿದ್ದುಪಡಿಗೊಂಡಿರುವ ಪ್ರಮಾಣಪತ್ರ ಅಥವಾ ನ್ಯಾಯಾಲಯದ ಅಫಿಡವಿಟ್ ಅನ್ನು ಗಣನೆಗೆ ತೆಗೆದುಕೊಳ್ಳುವುದಿಲ್ಲ. ಮಗುವಿನ ಭವಿಷ್ಯದ ದೃಷ್ಟಿಯಿಂದ ವ್ಯಾಪಾರಿ ಮನಸ್ಥಿತಿಯ ಖಾಸಗಿ ಶಿಕ್ಷಣ ಸಂಸ್ಥೆಗಳ ಮಾತು ನಂಬಿ ಮೋಸ ಹೋಗಬಾರದು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಅಧಿಕಾರಿಯೊಬ್ಬರು ಪೋಷಕರಲ್ಲಿ ಮನವಿ ಮಾಡಿದರು.
ಗ್ಯಾರಂಟಿಗಾಗಿ ಪಿಎಚ್‌ಎಚ್ ಕಾರ್ಡ್ ಹೊಂದುವ ಬಯಕೆ: ಆನ್‌ಲೈನ್ ಪೋರ್ಟಲ್ ಸ್ಥಗಿತ
ಸರ್ಕಾರಿ, ಅನುದಾನಿತ ಹಾಗೂ ಅನುದಾನ ರಹಿತ ಶಾಲೆಗಳಲ್ಲಿ 1ನೇ ತರಗತಿಗೆ ದಾಖಲಿಸಲು ಮಗುವಿಗೆ 6 ವರ್ಷ ತುಂಬಿರಬೇಕು ಎಂಬುದು 2025-26ನೇ ಶೈಕ್ಷಣಿಕ ಸಾಲಿನಿಂದ ಅನ್ವಯವಾಗುತ್ತದೆ. ಆದರೆ, ಪೂರ್ವ ಪ್ರಾಥಮಿಕ ಎಲ್ ಕೆಜಿಗೆ 4 ವರ್ಷ, ಯುಕೆಜಿಗೆ 5 ವರ್ಷ ಪೂರ್ಣಗೊಂಡಿರಲೇಬೇಕು. 1ನೇ ತರಗತಿಗೆ ದಾಖಲಿಸುವಾಗ ಮಗುವಿನ ಜನನ ಪ್ರಮಾಣ ಪತ್ರವನ್ನು ಕಡ್ಡಾಯವಾಗಿ ನೀಡಲೇಬೇಕು. ಪೋಷಕರು ಜನನ ಪ್ರಮಾಣ ಪತ್ರದ ವಿಚಾರದಲ್ಲಿ ವಾಮ ಮಾರ್ಗ ಅನುಸರಿಸದೆ ಎಚ್ಚರ ವಹಿಸುವುದು ಸೂಕ್ತ.
-ಗಂಗಣ್ಣಸ್ವಾಮಿ, ಉಪನಿರ್ದೇಶಕರು, ಸಾರ್ವಜನಿಕ ಶಿಕ್ಷಣ ಇಲಾಖೆ, ರಾಮನಗರ