ಬೆಂಗಳೂರು (ಡಿ.05):  ರಾಜ್ಯದಲ್ಲಿ ಡಿ.15ರಿಂದ ‘ಮನೆ ಮನೆ ಸಮೀಕ್ಷೆ’ ಕೈಗೊಂಡು ಶಾಲೆಯಿಂದ ಹೊರಗುಳಿದಿರುವ ಮಕ್ಕಳನ್ನು ಗುರುತಿಸಿ ಅಂಗನವಾಡಿ ಅಥವಾ ಶಾಲೆಗೆ ನೋಂದಣಿ ಮಾಡಲು ಗ್ರಾಮ ಪಂಚಾಯಿತಿಗಳು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆ ಸುತ್ತೋಲೆ ಹೊರಡಿಸಿದೆ.

ಗ್ರಾಮ ಪಂಚಾಯಿತಿಯ ಎಲ್ಲ ಶಾಲೆಗಳ ವ್ಯಾಪ್ತಿಯಲ್ಲಿ ಶಾಲೆಗೆ ಸೇರದ, ಸೇರಿ ಗೈರು ಹಾಜರಾಗುತ್ತಿರುವ ಮಕ್ಕಳ ಸಮೀಕ್ಷೆಯನ್ನು ಗ್ರಾಮ ಪಂಚಾಯಿತಿ ಸಿಬ್ಬಂದಿ, ಅಂಗನವಾಡಿ ಕಾರ್ಯಕರ್ತೆಯರು, ಮಹಿಳಾ ಸ್ವಸಹಾಯ ಗುಂಪುಗಳ ಪ್ರತಿನಿಧಿಗಳ ತಂಡವು ಇ-ಆಡಳಿತ ಇಲಾಖೆ ಅಭಿವೃದ್ಧಿಪಡಿಸಿರುವ ಆ್ಯಪ್‌ ಮೂಲಕ ಡಿ.15ರಿಂದ ‘ಮನೆ ಮನೆ ಸಮೀಕ್ಷೆ’ ಕೈಗೊಂಡು ಶಾಲೆಯಿಂದ ಹೊರಗುಳಿದಿರುವ ಮಕ್ಕಳನ್ನು ಗುರುತಿಸಿ ಸಮೀಕ್ಷೆ ಪ್ರಕ್ರಿಯೆಯನ್ನು 2021ರ ಜ.15ರೊಳಗೆ ಪೂರ್ಣಗೊಳಿಸುವಂತೆ ಸುತ್ತೋಲೆಯಲ್ಲಿ ಸೂಚಿಸಲಾಗಿದೆ.

ಗ್ರಾಮ ಪಂಚಾಯಿತಿ ಹಂತದಲ್ಲಿ ಗ್ರಾಮ ಶಿಕ್ಷಣ ಕಾರ್ಯಪಡೆಯು ವಿವರಿಸಿದಂತೆ ಪ್ರಾಥಮಿಕ ಶಾಲೆಗೆ ಮಕ್ಕಳ ಸಾರ್ವತ್ರಿಕ ದಾಖಲಾತಿಯನ್ನು ಖಚಿತಪಡಿಸಿಕೊಳ್ಳಲು ಡಿ.11ರ ಒಳಗಾಗಿ ಸಭೆ ನಡೆಸಿ ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಗುರುತಿಸಿ ಶಾಲೆಗೆ ಮರಳಿ ಸೇರಿಸಲು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಚರ್ಚಿಸಬೇಕೆಂದು ತಿಳಿಸಲಾಗಿದೆ.

ಜನವರಿಯಿಂದ 10, 12ನೇ ಕ್ಲಾಸ್‌ ಆರಂಭಿಸಿ; 2ನೇ ಅಲೆ ಭೀತಿ ನಡುವೆ ಸಮಿತಿ ಶಿಫಾರಸು! ..

ಪ್ರತಿ ಜಿಲ್ಲೆಯಲ್ಲಿ ಡಿಎಂಐಎಸ್‌, ಡಿಪಿಎಂಯು ಹಾಗೂ ತಾಲೂಕಿನಲ್ಲಿ ಟಿಎಂಐಎಸ್‌ನವರು ಕ್ಷೇತ್ರದಲ್ಲಿ ಸಮೀಕ್ಷೆ ನಡೆಸುವ ಸರ್ವೆಯ​ರ್‍ಸ್ಗೆ ಅಗತ್ಯ ತಾಂತ್ರಿಕ ನೆರವು ನೀಡಬೇಕು. ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಗುರುತಿಸಲಾದ ಎಲ್ಲ ಮಕ್ಕಳ ವಿವರಗಳನ್ನು ಪೋರ್ಟಲ್‌ನಿಂದ ಪಡೆದ ನಿಗದಿತ ನಮೂನೆಯಲ್ಲಿ ನಿರ್ವಹಿಸುವ ಜತೆಗೆ ಗ್ರಾಮ ಶಿಕ್ಷಣ ವಹಿಯಲ್ಲಿಯೂ ನಮೂದಿಸಬೇಕು ಎಂದು ತಿಳಿಸಲಾಗಿದೆ.

ಸಮೀಕ್ಷಾ ಕಾರ್ಯದಲ್ಲಿ ಮೊಬೈಲ್‌ ಆ್ಯಪ್‌ ಬಳಕೆ ಕುರಿತಂತೆ ಯಾವುದೇ ಮಾಹಿತಿ ಅಥವಾ ಪ್ರಶ್ನೆಗಳಿದ್ದಲ್ಲಿ ರಾಜ್ಯಮಟ್ಟದ ಸಹಾಯವಾಣಿ 8448445014 ಸಂಪರ್ಕಿಸಬೇಕು. ಪ್ರತಿ ತಂಡದಲ್ಲಿರುವ ಒಬ್ಬರಿಗೆ ಕುಟುಂಬ ಸಮೀಕ್ಷೆಗೆ 5 ರು. ನಿಗದಿಪಡಿಸಿದ್ದು, ಪ್ರತಿ ತಂಡದವರು ಪ್ರತಿ ದಿನ 50 ಕುಟುಂಬಗಳ ಸಮೀಕ್ಷೆ ಮಾಡಬೇಕು. ಸಮೀಕ್ಷೆಗೆ ತಗಲುವ ವೆಚ್ಚವನ್ನು ಗ್ರಾಮ ಪಂಚಾಯಿತಿಗಳು ಸ್ವಂತ ಸಂಪನ್ಮೂಲದಿಂದ ಭರಿಸಬೇಕೆಂದು ತಿಳಿಸಲಾಗಿದೆ.

ಶಿಕ್ಷಣ ಇಲಾಖೆ ಪ್ರತಿ ಗ್ರಾಮ ಪಂಚಾಯಿತಿಗೆ ನೀಡುವ 1000 ರು.ಗಳನ್ನು ಗ್ರಾಮ ಪಂಚಾಯಿತಿಗಳು ಆಯ್ಕೆ ಮಾಡಿದ ಮಹಿಳಾ ಸ್ವಸಹಾಯ ಗುಂಪುಗಳ ಗ್ರಾಮ ಪಂಚಾಯಿತಿ ಮಟ್ಟದ ಒಕ್ಕೂಟಕ್ಕೆ ಸಮೀಕ್ಷೆ ಉದ್ದೇಶಕ್ಕಾಗಿ ಬಳಸಿಕೊಳ್ಳಲು ಬಿಡುಗಡೆ ಮಾಡಬೇಕು ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.