Vijayanagara: ಶಾಲಾ ಆವರಣಕ್ಕೆ ನುಗ್ಗುತ್ತಿರೋ ಚರಂಡಿ ನೀರು: ಗ್ರಾಮಸ್ಥರ ಆಕ್ರೋಶ
* ಗ್ರಾಮದ ಎಲ್ಲ ಚರಂಡಿ ನೀರು ಶಾಲೆಯ ಆವರಣದೊಳಗೆ
* ದೂರು ನೀಡಿದ್ರೂ ಕ್ರಮ ಕೈಗೊಳ್ಳದ ಅಧಿಕಾರಿಗಳ ವಿರುದ್ಧ ಆಕ್ರೋಶ
* ವಿದ್ಯಾರ್ಥಿಗಳು ಅಸ್ವಸ್ಥ
ವರದಿ: ನರಸಿಂಹ ಮೂರ್ತಿ ಕುಲಕರ್ಣಿ, ಏಷ್ಯಾನೆಟ್ ಸುವರ್ಣ ನ್ಯೂಸ್, ವಿಜಯನಗರ
ವಿಜಯನಗರ(ಮೇ.24): ವಿದ್ಯಾರ್ಥಿಗಳಿಗೆ ಯಾವ ರೀತಿಯ ಪಠ್ಯ ಇರಬೇಕು. ಯಾವ ಮಹಾನ್ ವ್ಯಕ್ತಿ ಪಾಠ ಮಕ್ಕಳಿಗೆ ಕಲಿಸಬೇಕು ಎನ್ನುವ ಬಗ್ಗೆ ದೊಡ್ಡ ಮಟ್ಟದ ಚರ್ಚೆ ನಡೆಯುತ್ತಿದೆ. ಆದ್ರೇ ನಮ್ಮ ಗ್ರಾಮೀಣ ಭಾಗದ ಶಾಲೆ ದುಸ್ತಿತಿ ಬಗ್ಗೆ ಯಾರೊಬ್ಬರೂ ಚರ್ಚೆ ಮಾಡ್ತಿಲ್ಲ. ಯಾಕೆಂದರೆ ಇಲ್ಲೊಂದು ತಾಂಡದ ಶಾಲೆ ಆವರಣದಲ್ಲಿ ಕಳೆದೊಂದು ತಿಂಗಳಿಂದ ಚರಂಡಿ ನೀರು ನುಗ್ಗುತ್ತಿದೆ. ದೂರು ನೀಡಿದ್ರೂ ಯಾವೊಬ್ಬ ಅಧಿಕಾರಿಗಳು ಈ ಬಗ್ಗೆ ಕ್ರಮ ಕೈಗೊಳ್ಳುತ್ತಿಲ್ಲ.
ಶಾಲೆಯೊಳಗೆ ನುಗ್ಗುತ್ತಿರೋ ಚರಂಡಿ ನೀರು
ಇದು ಹಡಗಲಿ ತಾಲೂಕಿನ ಕಾಲ್ವಿತಾಂಡ. ತಾಲೂಕು ಕೇಂದ್ರದಿಂದ ಹೆಚ್ಚು ಕಡಿಮೆ ಹತ್ತು ಹದಿನೈದು ಕಿ.ಮೀ. ದೂರದಲ್ಲಿ ಇರೋ ಪುಟ್ಟ ತಾಂಡ. ಆದ್ರೇ ಇಲ್ಲಿ ಕನಿಷ್ಠ ಮೂಲಭೂತ ಸೌಕರ್ಯಗಳು ಕೂಡ ಇಲ್ಲಿ ಇಲ್ಲ ಎನ್ನುವುದಕ್ಕೆ ಈ ಶಾಲೆಯ ಸ್ಥಿತಿ ನೋಡಿದ್ರೇ ಗೊತ್ತಾಗುತ್ತದೆ. ತಾಂಡದಲ್ಲಿ ಇರೋ ಮುಖ್ಯ ಚರಂಡಿ ದುರಸ್ತೆ ಮಾಡದ ಹಿನ್ನೆಲೆ ಬ್ಲಾಕ್ ಆಗಿದೆ. ಹೀಗಾಗಿ ಊರೊಳಗಿನ ಎಲ್ಲ ಚರಂಡಿ ನೀರು ಶಾಲೆ ಆವರಣದಳೊಗೆ ನುಗ್ಗುತ್ತಿದೆ. ಕಳೆದೊಂದು ತಿಂಗಳಿಂದ ನದಿಯಂತೆ ಗ್ರಾಮದ ಎಲ್ಲ ಮಾರ್ಗದ ಚರಂಡಿ ನೀರು ಶಾಲೆಯೊಳಗೆ ನುಗ್ಗಿ ಬರುತ್ತಿದೆ. ಈ ಬಗ್ಗೆ ದೂರು ನೀಡಿದ್ರೂ ಯಾವೊಬ್ಬ ಅಧಿಕಾರಿಗಳು ಗಮನ ಹರಿಸುತ್ತಿಲ್ಲ ಹೀಗಾಗಿ ವ್ಯವಸ್ಥೆಯ ವಿರುದ್ಧ ಗ್ರಾಮಸ್ಥರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಭಗತ್‌ಸಿಂಗ್ ಪಠ್ಯ ಬಿಟ್ಟಿಲ್ಲ-ಪೂರ್ಣ ಸತ್ಯ ಹೇಳಲು ಪಠ್ಯ ಪರಿಷ್ಕರಣೆ: ಸಚಿವ ನಾಗೇಶ್
ನಾಲ್ಕು ನೂರಕ್ಕೂ ಹೆಚ್ಚು ಮಕ್ಕಳ ವಿದ್ಯಾಭ್ಯಾಸ
ಇನ್ನೂ ಈ ಸರ್ಕಾರಿ ಶಾಲೆಯಲ್ಲಿ ನಾಲ್ಕು ನೂರಕ್ಕೂ ಹೆಚ್ಚು ಮಕ್ಕಳು ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡ್ತಿದ್ದಾರೆ. ಚರಂಡಿ ನೀರಿನ ದುರ್ವಾಸನೆಯಲ್ಲಿ ಶಾಲೆಯ ಆವರಣದಲ್ಲಿ ಮಕ್ಕಳು ಪಾಠ ಕೇಳೋದು, ಆಟವಾಡೋದು ಮತ್ತು ಬಿಸಿಯೂಟ ಮಾಡೋದ್ರಿಂದ ಅನಾರೋಗ್ಯದ ಭೀತಿ ಎದುರಾಗಿದೆ. ಶಾಲೆಯ ಆವರಣದಲ್ಲಿ ಬರಬೇಕಾದ್ರೇ ಚರಂಡಿ ನೀರನ್ನು ತುಳಿದುಕೊಂಡೇ ಒಳಗೆ ಬರಬೇಕು. ಇದರಿಂದಾಗಿ ಕ್ಲಾನ್ ನೊಳಗೂ ಚರಂಡಿ ವಾಸನೆ ಬರುತ್ತಿದೆ. ಹೀಗಾಗಿ ಮಕ್ಕಳು ಕ್ಲಾಸ್ ನಲ್ಲಿ ಮೂಗು ಮುಚ್ಚಿಕೊಂಡು ಕೂಡವ ಸ್ಥಿತಿ ನಿರ್ಮಾಣವಾಗಿದೆ.
ಈಗಾಗಲೇ ನಾಲ್ಕಾರು ವಿದ್ಯಾರ್ಥಿಗಳು ಅಸ್ವಸ್ಥ
ಇನ್ನೂ ಗ್ರಾಮಸ್ಥರು ಹೇಳೋ ಪ್ರಕಾರ ಈಗಾಗಲೇ ನಾಲ್ಕಾರು ವಿದ್ಯಾರ್ಥಿಗಳು ವಾಂತಿ ಭೇದಿಯಿಂದ ಚಿಕಿತ್ಸೆ ಪಡೆದಿದ್ದಾರೆ. ಆದ್ರೆ ಯಾವುದೇ ಅನಾಹುತವಾಗಿಲ್ಲ. ಯಾವುದೇ ಕ್ಷಣದಲ್ಲೂ ರೋಗ ಉಲ್ಬಣಿಸೋ ಸಾಧ್ಯತೆ ಇರೋದ್ರಿಂದ ಸೂಕ್ತ ಕ್ರಮ ಕೈಗೊಳ್ಳಲು ಗ್ರಾಮಸ್ಥರು ಆಗ್ರಹಿಸುತ್ತಿದ್ದಾರೆ.
ಇನ್ನೂ ಈ ಬಗ್ಗೆ ಮೌಖಿಕವಾಗಿ ಸೇರಿದಂತೆ ಲಿಖಿತ ರೂಪದಲ್ಲಿಯೂ ಈಗಾಗಲೇ ಗ್ರಾಮ ಪಂಚಾಯತಿ ಅಧಿಕಾರಿಗಳು ಸೇರಿದಂತೆ ಹಡಗಲಿ ತಾಲೂಕಿನ ಎಲ್ಲ ಅಧಿಕಾರಿಗಳಿಗೆ ದೂರು ನೀಡಿರುವ ಗ್ರಾಮಸ್ಥರು ಯಾವುದೇ ಕ್ರಮ ತೆಗೆದುಕೊಳ್ಳುತ್ತಿಲ್ಲ ಎಂದು ಆರೋಪಿಸುತ್ತಿದ್ದಾರೆ.