ಸರ್ಕಾರದ ಅನುಮತಿ ಇಲ್ಲದ ಆರ್ಕಿಡ್ ಶಾಲೆ: ಸಿಬಿಎಸ್‌ಇ ಹೆಸರಲ್ಲಿ ಮಕ್ಕಳ ಭವಿಷ್ಯಕ್ಕೆ ಕೊಳ್ಳಿ ಇಟ್ಟ ಶಾಲೆ
ಬೆಂಗಳೂರಿನ ನಾಗರಬಾವಿಯಲ್ಲಿರುವ ಆರ್ಕಿಡ್ ಖಾಸಗಿ ಶಾಲೆಯ ಮಹಾಮೋಸ
ಸಿಬಿಎಸ್ಇ ಸಿಲೆಬಸ್ ಇದೆ ಎಂದು ನೂರಾರು ಮಕ್ಕಳ ಪ್ರವೇಶ
ಸರ್ಕಾರದ ಅನುಮತಿಯೇ ಇಲ್ಲದೆ ಮಕ್ಕಳ ಭವಿಷ್ಯಕ್ಕೆ ಕೊಳ್ಳಿ ಇಟ್ಟ ಶಾಲೆ
ಬೆಂಗಳೂರು (ಜ.24): ಸಿಲಿಕಾನ್ ಸಿಟಿ ಬೆಂಗಳೂರಿನ ನಾಗರಬಾವಿಯಲ್ಲಿರುವ ಆರ್ಕಿಡ್ ಖಾಸಗಿ ಶಾಲೆಯಲ್ಲಿ ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ (ಸಿಬಿಎಸ್‌ಇ) ಪಠ್ಯಕ್ರಮವಿದೆ ಎಂದು ಹೇಳಿ ಲಕ್ಷಾಂತರ ರೂ. ಹಣವನ್ನು ಪಾವತಿಸಿಕೊಂಡು ಮಕ್ಕಳನ್ನು ಅಡ್ಮಿಷನ್ ಮಾಡಿಸಿಕೊಂಡಿದೆ. ಆದರೆ, ಈ ಶಾಲೆಯಲ್ಲಿ ರಾಜ್ಯದ ಪಠ್ಯಕ್ರಮವಿದ್ದು ಮಕ್ಕಳಿಗೆ ಭಾರಿ ಪ್ರಮಾಣದ ಮೋಸವನ್ನೇ ಮಾಡಿದ್ದಾರೆ. ಈ ಘಟನೆ ತಿಳಿಯುತ್ತಿದ್ದಂತೆ ಪೋಷಕರು ಶಾಲೆಯ ಮುಂದೆ ಗಲಾಟೆ ಮಾಡಿದ್ದಾರೆ.
ರಾಜಧಾನಿಯಲ್ಲಿ ಪ್ರತಿವರ್ಷ ಕೆಲವು ಖಾಸಗಿ ಶಾಲೆಗಳು ಸರ್ಕಾರದ ಅನುಮತಿ ಪಡೆಯದಿದ್ದರೂ ಲಕ್ಷಾಂತರ ರೂ. ಹಣವನ್ನು ಪಾವತಿಸಿಕೊಂಡು ಮಕ್ಕಳನ್ನು ದಾಖಲಾತಿ ಮಾಡಿಸಿಕೊಳ್ಳುತ್ತವೆ. ಆದರೆ, ಬೋರ್ಡ್ ಪರೀಕ್ಷೆ ಬಂದಾಗ ಕೆಲವು ಖಾಸಗಿ ಶಾಲೆಗಳಿಗೆ ಅನುಮತಿಯೇ ಇಲ್ಲದೆ ನಡೆಸುತ್ತಿರುವುದು ಬೆಳಕಿಗೆ ಬರುತ್ತವೆ. ವರ್ಷಪೂರ್ತಿ ಅಭ್ಯಾಸ ಮಾಡಿದ ಮಕ್ಕಳ ಭವಿಷ್ಯ ಅತಂತ್ರಕ್ಕೆ ಸಿಲುಕುತ್ತದೆ. ಅಭ್ಯಾಸ ಮಾಡಿದರೂ ನಮಗೆ ಪರೀಕ್ಷೆ ಬರೆಯಲು ಅವಕಾಶ ಸಿಗುತ್ತೆಯೋ ಇಲ್ಲವೋ ಎಂಬ ಆತಂಕವೂ ಹೆಚ್ಚಾಗಲಿದೆ. ನಂತರ ಶಿಕ್ಷಣ ಇಲಾಖೆ ಇಂತಹ ವಿದ್ಯಾರ್ಥಿಗಳನ್ನು ಬೇರೊಂದು ಶಾಲೆಗೆ ವರ್ಗಾಯಿಸಿ ಪರೀಕ್ಷೆ ಬರೆಯಲು ಅವಕಾಶ ನೀಡಿದರೂ ಹೆಚ್ಚಿನ ಅಂಕ ಗಳಿಸಲು ಸಾಧ್ಯವಾಗದೇ ವಿಫಲರಾಗುತ್ತಾರೆ. ಇದರಿಂದ ಲಕ್ಷಾಂತರ ರೂ. ಶುಲ್ಕ ಕಟ್ಟಿ ಮಕ್ಕಳು ರ್ಯಾಂಕ್ ಬರಬೇಕು ಎಂದು ಕನಸು ಕಾಣುತ್ತಿರುವ ಪೋಷಕರ ಪ್ರಯತ್ನ ವಿಫಲವಾಗುತ್ತದೆ.
ಶಿಕ್ಷಕರು ಮೊಬೈಲ್‌ನಲ್ಲಿ ತಲ್ಲೀನ: ಮಕ್ಕಳಿಗೆ ಅತ್ತ ಪಾಠವೂ ಇಲ್ಲ ಇತ್ತ ಬಿಸಿ ಊಟವೂ ಇಲ್ಲ!
ಸಿಬಿಎಸ್‌ಇ ಸಿಲಬಸ್ ಎಂದು ಪ್ರವೇಶ: ನಾಗರಬಾವಿಯ ಆರ್ಕಿಡ್ ಶಾಲೆಯ ಆಡಳಿತ ಮಂಡಳಿ CBSE ಮಾನ್ಯತೆ ಇದೆಯೆಂದು ಲಕ್ಷ ಲಕ್ಷ ಫೀಸ್ ಕಟ್ಟಿಸಿಕೊಂಡಿದೆ. ಆದರೆ, CBSE ಮಾನ್ಯತೆ ನಾಗರಬಾವಿಯಲ್ಲಿರುವ ಖಾಸಗಿ ಶಾಲೆಗೆ ಇಲ್ಲ ಅನ್ನೋದು ಈಗ ಪೋಷಕರಿಗೆ ಗೊತ್ತಾಗಿದೆ. ಹೀಗಾಗಿ ಲಕ್ಷ ಲಕ್ಷ ಫೀಸ್ ಕಟ್ಟಿರುವ ಪೋಷಕರಿಂದ ಸ್ಕೂಲ್ ಮುಂದೆ ಗಲಾಟೆ ಮಾಡಿದ್ದಾರೆ. ಸಾಲ ಮಾಡಿ ಮಕ್ಕಳಿಗೆ ಒಳ್ಳೆ ಶಿಕ್ಷಣ ಸಿಗಬೇಕು ಅಂತಾ ಸೇರಿಸಿದರೆ ಆಡಳಿತ ಮಂಡಳಿಯ ದೋಖಾ ಮಾಡ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದೆ. ಪೋಷಕರ ಬಳಿ ನಮ್ಮದು ಸಿಬಿಎಸ್ಇ ಮಾನ್ಯತೆಯಿರುವ ಶಾಲೆ ಅಂತ ಹೇಳಿ ಲಕ್ಷ ಲಕ್ಷ ಫೀಸ್ ಕಿತ್ತುಕೊಂಡಿದ್ದಾರೆ. ಆದರೆ ಈಗ ಮಕ್ಕಳ ಬಳಿ ಪಬ್ಲಿಕ್ ಎಕ್ಸಾಂ ಬರೆಸಲು ಮುಂದಾದಾಗ ಪೋಷಕರಿಗೆ ಸ್ಟೇಟ್ ಸಿಲೆಬಸ್ ಅಂತಾ ಗೊತ್ತಾಗಿದೆ. ಹೀಗಾಗಿ ಶಾಲೆಯಲ್ಲಿ ಪೋಷಕರಿಂದ ಪ್ರತಿಭಟನೆ ಶುರುವಾಗಿದೆ.
ಸಿಬಿಎಸ್‌ಇ ಸಿಲೆಬಸ್ ಪಾಠ: ಶಾಲೆಯಲ್ಲಿ ವರ್ಷಪೂರ್ತಿ ಮಕ್ಕಳಿಗೆ ಪಾಠ, ಪ್ರವಚನ ಎಲ್ಲವೂ ಸಿಬಿಎಸ್‌ಇ ಸಿಲಬಸ್ ಮಾಡಲಾಘಿದೆ. ಆದರೆ, ಪರೀಕ್ಷೆ ಮಾತ್ರ ಸ್ಟೇಟ್ ಸಿಲಬಸ್ ಬರೆಯಿರಿ ಎನ್ನುತ್ತಿರೋ ಆಡಳಿತ ಮಂಡಳಿ. ಆಡಳಿತ ಮಂಡಳಿ ವಿರುದ್ಧ ಪೋಷಕರು ಆಕ್ರೋಶ ಹೊರಹಾಕಿದ್ದಾರೆ. ಸಿಬಿಎಸ್‌ಇಗೆ 1-8 ನೇ ತರಗತಿ ವರೆಗೆ ಮಾತ್ರ ಪರ್ಮಿಷನ್ ಇದೆ. ಆದರೆ, 9-10 ನೇ ತರಗತಿಗೆ ಸರ್ಕಾರದಿಂದ ಇಲ್ಲ ಅನುಮತಿ ಸಿಕ್ಕಿಲ್ಲ. ಆದರೂ ಆಡಳಿತ ಮಂಡಳಿ ಅನಧಿಕೃತವಾಗಿ ಶಾಲೆ ನಡೆಸಲಾಗುತ್ತಿದೆ. ಆದರೆ, ಲಕ್ಷಾಂತರ ರೂ. ಹಣವನ್ನು ಪಾವತಿಸಿದ ಪೋಷಕರು ಮಕ್ಕಳ ಭವಿಷ್ಯದ ಬಗ್ಗೆ ಚಿಂತಾಕ್ರಾಂತರಾಗಿದ್ದಾರೆ.
ಆಯ್ದ ಶಾಲೆಗಳಲ್ಲಿ ಈ ವರ್ಷದಿಂದಲೇ ನೂತನ ಶಿಕ್ಷಣ ನೀತಿ ಆರಂಭ: ಸಚಿವ ನಾಗೇಶ್
ನೋಟಿಸ್ ನೀಡಿ ಸುಮ್ಮನಾದ ಶಿಕ್ಷಣ ಇಲಾಖೆ: ಶಿಕ್ಷಣ ಇಲಾಖೆಯ ಅಧಿಕಾರಿಗಳು ಅನಧಿಕೃತ ಶಾಲೆಗಳನ್ನ ಪತ್ತೆ ಮಾಡಿ ಕೇವಲ ನೊಟೀಸ್ ನೀಡಿ ಸುಮ್ಮನಾಗಿದ್ದಾರೆ. ಅನಧಿಕೃತ ಶಾಲೆ ಅಂತಾ ಗೊತ್ತಾದ ಮೇಲೆ ಯಾಕೆ ತಕ್ಷಣ ಕ್ರಮ ಕೈಗೊಂಡಿಲ್ಲ. ಶಾಲೆಯ ಮೋಸ ಗೊತ್ತಾಗಿದ್ದರೂ ಶಿಕ್ಷಣ ಇಲಾಖೆ ಆಯುಕ್ತರು ಮೌನ ವಹಿಸಿದ್ದಾರೆ. ಈಗ ಪೋಷಕರ ಪ್ರತಿಭಟನೆಯ ವೇಳೆಯಲ್ಲಿ ಮಹಾಮೋಸ ಬಯಲು ಆಗಿದೆ. ಶಿಕ್ಷಣ ಸಚಿವರೇ, ಆಯುಕ್ತರೇ ಏನ್ ಮಾಡ್ತಾ ಇದ್ದೀರಿ.? ಈ ವೇಳೆ ಸ್ಥಳಕ್ಕೆ ಬಂದ ಶಿಕ್ಷಣ ಇಲಾಖೆಯ ಅಧಿಕಾರಿಗಳ ವಿರುದ್ಧ ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇಆದದ ನಂತ ನಾಳೆ ಬೆಳಗ್ಗೆ ಡಿಡಿಪಿಐ ಭೇಟಿ ನೀಡಲಿದ್ದಾರೆ ಎಂದು ಶಿಕ್ಷಣ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದರು.