ಆಯ್ದ ಶಾಲೆಗಳಲ್ಲಿ ಈ ವರ್ಷದಿಂದಲೇ ನೂತನ ಶಿಕ್ಷಣ ನೀತಿ ಆರಂಭ: ಸಚಿವ ನಾಗೇಶ್
ನೂತನ ಶಿಕ್ಷಣ ನೀತಿಯನ್ನು ಈ ವರ್ಷದಿಂದಲೇ ಆಯ್ದ ಶಾಲೆಗಳಲ್ಲಿ ಅನುಷ್ಠಾನಗೊಳಿಸುತ್ತೇವೆ. ಮುಂದಿನ ವರ್ಷದಿಂದ ಪೂರ್ಣವಾಗಿ ಆರಂಭಿಸುತ್ತೇವೆ ಎಂದು ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಹೇಳಿದ್ದಾರೆ.
ಸುಬ್ರಹ್ಮಣ್ಯ (ಜ.19): ನೂತನ ಶಿಕ್ಷಣ ನೀತಿಯನ್ನು ಈ ವರ್ಷದಿಂದಲೇ ಆಯ್ದ ಶಾಲೆಗಳಲ್ಲಿ ಅನುಷ್ಠಾನಗೊಳಿಸುತ್ತೇವೆ. ಮುಂದಿನ ವರ್ಷದಿಂದ ಪೂರ್ಣವಾಗಿ ಆರಂಭಿಸುತ್ತೇವೆ ಎಂದು ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಹೇಳಿದರು. ಅವರು ಬುಧವಾರ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದರು. ಈ ವರ್ಷ 400-500 ಶಾಲೆಗಳಲ್ಲಿ ಹೊಸ ಶಿಕ್ಷಣ ನೀತಿ ಅನ್ವಯ ಬೋಧನೆ ಆರಂಭವಾಗಲಿದೆ ಎಂದ ಸಚಿವರು, ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ವಾರ್ಷಿಕ ಪರೀಕ್ಷೆಗಳು ಈ ಹಿಂದಿನಂತೆಯೇ ನಡೆಯಲಿವೆ. ಈಗಾಗಲೇ ದಿನಾಂಕ ಘೋಷಿಸಲಾಗಿದೆ. ಪರೀಕ್ಷಾ ಪೂರ್ವ ಸಿದ್ಧತೆಗಳನ್ನು ನಡೆಸಲಾಗುತ್ತಿದೆ ಎಂದರು.
ಮಕರ ಸಂಕ್ರಾಂತಿ ದಿನ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ14ರ ಬದಲು 15ಕ್ಕೆ ರಜೆ ನೀಡಲಾದ ಪ್ರಶ್ನೆಗೆ ಉತ್ತರಿಸಿದ ಸಚಿವರು. ವರ್ಷದಲ್ಲಿ ಐದು ರಜೆಗಳನ್ನು ನೀಡುವ ಅವಕಾಶ ಜಿಲ್ಲಾಧಿಕಾರಿಗಳಿಗೆ ನೀಡಲಾಗಿದೆ. ಅದರಂತೆ ಅವರು ರಜೆ ನೀಡುತ್ತಾರೆ. ರಜೆ ನೀಡುವಲ್ಲಿಯೂ ಕೆಲವೊಂದು ಬದಲಾವಣೆ ಮಾಡಲಾಗಿದೆ ಎಂದರು.
ಅತಿಥಿ ಶಿಕ್ಷಕರಿಗೆ ವೇತನ ಪಾವತಿ ಆಗದೇ ಇರುವ ಬಗ್ಗೆ ನನ್ನ ಗಮನಕ್ಕೆ ಬಂದಿಲ್ಲ. ಒಂದೆರಡು ತಿಂಗಳು ತಡ ಆಗಬಹುದು ಅಥವಾ ಆರಂಭದಲ್ಲಿ ತಡ ಆಗಬಹುದು ಹೊರತು ವೇತನ ಪಾವತಿ ಆಗದೇ ಇರುವುದಿಲ್ಲ ಎಂದರು. ಸಚಿವ ಎಸ್. ಅಂಗಾರ ಜತೆಗಿದ್ದರು.
ನೂತನ ರಾಷ್ಟ್ರೀಯ ನೀತಿ ಅನುಷ್ಠಾನದಿಂದ ಮತ್ತೆ ಶಿಕ್ಷಣ ವೈಭವ
ರಾಷ್ಟ್ರೀಯ ಶಿಕ್ಷಣ ನೀತಿ ಅನುಷ್ಠಾನದಿಂದ ಭಾರತೀಯ ಶಿಕ್ಷಣ ಕ್ಷೇತ್ರವು ಮತ್ತೆ ಪರಮ ವೈಭವವನ್ನು ಪಡೆಯಲಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಹೇಳಿದ್ದಾರೆ.
2020-21ನೇ ಸಾಲಿನ ಕೆ.ಪಿ.ಎಸ್. ಶಾಲಾ ಮೂಲಭೂತ ಸೌಕರ್ಯಕ್ಕಾಗಿ ಬಿಡುಗಡೆಯಾದ 2 ಕೋಟಿ ರು. ವೆಚ್ಚದಲ್ಲಿ ನಿರ್ಮಾಣಗೊಂಡ ಸುಳ್ಯ ತಾಲೂಕಿನ ಬೆಳ್ಳಾರೆ ಕರ್ನಾಟಕ ಪಬ್ಲಿಕ್ ಸ್ಕೂಲ್ನ ನೂತನ ಕೊಠಡಿಗಳನ್ನು ಉದ್ಘಾಟಿಸಿ ಅವರು ಮಾತಾನಾಡಿದರು.
ಸಮಾಜದ ಬೆಳವಣಿಗೆಗೆ ಶಿಕ್ಷಣದ ಪಾತ್ರ ಅನನ್ಯವಾದುದು. ಮಗು ಬೆಳೆದಂತೆ ಶಾಲೆಗಳು ಬೆಳೆಯುತ್ತದೆ. ಶಾಲೆಗಳು ಬೆಳೆದಂತೆ ಸಮಾಜ ಬೆಳೆಯುತ್ತದೆ. ಆದುದರಿಂದ ಸಮಾಜದ ಬೆಳವಣಿಗೆಗೆ ಶಿಕ್ಷಣ ಮೂಲ ಎಂದು ಅವರು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವರಾದ ಎಸ್. ಅಂಗಾರ ಮಾತನಾಡಿ, ಸರ್ಕಾರಿ ಶಾಲೆಗಳಲ್ಲಿ ಈಗ ಮಕ್ಕಳ ಸಂಖ್ಯೆ ಹೆಚ್ಚಳವಾಗಿದೆ. ಮಕ್ಕಳ ಸಂಖ್ಯೆ ಹೆಚ್ಚಾದಂತೆ ಶಾಲೆಗಳ ಮೂಲಭೂತ ಅಭಿವೃದ್ಧಿಗೆ ಆದ್ಯತೆ ನೀಡಲಾಗುತ್ತಿದೆ ಎಂದರು.
ನೂತನ ಶಿಕ್ಷಣ ನೀತಿಯಿಂದ ಸ್ವಾಭಿಮಾನದ ಮನಃಸ್ಥಿತಿ: ಬಿ.ಸಿ.ನಾಗೇಶ್
ಕರ್ನಾಟಕ ಮೀನುಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಎ.ವಿ. ತೀರ್ಥರಾಮ, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಚನಿಲ ತಿಮ್ಮಪ್ಪ ಶೆಟ್ಟಿ, ವಿಧಾನ ಪರಿಷತ್ ಮಾಜಿ ಸದಸ್ಯರಾದ ಅಣ್ಣಾ ವಿನಯಚಂದ್ರ, ಬೆಳ್ಳಾರೆ ಗ್ರಾ.ಪಂ. ಅಧ್ಯಕ್ಷ ಚಂದ್ರಶೇಖರ ಪನ್ನೆ, ಶಾಲಾಭಿವೃದ್ಧಿ ಸಮಿತಿ ಉಪಾಧ್ಯಕ್ಷ ಶ್ರೀನಾಥ್ ಬಾಳಿಲ, ಶಿಕ್ಷಕ ಶಿಕ್ಷಣ ಮಹಾ ವಿದ್ಯಾಲಯದ ಪ್ರಾಂಶುಪಾಲ ಡಾ. ಸಿಪ್ರಿಯಾನ್ ಮೊಂತೇರೋ, ದ.ಕ. ಜಿಲ್ಲಾ ಪದವಿ ಪೂರ್ವ ಕಾಲೇಜು ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಜಯಣ್ಣ, ದ.ಕ. ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಸುಧಾಕರ.ಕೆ, ಡಯಟ್ ಸಂಸ್ಥೆಯ ಪ್ರಾಂಶುಪಾಲೆ ರಾಜಲಕ್ಷ್ಮೇ, ಸುಳ್ಯ ಕ್ಷೇತ್ರ ಶಿಕ್ಷಣಾಧಿಕಾರಿ ವೀಣಾ,ಎಂ.ಟಿ. ಕ್ಷೇತ್ರ ಸಂಪನ್ಮೂಲ ಕೇಂದ್ರದ ಸಮನ್ವಯಾಧಿಕಾರಿ ಶೀತಲ್ ಯು.ಕೆ, ಕರ್ನಾಟಕ ಪಬ್ಲಿಕ್ ಸ್ಕೂಲ್ ಪ್ರಾಂಶುಪಾಲರಾದ ವಿಶ್ವನಾಥ ಗೌಡ ಸುಳ್ಯ ಲೋಕೋಪಯೋಗಿ ಇಲಾಖೆಯ ಸಹಾಯಕ ಎಂಜಿನಿಯರ್ ಪರಮೇಶ್ವರ್ ಸೇರಿದಂತೆ ಪ್ರಮುಖ ಜನಪ್ರತಿನಿಧಿಗಳು, ವಿದ್ಯಾರ್ಥಿಗಳು, ಪೋಷಕರು ಉಪಸ್ಥಿತರಿದ್ದರು.
SSLC ಅಂತಿಮ ಪರೀಕ್ಷೆಯ ದಿನಾಂಕ ಪ್ರಕಟ: ಇಲ್ಲಿದೆ ನೋಡಿ ವೇಳಾಪಟ್ಟಿ
ಸಚಿವ ಎಸ್. ಅಂಗಾರ, ಎ.ವಿ. ತೀರ್ಥರಾಮ ಅವರನ್ನು ಸನ್ಮಾನಿಸಲಾಯಿತು. ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಸುಧಾಕರ.ಕೆ ಸ್ವಾಗತಿಸಿದರು. ಬೆಳ್ಳಾರೆ ಕೆಪಿಎಸ್ ಉಪ ಪ್ರಾಂಶುಪಾಲರಾದ ಉಮಾಕುಮಾರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕ್ಷೇತ್ರ ಶಿಕ್ಷಣಾಧಿಕಾರಿ ವೀಣಾ ಎಂ.ಟಿ. ವಂದಿಸಿದರು. ದಿನೇಶ್ ಹಾಗೂ ಸವಿತಾ ಕಾರ್ಯಕ್ರಮ ನಿರೂಪಿಸಿದರು.