ಒಂದನೇ ತರಗತಿಗೆ ಮಕ್ಕಳನ್ನು ದಾಖಲಿಸಲು ಆಯಾ ಶೈಕ್ಷಣಿಕ ವರ್ಷದ ಜೂನ್‌ 1 ಕ್ಕೆ ಕಡ್ಡಾಯವಾಗಿ 6 ವರ್ಷ ಪೂರ್ಣಗೊಂಡಿರಬೇಕು ಎಂದು ಸರ್ಕಾರ ಹೊರಡಿಸಿರುವ ಆದೇಶಕ್ಕೆ ಸಾರ್ವಜನಿಕವಾಗಿ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರು, ಸಂಘ-ಸಂಸ್ಥೆಗಳು, ಶಿಕ್ಷಣ ತಜ್ಞರು ಸಹ ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ.

ಬೆಂಗಳೂರು (ಆ.02): ಒಂದನೇ ತರಗತಿಗೆ ಮಕ್ಕಳನ್ನು ದಾಖಲಿಸಲು ಆಯಾ ಶೈಕ್ಷಣಿಕ ವರ್ಷದ ಜೂನ್‌ 1 ಕ್ಕೆ ಕಡ್ಡಾಯವಾಗಿ 6 ವರ್ಷ ಪೂರ್ಣಗೊಂಡಿರಬೇಕು ಎಂದು ಸರ್ಕಾರ ಹೊರಡಿಸಿರುವ ಆದೇಶಕ್ಕೆ ಸಾರ್ವಜನಿಕವಾಗಿ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರು, ಸಂಘ-ಸಂಸ್ಥೆಗಳು, ಶಿಕ್ಷಣ ತಜ್ಞರು ಸಹ ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ.

2017, 2018 ಮತ್ತು 2020 ರಲ್ಲಿ 1ನೇ ತರಗತಿ ದಾಖಲಾತಿಗೆ ಕನಿಷ್ಠ 5 ವರ್ಷ 10 ತಿಂಗಳು ಆಗಿರಬೇಕು. ಗರಿಷ್ಠ 6 ವರ್ಷ 10 ತಿಂಗಳ ಒಳಗಿರಬೇಕು ಎಂದು ಸರ್ಕಾರ ವಯೋಮಿತಿ ನಿಗದಿ ಮಾಡಿತ್ತು. ಆದರೆ ಈಗ ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆ 2009 ಮತ್ತು 2012 ರ ಕಡ್ಡಾಯ ಶಿಕ್ಷಣ ನಿಯಮಗಳ ಅನುಸಾರ 1ನೇ ತರಗತಿ ದಾಖಲಾತಿಗೆ ಮಕ್ಕಳಿಗೆ ಕಡ್ಡಾಯವಾಗಿ 6 ವರ್ಷ ಪೂರ್ಣಗೊಂಡಿರಬೇಕು ಎಂದು ಮಾರ್ಪಡಿಸಲು ಸಾರ್ವಜನಿಕ ಶಿಕ್ಷಣ ಇಲಾಖೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿತ್ತು. ಇದಕ್ಕೆ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಒಪ್ಪಿಗೆ ನೀಡಿ ಹೊಸ ಆದೇಶ ಹೊರಡಿಸಿದೆ. ಇದು ವಿವಾದಕ್ಕೆ ಕಾರಣವಾಗಿದೆ.

6 ವರ್ಷ ತುಂಬಿದ್ದರೆ ಮಾತ್ರ 1ನೇ ಕ್ಲಾಸ್‌ಗೆ ಪ್ರವೇಶ..!

ಈ ಹೊಸ ಆದೇಶ ಮುಂದಿನ ಶೈಕ್ಷಣಿಕ ವರ್ಷದಿಂದ ಜಾರಿಗೆ ಬರಲಿದೆ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಅದರಂತೆ ಮುಂದಿನ ಶೈಕ್ಷಣಿಕ ವರ್ಷದಿಂದ ಜೂನ್‌ 1ಕ್ಕೆ 6 ವರ್ಷ ಪೂರ್ಣಗೊಳಿಸಿದ ಮಕ್ಕಳನ್ನು ಮಾತ್ರ 1 ನೇ ತರಗತಿಗೆ ದಾಖಲಾತಿ ಮಾಡಿಕೊಳ್ಳಲು ಅವಕಾಶವಿದೆ. ಆದರೆ ಹೊಸ ಆದೇಶಕ್ಕೆ ಸಾರ್ವಜನಿಕರಿಂದಲೂ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಜೂ.1 ಕ್ಕೆ ಒಂದು ದಿವಸ ಕಡಿಮೆ ಇದ್ದರೂ 1 ನೇ ತರಗತಿಗೆ ದಾಖಲು ಮಾಡಿಕೊಳ್ಳಲು ಅವಕಾಶವಿಲ್ಲ. ತಕ್ಷಣ ಇದನ್ನು ಸರಿಪಡಿಸಬೇಕು ಎಂಬ ಒತ್ತಾಯ ಕೇಳಿಬಂದಿದೆ.

ಅವೈಜ್ಞಾನಿಕ ಆದೇಶ: ಇದೊಂದು ಅವೈಜ್ಞಾನಿಕ ಆದೇಶವಾಗಿದೆ. ಸಾಧಕ-ಬಾಧಕಗಳನ್ನು ಚರ್ಚಿಸದೇ ಕೈಗೊಂಡ ಕ್ರಮ ಇದಾಗಿದೆ. ಮಕ್ಕಳನ್ನು ಶಾಲೆಗೆ ದಾಖಲು ಮಾಡುವಾಗ 5 ತಿಂಗಳವರೆಗೆ ಶಿಕ್ಷಣ ಕಾಯ್ದೆಯಲ್ಲೇ ವಿನಾಯಿತಿಗೆ ಅವಕಾಶವಿತ್ತು. ಆದರೆ ಇದನ್ನು ನಿರಾಕರಿಸಲು ಮುಂದಾಗಿದ್ದು ಇದು ಜನವಿರೋಧಿಯಾಗಿದೆ ಎಂದು ಖಾಸಗಿ ಅನುದಾನರಹಿತ ಶಿಕ್ಷಣ ಸಂಸ್ಥೆಗಳ ಸಂಘಟನೆ(ಕ್ಯಾಮ್ಸ್‌)ಪ್ರಧಾನ ಕಾಯದರ್ಶಿ ಶಶಿಕುಮಾರ್‌ ಆರೋಪಿಸಿದ್ದಾರೆ. ಆರ್‌ಟಿಇ ನೆಪದಲ್ಲಿ ಸರ್ಕಾರ ಆದೇಶ ಹೊರಡಿಸುವ ಮುನ್ನ ತಜ್ಞರೊಂದಿಗೆ ಚರ್ಚೆ ನಡೆಸಬೇಕಿತ್ತು. ಸಾರ್ವಜನಿಕರು, ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರೊಂದಿಗೂ ಮಾತುಕತೆ ನಡೆಸದೆ ಏಕಾಏಕಿ ಆದೇಶ ಹೊರಡಿಸಿರುವುದು ಸರಿಯಲ್ಲ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಹಿಂದಿನ ನಿಯಮ ಏನಿತ್ತು?: 1ನೇ ತರಗತಿ ಪ್ರವೇಶಕ್ಕೆ ಕನಿಷ್ಠ ವಯೋಮಿತಿ 5 ವರ್ಷ 10 ತಿಂಗಳು, ಗರಿಷ್ಠ ವಯೋಮಿತಿ 6 ವರ್ಷ 10 ತಿಂಗಳು

ಹೊಸ ನಿಯಮದಲ್ಲೇನಿದೆ?: 6 ವರ್ಷ ಪೂರ್ಣಗೊಂಡಿರುವುದು ಕಡ್ಡಾಯ. 1 ದಿನ ಕಡಿಮೆ ಇದ್ದರೂ ಪ್ರವೇಶ ಸಾಧ್ಯವಿಲ್ಲ.

ಕೆಇಎ ಎದುರು ಸಿಇಟಿ ಪುನರಾವರ್ತಿತ ವಿದ್ಯಾರ್ಥಿಗಳಿಂದ ಮುಂದುವರಿದ ಪ್ರತಿಭಟನೆ

ಸರ್ಕಾರಕ್ಕೆ ಯಾರು ಸಲಹೆ ನೀಡಿದರೋ ಗೊತ್ತಿಲ್ಲ. ಇದು ವಿನಾಕಾರಣ ಗೊಂದಲ ಉಂಟುಮಾಡಿದೆ. 6ರಿಂದ 14 ವರ್ಷದ ಮಕ್ಕಳು ಕಡ್ಡಾಯ ಶಿಕ್ಷಣ ಪಡೆಯಬೇಕು ಎಂಬ ಶಿಕ್ಷಣ ಹಕ್ಕು ಕಾಯ್ದೆಯ ಉಲ್ಲಂಘನೆಗೆ ಇದು ದಾರಿ ಮಾಡಿಕೊಡಲಿದೆ.
- ನಿರಂಜನಾರಾಧ್ಯ, ಶಿಕ್ಷಣ ತಜ್ಞ