Ramanagara: ಗ್ಯಾರಂಟಿಗಾಗಿ ಪಿಎಚ್‌ಎಚ್ ಕಾರ್ಡ್ ಹೊಂದುವ ಬಯಕೆ: ಆನ್‌ಲೈನ್ ಪೋರ್ಟಲ್ ಸ್ಥಗಿತ
ವಿಧಾನಸಭಾ ಚುನಾವಣೆ ಪೂರ್ವದಲ್ಲಿ ಘೋಷಿಸಿದಂತೆ ಕಾಂಗ್ರೆಸ್ ನೇತೃತ್ವದ ರಾಜ್ಯಸರ್ಕಾರದ ಗ್ಯಾರಂಟಿ ಯೋಜನೆಗಳ ಲಾಭ ಪಡೆಯಲು ಪಿಎಚ್‌ಎಚ್ (ಪ್ರಿಯಾರಿಟಿ ಹೌಸ್ ಹೋಲ್ಡ್ - ಆದ್ಯತೆಯ ಕುಟುಂಬ) ಕಾರ್ಡ್ ಮಾಡಿಸಲು ಜನರು ಆಹಾರ ಇಲಾಖೆ, ಗ್ರಾಮ ಒನ್ ಹಾಗೂ ಸಾಮಾನ್ಯ ಸೇವಾ ಕೇಂದ್ರಗಳಿಗೆ ಎಡತಾಕುತ್ತಿದ್ದಾರೆ.
ಎಂ.ಅಫ್ರೋಜ್ ಖಾನ್
ರಾಮನಗರ (ಜೂ.01): ವಿಧಾನಸಭಾ ಚುನಾವಣೆ ಪೂರ್ವದಲ್ಲಿ ಘೋಷಿಸಿದಂತೆ ಕಾಂಗ್ರೆಸ್ ನೇತೃತ್ವದ ರಾಜ್ಯಸರ್ಕಾರದ ಗ್ಯಾರಂಟಿ ಯೋಜನೆಗಳ ಲಾಭ ಪಡೆಯಲು ಪಿಎಚ್‌ಎಚ್ (ಪ್ರಿಯಾರಿಟಿ ಹೌಸ್ ಹೋಲ್ಡ್ - ಆದ್ಯತೆಯ ಕುಟುಂಬ) ಕಾರ್ಡ್ ಮಾಡಿಸಲು ಜನರು ಆಹಾರ ಇಲಾಖೆ, ಗ್ರಾಮ ಒನ್ ಹಾಗೂ ಸಾಮಾನ್ಯ ಸೇವಾ ಕೇಂದ್ರಗಳಿಗೆ ಎಡತಾಕುತ್ತಿದ್ದಾರೆ. ಗ್ಯಾರಂಟಿಗಳ ಸೌಲಭ್ಯ ಪಡೆಯಲು ಪಿಎಚ್‌ಎಚ್ (ಬಿಪಿಎಲ್ )ಕಾರ್ಡ್ ಅಗತ್ಯವೆಂದು ಜನರು ಭಾವಿಸಿದ್ದಾರೆ. ಆದರೆ, ಆಹಾರ ನಾಗರೀಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆಯು ಅರ್ಜಿ ಸಲ್ಲಿಕೆಯ ಆನ್‌ಲೈನ್ ಪೋರ್ಟಲ್ ಅನ್ನು ಸ್ಥಗಿತಗೊಳಿಸಿದೆ. ಹೀಗಾಗಿ ಪಿಎಚ್‌ಎಚ್ ಕಾರ್ಡ್ ಮಾಡಿಸಲು ಜನರು ಸೇವಾ ಕೇಂದ್ರಗಳಿಗೆ ಅಲೆದಾಡುತ್ತಿದ್ದಾರೆ.
ಸರ್ಕಾರಿ ಸವಲತ್ತುಗಳನ್ನು ಪಡೆದುಕೊಳ್ಳಲು ಸಾಮಾನ್ಯವಾಗಿ ಬಿಪಿಎಲ್ (ಪಿಎಚ್‌ಎಚ್ )ಕಾರ್ಡ್ ಇರಬೇಕೆಂಬ ಮಾನದಂಡ ಮಾಡಲಾಗಿದೆ. ಈ ಕಾರಣದಿಂದಾಗಿ ಗೃಹಲಕ್ಷ್ಮಿ , ಗೃಹ ಜ್ಯೋತಿ, ಉಚಿತ ಪ್ರಯಾಣ, ಅನ್ನಭಾಗ್ಯ ಯೋಜನೆಗಳಿಗೂ ಇದೇ ಮಾನದಂಡ ಅನುಸರಿಸಬಹುದು ಎಂದು ಭಾವಿಸಿ ಜನರು ಪಿಎಚ್‌ಎಚ್ ಕಾರ್ಡ್ ಬಯಸುತ್ತಿದ್ದಾರೆ. ಸಾರ್ವತ್ರಿಕ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಮಾದರಿ ನೀತಿ ಸಂಹಿತೆ ಜಾರಿಯಾಗುತ್ತಿದ್ದಂತೆ ಆನ್‌ಲೈನ್ ಪೋರ್ಟಲ್ ಸ್ಥಗಿತಗೊಳಿಸಲಾಗಿತ್ತು. ಮೇ 15ರಂದು ನೀತಿ ಸಂಹಿತೆ ಮುಗಿದ ತರುವಾಯ ಮೇ 17 ಮತ್ತು 18 ರಂದು ಪೋರ್ಟಲ್ ಆರಂಭಗೊಂಡಿತ್ತು. ಈಗ ಹೊಸ ಸರ್ಕಾರ ಆದೇಶ ಹೊರಡಿಸಿದ ನಂತರವಷ್ಟೇ ಆನ್‌ಲೈನ್ ನಲ್ಲಿ ಅರ್ಜಿ ಸಲ್ಲಿಕೆಗೆ ಅವಕಾಶ ಸಿಗಲಿದೆ.
ಮೂಲ ಸೌಲಭ್ಯ ಒದಗಿಸುವುದು ನಮ್ಮ ಕರ್ತವ್ಯ: ಶಾಸಕ ಬಾಲಕೃಷ್ಣ
ಹೆಸರು ಸೇರ್ಪಡೆಗೂ ಪ್ರಯತ್ನ: ಅನ್ನಭಾಗ್ಯ ಯೋಜನೆಯಡಿ ಕುಟುಂಬ ಪ್ರತಿಯೊಬ್ಬರಿಗೆ 10 ಕೇಜಿ ಅಕ್ಕಿ ಘೋಷಿರುವುದರಿಂದ ಕಾರ್ಡ್‌ನಲ್ಲಿ ಬಿಟ್ಟು ಹೋಗಿರುವವರ ಹೆಸರು ಸೇರ್ಪಡೆಗೆ ಪ್ರಯತ್ನ ನಡೆಯುತ್ತಿದೆ. ಅಲ್ಲದೆ, ಗೃಹಲಕ್ಷ್ಮಿ ಯೋಜನೆಯಡಿ ಕುಟುಂಬದ ಯಜಮಾನಿಗೆ ತಿಂಗಳಿಗೆ 2 ಸಾವಿರ ಘೋಷಿಸಿರುವುದರಿಂದ ಪ್ರತಿ ಕುಟುಂಬದ ಮಹಿಳೆಯರೂ ಪ್ರತ್ಯೇಕ ಕಾರ್ಡ್ ಪಡೆಯಲು ಬಯಸಿದ್ದಾರೆ.
3252 ಅರ್ಜಿಗಳ ಪರಿಶೀಲನೆ ಬಾಕಿ: 2023ರ ಮೇ ಅಂತ್ಯಕ್ಕೆ ಜಿಲ್ಲೆಯಲ್ಲಿ 559 ನ್ಯಾಯಬೆಲೆ ಅಂಗಡಿಗಳಿದ್ದು, ಅಂತ್ಯೋದಯ (ಎಎವೈ)- 18972, ಆದ್ಯತಾ ಕುಟುಂಬ(ಪಿಎಚ್‌ಎಚ್)- 2,78,107 ಹಾಗೂ ಆದ್ಯತೇತರ ಕುಟುಂಬ (ಎನ್‌ಪಿಎಚ್‌ಎಚ್ )- 8,406 ಚೀಟಿಗಳಿವೆ. ಹೊಸದಾಗಿ ಆದ್ಯತಾ ಕುಟುಂಬ ಚೀಟಿ ಕೋರಿ ಸಲ್ಲಿಕೆಯಾಗಿರುವ 3252 ಅರ್ಜಿಗಳ ಪರಿಶೀಲನೆ ಬಾಕಿ ಇದೆ ಎಂದು ಆಹಾರ ನಾಗರೀಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆ ಅಧಿಕಾರಿ ‘ಕನ್ನಡಪ್ರಭ‘ಕ್ಕೆ ಪ್ರತಿಕ್ರಿಯೆ ನೀಡಿದರು.
ಕಾರ್ಡ್‌ಗಾಗಿ 2-3 ತಿಂಗಳು ಕಾಯಬೇಕು: ಈ ಪಿಎಚ್ ಎಚ್ ಕಾರ್ಡ್‌ಗೆ ಆನ್ ಲೈನ್ ನಲ್ಲಿಯೇ ಅರ್ಜಿ ಸಲ್ಲಿಸಬೇಕಾಗಿರುವುದರಿಂದ ಜನರು ಆಹಾರ ಇಲಾಖೆ, ಗ್ರಾಮ ಒನ್ , ಸಾಮಾನ್ಯ ಸೇವಾ ಕೇಂದ್ರಗಳಿಗೆ ಭೇಟಿ ನೀಡುತ್ತಿದ್ದಾರೆ. ಸದ್ಯ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಕೆ ಸ್ವೀಕರಿಸುವ ಅಥವಾ ಸಲ್ಲಿಸುವ ಪ್ರಕ್ರಿಯೆ ನಡೆಸಲು ಸಾಧ್ಯವಾಗುತ್ತಿಲ್ಲ. ದಾಖಲೆ ಸಲ್ಲಿಸಿದ ಕೂಡಲೇ ಪಿಎಚ್‌ಎಚ್ ಕಾರ್ಡ್ ಸುಲಭವಾಗಿ ಸಿಗುವುದಿಲ್ಲ. ಅದಕ್ಕೂ ಹಲವು ಮಾನದಂಡಗಳಿವೆ. ಇಲಾಖೆಯವರು ಪರಿಶೀಲನೆ ನಡೆಸಿದ ಬಳಿಕವಷ್ಟೇ ಪ್ರಕ್ರಿಯೆ ನಡೆಯುತ್ತದೆ. ಅರ್ಹರಿಗೆ ಕಾರ್ಡ್ ಸಿಗಲು 2 ರಿಂದ 3 ತಿಂಗಳು ಬೇಕಾಗುತ್ತದೆ ಎನ್ನುತ್ತಾರೆ ಆಹಾರ ಇಲಾಖೆ ಅಧಿಕಾರಿಗಳು.
ಪಿಎಚ್ ಎಚ್ (ಬಿಪಿಎಲ್ )ಪಡಿತರ ಚೀಟಿ ಪಡೆಯಲು ಇರುವ ಮಾನದಂಡಗಳು
1. ವೇತನವನ್ನು ಗಣನೆಗೆ ತೆಗೆದುಕೊಳ್ಳದೇ ಎಲ್ಲ ಖಾಯಂ ನೌಕರರು ಅಂದರೆ ಸರ್ಕಾರದ ಅಥವಾ ಸರ್ಕಾರದಿಂದ ಅನುದಾನವನ್ನು ಪಡೆಯುತ್ತಿರುವ ಸಂಸ್ಥೆಗಳು ಅಥವಾ ಸರ್ಕಾರಿ ಪ್ರಾಯೋಜಿತ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳು/ಮಂಡಳಿಗಳು/ನಿಗಮಗಳು/ಸ್ವಾಯತ್ತ ಸಂಸ್ಥೆಗಳು ಇತ್ಯಾದಿ. ಒಳಗೊಂಡಂತೆ ಆದಾಯ ತೆರಿಗೆ/ಸೇವಾ ತೆರಿಗೆ/ವ್ಯಾಟ್ /ವೃತ್ತಿ ತೆರಿಗೆ ಪಾವತಿಸುವ ಎಲ್ಲಾ ಕುಟುಂಬಗಳನ್ನು ಹೊರತು ಪಡಿಸಿ
2. ಗ್ರಾಮೀಣ ಪ್ರದೇಶದಲ್ಲಿ 3 ಹೆಕ್ಟೇರ್ ಒಣಭೂಮಿ ಅಥವಾ ತತ್ಸಮಾನ ನೀರಾವರಿ ಭೂಮಿ ಹೊಂದಿರುವ ಕುಟುಂಬಗಳು ಅಥವಾ ಗ್ರಾಮೀಣ ಪ್ರದೇಶವನ್ನು ಹೊರತು ಪಡಿಸಿ ನಗರ ಪ್ರದೇಶಗಳಲ್ಲಿ 1000 ಚದರ ಅಡಿಗಿಂತಲೂ ಹೆಚ್ಚಿನ ನಿಸ್ತೀರ್ಣದ ಪಕ್ಕಾ ಮನೆಯನ್ನು ಸ್ವಂತವಾಗಿ ಹೊಂದಿರುವ ಎಲ್ಲಾ ಕುಟುಂಬಗಳನ್ನು ಹೊರತು ಪಡಿಸಿ
3. ಜೀವನೋಪಾಯಕ್ಕಾಗಿ ಸ್ವತಃ ಓಡಿಸುವ ಒಂದು ವಾಣಿಜ್ಯ ವಾಹನವನ್ನು ಅಂದರೆ ಟ್ರಾಕ್ಟರ್ , ಮ್ಯಾಕ್ಸಿಕ್ಯಾಬ್ , ಟ್ಯಾಕ್ಸಿ ಇತ್ಯಾದಿಗಳನ್ನು ಹೊಂದಿದ ಕುಟುಂಬವನ್ನು ಹೊರತು ಪಡಿಸಿ ನಾಲ್ಕು ಚಕ್ರದ ವಾಹನಗಳನ್ನು ಹೊಂದಿರುವ ಎಲ್ಲಾ ಕುಟುಂಬಗಳನ್ನು ಹೊರತು ಪಡಿಸಿ
4. ಕುಟುಂಬ ವಾರ್ಷಿಕ ಆದಾಯವು 1.20 ಲಕ್ಷಗಳಿಗಿಂದಲೂ ಹೆಚ್ಚುವ ಇರುವ ಎಲ್ಲಾ ಕುಟುಂಬಗಳನ್ನು ಹೊರತು ಪಡಿಸಿ
ಜನತೆಗೆ ಕೊಟ್ಟ ಮಾತಿನಂತೆ ನಡೆದುಕೊಳ್ಳುವೆ: ಮಾಗಡಿ ಶಾಸಕ ಬಾಲಕೃಷ್ಣ
ತಾಲೂಕುವಾರು ಪಡಿತರ ಚೀಟಿಗಳ ವಿವರ
ತಾಲೂಕು ಎಎವೈ ಪಿಎಚ್‌ಎಚ್ ಎನ್‌ಪಿಎಚ್‌ಎಚ್
ಚನ್ನಪಟ್ಟಣ 4,742 65,234 3,222
ಕನಕಪುರ 4,955 93,5241,445
ಮಾಗಡಿ 5,199 52,240 1,678
ರಾಮನಗರ 4,076 67,109 2,061
ಒಟ್ಟು 18,972 2,78,107 8,406