ಚಿಗುರಿದ ಪ್ರವಾಸೋದ್ಯಮ: ಪ್ರವಾಸಿ ತಾಣಗಳು, ತೀರ್ಥ ಕ್ಷೇತ್ರಗಳಿಗೆ ಜನರ ಭೇಟಿ ಹೆಚ್ಚಳ!
* ಪ್ರವಾಸಿ ತಾಣಗಳು, ತೀರ್ಥ ಕ್ಷೇತ್ರಗಳಿಗೆ ಜನರ ಭೇಟಿ ಹೆಚ್ಚಳ
* ಕಡಲತೀರ, ಚಾರಣ, ಸಾಹಸಕ್ರೀಡೆಗಳಿಗೂ ಪ್ರವಾಸಿಗರ ಭೇಟಿ
* ಚಿಗುರಿದ ಪ್ರವಾಸೋದ್ಯಮ
* ಕೊಡಗು ಜಿಲ್ಲೆಯ ದುಬಾರೆಯಲ್ಲಿ ಸಾಹಸಕ್ರೀಡೆ ‘ರಾಫ್ಟಿಂಗ್’ ದೃಶ್ಯ
ಬೆಂಗಳೂರು(ಸೆ.27): ಕೊರೋನಾ ಸೋಂಕಿನ ತೀವ್ರತೆಯಿಂದ ಬಹುತೇಕ ಸ್ಥಗಿತಗೊಂಡಿದ್ದ ರಾಜ್ಯದ ಪ್ರವಾಸೋದ್ಯಮ ಇದೀಗ ಸೋಂಕಿನ ಪ್ರಮಾಣ ಇಳಿಯುತ್ತಿದ್ದಂತೆ ಮತ್ತೆ ಚಿಗುರಿಕೊಳ್ಳುತ್ತಿದೆ. ಪ್ರವಾಸಿತಾಣ, ತೀರ್ಥಕ್ಷೇತ್ರಗಳಿಗೆ ಲಾಕ್‌ಡೌನ್, ವಾರಾಂತ್ಯ ಕರ್ಫ್ಯೂ ವೇಳೆ ಇದ್ದ ಪ್ರವೇಶ ನಿರ್ಬಂಧ ಮೊದಲ ಹಂತದಲ್ಲಿ ಸಡಿಲಿಕೆಯಾಗಿತ್ತು. ಇದೀಗ ಬೀಚ್ ಪ್ರವೇಶ, ಸಾಹಸ ಕ್ರೀಡೆಯಾದ ರಿವರ್ ರಾಫ್ಟಿಂಗ್‌ಗೂ ಪೂರ್ಣ ಪ್ರಮಾಣದಲ್ಲಿ ಅನುಮತಿ ದೊರೆತಿದ್ದು ಪ್ರವಾಸಿಗರ ಸಂಖ್ಯೆಯೂ ಹೆಚ್ಚುತ್ತಿದೆ. ಮಾತ್ರವಲ್ಲದೆ ಕೊಡಗಿನಲ್ಲಿ ಹೆಲಿ ಟೂರಿಸಂಗೂ ಚಾಲನೆ ನೀಡಲಾಗಿದ್ದು ಈ ಮೂಲಕ ಕಳೆದ ಎರಡು ವರ್ಷಗಳಿಂದ ತೀವ್ರ ನಷ್ಟಕ್ಕೊಳಗಾಗಿದ್ದ ಪ್ರವಾಸೋದ್ಯಮದಲ್ಲಿ ನಿಧಾನಗತಿಯಲ್ಲಿ ಚೇತರಿಕೆ ಕಾಣಿಸಿಕೊಳ್ಳುತ್ತಿದೆ.
ದಾಂಡೇಲಿ-ಜೋಯಿಡಾದ ಕಾಳಿ ನದಿಯಲ್ಲಿ ಜಲಸಾಹಸ ಕ್ರೀಡೆಗಳು ಸೆ.22ರಿಂದಲೇ ಆರಂಭಗೊಂಡಿದ್ದು ಪ್ರವಾಸಿಗರನ್ನು ಆಕರ್ಷಿಸುತ್ತಿದೆ. ಇದೀಗ ಕೊಡಗು ಜಿಲ್ಲೆಯ ದುಬಾರೆ ಮತ್ತು ಪೊನ್ನಂಪೇಟೆ ತಾಲೂಕಿನ ಬರಪೊಳೆಯಲ್ಲೂ ರಿವರ್ ರಾರಯಫ್ಟಿಂಗ್ ಚುರುಕುಗೊಂಡಿದ್ದು ಪ್ರವಾಸಿಗರ ದಂಡೇ ಜಿಲ್ಲೆಗೆ ಹರಿದು ಬರುತ್ತಿದೆ.
ವಾರಾಂತ್ಯ ಹಿನ್ನೆಲೆಯಲ್ಲಿ ಕೊಡಗಿನ ಪ್ರವಾಸಿ ತಾಣಗಳಾದ ಅಬ್ಬಿ ಜಲಪಾತ, ರಾಜಾಸೀಟ್, ದುಬಾರೆ, ಮಲ್ಲಳ್ಳಿ, ನಿಸರ್ಗಧಾಮ, ಚಿಕ್ಲಿಹೊಳೆ ಸೇರಿದಂತೆ ವಿವಿಧ ಕಡೆಗಳಲ್ಲಿ ಈ ಹಿಂದಿಗಿಂತ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಕಂಡುಬಂದಿದ್ದಾರೆ. ವಿಶ್ವವಿಖ್ಯಾತ ಜಲಪಾತ ಜೋಗದಲ್ಲಿ ಕೋವಿಡ್ ನೆಗೆಟಿವ್ ಸರ್ಟಿಫಿಕೆಟ್ ಕಡ್ಡಾಯ ತೆರವುಗೊಳಿಸಿದ ಬಳಿಕ ವಾರಾಂತ್ಯದಲ್ಲಿ ಸಾವಿರಾರು ಪ್ರವಾಸಿಗರು ಭೇಟಿ ನೀಡುತ್ತಿದ್ದಾರೆ.
ಚಿಕ್ಕಮಗಳೂರಿನ ಪ್ರಸಿದ್ಧ ಗಿರಿಧಾಮಗಳಾದ ಚಂದ್ರದ್ರೋಣ ಪರ್ವತ, ಮುಳ್ಳಯ್ಯನ ಗಿರಿ, ಸೀತಾಳಯ್ಯನಗಿರಿ ಸೇರಿದಂತೆ ವಿವಿಧ ಗಿರಿಧಾಮಗಳಿಗೆ ಕಳೆದೊಂದು ತಿಂಗಳಿನಿಂದಲೂ ಸಾವಿರಾರು ಚಾರಣಿಗರು ಭೇಟಿ ನೀಡುತ್ತಿದ್ದು ಇದೀಗ ಈ ಸಂಖ್ಯೆ ಮತ್ತಷ್ಟುಹೆಚ್ಚಿದೆ.
ಇದೇವೇಳೆ ವಿಶ್ವ ಪರಂಪರೆ ತಾಣವಾದ ಹಂಪಿಗೆ ವಾರಾಂತ್ಯದಲ್ಲಿ ಹೆಚ್ಚು ಜನ ದಾಂಗುಡಿಯಿಡುತ್ತಿದ್ದಾರೆ. ಶನಿವಾರ 3 ಸಾವಿರಕ್ಕೂ ಹೆಚ್ಚು ಪ್ರವಾಸಿಗರು ಆಗಮಿಸಿದ್ದರೆ, ಭಾನುವಾರ 8 ಸಾವಿರಕ್ಕೂ ಅಧಿಕ ಮಂದಿ ಆಗಮಿಸಿದ್ದಾರೆ. ಮೈಸೂರಿನಲ್ಲಿ ಅರಮನೆ, ಮೃಗಾಲಯಗಳಿಗೂ ಪ್ರತಿದಿನ ನೂರಾರು ಸಂಖ್ಯೆಯಲ್ಲಿ ಜನ ಆಗಮಿಸುತ್ತಿದ್ದಾರೆ.
ಇನ್ನು ದಕ್ಷಿಣ ಕನ್ನಡ ಜಿಲ್ಲೆಯ ಪಣಂಬೂರು, ತಣ್ಣೀರು ಬಾವಿ, ಸೋಮೇಶ್ವರ, ಉಡುಪಿ ಜಿಲ್ಲೆಯ ಮಲ್ಪೆ, ಪಡುಬಿದ್ರಿ, ಕಾಪು, ಬೈಂದೂರು ಕಡಲತೀರಗಳಲ್ಲಿ ಶನಿವಾರ, ಭಾನುವಾರಳಂದು ಈ ಹಿಂದಿಗಿಂತ ಹೆಚ್ಚು ಜನ ಕಂಡುಬಂದರು. ಇನ್ನು ಉತ್ತರ ಕನ್ನಡದಲ್ಲಿ ಕಡಲತೀರದಲ್ಲಿ ಇದ್ದ ನಿರ್ಬಂಧವನ್ನು ಸಡಿಲಿಸಿದ್ದರಿಂದ ಗೋಕರ್ಣದ ಓಂ ಬೀಚ್, ಮುಖ್ಯ ಕಡಲತೀರ, ಕುಡ್ಲೆ ಬೀಚ್, ಪ್ಯಾರಾಡೈಸ್ ಬೀಚ್ ಹೀಗೆ ಎಲ್ಲ ಕಡಲತೀರಗಳಿಗೂ ಪ್ರವಾಸಿಗರು ಆಗಮಿಸಿದ್ದರು.
ದೇವಸ್ಥಾನಗಳಲ್ಲೂ ಭಕ್ತರ ಹೆಚ್ಚಳ:
ಕರಾವಳಿಯ ಪ್ರಮುಖ ದೇಗುಲಗಳಾದ ಧರ್ಮಸ್ಥಳ ಹಾಗೂ ಕುಕ್ಕೆ ಸುಬ್ರಹ್ಮಣ್ಯಗಳಲ್ಲಿ ಸೇವೆಗಳಿಗೆ ಹಾಗೂ ವಾರಾಂತ್ಯ ದರ್ಶನಕ್ಕೆ ವಿಧಿಸಿದ್ದ ನಿರ್ಬಂಧಗಳು ತೆರವುಗೊಂಡಿದ್ದು, ಇದೀಗ ವಿವಿಧ ಸೇವೆಗಳು ಹಾಗೂ ಅನ್ನದಾನವೂ ಆರಂಭಗೊಂಡಿವೆ. ಹಾಗಾಗಿ ಧರ್ಮಸ್ಥಳ, ಕುಕ್ಕೆ ಸುಬ್ರಹ್ಮಣ್ಯ, ಕಟೀಲು, ಕೊಲ್ಲೂರು, ಉಡುಪಿ ಕೃಷ್ಣಮಠ ಸಹಿತ ಕರಾವಳಿಯ ಪ್ರಸಿದ್ಧ ಪುಣ್ಯಕ್ಷೇತ್ರಗಳಿಗೆ ಭಕ್ತರ ಭೇಟಿ ಚುರುಕಾಗಿದೆ. ಕೊಪ್ಪಳ ಜಿಲ್ಲೆಯಲ್ಲಿ ಹುಲಿಗೆಮ್ಮಾ ದೇವಸ್ಥಾನಕ್ಕೆ ಭಾನುವಾರ ಸುಮಾರು 8 ಸಾವಿರಕ್ಕೂ ಅಧಿಕ ಭಕ್ತರು ಆಗಮಿಸಿ ದರ್ಶನ ಪಡೆದರೆ, ಅಂಜನಾದ್ರಿಯಲ್ಲಿ 5 ಸಾವಿರಕ್ಕೂ ಹೆಚ್ಚು ಮಂದಿ ಭಕ್ತರು ದರ್ಶನ ಪಡೆದಿದ್ದಾರೆ. ಎಲ್ಲೆಡೆಯೂ ಕೋವಿಡ್ ನಿಯಮಾನುಸಾರವೇ ಸಾಮಾಜಕ ಅಂತರ ಕಾಯ್ದುಕೊಂಡು ದರ್ಶನ ವ್ಯವಸ್ಥೆ ಮಾಡಲಾಗಿದೆ.
ವಿಶೇಷ ವಿಮಾನದಲ್ಲಿ ಬಂದ ಪುಣೆ ಕುಟುಂಬ
ಇನ್ನು ಪುಣೆಯ ಕುಟುಂಬವೊಂದು ಖಾಸಗಿ ಜೆಟ್ ವಿಮಾನದಲ್ಲಿ ಮಂಗಳೂರಿಗೆ ಬಂದಿದ್ದು, ಇಲ್ಲಿನ ದೇವಸ್ಥಾನ, ಪ್ರವಾಸಿ ತಾಣಗಳಿಗೆ ಭೇಟಿ ನೀಡುತ್ತಿದ್ದಾರೆ. ಪುಣೆಯಿಂದ 16 ಮಂದಿಯ ಕುಟುಂಬ ಖಾಸಗಿ ಜೆಟ್ ವಿಮಾನದಲ್ಲಿ ಭಾನುವಾರ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದಾರೆ. ಅಲ್ಲಿಂದ ಬೇರೆ ವಾಹನಗಳನ್ನು ಬುಕ್ ಮಾಡಿ ಮೂಡುಬಿದಿರೆಯ ಸಾವಿರ ಕಂಬದ ಬಸದಿ, ಕಟೀಲು, ಕುಕ್ಕೆ ಸುಬ್ರಹ್ಮಣ್ಯ, ಧರ್ಮಸ್ಥಳ ಹೀಗೆ ಪುಣ್ಯಕ್ಷೇತ್ರಗಳು ಮತ್ತು ಪ್ರವಾಸಿ ತಾಣಗಳಿಗೆ ಭೇಟಿ ನೀಡಿದ್ದಾರೆ. ಸೋಮವಾರ ರಸ್ತೆ ಮಾರ್ಗದಲ್ಲಿ ಮಡಿಕೇರಿಗೆ ತೆರಳಲಿದ್ದಾರೆ.