ರಾಜ್ಯದ 7 ಸ್ಥಳಕ್ಕೆ ಪ್ರವಾಸ ಬರ್ತಾರೆ ಹೊರ ರಾಜ್ಯದ ಮಕ್ಕಳು..!
* 100 ಪ್ರವಾಸಿ ಸ್ಥಳಗಳ ಪಟ್ಟಿಯಲ್ಲಿ ಕರ್ನಾಟಕದ 7 ತಾಣಗಳಿಗೆ ಸ್ಥಾನ
* ಹೊರರಾಜ್ಯದ ವಿದ್ಯಾರ್ಥಿಗಳಿಗೆ ನಮ್ಮ ಸಂಸ್ಕೃತಿ ಪರಿಚಯ
* ಐಹೊಳೆ, ಪಟ್ಟದಕಲ್ಲು, ಹಂಪಿ, ಬೇಲೂರು, ಶ್ರವಣಬೆಳಗೊಳ, ಶ್ರೀರಂಗಪಟ್ಟಣ, ವಿಜಯಪುರ
ಬೆಂಗಳೂರು(ಅ.07): ಕೇಂದ್ರ ಸರ್ಕಾರವು ಮಹತ್ವಾಕಾಂಕ್ಷಿ ‘ರಾಷ್ಟ್ರೀಯ ಶಿಕ್ಷಣ ನೀತಿ 2020’ರ(NEP) ಅನುಷ್ಠಾನ ಮತ್ತು ‘ಏಕ್ ಭಾರತ್ ಶ್ರೇಷ್ಠ ಭಾರತ್’(ಇಬಿಎಸ್‌ಬಿ) ಕಾರ್ಯಕ್ರಮದ ಉತ್ತೇಜನಕ್ಕಾಗಿ ಬೇರೆ ಬೇರೆ ರಾಜ್ಯಗಳ ಉನ್ನತ ಶಿಕ್ಷಣ ವಿದ್ಯಾರ್ಥಿಗಳಿಗೆ ‘ದೇಶದ 100 ಗುರುತಿಸಲಾದ ಪ್ರವಾಸಿ ತಾಣಗಳಿಗೆ ವಿದ್ಯಾರ್ಥಿಗಳ ಭೇಟಿ’ ಎಂಬ ವಿಶೇಷ ಕಾರ್ಯಕ್ರಮ ರೂಪಿಸಿದ್ದು, ಇದರಡಿ ರಾಜ್ಯದ ಏಳು ಪ್ರವಾಸಿ ತಾಣಗಳನ್ನು(Tourist Destination) ಗುರುತಿಸಲಾಗಿದೆ.
ರಾಜ್ಯದ ಐಹೊಳೆ, ಬೇಲೂರು, ಶ್ರೀರಂಗಪಟ್ಟಣ, ವಿಜಯಪುರ, ಹಂಪಿ, ಪಟ್ಟದಕಲ್ಲು ಮತ್ತು ಶ್ರವಣಬೆಳಗೊಳ ಈ ಏಳು ಪ್ರವಾಸಿ ತಾಣಗಳನ್ನು ‘ದೇಶದ ಗುರುತಿಸಲಾದ 100 ಪ್ರವಾಸಿ ತಾಣಗಳಿಗೆ ವಿದ್ಯಾರ್ಥಿಗಳ ಭೇಟಿ’ (ವಿಸಿಟ್ ಆಫ್ ಸ್ಟೂಡೆಂಟ್ಸ್ ಟು 100 ಐಡೆಂಟಿಫೈಡ್ ಟೂರಿಸ್ಟ್ ಡೆಸ್ಟಿನೇಷನ್ಸ್ ಇನ್ ದಿ ಕಂಟ್ರಿ) ಕಾರ್ಯಕ್ರಮದಡಿ ಸೇರಿಸಲಾಗಿದ್ದು, ಈ ಏಳು ತಾಣಗಳಿಗೆ ದೇಶದ ಬೇರೆ ಬೇರೆ ರಾಜ್ಯಗಳ ಉನ್ನತ ಶಿಕ್ಷಣ ಸಂಸ್ಥೆಗಳು ತಮ್ಮ ವಿದ್ಯಾರ್ಥಿಗಳನ್ನು ಕಳುಹಿಸಿ ಕರ್ನಾಟಕದ(Karnataka) ಕಲೆ, ಸಂಸ್ಕೃತಿ, ಭಾಷೆ, ವೈಶಿಷ್ಟತೆಗಳನ್ನು ಅಧ್ಯಯನ ಮಾಡಲು ಅವಕಾಶ ಕಲ್ಪಿಸಲಾಗಿದೆ. ಅದೇ ರೀತಿ ವಿವಿಧ ರಾಜ್ಯಗಳ ಇತರೆ 93 ಪ್ರವಾಸಿ ತಾಣಗಳಿಗೆ ನಮ್ಮ ರಾಜ್ಯದ ಉನ್ನತ ಶಿಕ್ಷಣ ಸಂಸ್ಥೆಗಳು ತಮ್ಮ ವಿದ್ಯಾರ್ಥಿಗಳನ್ನು ಕಳುಹಿಸಿ ಅಲ್ಲಿನ ಕಲೆ, ಸಂಸ್ಕೃತಿ, ಭಾಷೆ, ವಿಶಿಷ್ಟ್ಯಗಳ ಅಧ್ಯಯನಕ್ಕೆ ಕಳುಹಿಸಬಹುದಾಗಿದೆ.
ಚಿಗುರಿದ ಪ್ರವಾಸೋದ್ಯಮ: ಪ್ರವಾಸಿ ತಾಣಗಳು, ತೀರ್ಥ ಕ್ಷೇತ್ರಗಳಿಗೆ ಜನರ ಭೇಟಿ ಹೆಚ್ಚಳ!
ಒಂದೆಡೆ ರಾಷ್ಟ್ರೀಯ ಶಿಕ್ಷಣ ನೀತಿಯಡಿ ದೇಶದ ಬೇರೆ ಬೇರೆ ರಾಜ್ಯಗಳಲ್ಲಿನ ವೈವಿದ್ಯಮಯ ಸಂಸ್ಕೃತಿ ಅಧ್ಯಯನಕ್ಕೆ ಅವಕಾಶ ಮಾಡಿಕೊಡುವ ಜತೆಗೆ, ‘ಏಕ್ ಭಾರತ್ ಶ್ರೇಷ್ಠ ಭಾರತ್’ ಕಾರ್ಯಕ್ರಮವನ್ನು ಉತ್ತೇಜಿಸುವುದು. ಆ ಮೂಲಕ ಒಂದು ರಾಜ್ಯದ ವಿದ್ಯಾರ್ಥಿಗಳು ಮತ್ತೊಂದು ರಾಜ್ಯಕ್ಕೆ ಭೇಟಿ ನೀಡಿದಾಗಿ ತಾವು ಅಲ್ಲಿಗೆ ಹೊರಗಿನವರು, ಅಪರಿಚಿತರು, ಅಲ್ಲಿನ ಯಾವುದೇ ಮಾಹಿತಿ ತಮಗಿಲ್ಲ ಎಂಬ ಭಾವನೆ ದೂರ ಮಾಡಿ ಇಡೀ ದೇಶದ ಯಾವುದೇ ಭಾಗಕ್ಕೆ ಭೇಟಿ ನೀಡಿದರೂ ನಾವು ಭಾರತೀಯರು ಎಂಬ ಭಾವನೆ ಗಟ್ಟಿಗೊಳಿಸುವ ಮಹತ್ವಾಕಾಂಕ್ಷಿ ಉದ್ದೇಶ ಇದರಲ್ಲಿದೆ.
ಈ ಸಂಬಂಧ ದೇಶದ ಎಲ್ಲಾ ವಿಶ್ವವಿದ್ಯಾಲಯಗಳು, ಉನ್ನತ ಶಿಕ್ಷಣ ಸಂಸ್ಥೆಗಳಿಗೆ ವಿಶ್ವವಿದ್ಯಾಲಯ ಧನಸಹಾಯ ಆಯೋಗವು (ಯುಜಿಸಿ) ಸುತ್ತೋಲೆ ಹೊರಡಿಸಿದ್ದು, ಕೇಂದ್ರ ಸರ್ಕಾರ ಗುರುತಿಸಿರುವ 100 ಪ್ರವಾಸಿ ತಾಣಗಳಿಗೆ ತಮ್ಮ ವಿದ್ಯಾರ್ಥಿಗಳನ್ನು ಕಳುಹಿಸಿ ಅಧ್ಯಯನಕ್ಕೆ ಅವಕಾಶ ಕಲ್ಪಿಸುವಂತೆ ಸೂಚಿಸಿದೆ. ಇದರೊಂದಿಗೆ ವಿದ್ಯಾರ್ಥಿಗಳಿಗೆ ದೇಶದ ವೈವಿದ್ಯಮಯ ಸಂಸ್ಕೃತಿ, ಸಾಹಿತ್ಯ ಅಧ್ಯಯನಕ್ಕೆ ನೆರವಾಗುವಂತೆ ಮನವಿ ಮಾಡಿದೆ.
ಈ ವಿಶಿಷ್ಟ ಕಾರ್ಯಕ್ರಮದ ಮೂಲಕ ಬೇರೆ ಬೇರೆ ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳ ಜನರ ನಡುವೆ ಪರಸ್ಪರ ಸಂಪರ್ಕ, ಸಂಸ್ಕೃತಿ, ಸಂಪ್ರದಾಯ ವಿನಿಮಯ, ಭಾಷೆ ಕಲಿಕೆ ಹಾಗೂ ಪ್ರವಾಸೋದ್ಯಮ ಉತ್ತೇಜನಗೊಳಿಸುವ ಉದ್ದೇಶ ಹೊಂದಲಾಗಿದೆ. ಶಿಕ್ಷಣ ಸಂಸ್ಥೆಗಳು ಕೋವಿಡ್(Covid19) ನಿಯಂತ್ರಣ ಮಾರ್ಗಸೂಚಿಗಳನ್ನು ಸಂಪೂರ್ಣವಾಗಿ ತೆಗೆದುಹಾಕಿದಾಗ ಮಾತ್ರ ವಿದ್ಯಾರ್ಥಿಗಳು ಪ್ರವಾಸಿ ತಾಣಗಳಿಗೆ ಭೇಟಿ ಕಾರ್ಯಕ್ರಮ ಆಯೋಜಿಸಬೇಕು. ಅಲ್ಲಿಯವರೆಗೆ ಈ ಪ್ರವಾಸಿ ತಾಣಗಳನ್ನು ಡಿಜಿಟಲ್ ಅಧ್ಯಯನದ ಮೂಲಕ ನಡೆಸಲು ಪ್ರೋತ್ಸಾಹಿಸುವಂತೆ ಯುಜಿಸಿ ಸುತ್ತೋಲೆಯಲ್ಲಿ ತಿಳಿಸಿದೆ.