ಜನವರಿಯಿಂದ 10, 12ನೇ ಕ್ಲಾಸ್ ಆರಂಭಿಸಿ| 2ನೇ ಅಲೆ ಭೀತಿ ನಡುವೆ ಶಾಲೆ ಆರಂಭಕ್ಕೆ ಸಮಿತಿ ಶಿಫಾರಸು
ಬೆಂಗಳೂರು(ಡಿ.03): ರಾಜ್ಯದಲ್ಲಿ ಮುಂದಿನ ಜನವರಿ-ಫೆಬ್ರವರಿಯಲ್ಲಿ ಕೋವಿಡ್ ಎರಡನೇ ಅಲೆ ಆರಂಭವಾಗುವ ಸಾಧ್ಯತೆ ಇರುವುದಾಗಿ ಹೇಳಿರುವ ಕೋವಿಡ್ ತಾಂತ್ರಿಕ ಸಮಿತಿ, ಮತ್ತೊಂದೆಡೆ ಜನವರಿಯಿಂದಲೇ 10 ಮತ್ತು 12ನೇ ತರಗತಿ ಮಕ್ಕಳಿಗೆ ಶಾಲೆಗಳನ್ನು ಆರಂಭಿಸಬಹುದು. ಬಳಿಕ 9 ಮತ್ತು 11ನೇ ತರಗತಿ ಮಕ್ಕಳಿಗೆ ಶಾಲೆ ಆರಂಭಿಸಬಹುದು ಎಂದು ಶಿಫಾರಸು ಮಾಡಿದೆ. ಇದು ಸರ್ಕಾರಕ್ಕೆ ಗೊಂದಲವನ್ನು ಉಂಟುಮಾಡಿದೆ.
ಆನ್‌ಲೈನ್ ಕ್ಲಾಸ್ ಸ್ಥಗಿತ ಸದ್ಯಕ್ಕಿಲ್ಲ: ಸರ್ಕಾರದ ‘ಸಂಧಾನ ಸಭೆ’ಗೆ ತಾತ್ಕಾಲಿಕ ಯಶಸ್ಸು!
ಕೋವಿಡ್ ತಾಂತ್ರಿಕ ಸಮಿತಿ ಈ ಹಿಂದೆ ನೀಡಿದ್ದ ವರದಿ ಆಧರಿಸಿ ನ.23ರಂದು ಮುಖ್ಯಮಂತ್ರಿ ಯಡಿಯೂರಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆದ ವಿವಿಧ ಇಲಾಖೆಗಳ ಉನ್ನತ ಮಟ್ಟದ ಸಭೆಯಲ್ಲಿ ಡಿಸೆಂಬರ್ ತಿಂಗಳಲ್ಲಿ ಶಾಲೆ ಆರಂಭಿಸದಿರಲು ತೀರ್ಮಾನ ಕೈಗೊಂಡಿತ್ತು. ಡಿಸೆಂಬರ್ ಮೂರನೇ ವಾರ ಮತ್ತೆ ಸಭೆ ಸೇರಿ ಕೋವಿಡ್ ತಾಂತ್ರಿಕ ಸಮಿತಿ ನೀಡುವ ಮುಂದಿನ ವರದಿ ಆಧರಿಸಿ ಶಾಲೆ ಆರಂಭಿಸುವ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು ಎಂದು ಸ್ವತಃ ಮುಖ್ಯಮಂತ್ರಿಗಳೇ ಹೇಳಿದ್ದರು. ಈಗ ಕೋವಿಡ್ ತಾಂತ್ರಿಕ ಸಮಿತಿ ಮತ್ತೊಂದು ವರದಿ ನೀಡಿ, ಶಾಲೆ ಆರಂಭಕ್ಕೆ ಶಿಫಾರಸು ಮಾಡಿದೆ.
ಎರಡು ತಿಂಗಳು ಪರೀಕ್ಷೆ ಮುಂದೂಡಿ:
ಈ ಮಧ್ಯೆ, ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಈ ಬಾರಿಯ ಎಸ್ಸೆಸ್ಸೆಲ್ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಗಳನ್ನು ಪ್ರತಿ ವರ್ಷಕ್ಕಿಂತ ಎರಡು ತಿಂಗಳು ತಡವಾಗಿ ನಡೆಸುವಂತೆಯೂ ಸಮಿತಿ ಸರ್ಕಾರಕ್ಕೆ ಮೌಖಿಕ ಸಲಹೆ ನೀಡಿದೆ ಎಂದು ಮೂಲಗಳು ತಿಳಿಸಿವೆ.
ಬಿಸಿಯೂಟ ವಂಚಿತ ಮಕ್ಕಳಿಗೆ ಪಡಿತರ ಭಾಗ್ಯ..!
ನ.30ರಂದು ನಡೆದ ಸಮಿತಿಯ ಸಭೆಯಲ್ಲಿ ಈ ಸಲಹೆ ನೀಡಲಾಗಿದ್ದು, ಆನ್‌ಲೈನ್ ಶಿಕ್ಷಣವನ್ನು ಮೊದಲ ಬಾರಿಗೆ ಎದುರಿಸಿರುವುದರಿಂದ ಸಾಕಷ್ಟುಮಕ್ಕಳಿಗೆ ಪಠ್ಯ ಬೋಧನೆ ಸಮರ್ಪಕವಾಗಿ ಅರ್ಥವಾಗದಿರುವುದು, ಗೊಂದಲಗಳು ಹೆಚ್ಚಾಗಿರುತ್ತವೆ. ಹಾಗಾಗಿ ಕೆಲವು ತಿಂಗಳಾದರೂ ಭೌತಿಕ ತರಗತಿ ನಡೆಸಿ, ಎಸ್ಸೆಸ್ಸೆಲ್ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಗಳನ್ನು ಜೂನ್-ಜುಲೈನಲ್ಲಿ ನಡೆಸುವಂತೆ ಸಲಹೆ ನೀಡಲಾಗಿದೆ. ಬೇಸಿಗೆ ರಜಾ ದಿನಗಳನ್ನು ಕಡಿತಗೊಳಿಸಿ ಬರುವ ಶೈಕ್ಷಣಿಕ ವರ್ಷವನ್ನು ಪರೀಕ್ಷೆಗಳು ಮುಗಿದ ಬೆನ್ನಲ್ಲೇ ಆರಂಭಿಸಬಹುದು ಎಂದು ತಜ್ಞರು ಅಭಿಪ್ರಾಯ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಸಮಿತಿ ಶಿಫಾರಸು ಏನು:
ಜನವರಿ-ಫೆಬ್ರವರಿಯಲ್ಲಿ ರಾಜ್ಯದಲ್ಲಿ ಕೋವಿಡ್ ಎರಡನೇ ಅಲೆ ಏಳುವ ನಿರೀಕ್ಷೆ ಮಾಡಲಾಗಿದೆ. ಒಂದು ವಾರ ಕಾಲ ಕೋವಿಡ್ ಸೋಂಕು ಪ್ರಕರಣಗಳ ಸರಾಸರಿ ಏರಿಕೆಯನ್ನು ಅವಲೋಕಿಸುವ ಮೂಲಕ ಎರಡನೇ ಅಲೆಯ ಆರಂಭವಾಗಿರುವ ಬಗ್ಗೆ ನಿರ್ಧಾರ ಮಾಡಬಹುದು. ಈ ಬಗ್ಗೆ ಆರೋಗ್ಯ ಇಲಾಖೆ ನಿರಂತರ ಗಮನಹರಿಸುತ್ತಿರಬೇಕು. ಫೆಬ್ರವರಿವರೆಗೂ ನಿತ್ಯ 1.25 ಲಕ್ಷ ಪರೀಕ್ಷೆ ನಡೆಸಬೇಕು. ಹಬ್ಬ, ಹರಿದಿನ, ಧಾರ್ಮಿಕ, ರಾಜಕೀಯ ಇನ್ನಿತರೆ ಯಾವುದೇ ಸಭೆ ಸಮಾರಂಭಗಳಲ್ಲಿ ಹೆಚ್ಚಿನ ಜನ ಸೇರುವುದಕ್ಕೆ ನಿರ್ಬಂಧ ಮುಂದುವರೆಸಬೇಕು ಎಂಬುದು ಸೇರಿದಂತೆ ಹಲವು ಶಿಫಾರಸುಗಳನ್ನು ಸಮಿತಿ ಮಾಡಿದೆ.
ಶುಲ್ಕ ಕಟ್ಟಿ, ಇಲ್ಲ ಆನ್‌ಲೈನ್ ಕ್ಲಾಸ್ ಕಟ್; ಖಾಸಗಿ ಶಾಲೆಗಳ ಬೆದರಿಕೆ ವಿದ್ಯಾರ್ಥಿಗಳಿಗೆ ಆತಂಕ
ಕೋವಿಡ್ ತಾಂತ್ರಿಕ ಸಮಿತಿ ಜನವರಿಯಿಂದ ಶಾಲೆಗಳನ್ನು ಆರಂಭಿಸಬಹುದೆಂದು ಶಿಫಾರಸು ಮಾಡಿರುವುದು ಗಮನಕ್ಕೆ ಬಂದಿಲ್ಲ. ಸಮಿತಿಯ ಶಿಫಾರಸುಗಳನ್ನು ಅವಲೋಕಿಸಿ ಅವುಗಳ ಬಗ್ಗೆ ಇಲಾಖಾ ಸಚಿವರಾದ ಎಸ್.ಸುರೇಶ್ ಕುಮಾರ್ ಅವರೊಂದಿಗೆ ಚರ್ಚಿಸಿ ಸೂಕ್ತ ತೀರ್ಮಾನ ತೆಗೆದುಕೊಳ್ಳಲಾಗುವುದು.
- ಎಸ್.ಆರ್.ಉಮಾಶಂಕರ್, ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ
Read Exclusive COVID-19 Coronavirus News updates, from Karnataka, India and World at Asianet News Kannada.
ವರ್ಚುಯಲ್ ಬೋಟ್ ರೇಸಿಂಗ್ ಗೇಮ್ ಆಡಿ ಮತ್ತು ನಿಮಗೆ ನೀವೇ ಸವಾಲು ಹಾಕಿಕೊಳ್ಳಿ ಈಗಲೇ ಆಡಲು ಕ್ಲಿಕ್ಕಿಸಿ
Last Updated Dec 3, 2020, 9:33 AM IST