ಬೆಂಗಳೂರು (ನ.12):  ಶಾಲೆಗಳು ಹಾಗೂ ಪಿಯು ಕಾಲೇಜುಗಳನ್ನು ಡಿ.15ರ ಬಳಿಕ ಹಂತ ಹಂತವಾಗಿ ಆರಂಭಿಸಿ, ಈ ಬಾರಿ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ವಿದ್ಯಾರ್ಥಿಗಳಿಗೆ ‘ಕೊರೋನಾ ಕೃಪಾಂಕ’ ನೀಡಬೇಕು ಎಂಬುದು ಸೇರಿದಂತೆ ವಿವಿಧ ಪೋಷಕ ಸಂಘಟನೆಗಳು ಸರ್ಕಾರಕ್ಕೆ ಹಲವು ಮನವಿ ಮಾಡಿವೆ.

ರಾಜ್ಯದಲ್ಲಿ ಶಾಲೆ ಹಾಗೂ ಪಿಯು ಕಾಲೇಜುಗಳನ್ನು ಆರಂಭಿಸುವ ಬಗ್ಗೆ ಈಗಾಗಲೇ ಅಧಿಕಾರಿಗಳು, ಖಾಸಗಿ ಶಿಕ್ಷಣ ಸಂಸ್ಥೆಗಳು, ಶಿಕ್ಷಕ ಸಂಘಟನೆಗಳು, ಎಸ್‌ಡಿಎಂಸಿ ಪ್ರತಿನಿಧಿಗಳ ಸಭೆ ನಡೆಸಿ ಅಭಿಪ್ರಾಯ ಸಂಗ್ರಹಿಸಿ ವರದಿ ನೀಡಿರುವ ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತ ವಿ.ಅನ್ಬುಕುಮಾರ್‌ ಅವರು ಬುಧವಾರ ಬಾಕಿ ಇದ್ದ ಕೆಲ ಪೋಷಕರ ಸಂಘಟನೆಗಳು ಹಾಗೂ ಕೆಲ ಖಾಸಗಿ ಶಾಲಾ ಸಂಘಟನೆಗಳ ಸಭೆ ನಡೆಸಿ ಅಭಿಪ್ರಾಯ ಸಂಗ್ರಹಿಸಿದರು.

ಸಭೆಯಲ್ಲಿ ಆರ್‌ಟಿಇ ಸ್ಟೂಡೆಂಟ್ಸ್‌ ಅಂಡ್‌ ಪೇರೆಂಟ್ಸ್‌ ಅಸೋಸಿಯೇಷನ್‌, ಮಾನ್ಯತೆ ಪಡೆದ ಅನುದಾನ ರಹಿತ ಖಾಸಗಿ ಶಾಲೆಗಳ ಸಂಘ(ರುಪ್ಸ) ಸಂಘಟನೆಗಳ ಪ್ರತಿನಿಧಿಗಳು ಪಾಲ್ಗೊಂಡು ತಮ್ಮ ಅಭಿಪ್ರಾಯ ಸಲಹೆ ನೀಡಿದರು.

ವಿದ್ಯಾರ್ಥಿಗಳಿಗೆ ಗುಡ್‌ ನ್ಯೂಸ್: ಎಸ್‌ಎಸ್‌ಎಲ್ ಸಿ, ಪಿಯುಸಿ ಪರೀಕ್ಷೆ ರದ್ದು..! ..

ಹಂತ ಹಂತವಾಗಿ ಶಾಲೆ ಆರಂಭಿಸಿ:  ಪ್ರಮುಖವಾಗಿ ಪೋಷಕರ ಸಂಘಟನೆಯಿಂದ ಡಿ.15ರ ನಂತರ ಮೊದಲ ಹಂತದಲ್ಲಿ 10 ಮತ್ತು 12ನೇ ತರಗತಿ ಆರಂಭಿಸಬಹುದು. ಹದಿನೈದು ದಿನಗಳ ನಂತರ 9 ಮತ್ತು 11ನೇ ತರಗತಿ ಆರಂಭಿಸಿ ಇದರ ಪರಿಣಾಮಗಳನ್ನು ನೋಡಿಕೊಂಡು ಮುಂದೆ ಉಳಿದ ತರಗತಿಗಳನ್ನು ಆರಂಭಿಸಿ ಬೆಳಗ್ಗೆಯಿಂದ ಮಧ್ಯಾಹ್ನ, ಮಧ್ಯಾಹ್ನದಿಂದ ಸಂಜೆ ವರೆಗೆ ಪಾಳಿ ಪದ್ಧತಿಯಲ್ಲಿ ತರಗತಿ ನಡೆಸಬೇಕು.

ಪ್ರಾರ್ಥನೆ ಸೇರಿದಂತೆ ಪಠ್ಯೇತರ ಚಟುವಟಿಕೆ ನಡೆಸಬಾರದು. ಎಸ್ಸೆಸ್ಸೆಲ್ಸಿ ಮತ್ತು ಪಿಯು ವಿದ್ಯಾರ್ಥಿಗಳಿಗೆ ಕೊರೋನಾ ಕೃಪಾಂಕ ನೀಡಬೇಕು. ವಿದ್ಯಾರ್ಥಿಗಳ ಹಾಜರಿಗೆ ಪಾಲಕರಿಂದ ಮುಚ್ಚಳಿಕೆ ಪತ್ರ ಪಡೆಯಬೇಕು. ಸಮವಸ್ತ್ರ, ಶೂ, ಸಾಕ್ಸ್‌ ಖರೀದಿಸುವಂತೆ ಆಡಳಿತ ಮಂಡಳಿ ಒತ್ತಾಯಿಸಬಾರದು. ತರಗತಿ ಆರಂಭದ ಹೆಸರಿಲ್ಲಿ ಹೆಚ್ಚುವರಿ ಶುಲ್ಕ ವಸೂಲಿ ಮಾಡಬಾರದು ಎಂದು ಮನವಿ ಮಾಡಿರುವುದಾಗಿ ಆರ್‌ಟಿಇ ಸ್ಟೂಡೆಂಟ್ಸ್‌ ಆ್ಯಂಡ್‌ ಪೇರೆಂಟ್ಸ್‌ ಅಸೋಸಿಯೇಷನ್‌ ಪ್ರಧಾನ ಕಾರ್ಯದರ್ಶಿ ಬಿ.ಎನ್‌.ಯೋಗಾನಂದ ತಿಳಿಸಿದ್ದಾರೆ.